ಮಾಂಡೂಕ್ಯ ಉಪನಿಷತ್ತು
ಮಾಂಡೂಕ್ಯ ಉಪನಿಷತ್ ಅತಿ ಚಿಕ್ಕದಾದರೂ ಈ ಉಪನಿಷತ್ತು ಮುಖ್ಯ ಉಪನಿಷತ್ತುಗಳಲ್ಲಿ ಒಂದಾಗಿದೆ. ಇದು ಕೇವಲ ೧೨ ಶ್ಲೋಕಗಳನ್ನು ಹೊಂದಿದೆ.
ಇದರ ರಚನೆ ಕ್ರಿ. ಪೂ. ೫ನೇ ಮತ್ತು ೨ನೇ ಶತಮಾನಗಳ ಮಧ್ಯೆ ಆಗಿರಬಹುದು ಎಂದು ಹೇಳಲಾಗುತ್ತದೆ.
ಇದರ ಭಾಷ್ಯವನ್ನು ಶಂಕರಾಚರ್ಯರ ಗುರುವಿನ ಗುರುವಾದ ಗರುಡಪಾದರು ಮಾಂಡೂಕ್ಯ ಕಾರಿಕ ಎಂಬ ಕೃತಿಯ ಜೊತೆಗೆ ಬರೆದಿದ್ದಾರೆ.
ಈ ಉಪನಿಷತ್ತು ನಮ್ಮ ಪ್ರಜ್ಞೆಯ ನಾಲ್ಕು ಅವಸ್ಥೆಗಳನ್ನು ವಿವರಿಸುತ್ತದೆ - ಜಾಗೃತ, ಸ್ವಪ್ನ, ಸುಷುಪ್ತ ಹಾಗೂ ತುರೀಯ. ತುರೀಯ ಅವಸ್ಥೆ ಮೂರೂ ಅವಸ್ಥೆಗಳ ಹೊರತಾಗಿದೆ, ಬ್ರಹ್ಮತ್ವದ ಅವಸ್ಥೆಯಾಗಿದೆ. ಓಂ ಎನ್ನುವ ಶಬ್ದ ಈ ನಾಲ್ಕೂ ಅವಸ್ಥಗಳನ್ನೂ ಆವರಿಸಿದೆ ಹಾಗೂ ಈ ಬ್ರಹ್ಮಾಂಡವನ್ನು ಆವರಿಸಿದೆ ಎಂಬ ಮಾತನ್ನು ಪ್ರತಿಪಾದಿಸುತ್ತದೆ.
ಈ ಉಪನಿಷತ್ತಿನ ಮೇಲೆ ಬೌದ್ಧ ಧರ್ಮದ ಪ್ರಭಾವವಿದೆ ಎಂದು ಹೇಳಲಾಗುತ್ತದೆ.
ತುರೀಯ - ಚತುರ್ಥೀಯ ಅವಸ್ಥೆ
೧೦.ತುರೀಯ - ನಿರ್ವಿಕಾರಿಯಾದ ಪ್ರಭು - ಇದು ಎಲ್ಲ ದುಃಖ-ದುಮ್ಮಾನಗಳನ್ನು ನಾಶ ಮಾಡುತ್ತದೆ (ಇದನ್ನು ಅರಿತ ಮೇಲೆ ಸುಖ-ದುಃಖಗಳಿರವದಿಲ್ಲ. ಬೇರೆಲ್ಲ ವಸ್ತುಗಳೂ ಮಾಯೆ-ಮಿಥ್ಯೆಯಾದರೂ, ತುರೀಯ ಮಾತ್ರ ಸರ್ವವ್ಯಾಪಿ, ಅದ್ವಿತೀಯ ಹಾಗೂ ಕಾಂತಿಯುತವಾಗಿದೆ
೧೧.ವಿಶ್ವ ಮತ್ತು ತೈಜಸಗಳು ಕಾರ್ಯ-ಕಾರಣದಿಂದ ರೂಪಗೊಂಡಿವೆ (ವಿಶ್ವ - ಜಾಗೃತವಾವಸ್ಥೆ , ತೈಜಸ - ಸ್ವಪ್ನಾವಸ್ಥೆ). ಪ್ರಜ್ಞೆ (ಸುಷುಪ್ತಿ) ಕೇವಲ ಕಾರಣದಿಂದ ರೂಪಗೊಂಡಿದೆ. ಆದರೆ ತುರೀಯದಲ್ಲಿ ಕಾರ್ಯ-ಕಾರಣಗಳು ಇರುವದೇ ಇಲ್ಲ.
೧೨. ಪ್ರಜ್ಞೆಗೆ ಆತ್ಮ ಅಥವಾ ಪರ, ಸತ್ಯ ಅಥವಾ ಅಸತ್ಯದ ಬಗ್ಗೆ ಏನೂ ತಿಳಿದಿಲ್ಲ. ಆದರೆ ತುರೀಯವು ಸದಾ ಅಸ್ತಿತ್ವದಲ್ಲಿರುತ್ತದೆ ಮತ್ತು ಎಲ್ಲವನ್ನೂ ವೀಕ್ಷಿಸುತ್ತದೆ.
೧೩.ದ್ವಂದ್ವತೆಯ ಅರಿವಿಲ್ಲದಿರುವುದು ಪ್ರಜ್ಞೆ ಹಾಗೂ ತುರೀಯ ಇವೆರಡರ ಸಾಮಾನ್ಯ ಲಕ್ಷಣವಾಗಿದ್ದಾಗಲೂ, ಕಾರಣದಿಂದ ಬದ್ಧವಾಗಿರುವದು ತುರೀಯವಲ್ಲ, ಪ್ರಜ್ಞೆ ಮಾತ್ರ ಹೇಗೆ? ಇದು ಪ್ರಭೇದಗಳ ಅರಿವಿಗೆ ಕಾರಣವಾಗುವದು ನಿದ್ದೆ. ಪ್ರಜ್ಞೆಯ ಸ್ಥಿತಿ ನಿದ್ರೆಯ ಭಾಗವಾಗಿದೆ. ತುರೀಯದಲ್ಲಿರುವವನು ಎಲ್ಲವನ್ನೂ ನೋಡುವವನಾಗಿರುವುದರಿಂದ, ವಾಸ್ತವದ ಜ್ಞಾನದ ಅನುಪಸ್ಥಿತಿಯಿಂದ ನಿರೂಪಿಸಲ್ಪಟ್ಟ ನಿದ್ರೆಯು ತುರೀಯದಲ್ಲಿ ಅಸ್ತಿತ್ವದಲ್ಲಿಲ್ಲ. ಆದ್ದರಿಂದ ಕಾರಣದ ಬಂಧನವು ತುರೀಯದಲ್ಲಿ ಅಸ್ತಿತ್ವದಲ್ಲಿಲ್ಲ.
೧೪. ಸ್ವಪ್ನ ಎಂದರೆ ಹಗ್ಗ ನೋಡಿ ಹಾವೆಂದುಕೊಳ್ಳುವಂತೆ ವಾಸ್ತವದ ತಪ್ಪು ಗ್ರಹಿಕೆಯ ಸ್ಥಿತಿ. ನಿದ್ರೆ ವಾಸ್ತವ ಜ್ಞಾನದ ಅನುಪಸ್ಥಿತಿಯಿಂದ ಆಗುವ ಕತ್ತಲೆ. ವಿಶ್ವ ಮತ್ತು ತೈಜಸಗಳು ಸ್ವಪ್ನ ಮತ್ತು ನಿದ್ರೆಯ ಜೊತೆ ಸಂಬಂಧ ಹೊಂದಿವೆ. ಆದ್ದರಿಂದ ಅವುಗಳು ಕಾರ್ಯ-ಕಾರಣಗಳ ನಿಯಮಾಧೀನವಾಗಿವೆ. ಆದರೆ ಪ್ರಜ್ಞೆಯು ಕನಸಿಲ್ಲದ ನಿದ್ರೆ- ಹಾಗಾಗಿ ಅದು ಕಾರಣದಿಂದ ಮಾತ್ರ ನಿಯಮಾಧೀನವಾಗಿದೆ. ಬ್ರಹ್ಮನನ್ನು ತಿಳಿದವನು ತುರೀಯದಲ್ಲಿ ಕನಸು ಮತ್ತು ನಿದ್ರೆಗಳನ್ನು ನೋಡುವುದಿಲ್ಲ, ಆದ್ದರಿಂದ ತುರೀಯ ಕಾರಣ ಮತ್ತು ಕಾರ್ಯಗಳೊಂದಿಗೆ ಸಂಬಂಧ ಹೊಂದಿಲ್ಲ.
೧೫. ಸ್ವಪ್ನ ಎಂದರೆ ವಾಸ್ತವದ ತಪ್ಪು ಅರಿವು. ನಿದ್ರೆ ಎಂದರೆ ವಾಸ್ತವ ಏನೆಂದು ತಿಳಿಯದ ಸ್ಥಿತಿ. ಈ ಎರಡರಲ್ಲಿರುವ ತಪ್ಪು ಜ್ಞಾನವು ನಾಶವಾದಾಗ, ತುರೀಯವು ಸಾಕ್ಷಾತ್ಕಾರವಾಗುತ್ತದೆ.
೧೬. ಅನಾದಿ ಮಾಯೆಯ ಪ್ರಭಾವದಿಂದ ನಿದ್ರಿಸುತ್ತಿರುವ ಜೀವ ಜಾಗೃತಗೊಂಡಾಗ, ಅದು ತನ್ನ ಅಜಾತ, ನಿದ್ರೆಯಿಲ್ಲದ ಮತ್ತು ಕನಸಿಲ್ಲದ ಅದ್ವೈತ ಸ್ವಭಾವವನ್ನು ಅರಿತುಕೊಳ್ಳುತ್ತದೆ.
೧೭. ನಮ್ಮ ಗ್ರಹಿಕೆಗೆ ಬರುವ ವಿಶ್ವವು ನಿಜವಾಗಿದ್ದರೆ ಅದು ಖಂಡಿತವಾಗಿಯೂ ಕಣ್ಮರೆಯಾಗುತ್ತಿತ್ತು. ನಮ್ಮ ಅರಿವಿಗೆ ಬರುವ ಈ ದ್ವಂದ್ವತೆ ಕೇವಲ ಮಾಯೆ. ಅದ್ವೈತ ಒಂದೇ ಪರಮ ಸತ್ಯ.
![]() |
| ಮೂಲ: https://sequencewiz.org/2018/05/09/the-meaning-of-om-four-states-of-human-consciousness/ |
ಮಾಂಡೂಕ್ಯ ಉಪನಿಷತ್ತಿನ ಬಗ್ಗೆ ಆದಿ ಶಂಕರಾಚಾರ್ಯರ ದೃಷ್ಟಿಕೋನ
ಆದಿ ಶಂಕರಾಚಾರ್ಯರು ಮಾಂಡೂಕ್ಯ ಉಪನಿಷತ್ತನ್ನು ಆತ್ಮದ ಅದ್ವೈತ ಸ್ವರೂಪವನ್ನು (ಅದ್ವೈತ ವೇದಾಂತ) ಅರ್ಥಮಾಡಿಕೊಳ್ಳಲು ಬೇಕಾಗುವ ಅತ್ಯಂತ ಅಧಿಕೃತ ಗ್ರಂಥಗಳಲ್ಲಿ ಒಂದೆಂದು ಪರಿಗಣಿಸಿದ್ದಾರೆ. ಅವರ ದೃಷ್ಟಿಕೋನದ ಸಾರಾಂಶ ಇಲ್ಲಿದೆ:ಮಾಂಡೂಕ್ಯದ ಸರ್ವೋಚ್ಚ ಅಧಿಕಾರ:
ಸರಿಯಾಗಿ ಅರ್ಥಮಾಡಿಕೊಂಡರೆ ಮಾಂಡೂಕ್ಯ ಉಪನಿಷತ್ತು ಮಾತ್ರವೇ ಮುಕ್ತಿಗೆ ಸಾಕಾಗುತ್ತದೆ ಎಂದು ಶಂಕರಾಚಾರ್ಯರು ಅಭಿಪ್ರಾಯಪಟ್ಟರು. ಅದರ ಸಂಕ್ಷಿಪ್ತ ಆದರೆ ಅಗಾಧವಾದ ವಿಷಯ ಜ್ಞಾನವು ಅದ್ವೈತದ ಸಂಪೂರ್ಣ ಸಾರವನ್ನು ಒಳಗೊಂಡಿದೆ.ತುರಿಯದ ಮೇಲೆ ಒತ್ತು:
ಅವರು ನಾಲ್ಕನೇ ಸ್ಥಿತಿಯಾದ ತುರಿಯವನ್ನು ನಿಜವಾದ ಆತ್ಮ ಎಂದು ಎತ್ತಿ ತೋರಿಸಿದರು, ಈ ಸ್ಥಿತಿಯು ಎಚ್ಚರ, ಕನಸು ಮತ್ತು ಆಳವಾದ ನಿದ್ರೆಯ(ಸುಷುಪ್ತಿ) ಸ್ಥಿತಿಗಳನ್ನು ಮೀರಿದೆ. ಇತರ ಮೂರಕ್ಕಿಂತ ಭಿನ್ನವಾಗಿ, ತುರಿಯವು ನಿರ್ವಿಕಲ್ಪ, ಶಾಶ್ವತ ಮತ್ತು ಅದ್ವೈತ.ಆತ್ಮ ಮತ್ತು ಬ್ರಹ್ಮದ ಏಕತೆ:
ತುರಿಯ ಸ್ಥಿತಿಯಲ್ಲಿ ಅನುಭವಕ್ಕೆ ಬರುವ ಆತ್ಮ ಅಂತಿಮ ಸತ್ಯವಾದ ಬ್ರಹ್ಮನೇ ಎಂದು ಶಂಕರರು ಕಲಿಸಿದರು. ಆತ್ಮ ಮತ್ತು ಸಾರ್ವತ್ರಿಕ ಚೈತನ್ಯ- ಪರಮಾತ್ಮರ ನಡುವೆ ಯಾವುದೇ ಭೇದವಲ್ಲ ಎಂದು ಹೇಳಿದರು.ಓಂ ಪಾತ್ರ:
ಅವರು ಓಂ ಅನ್ನು ಕೇವಲ ಶಬ್ದವಾಗಿ ಅರ್ಥೈಸಿಕೊಳ್ಳದೆ, ಅದು ಆತ್ಮವು ವಿವಿಧ ಪ್ರಜ್ಞೆಯ ಸ್ಥಿತಿಗಳ ಮೂಲಕ ಪಯಣಿಸಿ, ನಿರಾಕಾರ ಸಂಪೂರ್ಣತೆಯ ಸಾಕ್ಷಾತ್ಕಾರದಲ್ಲಿ ಅಂತ್ಯಗೊಳ್ಳುವ ಸಂಕೇತವೆಂದು ವ್ಯಾಖ್ಯಾನಿಸಿದರು.ಸಾಕ್ಷಾತ್ಕಾರ ಪಡೆಯಲು ನಿರಾಕರಣೆ:
ಅವರು ನೇತಿ ನೇತಿ (ಇದಲ್ಲ, ಇದಲ್ಲ) ವಿಧಾನವನ್ನುಬಳಸಿಕೊಂಡು ಮೂರು ಸ್ಪಷ್ಟ ಸ್ಥಿತಿಗಳನ್ನು (ಜಾಗೃತ, ಸ್ವಪ್ನ, ಸುಷುಪ್ತಿ) ನಿಜವಾದ ಆತ್ಮವಲ್ಲ ಎಂದು ತಳ್ಳಿಹಾಕಿದರು ಹಾಗೂ ತುರೀಯ ಸಾಕ್ಷಾತ್ಕಾರದ ಕಡೆಗೆ ಅನ್ವೇಷಕರಿಗೆ ಮಾರ್ಗದರ್ಶನ ನೀಡಿದರು.ಜ್ಞಾನ ಮಾರ್ಗ:
ಶಂಕರರಿಗೆ, ಮಾಂಡೂಕ್ಯ ಉಪನಿಷತ್‌ನಲ್ಲಿನ ಬೋಧನೆಗಳ ಆಳವಾದ ವಿಚಾರಣೆ ಮತ್ತು ಚಿಂತನೆಯ ಮೂಲಕ ಆತ್ಮದ ಜ್ಞಾನವು ಆಚರಣೆಗಳು ಅಥವಾ ಬಾಹ್ಯ ಆಚರಣೆಗಳ ಅಗತ್ಯವಿಲ್ಲದೆ ನೇರವಾಗಿ ಮೋಕ್ಷಕ್ಕೆ ಕಾರಣವಾಗುತ್ತದೆ.------------------------------------------------------------
ಮಾಂಡೂಕ್ಯೋಪನಿಷತ್
ಓಂ ಭದ್ರಂ ಕರ್ಣೇಭಿಃ ಶೃಣುಯಾಮ ದೇವಾ ಭದ್ರಂ ಪಶ್ಯೇಮಾಕ್ಷಭಿರ್ಯಜತ್ರಾಃ .
ಸ್ಥಿರೈರಂಗೈಸ್ತುಷ್ಟುವಾಂಸಸ್ತನೂಭಿರ್ವ್ಯಶೇಮ ದೇವಹಿತಂ ಯದಾಯುಃ ..
ಭದ್ರಂ ನೋ ಅಪಿ ವಾತಯ ಮನಃ ..
ಓಂ, ಓ ದೇವರೆ, ನಾವು ಯಾವಾಗಲೂ ನಮ್ಮ ಕಿವಿಗಳಿಂದ ಶುಭವನ್ನೇ ಕೇಳಲಿ, ಪೂಜನೀಯ ದೇವರೇ, ನಮ್ಮ ಕಣ್ಣುಗಳಿಂದ ಶುಭವನ್ನೇ ನೋಡಲಿ, ಓ ದೇವರೆ, ನಾವು ದೇವರು ಕೊಟ್ಟ ಆಯಸ್ಸನ್ನು ಸುಸ್ಥಿರ ಅಂಗಗಳೊಂದಿಗೆ, ದೇಹದೊಂದಿಗೆ ಕಳೆಯಲಿ. ನಮಗೆ (ದೇವರು) ಶುಭಕರವಾದ ಮನವನ್ನು ಕೊಡಲಿ.
ಓಂ ಶಾಂತಿಃ ಶಾಂತಿಃ ಶಾಂತಿಃ .
.. ಅಥ ಮಾಂಡೂಕ್ಯೋಪನಿಷತ್ ..
ಹರಿಃ ಓಂ
ಓಂ ಇತ್ಯೇತದಕ್ಷರಮಿದಂ ಸರ್ವಂ ತಸ್ಯೋಪವ್ಯಾಖ್ಯಾನಂ
ಭೂತಂ ಭವದ್ ಭವಿಷ್ಯದಿತಿ ಸರ್ವಮೋಂಕಾರ ಏವ
ಯಚ್ಚಾನ್ಯತ್ ತ್ರಿಕಾಲಾತೀತಂ ತದಪ್ಯೋಂಕಾರ ಏವ .. ೧..
ಓಂ ಅಕ್ಷರವು ಸರ್ವವು. ಅದರ ಉಪಾಖ್ಯಾನ ಹೀಗಿದೆ - ಭೂತ, ವರ್ತಮಾನ ಭವಿಷ್ಯವೆಲ್ಲವೂ ಓಂಕಾರವೇ ಆಗಿದೆ. ಯಾವುದೆಲ್ಲವೂ ಆಗಿತ್ತೋ, ಯಾವುದೆಲ್ಲವೂ ಇದೆಯೋ, ಯಾವುದೆಲ್ಲವೂ ಆಗುವದೋ ಅದೆಲ್ಲವೂ ಓಂಕಾರವೇ ಆಗಿದೆ. ಈ ತ್ರಿಕಾಲಗಳ ಆಚೆ ಇರುವದು ಕೂಡ ಓಂಕಾರವೇ ಆಗಿದೆ.
ಯಾವುದೊಂದು ವಸ್ತುವನ್ನು ನಾವು ಅದರ ಹೆಸರಿನಿಂದ ಗುರುತಿಸುವಂತೆ ಬ್ರಹ್ಮನನ್ನು ಓಂ ಎಂಬ ಹೆಸರಿನಿಂದ ಗುರುತಿಸಲಾಗುತ್ತದೆ.
ಕಾಲಗಳ ನಿಯಮಾಧೀನವಾಗಿರುವದು ಓಂ ಆಗಿದೆ. ಆ ನಿಯಮಾತೀತವಾಗಿರುವದೂ ಓಂ ಆಗಿದೆ.
ಸರ್ವಂ ಹ್ಯೇತದ್ ಬ್ರಹ್ಮಾಯಮಾತ್ಮಾ ಬ್ರಹ್ಮ ಸೋಽಯಮಾತ್ಮಾ ಚತುಷ್ಪಾತ್ .. ೨..
ಇದೆಲ್ಲವೂ ಬ್ರಹ್ಮ, ಈ ಆತ್ಮವು ಬ್ರಹ್ಮ. ಈ ಬ್ರಹ್ಮ ಚತುರ್ವಿಧವಾಗಿದೆ - ನಾಲ್ಕು ಪಾದಗಳನ್ನು ಹೊಂದಿದೆ.
ಜಾಗರಿತಸ್ಥಾನೋ ಬಹಿಷ್ಪ್ರಜ್ಞಃ ಸಪ್ತಾಂಗ ಏಕೋನವಿಂಶತಿಮುಖಃ
ಸ್ಥೂಲಭುಗ್ವೈಶ್ವಾನರಃ ಪ್ರಥಮಃ ಪಾದಃ .. ೩..
ಪ್ರಥಮಪಾದ ಜಾಗ್ರತಾವಸ್ಥೆ - ಅದು ಬಾಹ್ಯ ಪ್ರಪಂಚದ ಅನುಭವವನ್ನು ಮಾಡುತ್ತದೆ - ಏಳು ಅಂಗ ಮತ್ತು ಹತ್ತೊಂಬತ್ತು ದ್ವಾರಗಳನ್ನು ಹೊಂದಿದೆ. ಸ್ಥೂಲಪದಾರ್ಥಗಳನ್ನು ಅನುಭವಿಸುತ್ತದೆ, ಅದು ವೈಶ್ವಾನರ ಅಥವಾ ವಿಶ್ವ ಪುರುಷವಾಗಿದೆ.
ಸ್ವಪ್ನಸ್ಥಾನೋಽನ್ತಃಪ್ರಜ್ಞಃ ಸಪ್ತಾಂಗ ಏಕೋನವಿಂಶತಿಮುಖಃ
ಪ್ರವಿವಿಕ್ತಭುಕ್ತೈಜಸೋ ದ್ವಿತೀಯಃ ಪಾದಃ .. ೪..
ಸ್ವಪ್ನಾವಸ್ಥೆ ಯಾರ ವಾಸಸ್ಥಾನವಾಗಿರುವ, ಅಂತರಂಗವನ್ನು ಬಲ್ಲ, ಏಳು ಅಂಗಗಳನ್ನು ಹೊಂದಿರುವ, ಹತ್ತೊಂಬತ್ತು ದ್ವಾರಗಳನ್ನು ಹೊಂದಿರುವ, ಸೂಕ್ಷ್ಮ ವಸ್ತುಗಳ ಸಾರವನ್ನು ಅನುಭವಿಸುವ, ತೇಜಸ ಅಂದರೆ ಪ್ರಕಾಶಮಾನವಾದ ಮನಸ್ಸಿನಲ್ಲಿ ನಿವಾಸಿಯಾದದ್ದು ಎರಡನೇ ಪಾದ.
ಯತ್ರ ಸುಪ್ತೋ ನ ಕಂಚನ ಕಾಮಂ ಕಾಮಯತೇ ನ ಕಂಚನ ಸ್ವಪ್ನಂ
ಪಶ್ಯತಿ ತತ್ ಸುಷುಪ್ತಂ . ಸುಷುಪ್ತಸ್ಥಾನ ಏಕೀಭೂತಃ ಪ್ರಜ್ಞಾನಘನ
ಏವಾನಂದಮಯೋ ಹ್ಯಾನಂದಭುಕ್ ಚೇತೋಮುಖಃ ಪ್ರಾಜ್ಞಸ್ತೃತೀಯಃ ಪಾದಃ .. ೫..
ನಿದ್ರಿಸಿದಾಗ ಯಾವುದೇ ಆಸೆಯನ್ನು ಹೊಂದದೇ, ಯಾವುದೇ ಸ್ವಪ್ನವನ್ನು ನೋಡದೇ ಇರುತ್ತಾನೋ, ಆ ಸ್ಥಿತಿ ಸುಷುಪ್ತಿ. ಯಾರ ವಾಸಸ್ಥಾನವು ಸುಷುಪ್ತಿಯಲ್ಲಿದ್ದಾರೋ, ಯಾರು ಜ್ಞಾನದ ಸಾರ ತನ್ನೊಳಗೆ ಸಾಂದ್ರೀಕೃತಗೊಂಡಿದ್ದಾರೋ, ಯಾರು ಕೇವಲ ಆನಂದಮಯನೋ, ಯಾರು ಸಂಪೂರ್ಣ ಆನಂದವನ್ನು ಅನುಭವಿಸುತ್ತಾರೋ, ಮತ್ತು (ಇತರ ಎರಡು ಸ್ಥಿತಿಗಳ) ಜ್ಞಾನಕ್ಕೆ ಕಾರಣವಾಗುವರೋ ಅದು ತೃತೀಯ ಪಾದ.
ಏಷ ಸರ್ವೇಶ್ವರಃ ಏಷ ಸರ್ವಜ್ಞ ಏಷೋಽನ್ತರ್ಯಾಮ್ಯೇಷ ಯೋನಿಃ ಸರ್ವಸ್ಯ
ಪ್ರಭವಾಪ್ಯಯೌ ಹಿ ಭೂತಾನಾಂ .. ೬..
ಇದೇ (ಪ್ರಜ್ಞೆ) ಎಲ್ಲರ ಈಶ್ವರ, ಇದೇ ಎಲ್ಲವನ್ನೂ ಬಲ್ಲವನು, ಇದೇ ನಿಯಂತ್ರಕ, ಇದೇ ಎಲ್ಲದರ ಮೂಲ, ಮತ್ತು ಎಲ್ಲ ವಸ್ತುಗಳು ಹುಟ್ಟಿಕೊಳ್ಳುವುದೂ ಮತ್ತು ಅಂತಿಮವಾಗಿ ಅವು ಕಣ್ಮರೆಯಾಗುವುದೂ ಇದರಲ್ಲೇ.
ನಾಂತಃಪ್ರಜ್ಞಂ ನ ಬಹಿಷ್ಪ್ರಜ್ಞಂ ನೋಭಯತಃಪ್ರಜ್ಞಂ ನ ಪ್ರಜ್ಞಾನಘನಂ
ನ ಪ್ರಜ್ಞಂ ನಾಪ್ರಜ್ಞಂ . ಅದೃಷ್ಟಮವ್ಯವಹಾರ್ಯಮಗ್ರಾಹ್ಯಮಲಕ್ಷಣಂ
ಅಚಿಂತ್ಯಮವ್ಯಪದೇಶ್ಯಮೇಕಾತ್ಮಪ್ರತ್ಯಯಸಾರಂ ಪ್ರಪಂಚೋಪಶಮಂ
ಶಾಂತಂ ಶಿವಮದ್ವೈತಂ ಚತುರ್ಥಂ ಮನ್ಯಂತೇ ಸ ಆತ್ಮಾ ಸ ವಿಜ್ಞೇಯಃ .. ೭..
ತುರೀಯ ಅವಸ್ಥೆ ಎಂದರೆ - ಅಂತಃಪ್ರಜ್ಞೆಯ ಸ್ಥಿತಿ ಅಲ್ಲ - ಬಾಹ್ಯಪ್ರಜ್ಞೆಯ ಸ್ಥಿತಿಯೂ ಅಲ್ಲ- ಅಥವಾ ಅಂತರ್ ಹಾಗೂ ಬಾಹ್ಯ ಎರಡೂ ಪ್ರಜ್ಞೆ ಹೊಂದಿರುವ ಸ್ಥಿತಿಯೂ ಅಲ್ಲ. ಪ್ರಜ್ಞಾನಘನ ಸ್ಥಿತಿಯೂ ಅಲ್ಲ. ಪ್ರಜ್ಞನೂ ಅಲ್ಲ, ಅಪ್ರಜ್ಞನೂ ಅಲ್ಲ, ಕಣ್ಣಿಗೆ ಕಾಣುವದಿಲ್ಲ, ಯಾವುದಕ್ಕೂ ಸಂಬಂಧಿಸಿಲ್ಲ, ಗ್ರಹಿಸಲಾಗದ್ದು, ಊಹಿಸಲಾಗದ್ದು, ಯೋಚಿಸಲಾಗದ್ದು, ವರ್ಣಿಸಲಾಗದ್ದು, ನಿಜವಾಗಿ ನೋಡಿದರೆ ಕೇವಲ ಆತ್ಮ ಮಾತ್ರ ಹೊಂದಿರುವ ಪ್ರಜ್ಞಾರೂಪ, ಎಲ್ಲಾ ತತ್ವಗಳನ್ನು ನಿರಾಕರಿಸುವಂತಹದು, ಶಾಂತ, ಆನಂದ ಹಾಗೂ ಅದ್ವೈತವಾದದ್ದು. ಇದೇ ತುರೀಯ ಅಥವಾ ಚತುರ್ಥೀಯ ಅವಸ್ಥೆ. ಇದೇ ಆತ್ಮ, ಇದೇ ಮನನಗೊಳ್ಳಬೇಕಾದದ್ದು.
ಸೋಽಯಮಾತ್ಮಾಧ್ಯಕ್ಷರಮೋಂಕಾರೋಽಧಿಮಾತ್ರಂ ಪಾದಾ ಮಾತ್ರಾ ಮಾತ್ರಾಶ್ಚ ಪಾದಾ
ಅಕಾರ ಉಕಾರೋ ಮಕಾರ ಇತಿ .. ೮..
ನಾಲ್ಕು ಭಾಗಗಳನ್ನು ಹೊಂದಿರುವ ಆತ್ಮವನ್ನು ಅಕ್ಷರಗಳ ದೃಷ್ಟಿಯಿಂದ "ಓಂ" ಎಂದು ವಿವರಿಸಲಾಗಿದೆ. ನಾಲ್ಕು ಭಾಗಗಳನ್ನು ಹೊಂದಿರುವ "ಓಂ" ಅನ್ನು ಅಕ್ಷರಗಖ ದೃಷ್ಟಿಕೋನದಿಂದ ನೋಡಲಾಗುತ್ತದೆ. ನಾಲ್ಕು ಭಾಗಗಳು ಅಕ್ಷರಗಳಾಗಿವೆ ಮತ್ತು ಅಕ್ಷರಗಳು ನಾಲ್ಕು ಭಾಗಗಳಾಗಿವೆ. ಇಲ್ಲಿರುವ ಅಕ್ಷರಗಳು "ಅ", "ಉ" ಮತ್ತು "ಮ".
ಜಾಗರಿತಸ್ಥಾನೋ ವೈಶ್ವಾನರೋಽಕಾರಃ ಪ್ರಥಮಾ ಮಾತ್ರಾಽಽಪ್ತೇರಾದಿಮತ್ತ್ವಾದ್
ವಾಽಽಪ್ನೋತಿ ಹ ವೈ ಸರ್ವಾನ್ ಕಾಮಾನಾದಿಶ್ಚ ಭವತಿ ಯ ಏವಂ ವೇದ .. ೯..
ಜಾಗೃತ ಅವಸ್ಥೆಯ ವೈಶ್ವಾನರ - ವಿಶ್ವಪುರಷ - ಅವನು ಆದಿತ್ವದಿಂದ ಹಾಗೂ ಸರ್ವವ್ಯಾಪಿಯಾಗಿರುವದರಿಂದ ಅವನು ಪ್ರಥಮ ಮಾತ್ರೆಯಾದ ಅ-ಕಾರವಾಗಿದ್ದಾನೆ. ಇದನ್ನು ತಿಳಿದವನು ಸರ್ವ ಕಾಮನೆಗಳನ್ನು ಈಡೇರಿಸಿಕೊಳ್ಳುತ್ತಾನೆ ಹಾಗೂ ಆದಿ-ಯಾಗುತ್ತಾನೆ.
ಸ್ವಪ್ನಸ್ಥಾನಸ್ತೈಜಸ ಉಕಾರೋ ದ್ವಿತೀಯಾ ಮಾತ್ರೋತ್ಕರ್ಷಾತ್
ಉಭಯತ್ವಾದ್ವೋತ್ಕರ್ಷತಿ ಹ ವೈ ಜ್ಞಾನಸಂತತಿಂ ಸಮಾನಶ್ಚ ಭವತಿ
ನಾಸ್ಯಾಬ್ರಹ್ಮವಿತ್ಕುಲೇ ಭವತಿ ಯ ಏವಂ ವೇದ .. ೧೦..
ಕನಸಿನ ಸ್ಥಿತಿಯಲ್ಲಿರುವವನು, ತೇಜಸ್ಸು - ತೇಜೋಮಯ ಮನಸ್ಸಿನಲ್ಲಿ ವಾಸಿಸುವವನು - ತನ್ನ ಶ್ರೇಷ್ಠತೆ ಮತ್ತು ಉಭಯತ್ವದಿಂದಾಗಿ, ಅವನು ಉಕಾರ, ಎರಡನೇ ಅಕ್ಷರ; ಹೀಗೆ ಅವನನ್ನು ತಿಳಿದಿರುವವನು ತನ್ನ ಜ್ಞಾನದ ಮಿತಿಗಳನ್ನು ಮೀರುತ್ತಾನೆ ಮತ್ತು ಅಸಮಾನತೆಗಳನ್ನು ಮೀರಿ ಮೇಲೇರುತ್ತಾನೆ; ಅಂತಹ ವ್ಯಕ್ತಿಯ ಕುಟುಂಬದಲ್ಲಿ, ಅವನ ಸಂತತಿಯು ಯರೂ ಅಬ್ರಹ್ಮವಿದ್ (ಬ್ರಹ್ಮವನ್ನು ಅರಿಯದವನು) ಆಗಿರುವದಿಲ್ಲ.
ಸುಷುಪ್ತಸ್ಥಾನಃ ಪ್ರಾಜ್ಞೋ ಮಕಾರಸ್ತೃತೀಯಾ ಮಾತ್ರಾ ಮಿತೇರಪೀತೇರ್ವಾ
ಮಿನೋತಿ ಹ ವಾ ಇದಂ ಸರ್ವಮಪೀತಿಶ್ಚ ಭವತಿ ಯ ಏವಂ ವೇದ .. ೧೧..
ಸುಷುಪ್ತಿಯಲ್ಲಿರುವ ಪ್ರಾಜ್ಞನೆಂದು ಅಳೆಯುವದರಿಂದ ಹಾಗೂ ಅಂತಿಮಾವಸ್ಥೆಯಾಗಿರುವದರಿಂದ ತೃತೀಯ ಅಕ್ಷರವಾದ ಮಕಾರನಾಗಿದ್ದಾನೆ. ಅವನನ್ನು ತಿಳಿದಿರುವವನು ಇಡೀ 'ವಿಶ್ವ'ವನ್ನು ತನ್ನೊಂದಿಗೆ ಅಳೆಯಬಲ್ಲನು (ಎಲ್ಲದರ ನೈಜ ಸ್ವರೂಪವನ್ನು ತಿಳಿಯಬಲ್ಲವನು) ಮತ್ತು 'ಬ್ರಹ್ಮ'ನಲ್ಲಿ ವಿಲೀನಗೊಳ್ಳುತ್ತಾನೆ.
ಅಮಾತ್ರಶ್ಚತುರ್ಥೋಽವ್ಯವಹಾರ್ಯಃ ಪ್ರಪಂಚೋಪಶಮಃ ಶಿವೋಽದ್ವೈತ
ಏವಮೋಂಕಾರ ಆತ್ಮೈವ ಸಂವಿಶತ್ಯಾತ್ಮನಾಽಽತ್ಮಾನಂ ಯ ಏವಂ ವೇದ .. ೧೨..
ನಾಲ್ಕನೆಯದು 'ಬದಲಾಗದ' (ಅನಂತ ಪ್ರಮಾಣ), 'ವಿವರಿಸಲಾಗದ', ಈ ಸೃಷ್ಟಿಯ ಅಂತ್ಯ, ಅಂತಿಮ ಶುಭ - 'ಶಿವ', ' ಅನನ್ಯ.
ಹೀಗಿದೆ 'ಓಂ'. 'ಆತ್ಮ'ವು 'ಆತ್ಮ'ದ ಮೂಲಕ 'ಆತ್ಮ'ವನ್ನು ಪ್ರವೇಶಿಸುವ ಮೂಲಕ 'ಆತ್ಮ'ವನ್ನು ಸ್ವತಃ ತಿಳಿಯುತ್ತದೆ; ಇದನ್ನು ತಿಳಿದಿರುವವನಿಗೆ ಮಾತ್ರ ಇದು ತಿಳಿದಿರುತ್ತದೆ.
.. ಇತಿ ಮಾಂಡೂಕ್ಯೋಪನಿಷತ್ ಸಮಾಪ್ತಾ ..

Comments
Post a Comment