ಭಗವದ್ಗೀತಾ ಆರತಿ

ನಮ್ಮ ಧರ್ಮದ ಯಾವುದಾದರೂ ಕೃತಿ ಅತಿ ಪ್ರಸಿದ್ಧವಾಗಿದೆ ಎಂದರೆ ಅದು ಭಗವದ್ಗೀತೆ. ಬಹಳ ಕ್ಲಿಷ್ಟವಲ್ಲದ ಭಾಷೆಯಲ್ಲಿ ಜನ-ಸಾಮಾನ್ಯರೂ ಅರಿಯಬಲ್ಲಾದ ತತ್ವಜ್ಞಾನವನ್ನು ತಿಳಿಸಿಹೇಳಿ ಮನುಜರ ಮನಸ್ಸನ್ನು ಪ್ರಶಾಂತಗೊಳಿಸುವ ಕೃತಿ ಇದು.

ಆದರೆ ಒಂದು ಸಮಸ್ಯೆಯೆಂದರೆ ಭಗವದ್ಗೀತೆ ಇರುವದು ಸಂಸ್ಖೃತದಲ್ಲಿ - ಅದೂ ಪದ್ಯ ರೂಪದಲ್ಲಿ - ಸ್ವಲ್ಪ ಕಷ್ಟ.

ನಮ್ಮ ತಾಯಿ ಅವರ ಸೋದರತ್ತೆಯಿಂದ ಕಲಿತ ಗೀತೆಯ ಕನ್ನಡಾನುವಾದ - ಸಂಕ್ಷಿಪ್ತ ಅನುವಾದ - ಅದೂ ಆರತಿಯ ಪದ್ಯ ರೂಪದಲ್ಲಿರುವ ಅನುವಾದ ಮೊನ್ನೆ ಕೇಳಿದೆ. ಬಹಳ ಇಷ್ಟವಾಯಿತು.

ನಿಮಗೆ ಹೇಗೆನಿಸುತ್ತದೆ ನೋಡಿ.

--------------------------------------------------------------------- 

ಧನ್ಯನಾದೆನು ಕೇಳಿ ನಿನ್ನಿಂದ | ಮನದೊಳಗೆ ನಿಂದ|
ಮೋಹವಡಗಿತು ಹರಿಯೆ ಭರದಿಂದ||
ಜ್ಞಾನದಿಂ ಭೂತಗಳ ಸೃಷ್ಟಿ | ಪ್ರಳಯ ನಿನ್ನಿಂದೆಂಬುದರಿತೆನು|
ವಿಶ್ವರೂಪವ ನಿನ್ನದನು| ತೋರೆಂದ ಪಾರ್ಥಗೆ ತೋರಿದಾತನಿ||
 ಗಾರತಿಯ ನಾನೆತ್ತಿ ಬೇಡುವೆನು|
ಶ್ರೀ ಹರಿಯೆ ವರವನು| ನೀಡು ನೀ ನಿನಗಿಷ್ಟವಾದುದನು||೧||
 
ನೋಡಲಾಗದು ನರನೆ ನಿನ್ನಿಂದ| ಈ ಕಣ್ಣಿನಿಂದ|
ನನ್ನ ರೂಪವ ನಿನ್ನ ಮುನ್ನಿಂದ||
ದಿವ್ಯ ನೇತ್ರವ ಕೊಡುವೆ ನೀ| ನೋಡೆನ್ನನೆಂದವಗಿತ್ತು ತೋರುವ|
ವಿಶ್ವರೂಪವ ಧರಿಸಿ ನಾನಾ ರೂಪದಿಂ ಮುನ್ನಿಂದ ಮಾಧವ||
ಗಾರತಿಯ ನಾನೆತ್ತಿ ಬೇಡುವೆನು||೨||
 
ನೋಡು ನೀನೆಂದೆನುತ ಗೋವಿಂದ | ಬಹುರೂಪದಿಂದ|
ವಿಶ್ವರೂಪವ ತಾಳುತಿಂತೆಂದ||
ನೋಡು ವಿಧವಿಧ ನಾಮರೂಪದ|ಲೆನ್ನ ದೇಹದ ಸಕಲ ಭಾಗಗ|
ಳಲ್ಲಿ ತೋರ್ಪ ಚರಾಚರಾತ್ಮಕ| ಜಗವನೆಂದ ಮಹೇಂದ್ರವಂದಿತ||
ಗಾರತಿಯ ನಾನೆತ್ತಿ ಬೇಡುವೆನು||೩|| 
 
ಬಹುವಿಧಾಕೃತಿ ವರ್ಣಕರ್ಣಗಳು | ಬಾಹೂರು ಮುಖಗಳು|
ನೇತ್ರ ನಖ ರೋಮಾಂಘ್ರಿ ಕೇಶಗಳು||
ವಿಧವಿಧಾಯುಧ ಭೂಷಣಾಂಬರ| ಪುಷ್ಪ ಗಂಧಾದಿಗಳ ಧರಿಸಿದ|
ಮೀರಿ ಗಗನವ ಸರ್ವತೋಮುಖ|ವಾಗಿ ತೋರುವ ಧೀರ ಯದುವರ||
ಗಾರತಿಯ ನಾನೆತ್ತಿ ಬೇಡುವೆನು||೪|| 
 
ಸೂರ್ಯಕೋಟಿಗಳುದಯಿಸಿದ ತೆರದಿ| ತೋರ್ಪವಗೆ ಭರದಿ |
ನೋಡಲಚ್ಚರಿಯಾಗಿ ಮೂ ಜಗದಿ||
ಅಕ್ಷಿ ಕುಕ್ಷಿ ಮುಖೋರು ಪಾದಗ| ಳಳತೆಯಿಲ್ಲದ ವಿಶ್ವರೂಪವ|
ನೋಡಿ ಬುಡ ನಡು ಕೊನೆಯ ಕಾಣದೆ |
ನಿಂತ ನರನನು ನೋಳ್ಪ ನರಹರಿ||
ಗಾರತಿಯ ನಾನೆತ್ತಿ ಬೇಡುವೆನು||೫|| 
 
ಶಿರದೊಳಿಟ್ಟ ಕಿರೀಟಗಳ ಸಾಲು | ಹೆಗಲೊಳಗೆ ಶಾಲು |
ಚಕ್ರ ಗದೆಗಳ ತೊಟ್ಟ ಕೈತೋಳು||
ಉರಿವ ಕಿಚ್ಚಿನ ತೆರದಲಕ್ಷಿಯ ಕುಕ್ಕುವಂತಹ ಕಾಂತಿಯುತ|
ಸೂರ್ಯಾಗ್ನಿ ದೀಪ್ತಿಯ ದೇಹವನು | ಧರಿಸೀಕ್ಷಿಸುವ ಸರ್ವಾತ್ಮನಿಗೆ ನಾ||
ಆರತಿಯ ನಾನೆತ್ತಿ ಬೇಡುವೆನು||೬||  
 
ದೇವತಾದಿಗಳೆಲ್ಲ ದೇಹದಲಿ| ಅಂಗಾಂಗಗಳಲಿ|
ತೋರುತಿವೆ ಬಹು ರೂಪವಾಗಿಲ್ಲಿ|
ಭೇದವಾಗಿಹ ಜಗವನೆಲ್ಲವ|ನಿಟ್ಟು ತನ್ನೊಳು ತೋರಿದಾತಗೆ |
ನರನು ಕೈಮುಗಿದೆಂದ ಮಾತನು ಕೇಳುವಾತನಿಗಜನ ತಾತನಿ|
ಗಾರತಿಯ ನಾನೆತ್ತಿ ಬೇಡುವೆನು||೭||  
 
ಕೋರೆದಾಡೆಗಳಿಂದ ಭೀಕರವು| ಹರಿ ನಿನ್ನ ಮುಖವು| 
ನೋಡಲಸದಳ ಬಹಳವಾಗಿಹವು||
ಸೇರುತಿರುವನು ನಿನ್ನ ಮುಖವನು| ವೀರ ಕುರುಪತಿ ತನ್ನ ಬಲವನು|
ಕರ್ಣ ಭೀಷ್ಮ ದ್ರೋಣರನು ಸೇರೆಂದ ಪಾರ್ಥಗೆ ತೋರಿದಾತನಿ||
 ಗಾರತಿಯ ನಾನೆತ್ತಿ ಬೇಡುವೆನು||೮||  
 
ನದಿಯು ಜಲಧಿಯ ಸೇರುವಾ ತೆರದಿ| ತೋರ್ಪವಗೆ ಭರದಿ| 
ಸೇರಿ ಶಿರ ಮುಂದಾಗಿ ಬಹು ಭರದಿ||
ದಂತಯಂತ್ರದಿ ಚೂರ್ಣವಾಗುವ | ಕರ್ಣಭೀಷ್ಮ ದ್ರೋಣ ಕೌರವ| 
ರವನಿಪಾಲರ ತನ್ನ ಯೋಧರ ನೋಡಿ ನಡುಗುವ ನರನ ನೋಳ್ಪವ||
ಗಾರತಿಯ ನಾನೆತ್ತಿ ಬೇಡುವೆನು||೯||
 
ಮುಕ್ಕುವಂದದಿ ಜಗವ ಜವದಿಂದ |ನೀ ಮುಖಗಳಿಂದ | 
ಘೋರ ರೂಪದಿ ದೇವ ಮುನ್ನಿಂದ||
ತೇಜ ನಿನ್ನದು ಮೂರು ಜಗವನು| ಮೀರಿಹುದು ನೀನರಹು ಯಾರೆಂ|
ಬುದನು ತಿಳಿಯುವನೆಂದು ನಮಿಸಿದ ನರನ ನೋಡುತ ನುಡಿಯುವಾತನಿ||
ಗಾರತಿಯ ನಾನೆತ್ತಿ ಬೇಡುವೆನು||೧೦||
 
ಯುದ್ಧ ಮಾಡಲು ಸಿದ್ಧನಾಗೀಗ| ಮೂಜಗವ ಬೇಗ||
ನಾಶ ಮಾಡಲು ಕಾಲನಿಹೆನೀಗ||
ಹೊರತು ನಿನ್ನನು ಸುತ್ತು ನಿಂತಿಹ| ನೃಪರು ಸತ್ತಿಹರೆಂದು ತಿಳಿ ನೀ| 
ವಿಜಯ ವಿಶ್ವವನಾಳಿ ಬಾಳು ನಿಮಿತ್ತ ನೀನಿದಕೆಂದ ಕೃಷ್ಣನಿ||
ಗಾರತಿಯ ನಾನೆತ್ತಿ ಬೇಡುವೆನು||೧೧||
 
ಆಡಿದಾ ನುಡಿ ಕೇಳಿ ನಡುಗುತ್ತಾ | ಕೈ ಮುಗಿದು ಮತ್ತಾ|
ಪಾರ್ಥನುತಿಸಿದನಾಗ ನುಡಿಯುತ್ತ||
ಸತ್ಯವೈ ಸುಂದರವು ನಿನ್ನಯ| ಕೀರ್ತಿ ಜಗಕಾನಂದದಾಯಕ|
ಸಿದ್ಧನುತ ಸಕಲಾರ್ತಿಹರ ಸಲಹೆಂದ ಪಾರ್ಥನ ಪಾಲಿಸಿದ ಹರಿ||
ಗಾರತಿಯ ನಾನೆತ್ತಿ ಬೇಡುವೆನು||೧೨||
 
 ಎಂದು ನೋಡದ ನಿನ್ನದೀ ರೂಪ| ನೋಡೆನಗೆ ತಾಪ|
ಹರುಷವಾಯಿತು ಮನಕೆ ಬಹುರೂಪ||
ಶಾಂತವಾಗಿಹ ನಾಲ್ಕು ತೋಳಿನ| ಶಂಖ ಚಕ್ರ ಗದಾಬ್ಜಗಳ ಧರಿ |
ಸಿರುವ ಮೊದಲಿನ ರೂಪವನು ತೋರೆಂದ ಪಾರ್ಥಗೆ ತೋರಿದಾತನಿ||
ಗಾರತಿಯ ನಾನೆತ್ತಿ ಬೇಡುವೆನು||೧೩||
 
ತಂದೆ ನೀನೆ ಜಗಕೆ ಗೋವಿಂದ| ವಸುದೇವ ಕಂದಾ|
 ಹಿರಿಯನ್ಯರನರಿಯೆ ನಿನ್ನಿಂದ||
ತಿಳಿಯಲುತ್ತಮ ನೀನೆ ತಿಳಿವವ| ವಿಶ್ವವನು ತುಂಬಿರುವೆ ಸಿದ್ಧರಿ|
ಗುತ್ತಮಾಸ್ಪದನೆಂದ ಪಾರ್ಥನ ರಕ್ಷಿಸಲು ಮುನ್ನಿಂದ ಮುರಹರ||
ಗಾರತಿಯ ನಾನೆತ್ತಿ ಬೇಡುವೆನು||೧೪||
 
ವಾಯು ವರುಣ ಶಶಾಂಕ ರವಿ ನೀನೆ| ನಿಋ್ಋತಿಯು ನೀನೆ|
ಹರಿಹರಾಜ ಮಹೇಂದ್ರ ಯಮ ನೀನೆ||
ಇಲ್ಲದೇ ನೀನಿಲ್ಲ ವಿಶ್ವವಿ|ದೆಲ್ಲವೆಲ್ಲೆಡೆಗೆಂದು ವಂದಿಸಿ|
ಹಿಂದೆ ಮುಂದೆಯು ಕೆಳಗೆ ಮೇಲೆಂದೆನದೆ ನಮಿಸುವ ನರನ ನೋಳ್ಪವ||
ಗಾರತಿಯ ನಾನೆತ್ತಿ ಬೇಡುವೆನು||೧೫||

ದೇವದೇವರಿಗಾದಿ ಮೂಜಗಕೆ| ಮಹದಾದಿ ವಿಶ್ವಕೆ|
ಹೇತುವಾಗಿಹೆ ಜಗದೊಳೆಲ್ಲದಕೆ||
ಹೊರತು ನನ್ನಿಂದಿಲ್ಲ ಸಕಲವು| ನೂಲಿನಲಿ ಪೋಣಿಸಿದ ಮಣಿಗಳ|
ತೆರದಿ ಭೂತಗಳಲ್ಲಿ ನಾ ಗಂಧಾದಿ ಗುಣನೆಂದಾ ಮುಕುಂದನಿ||
ಗಾರತಿಯ ನಾನೆತ್ತಿ ಬೇಡುವೆನು||೧೬||
 
ಸೌಮ್ಯ ರೂಪವ ಹೊಂದಿ ನಗಧರನು| ನರನೆಂದ ಮಾತನು |
ಕೇಳಿ ತಾ ದಯೆಯಿಂದ ಮಾಧವನು||
ನೋಡಲಮರರು ಬಯಸುವೀ| ರೂಪವನು ಭಾವಿಸುತೆನಗೆ ಕರ್ಮಗಳ|
ರ್ಪಿಸೆನ್ನೊಳು ಸೇರಿ ಸುಖಿ ನೀನಾಗು ನರನೆಂದಾ ಮುಕುಂದನಿ||
ಗಾರತಿಯ ನಾನೆತ್ತಿ ಬೇಡುವೆನು||೧೭||
 
ಒಲಿದು ತೋರಿದೆ ವಿಶ್ವರೂಪವನು | ನಿನಗೀಗಲಿದನು|
ಯೋಗಿ ಯಾದವ ಬೇಗ ತಿಳಿವುದನು||
ಯಾಗ ಧ್ಯಾನಾಧ್ಯಯನ ದಾನ| ತಪಕ್ರಿಯಾದಿಗಳಿಂದಲನ್ಯರು|
ತಿಳಿಯಲಾರದ ರೂಪವನು ತೋರಿದೆನು ಬೆದರದಿರೆಂದ ಮುರಹರ|
ಗಾರತಿಯ ನಾನೆತ್ತಿ ಬೇಡುವೆನು| |
ಶ್ರೀ ಹರಿಯೇ ವರವನು ನೀಡು ನೀ ನಿನಗಿಷ್ಟವಾದುದನು||೧೮||
 
---------------------------- 
 
ಹಾಡು ನಮ್ಮ ತಾಯಿ ಮತ್ತು ನನ್ನ ತಂಗಿಯರ ಧ್ವನಿಯಲ್ಲಿ :
 

Comments

  1. ಬರೆದದ್ದು ಸರಿಯಾಗಿದೆ. ಹಾಡು ಓಪನ್ ಆಗ್ತಾ ಇಲ್ಲ.

    ReplyDelete
    Replies
    1. ಅದು ಪ್ಲೇಯರ್ ಸೆಟ್ಟಿಂಗ್ನಲ್ಲಿ ಸಮಸ್ಯೆಯಿತ್ತು. ಈಗ ಸರಿ ಪಡಿಸಿದ್ದೇನೆ.

      Delete

Post a Comment

Popular posts from this blog

ಶಿವಾನಂದಲಹರಿ

ತತ್ತ್ವಬೋಧ