ಈಶೋಪನಿಷತ್

ಉಪನಿಷತ್ತಗಳು

ವೇದ ಸಾಹಿತ್ಯವನ್ನು ಮೂರು ವಿಭಾಗಗಳಾಗಿ ವಿಭಜಿಸಬಹುದು 

  1.  ಸಂಹಿತೆಗಳು - ದೇವರುಗಳನ್ನು ಸ್ತುತಿಸಿ, ಪೂಜಿಸಿ ಆರಾಧಿಸುವ ಮಂತ್ರಗಳನ್ನು ಒಳಗೊಂಡ ಸಂಹಿತೆಗಳು ವೇದದ ಅತಿ ಹಳೆಯ ಭಾಗದಲ್ಲಿ ಕಂಡುಬರುತ್ತವೆ.
  2. ಬ್ರಾಹ್ಮಣಗಳು - ಪೂಜೆ, ಪುನಸ್ಕಾರ, ಯಜ್ಞ-ಯಾಗಾದಿಗಳ ವಿಧಿ ವಿಧಾನವನ್ನು ಇವು ವಿವರಿಸುತ್ತವೆ. 
  3. ಉಪನಿಷತ್ತುಗಳು - ಇವು ಆಚರಣೆ, ಪೂಜೆ, ಪುನಸ್ಕಾರಗಳ ಬದಲು ತತ್ವ ಜ್ಞಾನ ಹಾಗೂ ಅಧ್ಯಾತ್ಮದ ವಿವರಣೆಯನ್ನು ಹೊಂದಿವೆ. ಆತ್ಮ ಹಾಗೂ ಪರಮಾತ್ಮನ ಭೇದ ಹಾಗೂ ಐಕ್ಯವನ್ನು ಸಾರುವ ಗ್ರಂಥಗಳು ಇವು.

ವೇದಗಳು ಕರ್ಮಕಾಂಡವನ್ನು ವಿವರಿಸಿದರೆ ಉಪನಿಷತ್ತುಗಳು ಜ್ಞಾನಕಾಂಡವನ್ನು, ತತ್ವಜ್ಞಾನವನ್ನು ಒಳಗೊಂಡು ಬಹಳವೇ ಪ್ರಸಿದ್ಧವಾಗಿವೆ. ವೇದಗಳು ಪೂಜೆ, ಆಚರಣೆ, ಯಜ್ಞ ಇತ್ಯಾದಿಗಳಿಗೆ ಪ್ರಾಮುಖ್ಯತೆ ಕೊಟ್ಟರೆ, ಉಪನಿಷತ್ತುಗಳು  ಆತ್ಮಜ್ಞಾನ, ಧ್ಯಾನ ಇತ್ಯಾದಿ ಆಧ್ಯಾತ್ಮವನ್ನು  ವಿವರಿಸುತ್ತವೆ.  

ಒಟ್ಟು 108 ಉಪನಿಷತ್ತುಗಳಿವೆ ಎಂದು ಹೇಳಲಾಗುವದು-  ಅವುಗಳಲ್ಲಿ  ಪ್ರಮುಖವೆಂದರೆ - ಈಶ, ಕೇನ, ಕಠ, ಪ್ರಶ್ನ, ಮುಂಡಕ, ಮಾಂಡೂಕ, ತೈತ್ತರೀಯ, ಐತ್ತರೀಯ, ಚಾಂಡೋಗ್ಯ ಹಾಗೂ ಬ್ರಹದಾರಣ್ಯಕ. 

ಈಶ ಉಪನಿಷತ್

ಈಶೋಪನಿಷತ್ ಶುಕ್ಲ ಯಜುರ್ವೇದದ ಭಾಗವಾಗಿದೆ. ಇದು ವಾಜಸನೇಯ ಸಂಹಿತೆಗೆ ಸೇರಿದುದರಿಂದ ಇದಕ್ಕೆ 'ವಾಜಸನೇಯ ಸಂಹಿತೋಪನಿಷತ್'ಎಂದೂ ಹೆಸರಿದೆ. ಇದರ ಮೊದಲ ಶ್ಲೋಕ 'ಈಶಾವಾಸ್ಯಮಿದಂ ..' ಎಂದು ಆರಂಭವಾಗುವದರಿಂದ ಇದಕ್ಕೆ  ಈಶಾವಾಸ್ಯ ಉಪನಿಷತ್ ಎಂದೂ ಹೇಳುತ್ತಾರೆ. 

ಮಹಾತ್ಮಾ ಗಾಂಧಿಯವರು ಪ್ರಕಾರ- 

" ಈ ಉಪನಿಷತ್ತಿನ ಮೊದಲನೇ ಶ್ಲೋಕ ವೇದಗಳ ಸಂಪೂರ್ಣ ತಾತ್ಪರ್ಯವನ್ನು ಒಂದೇ ಒಂದು ಶ್ಲೋಕದಲ್ಲಿ ಹೇಳುತ್ತದೆ"


 

ಉಪನಿಷತ್ತುಗಳನ್ನು ಶಾಂತಿಮಂತ್ರದೊಂದಿಗೆ ಆರಂಭಿಸುವ ಪರಿಪಾಠವಿದೆ. 

ಶಾಂತಿ ಮಂತ್ರ 

ಓಂ ಪೂರ್ಣಮದಃ ಪೂರ್ಣಮಿದಂ ಪೂರ್ಣಾತ್ ಪೂರ್ಣಮುದಚ್ಯತೇ .
ಪೂರ್ಣಸ್ಯ ಪೂರ್ಣಮಾದಾಯ ಪೂರ್ಣಮೇವಾವಶಿಷ್ಯತೇ ..
ಓಂ ಶಾಂತಿಃ ಶಾಂತಿಃ ಶಾಂತಿಃ ..


ಓಂ , ಅದು (ಬಾಹ್ಯ ಜಗತ್ತು , ಪ್ರಕೃತಿ, ಕಣ್ಣಿಗೆ ಕಾಣುವ ಜಗತ್ತು) ಪರಿಪೂರ್ಣ. ಇದು ಪರಿಪೂರ್ಣ ( ಕಣ್ಣಿಗೆ ಕಾಣದ ಜಗತ್ತು, ಬ್ರಹ್ಮ,). ಪೂರ್ಣದಿಂದ ಪೂರ್ಣ ಉತ್ಪತ್ತಿಯಾಗುತ್ತದೆ. ಪೂರ್ಣದಿಂದ ಪೂರ್ಣವನ್ನು ಕಳೆದರು ಪೂರ್ಣವೇ ಉಳಿಯುತ್ತದೆ.
  • ಸಚ್ಚಿದಾನಂದ ಪರಬ್ರಹ್ಮನು ಪರಿಪೂರ್ಣ. ಅವನಿಂದ ರಚಿತವಾದ ಈ ಜಗತ್ತು ಪೂರ್ಣ. ಈ ಪೂರ್ಣ ಜಗತ್ತಿನಿಂದ ಎಲ್ಲವನ್ನು ಹೊರ ತೆಗೆದರೂ ಪೂರ್ಣವೇ ಉಳಿಯುತ್ತದೆ. 
  • ಉದಾಹರಣೆಗೆ - ನೀವು ಒಂದು ದೀಪದ ಬೆಳಕಿನಿಂದ ಇನ್ನೊಂದು ದೀಪವನ್ನು ಬೆಳಗಿದರೆ,ಮೊದಲಿನ ದೀಪದ  ಬೆಳಕೂ ಸಹ  ಪೂರ್ಣವಾಗಿಯೇ ಇರುವದಲ್ಲ. 
  • ಇನ್ನೊಂದು ಉದಾಹರಣೆ ಎಂದರೆ ಜ್ಞಾನ - ನಿಮ್ಮ ಸಂಪೂರ್ಣ ಜ್ಞಾನವನ್ನು ಇನ್ನೊಬ್ಬರಿಗೆ ಕಲಿಸಿಕೊಟ್ಟರೆ, ನಿಮ್ಮ  ಜ್ಞಾನ ನಾಶವಾಗುವದೇ? ಇಲ್ಲ - ಅದೂ ಸಹ ಸಂಪೂರ್ಣವಾಗಿಯೂ  ಉಳಿಯುತ್ತದೆ ತಾನೇ?
  • ಕನಸಿನಲ್ಲಿ ಸಂತೆಗೆ ಹೋದವನು ಅನೇಕರನ್ನು ನೋಡಿದರೂ ಎಚ್ಚರಾದಾಗ ತಾನೊಬ್ಬನೇ ಇರುವುದನ್ನು ಕಾಣುತ್ತಾನೆ -ಕನಸು ಕಾಣುವಾಗ ಅನೇಕ ಜನರಿದ್ದರೂ ಹೆಚ್ಚೂ ಇಲ್ಲ, ಕನಸು ಲಯವಾದಾಗ ಆ ಜನರೆಲ್ಲಾ ಮಾಯವಾದರೂ ಕಡಿಮೆಯಾಗಲೂ ಇಲ್ಲ.


ಅಥ ಈಶೋಪನಿಷತ್ ..

 ಓಂ ಈಶಾವಾಸ್ಯಮಿದಂ ಸರ್ವಂ ಯತ್ಕಿಂಚ ಜಗತ್ಯಾಂ ಜಗತ್ .
ತೇನ ತ್ಯಕ್ತೇನ ಭುಂಜೀಥಾ ಮಾ ಗೃಧಃ ಕಸ್ಯಸ್ವಿದ್ಧನಂ .. 1..
ಆವಾಸ್ಯಮ್ = ನಿವಾಸ       ಇದಂ = ಇದು ಸರ್ವಂ = ಎಲ್ಲವೂ ಯತ್+ಕಿಂಚ = ಯಾವುದೆಲ್ಲ    ಜಗತ್ಯಾಂ - ಜಗತ್ತಿನಲ್ಲಿ 
ಜಗತ್ = ಚಲಿಸುತ್ತದೆಯೋ.      ತೇನ - ಅದರಿಂದ ತ್ಯಕ್ತೇನ - ತ್ಯಜಿಸುವದರಿಂದ    ಭುಂಜೀಥಾ - ಅನುಭವಿಸತಕ್ಕದ್ದು   
ಮಾ = ಬೇಡ   ಗೃಧ = ಆಸೆ ಪಡಬೇಡ   ಕಸ್ಯಸ್ವಿತ್ = ಯಾರದ್ದು   ಧನ= ಐಶ್ವರ್ಯ 
 
ಈ ಜಗತ್ತೆಲ್ಲವೂ ಈಶ್ವರನಿಂದ ಆಚ್ಛಾದಿಸಲ್ಪಟ್ಟಿದೆ. ಸಕಲ ಜೀವಿಗಳಲ್ಲೂ , ಎಲ್ಲ ಜೀವಜಂತುಗಳಲ್ಲಿ ಈಶ್ವರನಿದ್ದಾನೆ.  ತ್ಯಾಗ ಮಾಡಿ ಸುಖವನ್ನು ಅನುಭವಿಸು. ಇತರರ ಧನವನ್ನು ಆಶಿಸಬೇಡ. ಯಾಕೆಂದರೆ ಈ ಧನಕನಕಗಳೆಲ್ಲ ಯಾರದ್ದು? 
  • ಈ ಜಗತ್ತಿನಲ್ಲಿ ಸಕಲ ಚರಾಚರಗಳೆಲ್ಲವೂ ಈಶ್ವರನಿಂದ ಆವೃತವಾಗಿವೆ.
  • ತ್ಯಜಿಸು ಎಂದರೆ  ವೈರಾಗ್ಯ- ಆ ವೈರಾಗ್ಯದಿಂದ ಜಗವನ್ನು ಅನುಭವಿಸು. ಈ ಬಾಹ್ಯ ಜಗತ್ತನ್ನು ತ್ಯಜಿಸು. ಆಸೆ, ಅಭಿಮಾನ, ಅಹಂಕಾರ, ಸ್ವಾರ್ಥ, ದೇಹದ ಮೋಹ ಎಲ್ಲವನ್ನು ತ್ಯಜಿಸು. ಆಗ ನೀನು 'ಅವನೇ' ಆಗುತ್ತೀಯ . 
  • ತೇನ ತ್ಯಕ್ತೇನ ಭುಂಜೀಥಾ ಎಂದರೆ ತ್ಯಾಗವನ್ನೂ ಮಾಡು, ನೀನೂ ಅನುಭವಿಸು - ಎಂದೂ ಅರ್ಥೈಸಬಹುದು. 
  • 'ಕಸ್ಯಸ್ವಿದ್ಧನಂ' ಇದರ ಇನ್ನೊಂದು ವ್ಯಾಖ್ಯಾನ ಹೀಗೆ ಹೇಳಬಹುದು - ನೀನು ಅಸೆ ಪಡಲು ಈ ಧನವಾದರೂ ಯಾರದ್ದು? ಎಲ್ಲವೂ ಆ ಪರಬ್ರಹ್ಮನದ್ದೇ  ಆಗಿರುವಾಗ ನೀನು ಯಾವುದನ್ನು ಕುರಿತು ಮೋಹ, ಲೋಭ ಮಾಡುತ್ತೀಯಾ? 
  • ಈಶಾವಾಸ್ಯಮಿದಂ ಸರ್ವಂ ಅದರ ಇನ್ನೊಂದು ಅರ್ಥದ ಪ್ರಕಾರ - ನೀನು ಸಕಲ ಜಗತ್ತನ್ನು ಈಶ್ವರನಿಂದ ಆಚ್ಛಾದಿಸು - ಈಶ್ವರ ಭಾವದಿಂದ ಇಡೀ ವಿಶ್ವವನ್ನು ನೋಡು. 
  • ತ್ಯಕ್ತೇನ ಭುಂಜೀಥಾ - ಈ ಶಬ್ದದ ಅರ್ಥ ತ್ಯಜಿಸಿ ಜೀವಿಸು ಎಂದೂ ಆಗುತ್ತದೆ 

ಕುರ್ವನ್ನೇವೇಹ ಕರ್ಮಾಣಿ ಜಿಜೀವಿಷೇಚ್ಛತಂ ಸಮಾಃ .
ಏವಂ ತ್ವಯಿ ನಾನ್ಯಥೇತೋಽಸ್ತಿ ನ ಕರ್ಮ ಲಿಪ್ಯತೇ ನರೇ .. 2..

ಕುರ್ವನ್ = ಮಾಡತಕ್ಕದ್ದು. ಏವ = ನಿಜವಾಗಿ.   ಇಹ = ಇಲ್ಲಿ   ಕರ್ಮಾಣಿ = ಕರ್ಮಗಳನ್ನು.   ಜಿಜೀವ + ಇಷೇತ್ = ಜೀವಿಸಲು ಇಷ್ಟಪಟ್ಟರೆ   ಶತಂ = ನೂರು (ನೂರು ವರ್ಷ).   ಸಮಾಃ = ವರ್ಷಗಳು  ತ್ವಯಿ = ನಿನಗೆ  ನ+ಅನ್ಯಥಾ = ಬೇರೆ ಇಲ್ಲ    ಇತಃ=ಕ್ಕಾಗಿ ಅಸ್ತಿ = ಇದೆ.   ನ=ಇಲ್ಲ.  ಲಿಪ್ಯತೇ = ಅಂಟಿಕೊಳ್ಳುವದು ನರೇ = ಮನುಷ್ಯನಲ್ಲಿ
 
ಈ ಭೂಮಿಯ ಮೇಲೆ ನೂರು ವರ್ಷ ಬದುಕಲು ಬಯಸುವವನು ಕರ್ಮ ಮಾಡುತ್ತಾ ಬದುಕಬೇಕು. (ಇಲ್ಲಿ ಕರ್ಮ ಎಂದರೆ ಅಗ್ನಿಹೋತ್ರ ಇತ್ಯಾದಿ ಎಂದು ಅರ್ಥ) ಕರ್ಮಫಲ ನಿನಗೆ ಅಂಟಿಕೊಳ್ಳದಿರಲು ಇದರ ಹೊರತು ನಿನಗೆ ಬೇರೆ ಮಾರ್ಗವಿಲ್ಲ.   
ಮೊದಲನೆಯ ಶ್ಲೋಕ ಸನ್ಯಾಸಿಗಳಿಗಾದರೆ ಈ ಶ್ಲೋಕ ಸಂಸಾರಿಗಳಿಗಾಗಿದೆ. 
ನಾವು ವೈರಾಗ್ಯ ಹೊಂದಬೇಕು, ಬೇರೆಯವರ ಐಶ್ವರ್ಯವನ್ನು ವಾಂಚಿಸಬಾರದು. ಎಂದು ಮೊದಲನೇ ಶ್ಲೋಕ ಹೇಳಿದರೆ, ಈ ಎರಡನೇ ಶ್ಲೋಕ ನಾವು ನಮ್ಮ ಕರ್ಮವನ್ನು ಬಿಡಬಾರದು - ಸುಮ್ಮನೇ ಆಲಸ್ಯದಲ್ಲಿ ಜೀವಿಸಬಾರದು ಎನ್ನುತ್ತದೆ.   ಕರ್ಮದ ಹೊರತು ನಮಗೆ ಅನ್ಯ ಮಾರ್ಗಗಳಿಲ್ಲ.  ಅತಿ ಆಸೆ ಮಾಡದೆ, ನಮ್ಮ ಕರ್ಮವನ್ನು , ಭಗವಂತನ ಆರಾಧನೆಯೆಂದು ತಿಳಿದು ಮಾಡಿದರೆ ನಮಗೆ ಕರ್ಮಫಲ ಅಂಟುವದಿಲ್ಲ .  

ಅಸುರ್ಯಾ ನಾಮ ತೇ ಲೋಕಾ ಅಂಧೇನ ತಮಸಾಽಽವೃತಾಃ .
ತಾಂಸ್ತೇ ಪ್ರೇತ್ಯಾಭಿಗಚ್ಛಂತಿ ಯೇ ಕೇ ಚಾತ್ಮಹನೋ ಜನಾಃ .. 3..

 ಅಸೂರ್ಯಾ = ಅಸುರೀ, ಸೂರ್ಯನಿಲ್ಲದ    ತೇ = ಅವು  ಅಂಧೇನ = ಅಂಧತೆಯಿಂದ ತಮಸಾ =ಕತ್ತಲೆಯಿಂದ ಆವೃತಾ = ಆವರಿಸಲ್ಪಟ್ಟ   ತಾಂ= ಅವುಗಳಿಗೆ ತೇ = ಅವರು ಪ್ರೇತ್ಯ = ಸತ್ತ ನಂತರ   ಅಭಿಗಚ್ಛಂತಿ=ಹೋಗುತ್ತಾರೆ  ಯೇ ಕೇ= ಯಾರು ಚ+ಆತ್ಮ ಹನೋ = ಆತ್ಮವನ್ನು ಕೊಂದವರು   ಜನಾಃ = ಜನರು
 
 ಅಜ್ಞಾನದಿಂದ ಆತ್ಮನನ್ನು ಹನನ (ಕೊಲೆ) ಮಾಡುವವರು ಅಸುರ್ಯ (ಅಸುರರ ಲೋಕ, ದುಃಖ ದಾರಿದ್ರ್ಯ ತುಂಬಿದ ಲೋಕ) ಎಂಬ ಕತ್ತಲೆಯಿಂದ ತುಂಬಿದ  ಲೋಕಕ್ಕೆ ಹೋಗುತ್ತಾರೆ.   
 
ಸ್ವಜ್ಞಾನವಿಲ್ಲದೆ, ತಪ್ಪಾದ, ಸ್ವ ಹಾನಿ ಮಾಡುವ, ಒಳ್ಳೇ ಫಲ ಕೊಡದ ಕರ್ಮಗಳನ್ನೇ  ಮಾಡುತ್ತ, ನಮಗೆ ನಾವೇ ಕೇಡು ಮಾಡಿಕೊಳ್ಳುತ್ತ ಇರುವದು ನಮ್ಮ ಆತ್ಮವನ್ನು ನಾವೇ ಕೊಂದಂತೆ.  ಅದರ ಫಲದಿಂದ ಲಭಿಸುವದು ರಾಕ್ಷಸರ ಲೋಕ, ಜ್ಞಾನದ ಪ್ರಕಾಶವಿಲ್ಲದ ಕಾರ್ಗತ್ತಲೆಯ ಲೋಕ ಮತ್ತು  ಜನ್ಮ-ಮೃತ್ಯುಗಳ ಚಕ್ರದಲ್ಲಿ ಪುನಃ ಪುನಃ ಸುತ್ತುತ್ತಲೇ ಇರುವದು. 
ಆತ್ಮದ ಮೇಲೆ ಅಜ್ಞಾನದ ಮುಸುಕನ್ನು ಹಾಕಿಕೊಂಡವರು ಆತ್ಮದ ಹನನ ಮಾಡಿರುತ್ತಾರೆ - ಅವರು ಕತ್ತಲೆಯ ಲೋಕವನ್ನು ತಲುಪುತ್ತಾರೆ. 


ಅನೇಜದೇಕಂ ಮನಸೋ ಜವೀಯೋ ನೈನದ್ದೇವಾ ಆಪ್ನುವನ್ಪೂರ್ವಮರ್ಷತ್ .
ತದ್ಧಾವತೋಽನ್ಯಾನತ್ಯೇತಿ ತಿಷ್ಠತ್ತಸ್ಮಿನ್ನಪೋ ಮಾತರಿಶ್ವಾ ದಧಾತಿ .. 4..

ಅನೇಜತ್ = ನಿಶ್ಚಲ      ಜವೀಯ = ಹೆಚ್ಚುವೇಗದ   ನ+ಏನತ್ +ದೇವಾ  ಏನತ್ = ಇದನ್ನು    ದೇವಾ = ದೇವರು,ಕಣ್ಣು, ಕಿವಿ ಇತ್ಯಾದಿ ಇಂದ್ರಿಯಗಳು ಆಪ್ನುವನ್ = ತಲುಪಿ, ಹಿಂದೆ ಹಾಕಿ     ಅರ್ಷತ್=ಓಡಿದರು  ತತ್+ ಧಾವತ: = ಅದು ಓಡುತ್ತಿರುವ   ಅನ್ಯಾನ್ = ಬೇರೆಯವರನ್ನು.  ತಿಷ್ಟತ್ = ಕುಳಿತಿರುವ  ತಸ್ಮಿನ್ = ಅದರಲ್ಲಿ    ಅಪಃ= ಚಟುವಟಿಕೆಗಳು (ನೀರು)   ದಧಾತಿ = ಬೆಂಬಲಿಸುತ್ತದೆ
 
೪ನೇ ಶ್ಲೋಕ ಮತ್ತು ೫ನೇ ಶ್ಲೋಕಗಳು ಆತ್ಮದ ರೂಪವನ್ನು ವಿವರಿಸುತ್ತವೆ.
 
ಆತ್ಮವು  ಏಕಮೇವ.  ನಿಶ್ಚಲ, ಆದರೆ ಅದು ಮನಸ್ಸಿಗಿಂತಲೂ ಶೀಘ್ರ.. ಇಂದ್ರಿಯಗಳು ಕೂಡ  ಅದನ್ನು ಹಿಡಿಯಲಾರವು. ಸ್ಥಿರವಾಗಿ ನಿಂತರೂ ಆತ್ಮವು ಓಡುತ್ತಿರುವ ಎಲ್ಲರನ್ನೂ ಹಿಂದೆ ಹಾಕುತ್ತದೆ.  ಆತ್ಮದಿಂದ ಸರ್ವವ್ಯಾಪಿಯಾದ ಪ್ರಾಣವಾಯು ಜೀವಿಗಳ ಚಟುವಟಿಕೆಗಳಿಗೆ ಆಧಾರವಾಗುತ್ತದೆ.
 

ತದೇಜತಿ ತನ್ನೈಜತಿ ತದ್ದೂರೇ ತದ್ವಂತಿಕೇ .
ತದಂತರಸ್ಯ ಸರ್ವಸ್ಯ ತದು ಸರ್ವಸ್ಯಾಸ್ಯ ಬಾಹ್ಯತಃ .. 5..

ತತ್=ಅದು ಏಜತಿ=ಚಲಿಸುತ್ತದೆ   ತತ್+ನ+ಏಜತಿ = ಅದು ಚಲಿಸುವದಿಲ್ಲ. ತತ್+ದೂರೆ = ಅದು ದೂರದಲ್ಲಿದೆ  ತತ್+ಉ+ಅಂತಿಕೇ = ಅದು ನಿಜವಾಗಿಯೂ ಹತ್ತಿರದಲ್ಲಿದೆ   ಅಂತರಸ್ಯ = ಒಳಗಿನ  ಸರ್ವಸ್ಯ = ಎಲ್ಲದರ ಬಾಹ್ಯತಃ=ಹೊರಗಿನ
 
ಅದು (ಆತ್ಮವು) ಚಲಿಸುತ್ತದೆ. ಅದು ಚಲಿಸುವದಿಲ್ಲ. ಅದು ದೂರದಲ್ಲಿದೆ. ಅದು ಹತ್ತಿರದಲ್ಲಿದೆ. ಅದು ಸರ್ವರ ಒಳಗಿದೆ. ಅದು ಸರ್ವರ ಬಾಹ್ಯದಲ್ಲಿದೆ. 
  •  ಒಂದು ಉದಾಹರಣೆ ಹೀಗೆ ಕೊಡಬಹುದೇನೋ - ಮನಸ್ಸಿನ ನಿರ್ಧಾರದಿಂದಲೇ ನಾವು ಚಲಿಸುತ್ತೇವೆ. ಕೈ, ಕಾಲು, ಶರೀರ ಚಲಿಸುತ್ತದೆ. ಹಾಗೆಂದು ಮನಸ್ಸು ಚಲಿಸುವುದಾ? ಇಲ್ಲ. ಅದೇ ರೀತಿ ಆತ್ಮ ಕೂಡ ಚಲನೆಗೆ ಹೇತುವಾಗುತ್ತದೆಯೇ ಹೊರತು  ಅದು  ಚಲಿಸುವದಿಲ್ಲ. 
  • ಮೂಢರಿಗೆ, ಸಂಸಾರ ಸಾಗರದಲ್ಲಿ ಮುಳುಗಿದರವರಿಗೆ, ಕಾಮ, ಕ್ರೋಧ, ಲೋಭ, ಮದ, ಮತ್ಸರದಿಂದ ತುಂಬಿಕೊಂಡವರಿಗೆ ಆತ್ಮವು ದೂರದಲ್ಲಿದೆ. ಆದರೆ ಚಿತ್ತಶುದ್ಧಿ ಹೊಂದಿ, ಶ್ರವಣ, ಮನನ, ನಿಧಿಧ್ಯಾಸನ ಇತ್ಯಾದಿ ಮಾಡುತ್ತ, ಧ್ಯಾನಿಸುವವರಿಗೆ ಆತ್ಮ ಬಹಳ ಹತ್ತಿರದಲ್ಲಿದೆ. 
  • ಅತಿ ಸೂಕ್ಷ್ಮವಾದ ಆತ್ಮವು ಎಲ್ಲರ, ಎಲ್ಲವುಗಳ ಅಂತರಾಳದಲ್ಲಿ ಅಡಗಿದೆ. ಆದರೆ ಈ ಆತ್ಮವು ಸರ್ವ ವ್ಯಾಪಿಯಾಗಿ, ಎಲ್ಲವುಗಳ ಹೊರಗೂ ಸಹ ಇದೆ. 


ಯಸ್ತು ಸರ್ವಾಣಿ ಭೂತಾನ್ಯಾತ್ಮನ್ಯೇವಾನುಪಶ್ಯತಿ .
ಸರ್ವಭೂತೇಷು ಚಾತ್ಮಾನಂ ತತೋ ನ ವಿಜುಗುಪ್ಸತೇ .. 6..

 ಯಸ್ತು = ಯಃ+ತು = ಯಾರು  ಸರ್ವಾಣಿ = ಎಲ್ಲ ಭೂತಾನಿ=ಭೂತಗಳಲ್ಲಿ  ಆತ್ಮನಿ = ಆತ್ಮದಲ್ಲಿ  ಏವ = ಕೇವಲ ಅನುಪಶ್ಯತಿ = ನೋಡುತ್ತಾನೆ   ಸರ್ವಭೂತೇಷು = ಎಲ್ಲ ಜೀವಿಗಳಲ್ಲಿ   ಚ + ಆತ್ಮಾನಂ = ಆತ್ಮವನ್ನು   ತತ: = ಆಗ. ವಿಜುಗುಪ್ಸತೆ= ಜುಗುಪ್ಸೆಗೊಳ್ಳುವದಿಲ್ಲ
 
ಯಾರು ಸರ್ವಭೂತಗಳಲ್ಲಿ (ಚರಾಚರ ಜೀವಜಂತುಗಳಲ್ಲಿ) ಆತ್ಮನನ್ನು ನೋಡುತ್ತಾನೋ, ಯಾರು ಆತ್ಮನಲ್ಲಿ ಎಲ್ಲರನ್ನು ನೋಡುತ್ತಾನೋ, ಅವನು ಭಯದಿಂದ ಮುಕ್ತನಾಗುತ್ತಾನೆ ಮತ್ತು ಯಾರಿಂದಲೂ ಹೆದರಿ ಕುಗ್ಗಿ  ಕುಳಿತುಕೊಳ್ಳುವದಿಲ್ಲ, ಯಾರನ್ನೂ ದ್ವೇಷಿಸುವದಿಲ್ಲ. 
 
ಇಂತಹುದೇ  ವಾಕ್ಯ ಭಗವದ್ಗೀತೆಯಲ್ಲೂ ಬಂದಿದೆ. 
"ಸರ್ವ ಭೂತಾಸ್ತಮಾತ್ಮನಾಮ್ ಸರ್ವ ಭೂತಾನಿ ಚಾತ್ಮನಿ 
ಈಕ್ಷತೆ ಯೋಗಯುಕ್ತಾತ್ಮಾ ಸರ್ವತ್ರ ಸಮದರ್ಶನಃ" - ಅಧ್ಯಾಯ ೬ ಶ್ಲೋಕ ೨೯


ಯಸ್ಮಿನ್ಸರ್ವಾಣಿ ಭೂತಾನ್ಯಾತ್ಮೈವಾಭೂದ್ವಿಜಾನತಃ .
ತತ್ರ ಕೋ ಮೋಹಃ ಕಃ ಶೋಕ ಏಕತ್ವಮನುಪಶ್ಯತಃ .. 7..

 ಯಸ್ಮಿನ್ = ಯಾರಲ್ಲಿ      ಸರ್ವಾಣಿ = ಎಲ್ಲ      ಭೂತಾನಿ= ಜೀವಿಗಳು      ಆತ್ಮ +ಏವ= ಆತ್ಮವೇ    ಭೂತ್= ಆಗಿ    ವಿಜಾನತ: = ತಿಳಿದು    ತತ್ರ = ಆವಾಗ   ಕಃ = ಎಲ್ಲಿ   ಏಕತ್ವಂ = ಏಕತ್ವವನ್ನೇ    ಅನುಪಶ್ಯತಃ = ನೋಡುತ್ತಾನೆ
 
ಎಲ್ಲಾ ಜೀವಿಗಳು ಮತ್ತು ರೂಪಗಳು ತನ್ನ ಆತ್ಮದಲ್ಲಿ ಒಂದಾಗಿರುವಾಗ - ಅದನ್ನು ತಿಳಿದವನು, ಎಲ್ಲೆಡೆ ಏಕತೆಯನ್ನು (ದ್ವಂದ್ವತೆಯನ್ನು) ಮಾತ್ರ ನೋಡುವವನು. (ಅದು ತಿಳಿದಾದ) ನಂತರ ಅವನು ಹೇಗೆ ತಾನೇ ಮೋಹ ಮತ್ತು ಶೋಕವನ್ನು ಅನುಭವಿಸಲು ಸಾಧ್ಯ?


ಸ ಪರ್ಯಗಾಚ್ಛುಕ್ರಮಕಾಯಮವ್ರಣ-
ಮಸ್ನಾವಿರಂ ಶುದ್ಧಮಪಾಪವಿದ್ಧಂ .
ಕವಿರ್ಮನೀಷೀ ಪರಿಭೂಃ ಸ್ವಯಂಭೂ-
ರ್ಯಾಥಾತಥ್ಯತೋಽರ್ಥಾನ್ ವ್ಯದಧಾಚ್ಛಾಶ್ವತೀಭ್ಯಃ ಸಮಾಭ್ಯಃ .. 8..

ಸ=ಅವನು    ಪರ್ಯಗಾತ್ = ಆವರಿಸಿರುವ     ಶುಕ್ರಂ = ಪ್ರಕಾಶಮಾನವಾದ    ಅಕಾಯಂ= ಶರೀರವಿಲ್ಲದ  ಅವ್ರಣಂ= ಗಾಯವಿಲ್ಲದ, ಲೋಪವಿಲ್ಲದ    ಅಸ್ನಾವಿರಂ= ಸ್ನಾಯುವಿಲ್ಲದ     ಅಪಾಪವಿದ್ಧಂ=ಪಾಪವು ಭೇದಿಸಿರದ  ಕವಿಂ=ಜ್ಞಾನಿ    ಮನೀಷಿ=ಸರ್ವಜ್ಞನಾದ    ಪರಿಭೂ=ಎಲ್ಲೆಲ್ಲೂ ಇರುವ  ಸ್ವಯಂಭೂ=ಸ್ವತಃ ಸೃಷ್ಟಿಯಾದದ್ದು  ಯಥಾತಥ್ಯತಃ=ಯಥಾನುಕ್ರಮವಾಗಿ ಅರ್ಥಾನ್ = ವಸ್ತುಗಳನ್ನು    ವ್ಯದಧಾತ್ = ವ್ಯವಸ್ಥಿತವಾಗಿ ಹೊಂದಿಸುವದು.  ಶಾಶ್ವತಿಭ್ಯ: =ಶಾಶ್ವತವಾಗಿ     ಸಮಾಭ್ಯಃ = ವರ್ಷಗಳಲ್ಲಿ 
 
ಆ ಆತ್ಮನು ಆಗಸದಂತೆ ಎಲ್ಲೆಡೆ ವ್ಯಾಪಿಸಿದ್ದು, ತೇಜಸ್ವಿ, ದೇಹರಹಿತ, ಕ್ಷಯರಹಿತ, ಸ್ನಾಯುಗಳಿಲ್ಲದ, (ಸ್ಥೂಲ ಶರೀರವಿಲ್ಲದ) ಶುದ್ಧ, ಪಾಪವಿಲ್ಲದ, ದೂರದೃಷ್ಟಿಯುಳ್ಳ, ಸರ್ವಜ್ಞ, ಸರ್ವಶಕ್ತನಾದ, ಅತೀಂದ್ರಿಯ, ಸ್ವಯಂಜಾತನಾದ, (ಅವನು) ಅನಾದಿಕಾಲದಿಂದ ಸೃಷ್ಟಿಕರ್ತರಿಗೆ ಅವರವರ ಕಾರ್ಯಗಳನ್ನು ಸರಿಯಾಗಿ ಹಂಚಿಕೆ ಮಾಡುತ್ತಾನೆ. 
ಶುಕ್ರಂ ಅಂದರೆ ಶುದ್ಧ ಎಂದೂ ಆಗುತ್ತದೆ ಅಥವಾ ಪ್ರಕಾಶಮಾನ, ಸ್ವಪ್ರಕಾಶ ಎಂಬರ್ಥ. ಅಕಾಯ, ಅಸ್ನಾವಿರ, ಅವ್ರಣ, ಶುದ್ಧ  ಎಂಬ ಶಬ್ದಗಳು ಆತ್ಮವು ಸ್ಥೂಲ, ಸೂಕ್ಷ್ಮ ಅಥವಾ ಕಾರಣ ಶರೀರವೂ ಅಲ್ಲ  ಎನ್ನುತ್ತದೆ - ಅಂದರೆ ಆತ್ಮ ಈ ಭೌತಿಕ ಶರೀರ - ಸ್ಥೂಲ ಶರೀರವಲ್ಲ. ಅದು ಮನಸ್ಸು ಬುದ್ಧಿ ಅಹಂಕಾರಗಳಲ್ಲ  - ಸೂಕ್ಷ್ಮ ಶರೀರವೂ ಅಲ್ಲ. ಅದು ಅಜ್ಞಾನಕ್ಕೆ ಕಾರಣವಾದ ಕಾರಣ ಶರೀರವೂ ಅಲ್ಲ.

ಅಂಧಂ ತಮಃ ಪ್ರವಿಶಂತಿ ಯೇಽವಿದ್ಯಾಮುಪಾಸತೇ .
ತತೋ ಭೂಯ ಇವ ತೇ ತಮೋ ಯ ಉ ವಿದ್ಯಾಯಾಂ  ರತಾಃ .. 9..

ಅಂಧಂ=ಕುರುಡು   ತಮಃ=ಕತ್ತಲೆ    ಪ್ರವಿಶಂತಿ=ಪ್ರವೇಶಿಸುತ್ತಾರೆ   ಯೇ =ಯಾರು   ಅವಿದ್ಯಾಂ = ಅವಿದ್ಯೆಯನ್ನು  ಉಪಾಸತೇ= ಪೂಜಿಸುತ್ತಾರೆ    ತತೋ= ಅದಕ್ಕಿಂತ    ಭೂಯ=ದೊಡ್ಡ    ತೇ=ಅವರು   ಯ=ಯಾರು ವಿದ್ಯಾಯಾಂ=ವಿದ್ಯೆಯಲ್ಲಿ    ರತಾಃ=ನಿರತರಾದವರು
 
ಯಾರು ಅವಿದ್ಯೆಯನ್ನು, ಆಜ್ಞಾನವನ್ನು  ಉಪಾಸನೆ ಮಾಡುತ್ತಾರೋ (ಕರ್ಮವೊಂದನ್ನೆ ಮಾಡುತ್ತಾರೋ) ಅವರ ಕುರುಡಾಗಿಸುವ ಕಾರ್ಗತ್ತಲೆಯನ್ನು ಪ್ರವೇಶಿಸುತ್ತಾರೆ. 
 
ವಿದ್ಯೆಯನ್ನು ಉಪಾಸನೆ ಮಾಡಿಯೂ ಕೇವಲ ದೇವರುಗಳ ಬಗ್ಗೆ ಜ್ಞಾನಾರ್ಜನೆ ಮಾಡುತ್ತ ಅದನ್ನು ತಪ್ಪಾಗಿ ತಿಳಿದು ತಪ್ಪು ಮಾರ್ಗದಲ್ಲಿ ಹೋಗುವವರು (ಜ್ಞಾನ ಮಾರ್ಗವನ್ನು ಅನುಸರಿಸುತ್ತ, ಕರ್ಮ ಮಾಡದೆ ಇರುವವರು) ಇನ್ನೂ ಘೋರವಾದ ಅಂಧಕಾರವನ್ನು ಪ್ರವೇಶಿಸುತ್ತಾರೆ. 
ಅವಿದ್ಯೆಯೆಂದರೆ ಅಜ್ಞಾನ, ಭ್ರಮೆ. ವಿದ್ಯೆಯಲ್ಲದಿರುವದು. ಅವಿದ್ಯೆ ೫ ಬಗೆಯದು - ತಾಮಸ, ಮೋಹ, ರಾಗ, ದ್ವೇಷ, ಮಿಥ್ಯಾಜ್ಞಾನ.  
ವಿದ್ಯೆಯೆಂದರೆ ಜ್ಞಾನ, ವಿಜ್ಞಾನ - ಆತ್ಮಜ್ಞಾನ. 


ಅನ್ಯದೇವಾಹುರ್ವಿದ್ಯಯಾಽನ್ಯದಾಹುರವಿದ್ಯಯಾ .
ಇತಿ ಶುಶ್ರುಮ ಧೀರಾಣಾಂ ಯೇ ನಸ್ತದ್ವಿಚಚಕ್ಷಿರೇ .. 10..

 ಅನ್ಯತ್ = ಬೇರೇ ಏವ = ಮಾತ್ರ    ಅಹುಃ=ಹೇಳುತ್ತಾರೆ    ಅನ್ಯತ್ +ಅಹುಃ+ಅವಿದ್ಯಯಾ = ಅವಿದ್ಯೆಯಿಂದ ಬೇರೆಯದು ಎಂದು ಹೇಳುತ್ತಾರೆ     ಇತಿ=ಹೀಗೆಂದು     ಶುಶ್ರುಮ=ಕೇಳಿದ್ದೇವೆ      ಧೀರಾಣಾಂ=ಜ್ಞಾನಿಗಳಿಂದ     ನಃ=ನಮಗೆ   ನಃ+ತು+ವಿಚಿಚಿಕ್ಷರೆ =ನಮಗೆ ವಿವರಿಸಿದ್ದಾರೆ
 
ವಿದ್ಯೆಯಿಂದ ಬೇರೆ ಫಲಗಳು ದೊರಕುತ್ತವೆ. ಅವಿದ್ಯೆಯಿಂದ ಬೇರೆ ರೀತಿಯ ಫಲಗಳು ದೊರೆಯುತ್ತವೆ. ಈ ಮಾತನ್ನು ನಾವು ಜ್ಞಾನಿಗಳಿಂದ ಕೇಳಿದ್ದೇವೆ  ಮತ್ತು ಅವರು ನಮಗೆ ವಿವರಿಸಿದ್ದಾರೆ. 
 
ಅವಿದ್ಯೆಯ ಹಿಂದೆ ಹೋಗಿ ಕರ್ಮಗಳನ್ನು ಮಾಡಿದರೆ, ಐಶ್ವರ್ಯ, ಧನ ಕನಕ ಸಿಗಬಹುದು. ಆದರೆ ಅವೆಲ್ಲ ಕ್ಷಣಿಕ. ವಿದ್ಯೆಯನ್ನು ಸಂಪಾದಿಸಿದರೆ, ಶಾಂತಿ ಮತ್ತು ಮುಕ್ತಿಯನ್ನು ಪಡೆಯುತ್ತಾನೆ. 

ವಿದ್ಯಾಂ ಚಾವಿದ್ಯಾಂ ಚ ಯಸ್ತದ್ವೇದೋಭಯಂ  ಸಹ .
ಅವಿದ್ಯಯಾ ಮೃತ್ಯುಂ ತೀರ್ತ್ವಾ ವಿದ್ಯಯಾಽಮೃತಮಶ್ನುತೇ .. 11..

 ವಿದ್ಯಾಂ = ವಿದ್ಯೆಯನ್ನು      ಚಾವಿದ್ಯಾಂ=ಚ+ಅವಿದ್ಯಾಂ  = ಹಾಗೂ ಅವಿದ್ಯೆಯನ್ನು  ಯಃ=ಯಾರು ತತ್ = ಅದನ್ನು   ವೇದೋ = ತಿಳಿದವನು      ಉಭಯಂ=ಎರಡನ್ನೂ     ಸಹ=ಒಟ್ಟಿಗೆ    ಅವಿದ್ಯಯಾ = ಅವಿದ್ಯೆಯಿಂದ   ಮೃತ್ಯುಂ=ಮೃತ್ಯುವನ್ನು   ತೀರ್ತ್ವಾ = ಗೆದ್ದು      ವಿದ್ಯಯಾ = ವಿದ್ಯೆಯಿಂದ    ಅಮೃತಂ = ಮುಕ್ತಿಯನ್ನು    ಅಶ್ನುತೆ = ಪಡೆಯುತ್ತಾನೆ

ಯಾರು ವಿದ್ಯೆ ಮತ್ತು ಅವಿದ್ಯೆಗಳನ್ನೆರಡನ್ನು ತಿಳಿದಿರುತ್ತಾನೋ, ಅವನಿಗೆ ಅವಿದ್ಯೆಯ ಜ್ಞಾನದಿಂದ ಮೃತ್ಯುವನ್ನೇನೋ ಗೆಲ್ಲಬಹುದು. ಆದರೆ ವಿದ್ಯೆಯ ಅರಿವಿನಿಂದ ಅವನು ಮುಕ್ತಿಯನ್ನು ಪಡೆಯುತ್ತಾನೆ.  

ಅಂಧಂ ತಮಃ ಪ್ರವಿಶಂತಿ ಯೇಽಸಂಭೂತಿಮುಪಾಸತೇ .
ತತೋ ಭೂಯ ಇವ ತೇ ತಮೋ ಯ ಉ ಸಂಭೂತ್ಯಾಂ  ರತಾಃ .. 12..


ಯಾರು ನಿರ್ಗುಣ ಪ್ರಕೃತಿಯನ್ನು (ಅಸಂಭೂತಿಯನ್ನು)  ಆರಾಧಿಸುತ್ತಾರೋ ಅವರು ಅಂಧಕಾರವನ್ನು ಪ್ರವೇಶಿಸುತ್ತಾರೆ. ಯಾರು ಸಗುಣ - ದೈವವನ್ನು ಆರಾಧಿಸುತ್ತಾರೋ ಅವರು ಇನ್ನೂ ದೊಡ್ಡ ಅಂಧಕಾರವನ್ನು ಪ್ರವೇಶಿಸುತ್ತಾರೆ. 
 

ಅನ್ಯದೇವಾಹುಃ ಸಂಭವಾದನ್ಯದಾಹುರಸಂಭವಾತ್ .
ಇತಿ ಶುಶ್ರುಮ ಧೀರಾಣಾಂ ಯೇ ನಸ್ತದ್ವಿಚಚಕ್ಷಿರೇ .. 13..


ಸಗುಣ ದೇವರನ್ನು ಪೂಜಿಸುವದರಿಂದ ಬೇರೆ ಫಲ ದೊರೆಯುತ್ತದೆ. ನಿರ್ಗುಣವನ್ನು ಪೂಜಿಸುವದರಿಂದ ಬೇರೆ ಫಲ ದೊರೆಯುತ್ತದೆ. ಹೀಗೆಂದು ನಮಗೆ  ಜ್ಞಾನಿಗಳಿಂದ ನಾವು ಕೇಳಿದ್ದೇವೆ.  


ಸಂಭೂತಿಂ ಚ ವಿನಾಶಂ ಚ ಯಸ್ತದ್ವೇದೋಭಯಂ ಸಹ .
ವಿನಾಶೇನ ಮೃತ್ಯುಂ ತೀರ್ತ್ವಾ ಸಂಭೂತ್ಯಾಽಮೃತಮಶ್ನುತೇ .. 14..


ಸಂಭೂತಿ (ಪೃಕೃತಿ) ಮತ್ತು ವಿನಾಶ ಎರಡನ್ನೂ ಯಾರು ಅರಿಯುತ್ತಾನೋ, ಅವನು ವಿನಾಶದ ಅರಿವಿನಿಂದ ಸಾವನ್ನು ಗೆಲ್ಲುತ್ತಾನೆ. ಸಂಭೂತಿಯ ಅರಿವಿನಿಂದ ಅಮೃತವನ್ನು ಹೊಂದುತ್ತಾನೆ.
15ರಿಂದ 18ರವರೆಗಿನ ಶ್ಲೋಕಗಳು ಪ್ರಾರ್ಥನೆಯ ಶ್ಲೋಕಗಳು. ಇವು ಬೇರೆ ಶ್ಲೋಕಗಳಿಗೆ ಅಷ್ಟು ಸಂಬಂಧಿಸಿಲ್ಲ. ಅವು ಆತ್ಮದ ವಿವರಣೆಯನ್ನು ಕೊಡುವ ಶ್ಲೋಕಗಳಲ್ಲ.
ಹಿರಣ್ಮಯೇನ ಪಾತ್ರೇಣ ಸತ್ಯಸ್ಯಾಪಿಹಿತಂ ಮುಖಂ .
ತತ್ತ್ವಂ ಪೂಷನ್ನಪಾವೃಣು ಸತ್ಯಧರ್ಮಾಯ ದೃಷ್ಟಯೇ .. 15..

ಬಂಗಾರದ (ಮೋಹ, ಮಾಯೆಯ) ಪರದೆಯಿಂದ ಸತ್ಯದ ಮುಖವು ಮುಚ್ಚಿದೆ. ಅದನ್ನು ಸರಿಸು, ಹೇ ಸೂರ್ಯನೇ, ನಾನು ಸತ್ಯವನ್ನು ನೋಡುವೆ. 

ಪೂಷನ್ನೇಕರ್ಷೇ ಯಮ ಸೂರ್ಯ ಪ್ರಾಜಾಪತ್ಯ
ವ್ಯೂಹ ರಶ್ಮೀನ್ ಸಮೂಹ ತೇಜಃ .
ಯತ್ತೇ ರೂಪಂ ಕಲ್ಯಾಣತಮಂ ತತ್ತೇ ಪಶ್ಯಾಮಿ
ಯೋಽಸಾವಸೌ ಪುರುಷಃ ಸೋಽಹಮಸ್ಮಿ .. 16..

ಹೇ, ಪೂಷನ್,   ಏಕಾಂಗಿಯಾಗಿ ವಿಹರಿಸುವವನೇ, ಯಮನೇ, ಸೂರ್ಯನೇ, ಪ್ರಜಾಪತಿಯ ಪುತ್ರನೇ, ನಿನ್ನ ಕಿರಣಗಳ ಸಮೂಹವನ್ನು ಸರಿಸು. ಅದರಿಂದ ನಾನು ನಿನ್ನ ಕಲ್ಯಾಣಮಯ ರೂಪವನ್ನು ನೋಡುತ್ತೇನೆ. ಆ ಪರಾತ್ಪರನಾದ ಪುರುಷನೇ ನಾನು. 


ವಾಯುರನಿಲಮಮೃತಮಥೇದಂ ಭಸ್ಮಾಂತಂ ಶರೀರಂ .
ಓಂ ಕ್ರತೋ ಸ್ಮರ ಕೃತಂ ಸ್ಮರ ಕ್ರತೋ ಸ್ಮರ ಕೃತಂ ಸ್ಮರ .. 17..


ನನ್ನ ಪ್ರಾಣವು ಸರ್ವವ್ಯಾಪಿಯಾದ ವಾಯುವಿನಲ್ಲಿ ಸೇರಲಿ, ಶರೀರವು ಭಸ್ಮವಾಗಲಿ. ಓಂ ಮನಸೇ, ನಿನ್ನ ಕರ್ಮಗಳನ್ನು ನೆನಪಿಸಿಕೋ. 

ಈ ಪ್ರಾರ್ಥನೆ ಸಾಧಕನು  ಶರೀರ ತ್ಯಜಿಸುವಾಗ ಮಾಡುವ ಅಂತ್ಯಕಾಲದ ಪ್ರಾರ್ಥನೆ. 


ಅಗ್ನೇ ನಯ ಸುಪಥಾ ರಾಯೇ ಅಸ್ಮಾನ್
ವಿಶ್ವಾನಿ ದೇವ ವಯುನಾನಿ ವಿದ್ವಾನ್ .
ಯುಯೋಧ್ಯಸ್ಮಜ್ಜುಹುರಾಣಮೇನೋ
ಭೂಯಿಷ್ಠಾಂ ತೇ ನಮೌಕ್ತಿಂ ವಿಧೇಮ .. 18..


ಹೇ ಅಗ್ನಿಯೇ, ನಮ್ಮ ಎಲ್ಲ ಕರ್ಮಗಳನ್ನು ಅರಿತವನಾದ ನೀನು, ನಮ್ಮ ಕರ್ಮಫಲ ಆನಂದಿಸುಲು ನಮ್ಮನ್ನು ಸರಿಯಾದ ಮಾರ್ಗದಲ್ಲಿ ನಡೆಸಿಕೊಂಡು ಹೋಗು. ನಮ್ಮಲ್ಲಿರುವ ಕುಟಿಲ ಬುದ್ಧಿಯನ್ನು ದೂರ ಮಾಡು. ನಾವು ನಮೃತೆಯಿಂದ ನಿನ್ನನ್ನು ಪ್ರಾರ್ಥಿಸುತ್ತೇವೆ. 

ಇತಿ ಈಶೋಪನಿಷತ್ ..



P.S. ಈ ಉಪನಿಷತ್ತಿನ ಇಂಗ್ಲಿಷ್ ಅನುವಾದಗಳು ಹಲವು ಕೊಂಡಿಗಳಲ್ಲಿ ಲಬ್ಧವಿವೆ. ಕನ್ನಡ ವಿಕಿಪೀಡಿಯಾದಲ್ಲಿರುವ ಲೇಖನವೂ ಚೆನ್ನಾಗಿದೆ.  

Comments

Popular posts from this blog

ಶಿವಾನಂದಲಹರಿ

ತತ್ತ್ವಬೋಧ

ಭಗವದ್ಗೀತಾ ಆರತಿ