ಮಾಂಡೂಕ್ಯ ಉಪನಿಷತ್ತು
ಮಾಂಡೂಕ್ಯ ಉಪನಿಷತ್ ಅತಿ ಚಿಕ್ಕದಾದರೂ ಮುಖ್ಯ ಉಪನಿಷತ್ತುಗಳಲ್ಲಿ ಒಂದಾಗಿದೆ. ಇದು ಕೇವಲ ೧೨ ಶ್ಲೋಕಗಳನ್ನು ಹೊಂದಿದೆ. ಅಥರ್ವ ವೇದದ ಭಾಗವಾದ ಈ ಉಪನಿಷತ್ತಿನ ರಚನೆ ಕ್ರಿ. ಪೂ. ೫ನೇ ಮತ್ತು ೨ನೇ ಶತಮಾನಗಳ ಮಧ್ಯೆ ಆಗಿರಬಹುದು ಎಂದು ಹೇಳಲಾಗುತ್ತದೆ. ಇದರ ಭಾಷ್ಯವನ್ನು ಶಂಕರಾಚರ್ಯರ ಗುರುವಿನ ಗುರುವಾದ ಗೌಡಪಾದರು ಮಾಂಡೂಕ್ಯ ಕಾರಿಕ ಎಂಬ ಕೃತಿಯ ಜೊತೆಗೆ ಬರೆದಿದ್ದಾರೆ. ಈ ಉಪನಿಷತ್ತು ನಮ್ಮ ಪ್ರಜ್ಞೆಯ ನಾಲ್ಕು ಅವಸ್ಥೆಗಳನ್ನು ವಿವರಿಸುತ್ತದೆ - ಅವು ಜಾಗೃತ, ಸ್ವಪ್ನ, ಸುಷುಪ್ತ ಹಾಗೂ ತುರೀಯ. ತುರೀಯ ಅವಸ್ಥೆ ಮೊದಲ ಮೂರೂ ಅವಸ್ಥೆಗಳ ಹೊರತಾಗಿದೆ, ಬ್ರಹ್ಮತ್ವದ ಅವಸ್ಥೆಯಾಗಿದೆ. ಓಂ ಎನ್ನುವ ಶಬ್ದ ಈ ನಾಲ್ಕೂ ಅವಸ್ಥೆಗಳನ್ನೂ ಆವರಿಸಿದೆ ಹಾಗೂ ಈ ಬ್ರಹ್ಮಾಂಡವನ್ನು ಆವರಿಸಿದೆ. ಈ ಉಪನಿಷತ್ತಿನ ಮೇಲೆ ಬೌದ್ಧ ಧರ್ಮದ ಪ್ರಭಾವವಿದೆ ಎಂದೂ ಹೇಳಲಾಗುತ್ತದೆ. ತುರೀಯ - ಚತುರ್ಥೀಯ ಅವಸ್ಥೆ ಓಂ ಈ ಶಬ್ದವು ಮೂರು ವರ್ಣಗಳ ಸಂಯುಕ್ತ ಅಕ್ಷರವಾಗಿದೆ - ಅ, ಉ ಹಾಗೂ ಮ್ . ಅದರಲ್ಲಿ ಅ ಅಕ್ಷರವು ಜಾಗೃತ ಅವಸ್ಥೆಯನ್ನು ಬಿಂಬಿಸುತ್ತದೆ. ಜಾಗೃತದಲ್ಲಿ ಪ್ರಜ್ಞೆಯು ಬಾಹ್ಯ ಜಗತ್ತಿನ ಕಡೆಗೆ ತಿರುಗಿರುತ್ತದೆ. ಉ ಅಕ್ಷರವು ಸ್ವಪ್ನ ಅವಸ್ಥೆಯನ್ನು ಬಿಂಬಿಸುತ್ತದೆ. ಸ್ವಪ್ನ ಅವಸ್ಥೆಯಲ್ಲಿ ಪ್ರಜ್ಞೆಯು ಅಂತರ್ಮುಖಿ ಆಗಿರುತ್ತದೆ. ಮ ಅಕ್ಷರವು ಬಿಂಬಿಸುವ ಮೂರನೆ ಅವಸ್ಥೆಯಾದ ಗಾಢ ನಿದ್ರೆ ಅಥವಾ ಸುಷುಪ್ತಿಯಲ್ಲಿ ಯಾವು...