ಮುಂಡಕ ಉಪನಿಷತ್ತು

 ಪರಿಚಯ 

ಮುಖ್ಯ ಉಪನಿಷತ್ತುಗಳಲ್ಲಿ ಒಂದಾದ ಮುಂಡಕ ಉಪನಿಷತ್ತು ಅಥರ್ವವೇದದಲ್ಲಿ ಕಂಡುಬರುತ್ತದೆ. ಕಾವ್ಯ ರೂಪದಲ್ಲಿರುವ ಪ್ರಸಿದ್ಧವಾದ ಇದು ಅತಿ ಹೆಚ್ಚು ಅನುವಾದಗೊಂಡಿರುವ ಉಪನಿಷತ್ತಾಗಿದೆ.
 
ಇದು ಋಷಿ ಅಂಗೀರಸ ಹಾಗೂ ಗೃಹಸ್ಥನಾದ ಶೌನಕರ ನಡುವಿನ ಸಂವಾದದ ರೂಪದಲ್ಲಿದೆ. 
 
ಇದರಲ್ಲಿ ಮೂರು ಮುಂಡಕಗಳಿವೆ (ವಿಭಾಗಗಳು). ಮೊದಲನೆಯ ಮುಂಡಕ ಶ್ರೇಷ್ಠ ಹಾಗೂ ಕನಿಷ್ಠ ವಿದ್ಯೆಗಳನ್ನು ವಿವರಿಸುತ್ತದೆ - ಹಾಗೂ ಅಪರ ವಿದ್ಯೆಯ ವ್ಯರ್ಥತೆಯನ್ನು ಮಂಡಿಸುತ್ತದೆ. ಎರಡನೆಯ ಮುಂಡಕ ಆತ್ಮ ಹಾಗೂ ಬ್ರಹ್ಮ ನ ಸ್ವರೂಪವನ್ನು, ಬ್ರಹ್ಮ ಹಾಗೂ ಬಾಹ್ಯ ಪ್ರಪಂಚದ ಸಂಬಂಧವನ್ನು ಹಾಗೂ ಬ್ರಹ್ಮ ಜ್ಞಾನವನ್ನು ಪಡೆಯುವ ವಿಧಾನವನ್ನು ವಿವರಿಸುತ್ತದೆ. ಮೂರನೆಯ ಮುಂಡಕ ಈ ವಿವರಣೆಯನ್ನು ಮುಂದುವರಿಸುತ್ತದೆ.
 
ಸತ್ಯಮೇವ ಜಯತೇ - ಸತ್ಯವೇ ಜಯಿಸುತ್ತದೆ - ಈ ನುಡಿ ಮುಂಡಕ ಉಪನಿಷತ್ತಿನ ಭಾಗವಾಗಿದೆ. ನಮ್ಮ ದೇಶದ ರಾಷ್ಟ್ರೀಯ ಲಾಂಛನದಲ್ಲಿ ಈ ನುಡಿಯು ಕಂಡು ಬರುತ್ತದೆ. 
 
ಕರ್ತೃ : ಬೇರೆಲ್ಲ ವೇದ ಹಾಗೂ ಉಪನಿಷತ್ತುಗಳಂತೆ ಮುಂಡಕ ಉಪನಿಷತ್ತನ್ನು ರಚನೆ ಮಾಡಿದವರು ಯಾರೆಂಬುದು ನಮಗೆ ತಿಳಿದಿಲ್ಲ . ಆದರೆ ಅದರಲ್ಲೇ ಹೇಳಿರುವ ಪ್ರಕಾರ ಬ್ರಹ್ಮನು ಈ ಕೃತಿಯನ್ನು ತನ್ನ ಹಿರಿಯ ಮಗ ಅಥರ್ವನಿಗೆ, ಅಥರ್ವನು ಅಂಗೀರನಿಗೆ, ಅಂಗೀರನು ಸತ್ಯವಾಹನಿಗೆ, ಸತ್ಯವಾಹನು ಆಂಗೀರಸನಿಗೆ ಹೇಳಿಕೊಟ್ಟನು. 
 
ಶಂಕರಾಚಾರ್ಯರು ಈ ಉಪನಿಷತ್ತಿಗೆ ಭಾಷ್ಯವನ್ನು ಬರೆದಿದ್ದಾರೆ.

             .. ಶ್ರೀಃ ..

          .. ಮುಂಡಕೋಪನಿಷತ್  ..


ಓಂ ಭದ್ರಂ ಕರ್ಣೇಭಿಃ ಶೃಣುಯಾಮ ದೇವಾ ಭದ್ರಂ ಪಶ್ಯೇಮಾಕ್ಷಭಿರ್ಯಜತ್ರಾಃ .
ಸ್ಥಿರೈರಂಗೈಸ್ತುಷ್ಟುವಾꣳಸಸ್ತನೂಭಿರ್ವ್ಯಶೇಮ ದೇವಹಿತಂ ಯದಾಯುಃ ..

ಸ್ವಸ್ತಿ ನ ಇಂದ್ರೋ ವೃದ್ಧಶ್ರವಾಃ ಸ್ವಸ್ತಿ ನಃ ಪೂಷಾ ವಿಶ್ವವೇದಾಃ .
ಸ್ವಸ್ತಿ ನಸ್ತಾರ್ಕ್ಷ್ಯೋ ಅರಿಷ್ಟನೇಮಿಃ ಸ್ವಸ್ತಿ ನೋ ಬೃಹಸ್ಪತಿರ್ದಧಾತು ..

.. ಓಂ ಶಾಂತಿಃ ಶಾಂತಿಃ ಶಾಂತಿಃ ..

.. ಓಂ ಬ್ರಹ್ಮಣೇ ನಮಃ ..

.. ಪ್ರಥಮಮುಂಡಕೇ ಪ್ರಥಮಃ ಖಂಡಃ ..

ಓಂ ಬ್ರಹ್ಮಾ ದೇವಾನಾಂ ಪ್ರಥಮಃ ಸಂಬಭೂವ ವಿಶ್ವಸ್ಯ ಕರ್ತಾ ಭುವನಸ್ಯ ಗೋಪ್ತಾ . 
ಸ ಬ್ರಹ್ಮವಿದ್ಯಾಂ ಸರ್ವವಿದ್ಯಾಪ್ರತಿಷ್ಠಾಮಥರ್ವಾಯ ಜ್ಯೇಷ್ಠಪುತ್ರಾಯ ಪ್ರಾಹ .. ೧..

ದೇವಗಣದಲ್ಲಿ  ಬ್ರಹ್ಮ ಪ್ರಥಮವಾಗಿ ಪ್ರಕಟನಾದನು, ಅವನು  ಈ ವಿಶ್ವದ ಕರ್ತೃವೂ, ಜಗದ ರಕ್ಷಕನೂ ಆಗಿದ್ದಾನೆ. ಅವನು ಸರ್ವ ವಿದ್ಯೆಯೂ ಯಾವುದರ ಮೇಲೆ ಅವಲಂಬಿಸಿದೆಯೋ ಆ ಬ್ರಹ್ಮವಿದ್ಯೆಯನ್ನು ತನ್ನ ಹಿರೀ ಮಗನಾದ ಅಥರ್ವನಿಗೆ ಹೇಳಿದ.

ಶಂಕರ ಭಾಷ್ಯ: 

  •  ಬ್ರಹ್ಮ ಎಂದರೆ ಇಲ್ಲಿ ಶ್ರೇಷ್ಠ ಎಂಬ ಅರ್ಥವೋ ಬರುವದು - ಬೇರೆಲ್ಲರಿಗಿಂತ ಗುಣ, ಜ್ಞಾನ, ಶಕ್ತಿ ಇವೆಲ್ಲವುಗಳಲ್ಲಿ ಶ್ರೇಷ್ಠನು. 
  •  ಸಂಬಬೂವ ಎಂದರೆ ನಮ್ಮ ಮನುಜರಂತೆ ಹುಟ್ಟಿದ ಅಂತಲ್ಲ - ಪ್ರಕಟವಾದನು ಎಂಬ ಅರ್ಥ.
  •  ದೇವಾನಾಂ ಪ್ರಥಮಃ ಎಂದರೆ ದೇವತೆಗಳಲ್ಲಿ ಪ್ರಥಮವಾಗಿ ಎಂದೂ ಆಗಬಹುದು, ದೇವತೆಗಳಲ್ಲಿ ಶ್ರೇಷ್ಎಂದೂ ಆಗಬಹುದು.
  •  ಬ್ರಹ್ಮವಿದ್ಯೆ ಎಂದರೆ ಯಾವ ವಿದ್ಯೆಯನ್ನು ಅರಿತರೂ ಎಲ್ಲವೂ - ಬೇರೆ ಎಲ್ಲ ವಿದ್ಯೆಗಳೂ ತಿಳಿಯವವೂ ಆ ವಿದ್ಯೆ. ಶೃತಿಗಳ ಪ್ರಕಾರ ಈ ವಿದ್ಯೆ ತಿಳಿದರೆ - ಯಾವುದೂ ಕೇಳಿಸಲಾರದೋ ಅದು ಕೇಳಿ ಬರುವದು, ಯಾವುದು ಯೋಚಿಸಲು ಅಸಾಧ್ಯವೋ ಆ ಯೋಚನೆ ಸ್ಪಷ್ಟವಾಗುವದು, ಯಾವುದು ತಿಳಿಯಲಸಾಧ್ಯವೋ ಅದು ತಿಳಿದು ಬರುವದು. 


ಅಥರ್ವಣೇ ಯಾಂ ಪ್ರವದೇತ ಬ್ರಹ್ಮಾಽಥರ್ವಾ ತಂ
      ಪುರೋವಾಚಾಂಗಿರೇ ಬ್ರಹ್ಮವಿದ್ಯಾಂ .
ಸ ಭಾರದ್ವಾಜಾಯ ಸತ್ಯವಾಹಾಯ ಪ್ರಾಹ
      ಭಾರದ್ವಾಜೋಽಂಗೀರಸೇ ಪರಾವರಾಂ .. ೨..


ಅಥರ್ವನಿಗೆ ಹೇಳಿ ಕೊಟ್ಟ ಬ್ರಹ್ಮವಿದ್ಯೆಯನ್ನು ಅವನು ಪುರಾತನ ಕಾಲದಲ್ಲಿ ಅಂಗೀರನಿಗೆ ಹೇಳದನು. ಅವನು ಭಾರದ್ವಾಜ ಕುಲದ ಸತ್ಯವಾಹನಿಗೆ ಹೇಳಿದನು. ಭಾರದ್ವಾಜ (ಸತ್ಯವಾಹನು) ಅಂಗೀರಸನಿಗೆ ಈ ಪೂರ್ವಜರಿಂದ ಮುಂದಿನವವರಿಗೆ ಹಬ್ಬುವ ಈ ಜ್ಞಾನವನ್ನು ಕಲಿಸಿದನು.

ಪರಾವರಮ್ ಅಂದರೆ ಶ್ರೇಷ್ಠ ಋಷಿಗಳಿಂದ ಅವರ ಕೆಳಗಿನ ಋಷಿಗಳಿಗೆ ಕಲಿಸಲ್ಪಟ್ಟ, ಅಥವಾ ಗುರುವಿನಿಂದ ಶಿಷ್ಯನಿಗೆ ಕಲಿಸಲ್ಪಟ್ಟ 

ಶೌನಕೋ ಹ ವೈ ಮಹಾಶಾಲೋಽಂಗೀರಸಂ ವಿಧಿವದುಪಸನ್ನಃ ಪಪ್ರಚ್ಛ .
ಕಸ್ಮಿನ್ನು ಭಗವೋ ವಿಜ್ಞಾತೇ ಸರ್ವಮಿದಂ ವಿಜ್ಞಾತಂ ಭವತೀತಿ .. ೩..

ಶ್ರೇಷ್ಠ ಗೃಹಸ್ಥನಾದ ಶೌನಕನು ವಿಧಿವತ್ತಾಗಿ ಆಂಗೀರಸನನ್ನು ಸಮೀಪಸಿ ಹೀಗೆಂದು ಕೇಳಿದನು "ಭಗವಾನ್,   ಯಾವ ಜ್ಞಾನವನ್ನು ತಿಳಿದಾಗ ಎಲ್ಲ ಜ್ಞಾನವೂ ಅರಿವಿಗೆ ಬರುತ್ತದೆ?"

ಶಂಕರ ಭಾಷ್ಯ :

  • ಶೌನಕ - ಶುನಕನ ಪುತ್ರ
  • ವಿಧಿವತ್ - ಶಾಸ್ತ್ರಬದ್ಧವಾಗಿ
  • ಯಾವ ಜ್ಞಾನ.. - ಬಂಗಾರದ ಅರಿವಿದ್ದಾಗ ಅದರ ಬೇರೆ  ಬೇರೆ ರೂಪಗಳನ್ನು ನೋಡಿದರೂ ಅದು ಬಂಗಾರವೇ ಎಂದು ಗೊತ್ತಾಗುತ್ತದೆ - ಹಾಗೆಯೇ ಯಾವ ಜ್ಞಾನವನ್ನು ಅರಿತಾಗ ಬೇರೆ ಎಲ್ಲ ಜ್ಞಾನಗಳು ತನ್ನಷ್ಟಕ್ಕೇ ಲಬ್ಧವಾಗುತ್ತವೆ   

      ತಸ್ಮೈ ಸ ಹೋವಾಚ .
ದ್ವೇ ವಿದ್ಯೇ ವೇದಿತವ್ಯೇ ಇತಿ ಹ ಸ್ಮ
      ಯದ್ಬ್ರಹ್ಮವಿದೋ ವದಂತಿ ಪರಾ ಚೈವಾಪರಾ ಚ .. ೪..


ಅವನು ಶೌನಕನಿಗೆ ಹೇಳಿದನು " ಬ್ರಹ್ಮನನ್ನು ತಿಳಿದವರು ಹೇಳುತ್ತಾರೆ - 
ಕಲಿಯಬೇಕಾದ ವಿದ್ಯೆಗಳು ಎರಡಿವೆ - ಒಂದು ಪರ (ಉಚ್ಚ), ಇನ್ನೊಂದು ಅಪರ (ನೀಚ)."

ಶಂಕರ ಭಾಷ್ಯ:

  • ಪರ ವಿದ್ಯೆ - ಪರಮಾತ್ಮನ ಕುರಿತಾದ ಜ್ಞಾನ
  • ಅಪರ ವಿದ್ಯೆ - ಸತ್ಕರ್ಮ ಹಾಗೂ ದುಷ್ಕರ್ಮಗಳ ಸಾಧನಗಳು ಹಾಗೂ ಪರಿಣಾಮಗಳ ಜ್ಞಾನ
  • ಶೌನಕ ಕೇಳಿದ್ದು - ಯಾವ ವಿದ್ಯೆಯನ್ನು ತಿಳಿದಾಗ ಮನುಷ್ಯನು ಸರ್ವಜ್ಞಾನಿಯಾಗುತ್ತಾನೆ ಎಂದು. ಆದರೆ ಆಂಗೀರಸ ಉತ್ತರಿಸಿದ್ದು ಬೇರೆಯದೇ. ಆದರೆ ಇದರಲ್ಲಿ ತಪ್ಪಿಲ್ಲ. ಯಾಕೆಂದರೆ ಅಪರ ವಿದ್ಯೆಯ ಜ್ಞಾನದಿಂದ ಇನ್ನೇನೂ ಅರಿವಿಗೆ ಬರುವದಿಲ್ಲ.    

ತತ್ರಾಪರಾ ಋಗ್ವೇದೋ ಯಜುರ್ವೇದಃ ಸಾಮವೇದೋಽಥರ್ವವೇದಃ
ಶಿಕ್ಷಾ ಕಲ್ಪೋ ವ್ಯಾಕರಣಂ ನಿರುಕ್ತಂ ಛಂದೋ ಜ್ಯೋತಿಷಮಿತಿ .
ಅಥ ಪರಾ ಯಯಾ ತದಕ್ಷರಮಧಿಗಮ್ಯತೇ .. ೫..

 ಇವುಗಳಲ್ಲಿ ಅಪರ ವಿದ್ಯೆ - ಋಗ್ವೇದ, ಯಜುರ್ವೇದ, ಸಾಮವೇದ, ಅಥರ್ವವೇದ, ಶಿಕ್ಷಾ, ಕಲ್ಪ, ವ್ಯಾಕರಣ, ನಿರುಕ್ತ, ಛಂದ ಹಾಗೂ ಜ್ಯೋತಿಷ್ಯಗಳು. ಪರ ವಿದ್ಯೆ ಯಾವುದೆಂದರೆ ಯಾವುದರಿಂದ ಅಕ್ಷರನಾದ ಬ್ರಹ್ಮನು ಪ್ರಾಪ್ತನಾಗುತ್ತಾನೋ ಅದು.

ಶಂಕರ ಭಾಷ್ಯ: ಋಗ್ವೇದ, ಯಜುರ್ವೇದ, ಸಾಮವೇದ ಮತ್ತು ಅಥರ್ವವೇದ -  ಈ ನಾಲ್ಕು ವೇದಗಳು, ಶಿಕ್ಷಾ, ಆಚಾರ ಸಂಹಿತೆ, ವ್ಯಾಕರಣ, ನಿರುಕ್ತ, ಛಂದಸ್ ಮತ್ತು ಜ್ಯೋತಿಷ್ಯ -  ಈ ಆರು ಅಂಗಗಳು (ವೇದಗಳ) ಇವೆಲ್ಲವೂ ಅಪರಾ ಎಂದು ಕರೆಯಲ್ಪಡುವ ಜ್ಞಾನ; ಪರ ವಿದ್ಯೆ ಎಂದರೆ -  ಅತ್ಯುನ್ನತವಾದದ್ದನ್ನು ಸಾಧಿಸುವುದು, ಇದು ಜ್ಞಾನದ ಪ್ರಜ್ಞೆಗಿಂತ ಭಿನ್ನವಾಗಿಲ್ಲ. ಅತ್ಯುನ್ನತವಾದುದನ್ನು ಸಾಧಿಸುವುದು ಎಂದರೆ ಕೇವಲ ಅಜ್ಞಾನವನ್ನು ತೆಗೆದುಹಾಕುವುದಾಗಿದೆ. ಗುರುವನ್ನು ಸಮೀಪಿಸುವುದು ಮತ್ತು ಎಲ್ಲಾ ಆಸೆಗಳನ್ನು ತಿರಸ್ಕರಿಸುವುದು ಮುಂತಾದ ಇತರ ಪ್ರಯತ್ನಗಳಿಲ್ಲದೇ, ಕೇವಲ ಶಬ್ದ ಸಂಯೋಜನೆಯ ಪಾಂಡಿತ್ಯದಿಂದ ಅಮರತ್ವವನ್ನು ಅರಿತುಕೊಳ್ಳಲು ಸಾಧ್ಯವಿಲ್ಲ. ಹಾಗಾಗಿ ಬ್ರಹ್ಮನ ಜ್ಞಾನದ ಪ್ರತ್ಯೇಕ ವರ್ಗೀಕರಣ ಮತ್ತು ಅದರ ಹೆಸರನ್ನು ಪರಾ ವಿದ್ಯಾ ಎಂದು ಕರೆಯುವುದು ಸೂಕ್ತವಾಗಿದೆ.

ಯತ್ತದದ್ರೇಶ್ಯಮಗ್ರಾಹ್ಯಮಗೋತ್ರಮವರ್ಣ-
      ಮಚಕ್ಷುಃಶ್ರೋತ್ರಂ ತದಪಾಣಿಪಾದಂ .
ನಿತ್ಯಂ ವಿಭುಂ ಸರ್ವಗತಂ ಸುಸೂಕ್ಷ್ಮಂ
      ತದವ್ಯಯಂ ಯದ್ಭೂತಯೋನಿಂ ಪರಿಪಶ್ಯಂತಿ ಧೀರಾಃ .. ೬..

ಪರವಿದ್ಯೆ ಎಂದರೆ ಬ್ರಹ್ಮಜ್ಞಾನ - ಆ ಬ್ರಹ್ಮನ ವರ್ಣನೆ ಈ ಶ್ಲೋಕದಲ್ಲಿದೆ - ಯಾವುದನ್ನು ನೋಡಲು ಅಸಾಧ್ಯವೋ, ಗ್ರಹಿಸಲು ಅಸಾಧ್ಯವೋ - ಅಂದರೆ ಕರ್ಮೇಂದ್ರಿಯಗಳಿಗೆ ಅಲಭ್ಯವೋ, ಯಾವ ಮೂಲವನ್ನೂ ಹೊಂದಿರದ, ಯಾವುದೇ ಗುಣ-ಲಕ್ಷಣಗಳನ್ನು ಹೊಂದಿರದ, ಕಣ್ಣು, ಕಿವಿಗಳನ್ನು ಹೊಂದಿರದ, ಕೈ-ಕಾಲುಗಳನ್ನು ಹೊಂದಿರದ, ನಿತ್ಯವಾದ - ಅವಿನಾಶಿಯಾದ, ಸರ್ವಭೂತಗಳಲ್ಲೂ ಇರುವ, ಆಕಾಶದಂತೆ ಸರ್ವವ್ಯಾಪಿಯಾದ, ಶಬ್ದ ಇತ್ಯಾದಿಗಳನ್ನು ಹೊಂದಿರದ ಕಾರಣ ಸುಸೂಕ್ಷ್ಮವಾದ, ಅವ್ಯಯವಾದ, ಎಲ್ಲ ಭೂತಗಳ ಮೂಲವೆಂದು ವಿವೇಕಿಗಳ ಅರಿತಿರುವ ಬ್ರಹ್ಮನ ಜ್ಞಾನವೇ ಪರವಿದ್ಯೆ. 

ಯಥೋರ್ಣನಾಭಿಃ ಸೃಜತೇ ಗೃಹ್ಣತೇ ಚ
      ಯಥಾ ಪೃಥಿವ್ಯಾಮೋಷಧಯಃ ಸಂಭವಂತಿ .
ಯಥಾ ಸತಃ ಪುರುಷಾತ್ಕೇಶಲೋಮಾನಿ
      ತಥಾಽಕ್ಷರಾತ್ಸಂಭವತೀಹ ವಿಶ್ವಂ .. ೭..

ಹೇಗೆ ಜೇಡರ ಹುಳುವು ಬಲೆಯನ್ನು ರಚಿಸಿ, ಅದನ್ನು ಹಿಡಿಯುವಂತೆ, ಹೇಗೆ ಸಸ್ಯಗಳು ಪೃಥ್ವಿಯಲ್ಲಿ ಹುಟ್ಟುತ್ತ ಸಾಯುತ್ತ ಇರುವಂತೆ,  ಹೇಗೆ ಮನುಷ್ಯನ ಕೇಶ-ರೋಮಗಳು ರಚಿತವಾಗುವಂತೆ, ಹಾಗೆಯೇ ಬ್ರಹ್ಮನಿಂದ ಈ ವಿಶ್ವವು ರಚಿತವಾಗುತ್ತದೆ.

ತಪಸಾ ಚೀಯತೇ ಬ್ರಹ್ಮ ತತೋಽನ್ನಮಭಿಜಾಯತೇ .
ಅನ್ನಾತ್ಪ್ರಾಣೋ ಮನಃ ಸತ್ಯಂ ಲೋಕಾಃ ಕರ್ಮಸು ಚಾಮೃತಂ .. ೮..

 ತಪಸ್ಸಿನಿಂದ ಬ್ರಹ್ಮನ ವೃದ್ಧಿಯಾಗುತ್ತದೆ. ಅದರಿಂದ ಅನ್ನ ಉತ್ಪನ್ನವಾಗುತ್ತದೆ. ಅನ್ನದಿಂದ ಕ್ರಮೇಣವಾಗಿ ಪ್ರಾಣ, ಮನ ಹಾಗೂ ಸತ್ಯ ಹಾಗೂ ಲೋಕ ಹಾಗೂ ಕರ್ಮ ಉತ್ಪನ್ನವಾಗುತ್ತವೆ. ಕರ್ಮದಿಂದ ಅಮೃತವಾದ ಕರ್ಮಫಲ ಉತ್ಪನ್ನವಾಗುತ್ತದೆ.

ಯಃ ಸರ್ವಜ್ಞಃ ಸರ್ವವಿದ್ಯಸ್ಯ ಜ್ಞಾನಮಯಂ ತಪಃ .
ತಸ್ಮಾದೇತದ್ಬ್ರಹ್ಮ ನಾಮ ರೂಪಮನ್ನಂ ಚ ಜಾಯತೇ .. ೯..

ಯಾರು ಸರ್ವಜ್ಞನೋ, ಸರ್ವವಿದ್ಯೆಯನ್ನೂ ತಿಳಿದವನೋ, ಯಾರ ತಪಸ್ಸು  ಜ್ಞಾನಮಯವೋ,  ಅವನಿಂದಲೇ ಬ್ರಹ್ಮ, ನಾಮ-ರೂಪ ಹಾಗೂ ಅನ್ನವು ಉತ್ಪನ್ನವಾಗುತ್ತದೆ.

.. ಇತಿ ಮುಂಡಕೋಪನಿಷದಿ ಪ್ರಥಮಮುಂಡಕೇ ಪ್ರಥಮಃ ಖಂಡಃ ..


.. ಪ್ರಥಮಮುಂಡಕೇ ದ್ವಿತೀಯಃ ಖಂಡಃ ..

ಈ ಖಂಡದಲ್ಲಿ ಕರ್ಮಮಾರ್ಗದಿಂದ - ಯಜ್ಞಗಳಿಂದ ಹೇಗೆ ಭಗವಂತನನ್ನು ಸಮೀಪಿಸಬಹುದು ಎಂದು ವಿವರಿಸಿ, ನಂತರ ಅದರ ಕ್ಷಣಭಂಗುರತೆಯನ್ನು ತಿಳಿಸಿಹೇಳಲಾಗಿದೆ.

ತದೇತತ್ಸತ್ಯಂ ಮಂತ್ರೇಷು ಕರ್ಮಾಣಿ ಕವಯೋ
      ಯಾನ್ಯಪಶ್ಯಂಸ್ತಾನಿ ತ್ರೇತಾಯಾಂ ಬಹುಧಾ ಸಂತತಾನಿ .
ತಾನ್ಯಾಚರಥ ನಿಯತಂ ಸತ್ಯಕಾಮಾ ಏಷ ವಃ
      ಪಂಥಾಃ ಸುಕೃತಸ್ಯ ಲೋಕೇ .. ೧..

 ಇದು ಸತ್ಯ: ಕವಿ-ದೃಷ್ಟಾರರು ಮಂತ್ರಗಳಲ್ಲಿ ಯಾವ ಕರ್ಮಗಳನ್ನು ನೋಡಿದರೋ, ಯಾವುದನ್ನು ಹೆಚ್ಚಾಗಿ ತ್ರಿವೇದಗಳಲ್ಲಿ ವಿವರಿಸಲಾಗಿದೆಯೋ, ಆ ಕರ್ಮಗಳನ್ನು ನಿಯಮಿತವಾಗಿ, ಏಕಾಗ್ರ ಮನಸ್ಸಿನ ಭಕ್ತಿಯಿಂದ ಮತ್ತು ಸತ್ಯದ ಬಯಕೆಯಿಂದ ಅಭ್ಯಾಸ ಮಾಡುವುದು, ಕರ್ಮ ಲೋಕಕ್ಕೆ  ನಿನ್ನ ಮಾರ್ಗವಾಗಿದೆ.

ಯದಾ ಲೇಲಾಯತೇ ಹ್ಯರ್ಚಿಃ ಸಮಿದ್ಧೇ ಹವ್ಯವಾಹನೇ .
ತದಾಽಽಜ್ಯಭಾಗಾವಂತರೇಣಾಽಽಹುತೀಃ ಪ್ರತಿಪಾದಯೇತ್ .. ೨.. 
 

ಯಜ್ಞ ಅಗ್ನಿ ಪ್ರಜ್ವಲಿತವಾದಾಗ ಮತ್ತು ಅದರ ಜ್ವಾಲೆಗಳು ಎತ್ತರಕ್ಕೆ ಏರಿ ಮಿನುಗಲು ಪ್ರಾರಂಭಿಸಿದಾಗ, ಎರಡು ತುಪ್ಪದ (ಅಜ್ಯಭಾಗಗಳು) ಅರ್ಪಣೆಗಳ ನಡುವೆ ಭಕ್ತಿಯಿಂದ ನಿಮ್ಮ ಅರ್ಪಣೆಗಳನ್ನು ಅರ್ಪಿಸಿ.

ಎಲ್ಲಾ ಕರ್ಮಗಳ ಪೈಕಿ ಪ್ರಮುಖವಾದ ಅಗ್ನಿಹೋತ್ರವನ್ನು (ಯಜ್ಞ) ಇಲ್ಲಿ ವಿವರಿಸಲಾಗಿದೆ - ಯಜ್ಞದ ಎರಡು ಜ್ವಾಲೆಗಳ ಮಧ್ಯೆ ಅವಪಸ್ಥಾನವಿರುವದು - (ಯಜ್ಞಕ್ಕೆ ನಮಸ್ಕರಿಸುವ ಸ್ಥಳ)

ಯಸ್ಯಾಗ್ನಿಹೋತ್ರಮದರ್ಶಮಪೌರ್ಣಮಾಸ-
      ಮಚಾತುರ್ಮಾಸ್ಯಮನಾಗ್ರಯಣಮತಿಥಿವರ್ಜಿತಂ ಚ .
ಅಹುತಮವೈಶ್ವದೇವಮವಿಧಿನಾ ಹುತ-
      ಮಾಸಪ್ತಮಾಂಸ್ತಸ್ಯ ಲೋಕಾನ್ ಹಿನಸ್ತಿ .. ೩..
 

 ಯಾರ ಅಗ್ನಿಹೋತ್ರ (ಯಜ್ಞವು) ಅಮವಾಸ್ಯೆಯಂದು ಮತ್ತು ಪೌರ್ಣಮೆಯಂದು ಕೊಡುವ ಆಹುತಿಯನ್ನು ಹೊಂದಿರದಿದ್ದರೆ, ಚಾತುರ್ಮಾಸದ ಆಹುತಿ ಮತ್ತು ಸುಗ್ಗಿಯ ಹಬ್ಬದ ಆಹುತಿಯನ್ನು ಹೊಂದಿರದಿದ್ದರೆ, ಅತಿಥಿಗಳಿಗೆ ಆತಿಥ್ಯ ನೀಡದಿದ್ದರೆ, ಅಥವಾ ವಿಶ್ವದೇವವಿಧಿಯನ್ನು ಹೊಂದಿರದಿದ್ದರೆ, ಅಥವಾ ವಿಧಿಪೂರ್ವಕವಲ್ಲದಿದ್ದರೆ, ಅಥವಾ ಅನುಚಿತವಾಗಿ ನಡೆಸಿದರೆ, ಅಂತಹ ಯಜ್ಞವು ಸಪ್ತ ಲೋಕಗಳನ್ನು ನಾಶಪಡಿಸುತ್ತದೆ. 

ಕಾಲೀ ಕರಾಲೀ ಚ ಮನೋಜವಾ ಚ
      ಸುಲೋಹಿತಾ ಯಾ ಚ ಸುಧೂಮ್ರವರ್ಣಾ .
ಸ್ಫುಲಿಂಗಿನೀ ವಿಶ್ವರುಚೀ ಚ ದೇವೀ
      ಲೇಲಾಯಮಾನಾ ಇತಿ ಸಪ್ತ ಜಿಹ್ವಾಃ .. ೪..
 

ಕಾಲಿ (ಕಪ್ಪು ಬಣ್ಣದ), ಕರಾಲೀ (ಭಯಂಕರೀ), ಮನೋವೇಗದವಳು, ಕೆಂಪು ಬಣ್ಣದವಳು, ಧೂಮ್ರವರ್ಣದವಳು (ನೇರಳೆ ಬಣ್ಣದವಳು), ಹೊಳೆಯುತ್ತಿರುವವಳು, ವಿಶ್ವರುಚಿ ದೇವಿ, ಈ ಏಳು ಬೆಂಕಿಯ ಏಳು ನಾಲಿಗೆಗಳು.

ಕಾಲಿ ಇತ್ಯಾದಿ ಬೆಂಕಿಯ ಸಪ್ತ ನಾಲಿಗೆಗಳು, ಅದಕ್ಕೆ ಯಜ್ಞದಲ್ಲಿ ಆಹುತಿ ಕೊಟ್ಟ ವಸ್ತುಗಳನ್ನು ನುಂಗುತ್ತವೆ 

ಏತೇಷು ಯಶ್ಚರತೇ ಭ್ರಾಜಮಾನೇಷು ಯಥಾಕಾಲಂ
      ಚಾಹುತಯೋ ಹ್ಯಾದದಾಯನ್ .
ತಂ ನಯಂತ್ಯೇತಾಃ ಸೂರ್ಯಸ್ಯ ರಶ್ಮಯೋ ಯತ್ರ (ತನ್ನಯಂತ್ಯೇತಾಃ)
      ದೇವಾನಾಂ ಪತಿರೇಕೋಽಧಿವಾಸಃ .. ೫..
 

ಈ ಜ್ವಾಲೆಗಳು ಬೆಳಗುತ್ತಿರುವಾಗ ಯಜ್ಞಗಳನ್ನು ಮಾಡುವ ಮತ್ತು ಸರಿಯಾದ ಸಮಯದಲ್ಲಿ ನೈವೇದ್ಯಗಳನ್ನು ಅರ್ಪಿಸುವ ಮನುಷ್ಯನನ್ನು ಸೂರ್ಯನ ಕಿರಣಗಳ ಮೇಲೆ ಈ ನೈವೇದ್ಯಗಳಿಂದ, ದೇವತೆಗಳ ಏಕೈಕ ಸಾರ್ವಭೌಮನು ವಾಸಿಸುವ ಸ್ಥಳಕ್ಕೆ ಕರೆದೊಯ್ಯಲಾಗುತ್ತದೆ. 

ಏಹ್ಯೇಹೀತಿ ತಮಾಹುತಯಃ ಸುವರ್ಚಸಃ
      ಸೂರ್ಯಸ್ಯ ರಶ್ಮಿಭಿರ್ಯಜಮಾನಂ ವಹಂತಿ .
ಪ್ರಿಯಾಂ ವಾಚಮಭಿವದಂತ್ಯೋಽರ್ಚಯಂತ್ಯ
      ಏಷ ವಃ ಪುಣ್ಯಃ ಸುಕೃತೋ ಬ್ರಹ್ಮಲೋಕಃ .. ೬..

ಪ್ರಕಾಶಮಾನವಾದ ಆಹುತಿಗಳು ಯಜ್ಞ ಮಾಡುವವರಿಗೆ ಹೇಳುತ್ತವೆ: ಇಲ್ಲಿಗೆ ಬನ್ನಿ! ಇಲ್ಲಿಗೆ ಬನ್ನಿ! ಮತ್ತು ಅವನನ್ನು ಸೂರ್ಯನ ಕಿರಣಗಳ ಮೇಲೆ ಕರೆದೊಯ್ಯಿರಿ, ಎಲ್ಲಾ ಸಮಯದಲ್ಲೂ ಅವನನ್ನು ಪೂಜಿಸಿ ಮತ್ತು ಆಹ್ಲಾದಕರ ಮಾತುಗಳಿಂದ ಅವನನ್ನು ಸ್ವಾಗತಿಸಿ: ಇದು ನಿಮ್ಮ ಒಳ್ಳೆಯ ಕಾರ್ಯಗಳಿಂದ ಗಳಿಸಲಾದ ಬ್ರಹ್ಮನ ಪವಿತ್ರ ಸ್ವರ್ಗ.

ಪ್ಲವಾ ಹ್ಯೇತೇ ಅದೃಢಾ ಯಜ್ಞರೂಪಾ
      ಅಷ್ಟಾದಶೋಕ್ತಮವರಂ ಯೇಷು ಕರ್ಮ .
ಏತಚ್ಛ್ರೇಯೋ ಯೇಽಭಿನಂದಂತಿ ಮೂಢಾ
      ಜರಾಮೃತ್ಯುಂ ತೇ ಪುನರೇವಾಪಿ ಯಂತಿ .. ೭..

ಆದರೆ ಈ ಶ್ರೇಷ್ಠವಲ್ಲದ ಹದಿನೆಂಟು ಜನರು ನಡೆಸುವ ಯಾಗಗಳ ದೋಣಿಗಳು ನಿಜಕ್ಕೂ ಜರ್ಜರವಾಗಿವೆ; ಅವು ಕ್ಷಣಿಕವಾಗಿವೆ. ಅವುಗಳನ್ನೇ ಅತ್ಯುನ್ನತ ಗುರಿಯೆಂದು ಭಾವಿಸಿ ಸಂತೋಷಪಡುವ ಮೂರ್ಖರು ಮತ್ತೆ ಮತ್ತೆ ವೃದ್ಧಾಪ್ಯ ಮತ್ತು ಸಾವಿನ ಚಕ್ರಕ್ಕೆ ಬಲಿಯಾಗುತ್ತಾರೆ.

    ಹದಿನೆಂಟು ಜನರು - ಹದಿನಾರು ಋತ್ವಿಕರು, ಯಜಮಾನ ಹಾಗೂ ಅವನ ಪತ್ನಿ
   ಜ್ಞಾನವಿಲ್ಲದೆ ಮಾಡುವ ಯಜ್ಞ ಹಾಗೂ ಅದರ ಫಲ ಕ್ಷಣಿಕ

ಅವಿದ್ಯಾಯಾಮಂತರೇ ವರ್ತಮಾನಾಃ
      ಸ್ವಯಂ ಧೀರಾಃ ಪಂಡಿತಂಮನ್ಯಮಾನಾಃ .
ಜಂಘನ್ಯಮಾನಾಃ ಪರಿಯಂತಿ ಮೂಢಾ
      ಅಂಧೇನೈವ ನೀಯಮಾನಾ ಯಥಾಂಧಾಃ .. ೮..

ಅಜ್ಞಾನದ ಮಧ್ಯದಲ್ಲಿದ್ದು, ತಾವು ಬುದ್ಧಿವಂತರು ಮತ್ತು ವಿದ್ಯಾವಂತರು ಎಂದು ಮನಸ್ಸಿನಲ್ಲಿ ಭಾವಿಸುತ್ತಾ, ಅಜ್ಞಾನಿಗಳು ಕುರುಡರಿಂದ ನಡೆಸಲ್ಪಡುವ ಕುರುಡರಂತೆ, ತೊಂದರೆಗಳಿಂದ ಬಳಲುತ್ತಾ ಅಲೆದಾಡುತ್ತಾರೆ.

ಅವಿದ್ಯಾಯಾಂ ಬಹುಧಾ ವರ್ತಮಾನಾ ವಯಂ
      ಕೃತಾರ್ಥಾ ಇತ್ಯಭಿಮನ್ಯಂತಿ ಬಾಲಾಃ .
ಯತ್ಕರ್ಮಿಣೋ ನ ಪ್ರವೇದಯಂತಿ ರಾಗಾ-
      ತ್ತೇನಾತುರಾಃ ಕ್ಷೀಣಲೋಕಾಶ್ಚ್ಯವಂತೇ .. ೯..

ಮಕ್ಕಳಂತೆ ಅಜ್ಞಾನಿಗಳಾದ ಇವರು, ವಿವಿಧ ರೀತಿಯಲ್ಲಿ ಅವಿದ್ಯೆಯಲ್ಲಿ ಮುಳುಗಿ, ತಮ್ಮನ್ನು ತಾವೇ ಹೊಗಳಿಕೊಳ್ಳುತ್ತಾ, "ನಾವು ಜೀವನದ ಉದ್ದೇಶವನ್ನು ಸಾಧಿಸಿದ್ದೇವೆ" ಎಂದು ಹೇಳಿಕೊಳ್ಳುತ್ತಾರೆ. ಈ ಕರ್ಮನಿಷ್ಠರಿಗೆ ತಮ್ಮ ಮೋಹದಿಂದ ಸತ್ಯ ತಿಳಿದಿಲ್ಲದ ಕಾರಣ, ಅವರು ತಮ್ಮ ಕರ್ಮದ ಫಲ ಖಾಲಿಯಾದಾಗ ದುಃಖಿತರಾಗಿ ಸ್ವರ್ಗದಿಂದ ಬೀಳುತ್ತಾರೆ.

ಇಷ್ಟಾಪೂರ್ತಂ ಮನ್ಯಮಾನಾ ವರಿಷ್ಠಂ
      ನಾನ್ಯಚ್ಛ್ರೇಯೋ ವೇದಯಂತೇ ಪ್ರಮೂಢಾಃ .
ನಾಕಸ್ಯ ಪೃಷ್ಠೇ ತೇ ಸುಕೃತೇಽನುಭೂತ್ವೇಮಂ
      ಲೋಕಂ ಹೀನತರಂ ವಾ ವಿಶಂತಿ .. ೧೦..
 

ಯಜ್ಞ-ಯಾಗಾದಿಗಳನ್ನು ಮಾಡುವದು, ದಾನ-ಧರ್ಮ ಮಾಡುವದು ಇತ್ಯಾದಿ ಕರ್ಮಗಳನ್ನೇ ಅತ್ಯುತ್ತಮ ಸತ್ಕರ್ಮಗಳೆಂದು ಭಾವಿಸಿ, ಬೇರೆ ಯಾವುದೇ ಶ್ರೇಯ ಕರ್ಮವನ್ನು ತಿಳಿಯದ ಈ ಭ್ರಮಿತ ಜನರು, ಸ್ವರ್ಗದಲ್ಲಿ ಸುಕೃತ ಲೋಕವನ್ನು ಅನುಭವಿಸಿದ ನಂತರ, ಮತ್ತೆ ಪುನಃ ಇಹಲೋಕವನ್ನು ಅಥವಾ ಇದಕ್ಕಿಂತ ಹೀನಲೋಕವನ್ನು ಪ್ರವೇಶಿಸುತ್ತಾರೆ.

ತಪಃಶ್ರದ್ಧೇ ಯೇ ಹ್ಯುಪವಸಂತ್ಯರಣ್ಯೇ
      ಶಾಂತಾ ವಿದ್ವಾಂಸೋ ಭೈಕ್ಷ್ಯಚರ್ಯಾಂ ಚರಂತಃ .
ಸೂರ್ಯದ್ವಾರೇಣ ತೇ ವಿರಜಾಃ ಪ್ರಯಾಂತಿ
      ಯತ್ರಾಮೃತಃ ಸ ಪುರುಷೋ ಹ್ಯವ್ಯಯಾತ್ಮಾ .. ೧೧..

 ಆದರೆ ಕಾಡಿನಲ್ಲಿ ತಪಸ್ಸು ಮತ್ತು ಶ್ರದ್ಧೆಯನ್ನು ಮಾಡುವವರು, ಶಾಂತಚಿತ್ತರಾಗಿ, ವಿದ್ವಾಂಸರಾಗಿದ್ದು ಭಿಕ್ಷಾವೃತ್ತಿ  ನಡೆಸುತ್ತ ಇರುವ ಜ್ಞಾನಿಗಳು,  ತಮ್ಮ ಒಳ್ಳೆಯ ಮತ್ತು ಕೆಟ್ಟ ಕರ್ಮಗಳನ್ನು ಸವೆದು, ಸೂರ್ಯನ ಮಂಡಲದ ಮೂಲಕ ಅಮರ ಮತ್ತು ಅಕ್ಷಯ ಪುರುಷ ಇರುವ ಸ್ಥಳಕ್ಕೆ (ಸತ್ಯಲೋಕಕ್ಕೆ) ಹೋಗುತ್ತಾರೆ.

ಪರೀಕ್ಷ್ಯ ಲೋಕಾನ್ ಕರ್ಮಚಿತಾನ್ ಬ್ರಾಹ್ಮಣೋ
      ನಿರ್ವೇದಮಾಯಾನ್ನಾಸ್ತ್ಯಕೃತಃ ಕೃತೇನ .
ತದ್ವಿಜ್ಞಾನಾರ್ಥಂ ಸ ಗುರುಮೇವಾಭಿಗಚ್ಛೇತ್
      ಸಮಿತ್ಪಾಣಿಃ ಶ್ರೋತ್ರಿಯಂ ಬ್ರಹ್ಮನಿಷ್ಠಂ .. ೧೨..

 ಕರ್ಮದಿಂದ ಉತ್ಪತ್ತಿಯಾಗುವ ಲೋಕಗಳನ್ನು ಪರೀಕ್ಷಿಸಿದ ಬ್ರಾಹ್ಮಣನು, "ಕರ್ಮದಿಂದ ಉತ್ಪತ್ತಿಯಾಗುವದು ಶಾಶ್ವತವಾದದ್ದು ಯಾವುದೂ ಇಲ್ಲ" ಎಂದು ತಿಳಿದು, ಆಸೆಗಳಿಂದ ಮುಕ್ತನಾಗಿರಲಿ; ಮತ್ತು ಶಾಶ್ವತವಾದ ಜ್ಞಾನವನ್ನು ಪಡೆಯಲು, ಕೈಯಲ್ಲಿ ಸಮಿದ್ ಹಿಡಿದುಕೊಂಡು, ವೇದಗಳಲ್ಲಿ ಪಾರಂಗತನಾದ ಮತ್ತು ಬ್ರಹ್ಮದಲ್ಲಿ ಕೇಂದ್ರೀಕೃತನಾದ ಒಬ್ಬ ಗುರುವನ್ನು ಸಂಪರ್ಕಿಸಲಿ.

ತಸ್ಮೈ ಸ ವಿದ್ವಾನುಪಸನ್ನಾಯ ಸಮ್ಯಕ್
      ಪ್ರಶಾಂತಚಿತ್ತಾಯ ಶಮಾನ್ವಿತಾಯ .
ಯೇನಾಕ್ಷರಂ ಪುರುಷಂ ವೇದ ಸತ್ಯಂ ಪ್ರೋವಾಚ
      ತಾಂ ತತ್ತ್ವತೋ ಬ್ರಹ್ಮವಿದ್ಯಾಂ .. ೧೩..

 ಹೀಗೆ ಸಮೀಪಿಸಿದವನಿಗೆ, ಮನಸ್ಸನ್ನು ಚೆನ್ನಾಗಿ ನಿಗ್ರಹಿಸಿರುವವನಿಗೆ ಮತ್ತು ತನ್ನ ಇಂದ್ರಿಯಗಳ ಮೇಲೆ ನಿಯಂತ್ರಣ ಹೊಂದಿರುವವನಿಗೆ, ನಿಜವಾದ ಅಕ್ಷರನಾದ ಪುರುಷನನ್ನು ತಿಳಿದುಕೊಳ್ಳುವ ಬ್ರಹ್ಮವಿದ್ಯೆಯನ್ನು ನಿಜವಾಗಿಯೂ ಕಲಿಸಲಿ.

.. ಇತಿ ಮುಂಡಕೋಪನಿಷದಿ ಪ್ರಥಮಮುಂಡಕೇ ದ್ವಿತೀಯಃ ಖಂಡಃ ..



.. ದ್ವಿತೀಯ ಮುಂಡಕೇ ಪ್ರಥಮಃ ಖಂಡಃ ..


ತದೇತತ್ಸತ್ಯಂ
ಯಥಾ ಸುದೀಪ್ತಾತ್ಪಾವಕಾದ್ವಿಸ್ಫುಲಿಂಗಾಃ
      ಸಹಸ್ರಶಃ ಪ್ರಭವಂತೇ ಸರೂಪಾಃ .
ತಥಾಽಕ್ಷರಾದ್ವಿವಿಧಾಃ ಸೋಮ್ಯ ಭಾವಾಃ
      ಪ್ರಜಾಯಂತೇ ತತ್ರ ಚೈವಾಪಿಯಂತಿ .. ೧..

ಈ ಮಾತು ಸತ್ಯ ಹೇ ಸತ್ ಯುವಕನೇ - ಹೇಗೆ ಬೆಂಕಿಯ ಜ್ವಾಲೆಯಿಂದ ಅದರ ಸುತ್ತ ಅದರಂತೇ ಇರುವ ಸಾವಿರಾರು ಕಿಡಿಗಳು ಉದ್ಭವವಾಗುತ್ತವೋ ಹಾಗೇ, ಅಕ್ಷರನಿಂದ (ಬ್ರಹ್ಮನಿಂದ) ಸಾವಿರಾರು ವಿವಿಧ ಜೀವಿಗಳು ಉದ್ಭವಿಸುತ್ತವೆ. ಹಾಗೂ ತಿರುಗಿ ಅವನಲ್ಲೇ ಲೀನವಾಗುತ್ತವೆ.

ಅಪರವಿದ್ಯೆಯ ವ್ಯರ್ಥತೆಯನ್ನು ಹಿಂದಿನ ಅಧ್ಯಾಯದಲ್ಲಿ ವಿವರಿಸಿದ ಬಳಿಕ ಈಗ ಪರವಿದ್ಯೆಯ ವರ್ಣನೆ ಆರಂಭವಾಗುತ್ತದೆ.

ದಿವ್ಯೋ ಹ್ಯಮೂರ್ತಃ ಪುರುಷಃ ಸಬಾಹ್ಯಾಭ್ಯಂತರೋ ಹ್ಯಜಃ .
ಅಪ್ರಾಣೋ ಹ್ಯಮನಾಃ ಶುಭ್ರೋ ಹ್ಯಕ್ಷರಾತ್ಪರತಃ ಪರಃ .. ೨..

ಈ ಶ್ಲೋಕದಲ್ಲಿ ಅಕ್ಷರನ ವರ್ಣನೆ ಇದೆ - ಅವನು ದಿವ್ಯ ಮತ್ತು ಅಮೂರ್ತ (ಮೂರ್ತರೂಪವಿಲ್ಲ) ಪುರುಷ, ಅವನಿಗೆ ಜನ್ಮ ಇಲ್ಲ (ಹಾಗಾಗಿ ನಾಶವಿಲ್ಲ) ಮತ್ತು ಅವನು ಎಲ್ಲದರ ಒಳಗೆ ಮತ್ತು ಹೊರಗೆ ಇದ್ದಾನೆ. ಅವನು ಪ್ರಾಣ ರಹಿತ, ಮನಸ್ಸಿನ ರಹಿತ, ಶುಭ್ರ ಮತ್ತು ಪರಮ ಅವಿನಾಶಿಗಿಂತ ಉನ್ನತ. 

ಏತಸ್ಮಾಜ್ಜಾಯತೇ ಪ್ರಾಣೋ ಮನಃ ಸರ್ವೇಂದ್ರಿಯಾಣಿ ಚ .
ಖಂ ವಾಯುರ್ಜ್ಯೋತಿರಾಪಃ ಪೃಥಿವೀ ವಿಶ್ವಸ್ಯ ಧಾರಿಣೀ .. ೩..

 ಪರಮಾತ್ಮನ ಈ ಮೂಲತತ್ವದಿಂದಲೇ, ಪ್ರಾಣ, ಮನಸ್ಸು ಮತ್ತು ಎಲ್ಲಾ ಇಂದ್ರಿಯಗಳು ಹುಟ್ಟುತ್ತವೆ; ಹಾಗೆಯೇ ಅವುಗಳನ್ನು ಪೋಷಿಸುವ ಆಕಾಶ, ವಾಯು, ಬೆಂಕಿ, ನೀರು ಮತ್ತು ಭೂಮಿಯೂ ಹುಟ್ಟುತ್ತವೆ.

ಅಗ್ನಿರ್ಮೂರ್ಧಾ ಚಕ್ಷುಷೀ ಚಂದ್ರಸೂರ್ಯೌ
      ದಿಶಃ ಶ್ರೋತ್ರೇ ವಾಗ್ವಿವೃತಾಶ್ಚ ವೇದಾಃ .
ವಾಯುಃ ಪ್ರಾಣೋ ಹೃದಯಂ ವಿಶ್ವಮಸ್ಯ ಪದ್ಭ್ಯಾಂ
      ಪೃಥಿವೀ ಹ್ಯೇಷ ಸರ್ವಭೂತಾಂತರಾತ್ಮಾ .. ೪..

ಆಕಾಶಗಳು ಅವನ ತಲೆ; ಸೂರ್ಯ ಚಂದ್ರರು ಅವನ ಕಣ್ಣುಗಳು; ದಿಕ್ಕುಗಳು ಅವನ ಕಿವಿಗಳು; ಬಹಿರಂಗ ವೇದಗಳು ಅವನ ಮಾತು; ಗಾಳಿ ಅವನ ಉಸಿರು; ವಿಶ್ವವೇ ಅವನ ಹೃದಯ. ಅವನ ಪಾದಗಳಿಂದ ಭೂಮಿ ಉತ್ಪತ್ತಿಯಾಗುತ್ತದೆ. ವಾಸ್ತವವಾಗಿ, ಅವನು ಎಲ್ಲಾ ಜೀವಿಗಳ ಆಂತರಿಕ ಆತ್ಮ.

ಈ ಸರ್ವವ್ಯಾಪಿ, ಅನಂತ ದೇವತೆ, ತನ್ನ ದೇಹದಲ್ಲಿಯೇ ಮೂರು ಲೋಕಗಳನ್ನು ಹೊಂದಿರುವವನು,  ಪ್ರಥಮ ಪುರುಷನು,   ಸೃಷ್ಟಿಯ ಎಲ್ಲಾ ವಸ್ತುಗಳ  ಆತ್ಮವಾಗಿದ್ದಾನೆ; ಏಕೆಂದರೆ, ಎಲ್ಲಾ ಸೃಷ್ಟಿಯಾದ ವಸ್ತುಗಳಲ್ಲಿಯೂ ಅವನೇ ನೋಡುವವನು, ಕೇಳುವವನು, ಚಿಂತಕನು, ಬಲ್ಲವನು ಮತ್ತು ಎಲ್ಲದಕ್ಕೂ ಕಾರಣನಾಗಿದ್ದಾನೆ.

ತಸ್ಮಾದಗ್ನಿಃ ಸಮಿಧೋ ಯಸ್ಯ ಸೂರ್ಯಃ
      ಸೋಮಾತ್ಪರ್ಜನ್ಯ ಓಷಧಯಃ ಪೃಥಿವ್ಯಾಂ .
ಪುಮಾನ್ ರೇತಃ ಸಿಂಚತಿ ಯೋಷಿತಾಯಾಂ
      ಬಹ್ವೀಃ ಪ್ರಜಾಃ ಪುರುಷಾತ್ಸಂಪ್ರಸೂತಾಃ .. ೫..

ಅವನಿಂದಲೇ ಅಗ್ನಿ ಬರುತ್ತದೆ, ಅದರ ಇಂಧನ ಸೂರ್ಯ; ಚಂದ್ರನಿಂದ ಮಳೆ ಬರುತ್ತದೆ; ಮಳೆಯಿಂದ ಭೂಮಿಯ ಮೇಲೆ ಬೆಳೆಯುವ ಗಿಡಮೂಲಿಕೆಗಳು; ಗಿಡಮೂಲಿಕೆಗಳಿಂದ ಪುರುಷನು ಮಹಿಳೆಗೆ ಸುರಿಯುವ ವೀರ್ಯ ದ್ರವ. ಪುರುಷನಿಂದ ಅನೇಕ ಜೀವಿಗಳು ಹುಟ್ಟುತ್ತವೆ.

ತಸ್ಮಾದೃಚಃ ಸಾಮ ಯಜೂꣳಷಿ ದೀಕ್ಷಾ
      ಯಜ್ಞಾಶ್ಚ ಸರ್ವೇ ಕ್ರತವೋ ದಕ್ಷಿಣಾಶ್ಚ .
ಸಂವತ್ಸರಶ್ಚ ಯಜಮಾನಶ್ಚ ಲೋಕಾಃ
      ಸೋಮೋ ಯತ್ರ ಪವತೇ ಯತ್ರ ಸೂರ್ಯಃ .. ೬..

ಅವನಿಂದಲೇ ಋಕ್, ಸಾಮ, ಯಜುಸ್, ದೀಕ್ಷಾ, ಎಲ್ಲಾ ಯಜ್ಞಗಳು, ಕ್ರತುಗಳು, ದಾನಗಳು, ವರ್ಷ, ಯಜ್ಞ ಮಾಡುವವನು ಮತ್ತು ಚಂದ್ರನು ಪವಿತ್ರಗೊಳಿಸುವ ಮತ್ತು ಸೂರ್ಯನು ಬೆಳಗುವ ಲೋಕಗಳು ಉದ್ಭವಿಸಿವೆ.

ತಸ್ಮಾಚ್ಚ ದೇವಾ ಬಹುಧಾ ಸಂಪ್ರಸೂತಾಃ
      ಸಾಧ್ಯಾ ಮನುಷ್ಯಾಃ ಪಶವೋ ವಯಾꣳಸಿ .
ಪ್ರಾಣಾಪಾನೌ ವ್ರೀಹಿಯವೌ ತಪಶ್ಚ
      ಶ್ರದ್ಧಾ ಸತ್ಯಂ ಬ್ರಹ್ಮಚರ್ಯಂ ವಿಧಿಶ್ಚ .. ೭..

 ಅವನಿಂದಲೇ ವಿವಿಧ ದೇವತೆಗಳು, ಸಾಧ್ಯರು, ಮನುಷ್ಯರು, ಪಶುಗಳು, ಪಕ್ಷಿಗಳು ಮತ್ತು ಪ್ರಾಣ ಮತ್ತು ಅಪಾನ, ಅಕ್ಕಿ ಮತ್ತು ಜೋಳ, ತಪಸ್ಸು, ನಂಬಿಕೆ, ಸತ್ಯ, ಸಂಯಮ ಮತ್ತು ಕಾನೂನುಗಳು ಹುಟ್ಟಿವೆ.

ಸಪ್ತ ಪ್ರಾಣಾಃ ಪ್ರಭವಂತಿ ತಸ್ಮಾ-
      ತ್ಸಪ್ತಾರ್ಚಿಷಃ ಸಮಿಧಃ ಸಪ್ತ ಹೋಮಾಃ .
ಸಪ್ತ ಇಮೇ ಲೋಕಾ ಯೇಷು ಚರಂತಿ ಪ್ರಾಣಾ
      ಗುಹಾಶಯಾ ನಿಹಿತಾಃ ಸಪ್ತ ಸಪ್ತ .. ೮..

ಅವನಿಂದಲೇ ಸಪ್ತ ಪ್ರಾಣಗಳು ಉತ್ಪನ್ನವಾಗಿವೆ - ಏಳು ಜ್ವಾಲೆಗಳು, ಏಳು ಸಮಿಧೆಗಳು, ಏಳು ಹೋಮಗಳು, ಸಪ್ತ ಲೋಕಗಳು ಎಲ್ಲವೂ ಅವನಿಂದಲೇ ಪ್ರಭವಿಸಿವೆ - ಈ ಏಳು ಲೋಕಗಳಲ್ಲಿ ಜೀವಿಗಳು - ಯಾರ ಹೃದಯ ಗುಹೆಗಳಲ್ಲಿ ಅವನು ಮನೆ ಮಾಡಿದ್ದಾನೋ ಅವು ಸಂಚರಿಸುತ್ತವೆ.

ಅತಃ ಸಮುದ್ರಾ ಗಿರಯಶ್ಚ ಸರ್ವೇಽಸ್ಮಾ-
      ತ್ಸ್ಯಂದಂತೇ ಸಿಂಧವಃ ಸರ್ವರೂಪಾಃ .
ಅತಶ್ಚ ಸರ್ವಾ ಓಷಧಯೋ ರಸಶ್ಚ
      ಯೇನೈಷ ಭೂತೈಸ್ತಿಷ್ಠತೇ ಹ್ಯಂತರಾತ್ಮಾ .. ೯..

ಅವನಿಂದಲೇ ಎಲ್ಲಾ ಸಾಗರಗಳು ಮತ್ತು ಈ ಎಲ್ಲಾ ಪರ್ವತಗಳು ಸಂಭೂತವಾಗಿವೆ, ಅವನಿಂದಲೇ ಈ ಎಲ್ಲಾ ನದಿಗಳು ಹರಿಯುತ್ತವೆ; ಅವನಿಂದಲೇ ಎಲ್ಲಾ ಸಸ್ಯಗಳು ಮತ್ತು ಸಾರಗಳು ಇತ್ಯಾದಿಗಳು ಇವೆ. ಈ ಸಾರಗಳ ರಸಾನುಭೂತಿಯಿಂದ ಅಂತರಾತ್ಮನು ಜೀವಿಗಳಲ್ಲಿ ನೆಲೆಸುತ್ತಾನೆ.

      ಪುರುಷ ಏವೇದಂ ವಿಶ್ವಂ ಕರ್ಮ ತಪೋ ಬ್ರಹ್ಮ ಪರಾಮೃತಂ .
ಏತದ್ಯೋ ವೇದ ನಿಹಿತಂ ಗುಹಾಯಾಂ
      ಸೋಽವಿದ್ಯಾಗ್ರಂಥಿಂ ವಿಕಿರತೀಹ ಸೋಮ್ಯ .. ೧೦..
 

ಈ "ಪುರುಷನೇ" ಇಡೀ ವಿಶ್ವ; ಅವನೇ ಕರ್ಮ, ಅವನೇ ತಪಸ್ಸು, ಮತ್ತು ಅವನೇ ಪರಮ ಮತ್ತು ಅಮರ ಬ್ರಹ್ಮ. ಓ ಸೋಮ್ಯಾ, ಹೃದಯದೊಳಗಿನ ಈ ಸಾರವನ್ನು ಅರ್ಥಮಾಡಿಕೊಳ್ಳುವವನು ಇಲ್ಲಿಯೇ, ಈ ಜಗತ್ತಿನಲ್ಲಿಯೇ ಅಜ್ಞಾನದ ಗಂಟನ್ನು ಛೇದಿಸುತ್ತಾನೆ.

.. ಇತಿ ಮುಂಡಕೋಪನಿಷದಿ ದ್ವಿತೀಯಮುಂಡಕೇ ಪ್ರಥಮಃ ಖಂಡಃ ..

.. ದ್ವಿತೀಯ ಮುಂಡಕೇ ದ್ವಿತೀಯಃ ಖಂಡಃ ..


ಆವಿಃ ಸಂನಿಹಿತಂ ಗುಹಾಚರಂ ನಾಮ
      ಮಹತ್ಪದಮತ್ರೈತತ್ಸಮರ್ಪಿತಂ .
ಏಜತ್ಪ್ರಾಣನ್ನಿಮಿಷಚ್ಚ ಯದೇತಜ್ಜಾನಥ
      ಸದಸದ್ವರೇಣ್ಯಂ ಪರಂ ವಿಜ್ಞಾನಾದ್ಯದ್ವರಿಷ್ಠಂ ಪ್ರಜಾನಾಂ .. ೧..

ಸ್ವಯಂ ಆವಿರ್ಭೂತವಾದ ಪರಮ ತತ್ವ ಇಲ್ಲಿ ಸನ್ನಿಹಿತವಾಗಿದೆ. ಈ ಬ್ರಹ್ಮವು ಹೃದಯ ಗುಹೆಯಲ್ಲಿ ಸಂಚರಿಸುವ ಒಂದು ಮಹಾನ್ ಪದ. ಚಲಿಸುವ, ಜೀವಂತವಾಗಿರುವ ಮತ್ತು ಗೋಚರಿಸುವ ಎಲ್ಲವೂ ಇದರಲ್ಲಿಯೇ ಸಮರ್ಪಿತವಾಗಿದೆ.  ಓ ಶಿಷ್ಯರೇ, ನಿಮ್ಮ ಆತ್ಮವಾಗಿರುವುದು ಸ್ಥೂಲ ಮತ್ತು ಸೂಕ್ಷ್ಮ ಎರಡೂ ಆಗಿರುವ, ಆಕರ್ಷಕ, ಶ್ರೇಷ್ಠ ಮತ್ತು ಜೀವಿಗಳ ತಿಳುವಳಿಕೆಯನ್ನು ಮೀರಿದ ಆತ್ಮ ಎಂದು ತಿಳಿಯಿರಿ.

ಯದರ್ಚಿಮದ್ಯದಣುಭ್ಯೋಽಣು ಚ
      ಯಸ್ಮಿಁಲ್ಲೋಕಾ ನಿಹಿತಾ ಲೋಕಿನಶ್ಚ .
ತದೇತದಕ್ಷರಂ ಬ್ರಹ್ಮ ಸ ಪ್ರಾಣಸ್ತದು ವಾಙ್ಮನಃ
      ತದೇತತ್ಸತ್ಯಂ ತದಮೃತಂ ತದ್ವೇದ್ಧವ್ಯಂ ಸೋಮ್ಯ ವಿದ್ಧಿ .. ೨..

 ಯಾವುದು ಪ್ರಕಾಶಮಾನವಾಗಿದೆಯೋ, ಯಾವುದು ಸೂಕ್ಷ್ಮವೋ ಅದಕ್ಕಿಂತ ಸೂಕ್ಷ್ಮವಾಗಿದೆಯೋ, ಯಾವುದರಿಂದ ಎಲ್ಲಾ ಲೋಕಗಳು ಮತ್ತು ಅವುಗಳ ನಿವಾಸಿಗಳು ಆಧಾರವಾಗಿದ್ದಾರೆಯೋ ಅದು - ಅದು ನಿಜಕ್ಕೂ ಅವಿನಾಶಿ ಬ್ರಹ್ಮ; ಅದು ಪ್ರಾಣ, ಮಾತು ಮತ್ತು ಮನಸ್ಸು; ಅದು ಸತ್ಯ ಮತ್ತು ಅದು ಅಮರ. ಅದನ್ನೇ ಮನಸ್ಸಿನಿಂದ ವಶಪಡಿಸಿಕೋ. ಅದನ್ನು ವಶಪಡಿಸಿಕೋ, ನನ್ನ ಒಳ್ಳೆಯ ಸ್ನೇಹಿತ.

ಧನುರ್ಗೃಹೀತ್ವೌಪನಿಷದಂ ಮಹಾಸ್ತ್ರಂ
      ಶರಂ ಹ್ಯುಪಾಸಾ ನಿಶಿತಂ ಸಂಧಯೀತ .  
ಆಯಮ್ಯ ತದ್ಭಾವಗತೇನ ಚೇತಸಾ
      ಲಕ್ಷ್ಯಂ ತದೇವಾಕ್ಷರಂ ಸೋಮ್ಯ ವಿದ್ಧಿ .. ೩..
 

ಉಪನಿಷತ್ತಿನ ಬಿಲ್ಲೆಂಬ ಮಹಾ ಆಯುಧವನ್ನು ಹಿಡಿದು, ಭಕ್ತಿಯಿಂದ ಹರಿತವಾದ ಬಾಣವನ್ನು ಅದರ ಮೇಲೆ ಇರಿಸಿ, ಆ ಪರಮ ಸತ್ಯದ ಮೇಲೆ ನಿಮ್ಮ ಮನಸ್ಸನ್ನು ಸಂಪೂರ್ಣವಾಗಿ ಕೇಂದ್ರೀಕರಿಸಿ ಬಿಲ್ಲನ್ನು ಎಳೆದು, ಓ ಸೋಮ್ಯ, ಆ ಅಕ್ಷರ ಬ್ರಹ್ಮನ ಕಡೆಗೆ ಗುರಿಯಿಟ್ಟು ಅದನ್ನು ಹೊಡೆ.

ಪ್ರಣವೋ ಧನುಃ ಶರೋ ಹ್ಯಾತ್ಮಾ ಬ್ರಹ್ಮ ತಲ್ಲಕ್ಷ್ಯಮುಚ್ಯತೇ .
ಅಪ್ರಮತ್ತೇನ ವೇದ್ಧವ್ಯಂ ಶರವತ್ತನ್ಮಯೋ ಭವೇತ್ .. ೪..

 ಓಂ ಎಂಬುದು ಬಿಲ್ಲು ಮತ್ತು ಆತ್ಮವು ಬಾಣ, ಮತ್ತು "ಅವನು", ಅಂದರೆ "ಬ್ರಹ್ಮ", ಗುರಿ ಎಂದು ಹೇಳಲಾಗುತ್ತದೆ. ಹಿಂಜರಿಕೆಯಿಲ್ಲದೆ "ಅವನು" ಕಡೆಗೆ ಗುರಿಯಿಡಬೇಕು; ಒಂದು ಬಾಣವು ತನ್ನ ಗುರಿಯಲ್ಲಿ ಕಣ್ಮರೆಯಾಗುವಂತೆಯೇ, "ಅವನು" (ಬ್ರಹ್ಮ) ನಲ್ಲಿ ಲೀನರಾಗಬೇಕು.

ಯಸ್ಮಿನ್ ದ್ಯೌಃ ಪೃಥಿವೀ ಚಾಂತರಿಕ್ಷಮೋತಂ
      ಮನಃ ಸಹ ಪ್ರಾಣೈಶ್ಚ ಸರ್ವೈಃ .
ತಮೇವೈಕಂ ಜಾನಥ ಆತ್ಮಾನಮನ್ಯಾ ವಾಚೋ
      ವಿಮುಂಚಥಾಮೃತಸ್ಯೈಷ ಸೇತುಃ .. ೫..

ಅವನಲ್ಲಿ ಸ್ವರ್ಗ, ಭೂಮಿ, ಅವುಗಳ ನಡುವಿನ ಅಂತರ ಮತ್ತು ಎಲ್ಲಾ ಇಂದ್ರಿಯಗಳೊಂದಿಗೆ ಮನಸ್ಸು ಹೆಣೆಯಲ್ಪಟ್ಟಿವೆ. ಆ ಅದ್ವೈತ ಆತ್ಮನನ್ನು ಮಾತ್ರ ತಿಳಿದುಕೊ ಮತ್ತು ಇತರ ಎಲ್ಲಾ ಮಾತುಗಳನ್ನು ಬಿಟ್ಟುಬಿಡು. ಅವನು ಅಮರತ್ವಕ್ಕೆ ಸೇತುವೆ.

ಅರಾ ಇವ ರಥನಾಭೌ ಸಂಹತಾ ಯತ್ರ ನಾಡ್ಯಃ  .
      ಸ ಏಷೋಽನ್ತಶ್ಚರತೇ ಬಹುಧಾ ಜಾಯಮಾನಃ .
ಓಮಿತ್ಯೇವಂ ಧ್ಯಾಯಥ ಆತ್ಮಾನಂ ಸ್ವಸ್ತಿ ವಃ
      ಪಾರಾಯ ತಮಸಃ ಪರಸ್ತಾತ್ .. ೬..  

ರಥದ ಚಕ್ರದ ನಾಭಿಯಲ್ಲಿ ಜೋಡಿಸಲ್ಪಟ್ಟ ಕಡ್ಡಿಗಳು ಸೇರುವಂತೇ , 'ಅವನು' ಅಂತರ್ಹೃದಯದಲ್ಲಿ ಚಲಿಸುತ್ತ ಬಹುವಿಧ ರೂಪದಲ್ಲಿ ಜನ್ಮ ಪಡೆಯುತ್ತಾನೆ. ಆತ್ಮವನ್ನು ಓಂಕಾರದ ರೂಪದಲ್ಲಿ ಧ್ಯಾನಿಸು - ಆಗ ಅಂಧಕಾರದಿಂದ ಆಚೆ ಬರುವ ನಿನ್ನ ಮಾರ್ಗವು ಮಂಗಲಮಯವಾಗುತ್ತದೆ.

ಯಃ ಸರ್ವಜ್ಞಃ ಸರ್ವವಿದ್ ಯಸ್ಯೈಷ ಮಹಿಮಾ ಭುವಿ .
ದಿವ್ಯೇ ಬ್ರಹ್ಮಪುರೇ ಹ್ಯೇಷ ವ್ಯೋಮ್ನ್ಯಾತ್ಮಾ ಪ್ರತಿಷ್ಠಿತಃ ..
ಮನೋಮಯಃ ಪ್ರಾಣಶರೀರನೇತಾ
ಪ್ರತಿಷ್ಠಿತೋಽನ್ನೇ ಹೃದಯಂ ಸಂನಿಧಾಯ .
ತದ್ವಿಜ್ಞಾನೇನ ಪರಿಪಶ್ಯಂತಿ ಧೀರಾ
ಆನಂದರೂಪಮಮೃತಂ ಯದ್ವಿಭಾತಿ .. ೭..

ಎಲ್ಲವನ್ನೂ ತಿಳಿದಿರುವ ಮತ್ತು ಎಲ್ಲವನ್ನೂ ಅರ್ಥಮಾಡಿಕೊಳ್ಳುವ ಮತ್ತು ಜಗತ್ತಿನ ಎಲ್ಲಾ ಮಹಿಮೆಯನ್ನು ಹೊಂದಿರುವವನು -  ಆತ್ಮ, ವು ಬ್ರಹ್ಮನ  ಪ್ರಕಾಶಮಾನವಾದ ನಿವಾಸದಲ್ಲಿ ಪ್ರತಿಷ್ಠಿತನಾಗಿದ್ದಾನೆ. ಅವನು ಮನಸ್ಸಿನ ರೂಪ ಧರಿಸಿ ಮತ್ತು ದೇಹ ಮತ್ತು ಇಂದ್ರಿಯಗಳನ್ನು ನಿಯಂತ್ರಿಸುತ್ತಾನೆ. ಅವನು ದೇಹದಲ್ಲಿ, ಹೃದಯದೊಳಗೆ ವಾಸಿಸುತ್ತಾನೆ. ಆನಂದಮಯ ಮತ್ತು ಅಮರ ಹೊಳೆಯುವ ಆತ್ಮದ  ಜ್ಞಾನದಿಂದ, ಜ್ಞಾನಿಗಳು ಸಂಪೂರ್ಣವಾಗಿ ಎಲ್ಲದರಲ್ಲೂ ಅವನನ್ನು (ಆತ್ಮವನ್ನು) ನೋಡುತ್ತಾರೆ.

ಭಿದ್ಯತೇ ಹೃದಯಗ್ರಂಥಿಶ್ಛಿದ್ಯಂತೇ ಸರ್ವಸಂಶಯಾಃ .
ಕ್ಷೀಯಂತೇ ಚಾಸ್ಯ ಕರ್ಮಾಣಿ ತಸ್ಮಿಂದೃಷ್ಟೇ ಪರಾವರೇ .. ೮..

ಯಾರು ಪರ ಹಾಗೂ ಅಪರನೋ ಅವನ ದರ್ಶನವಾದಾಗ ಹೃದಯಗ್ರಂಥಿಗಳು ಭೇದಿಸುತ್ತವೆ, ಸರ್ವ ಸಂಶಯಗಳು ದೂರವಾಗುತ್ತವೆ, ಎಲ್ಲ ಕರ್ಮಗಳು ಕ್ಷಯಿಸುತ್ತವೆ.

ಹಿರಣ್ಮಯೇ ಪರೇ ಕೋಶೇ ವಿರಜಂ ಬ್ರಹ್ಮ ನಿಷ್ಕಲಂ .
ತಚ್ಛುಭ್ರಂ ಜ್ಯೋತಿಷಾಂ ಜ್ಯೋತಿಸ್ತದ್ಯದಾತ್ಮವಿದೋ ವಿದುಃ .. ೯..

ಚಿನ್ನದ ಅತ್ಯುನ್ನತ ಅಭೇದ್ಯ, ನಿಷ್ಕಲ್ಮಶ ಕೋಶದಲ್ಲಿ ಶುಭ್ರನಾದ ಎಲ್ಲ ಜ್ಯೋತಿಗಳಲ್ಲಿ ಜ್ಯೋತಿಯಾದ ಬ್ರಹ್ಮನು ನಿವಾಸಿಸುತ್ತಾನೆ. ಆತ್ಮವನ್ನು ತಿಳಿದವರು ಅವನನ್ನು ತಿಳಿದಿರುತ್ತಾರೆ.

ನ ತತ್ರ ಸೂರ್ಯೋ ಭಾತಿ ನ ಚಂದ್ರತಾರಕಂ
      ನೇಮಾ ವಿದ್ಯುತೋ ಭಾಂತಿ ಕುತೋಽಯಮಗ್ನಿಃ .
ತಮೇವ ಭಾಂತಮನುಭಾತಿ ಸರ್ವಂ
      ತಸ್ಯ ಭಾಸಾ ಸರ್ವಮಿದಂ ವಿಭಾತಿ .. ೧೦..

 ಅಲ್ಲಿ ಸೂರ್ಯನೂ ಬೆಳಗುವುದಿಲ್ಲ, ಚಂದ್ರ ನಕ್ಷತ್ರಗಳೂ ಬೆಳಗುವುದಿಲ್ಲ, ಈ ಮಿಂಚುಗಳೂ ಸಹ ಬೆಳಗುವದಿಲ್ಲ ಈ ಬೆಂಕಿಯದಂತೂ ಮಾತೇ ಇಲ್ಲ, ಅವನು ಪ್ರಕಾಶಿಸಿದಾಗ, ಅವನ ನಂತರ ಎಲ್ಲವೂ ಬೆಳಗುತ್ತದೆ; ಅವನ ಬೆಳಕಿನಿಂದ ಎಲ್ಲವೂ ಬೆಳಗುತ್ತದೆ.

ಬ್ರಹ್ಮೈವೇದಮಮೃತಂ ಪುರಸ್ತಾದ್ಬ್ರಹ್ಮ ಪಶ್ಚಾದ್ಬ್ರಹ್ಮ ದಕ್ಷಿಣತಶ್ಚೋತ್ತರೇಣ .
ಅಧಶ್ಚೋರ್ಧ್ವಂ ಚ ಪ್ರಸೃತಂ ಬ್ರಹ್ಮೈವೇದಂ ವಿಶ್ವಮಿದಂ ವರಿಷ್ಠಂ .. ೧೧..

ಆ ಅಮರ ಬ್ರಹ್ಮ ಮುಂದಿದೆ, ಆ ಬ್ರಹ್ಮ ಹಿಂದೆ ಇದೆ, ಆ ಬ್ರಹ್ಮ ಬಲ ಮತ್ತು ಎಡಕ್ಕೆ ಇದೆ. ಬ್ರಹ್ಮ ಮಾತ್ರ ಮೇಲಿನ ಮತ್ತು ಕೆಳಗಿನ ಎಲ್ಲವನ್ನೂ ವ್ಯಾಪಿಸಿದೆ; ಈ ವಿಶ್ವವೆಲ್ಲ ಆ ಪರಮ ಬ್ರಹ್ಮ ಮಾತ್ರ..

ಯಾಕೆಂದರೆ -  ಈ ವಿಶ್ವವೆಲ್ಲ ಕೇವಲ ಬ್ರಹ್ಮನೇ - ಯಾವುದಾದರೂ ಬ್ರಹ್ಮವಲ್ಲದ್ದು ಕಂಡುಬಂದರೆ ಅದು ನಮ್ಮ ಅಜ್ಞಾನವಷ್ಟೆ.

.. ಇತಿ ಮುಂಡಕೋಪನಿಷದಿ ದ್ವಿತೀಯಮುಂಡಕೇ ದ್ವಿತೀಯಃ ಖಂಡಃ ..



.. ತೃತೀಯ ಮುಂಡಕೇ ಪ್ರಥಮಃ ಖಂಡಃ ..


ದ್ವಾ ಸುಪರ್ಣಾ ಸಯುಜಾ ಸಖಾಯಾ ಸಮಾನಂ ವೃಕ್ಷಂ ಪರಿಷಸ್ವಜಾತೇ .
ತಯೋರನ್ಯಃ  ಪಿಪ್ಪಲಂ ಸ್ವಾದ್ವತ್ತ್ಯನಶ್ನನ್ನನ್ಯೋ ಅಭಿಚಾಕಶೀತಿ .. ೧..

 ಇಲ್ಲಿ ಒಂದು ದೃಷ್ಟಾಂತವನ್ನು ಕೊಡಲಾಗಿದೆ - ಎರಡು ಯಾವಾಗಲೂ ಜೊತೆಗಿರುವ, ಸಖರಾಗಿರುವ ಹಕ್ಕಿಗಳು ಒಂದೆ ಮರದ ಮೇಲೆ ಕುಳಿತಿವೆ. ಒಂದು ಹಕ್ಕಿ ಹಣ್ಣನ್ನು (ಪಿಪ್ಪಲಿ ಹಣ್ಣನ್ನು) ತಿನ್ನುತ್ತಿದೆ. ಇನ್ನೊಂದು ಏನನ್ನೂ ತಿನ್ನದೇ ಸುಮ್ಮನೇ ನೋಡುತ್ತಿದೆ.

ಸಮಾನೇ ವೃಕ್ಷೇ ಪುರುಷೋ ನಿಮಗ್ನೋ-
      ಽನೀಶಯಾ ಶೋಚತಿ ಮುಹ್ಯಮಾನಃ .
ಜುಷ್ಟಂ ಯದಾ ಪಶ್ಯತ್ಯನ್ಯಮೀಶ-
      ಮಸ್ಯ ಮಹಿಮಾನಮಿತಿ ವೀತಶೋಕಃ .. ೨..

ಸಮಾನ ವೃಕ್ಷದಲ್ಲಿ ಕುಳಿತಿರುವ ಜೀವನು ಅನೀಶನಾಗಿ (ತನ್ನ ಆತ್ಮನನ್ನು ಅರಿಯದೆ) ಮೋಹದಲ್ಲಿ ಸಿಲುಕಿ ಶೋಚಿಸುತ್ತಾನೆ. ಆದರೆ ಅವನು ಯಾವಾಗ ಈಶನಾಗಿರುವ ಬೇರೆಯವನನ್ನು ನೋಡುತ್ತಾನೋ, ಆಗ ಎಲ್ಲವೂ 'ಅವನ' ಮಹಿಮೆ ಎಂದು ಅರಿತು ಶೋಕಮುಕ್ತನಾಗುತ್ತಾನೆ.

ಯದಾ ಪಶ್ಯಃ ಪಶ್ಯತೇ ರುಕ್ಮವರ್ಣಂ
      ಕರ್ತಾರಮೀಶಂ ಪುರುಷಂ ಬ್ರಹ್ಮಯೋನಿಂ .
ತದಾ ವಿದ್ವಾನ್ ಪುಣ್ಯಪಾಪೇ ವಿಧೂಯ
      ನಿರಂಜನಃ ಪರಮಂ ಸಾಮ್ಯಮುಪೈತಿ .. ೩..

ಯಾವಾಗ ದರ್ಶಕನು ಸ್ವಯಂಪ್ರಕಾಶಮಾನನಾದ ಸೃಷ್ಟಿಕರ್ತ, ಭಗವಂತ, ಪುರುಷ, ಬ್ರಹ್ಮ ಮೂಲಪುರುಷನನ್ನು ನೋಡುತ್ತಾನೋ, ಆಗ ಅವನು - ವಿದ್ವಾನನಾದ ದರ್ಶಕನು, ಒಳ್ಳೆಯದು ಮತ್ತು ಕೆಟ್ಟದ್ದನ್ನು ತೊಡೆದುಹಾಕಿ, ನಿರ್ಮಲನಾಗುತ್ತಾನೆ ಮತ್ತು ಪರಮ ಐಕ್ಯತೆಯನ್ನು ತಲುಪುತ್ತಾನೆ.

ಪ್ರಾಣೋ ಹ್ಯೇಷ ಯಃ ಸರ್ವಭೂತೈರ್ವಿಭಾತಿ
      ವಿಜಾನನ್ ವಿದ್ವಾನ್ ಭವತೇ ನಾತಿವಾದೀ .
ಆತ್ಮಕ್ರೀಡ ಆತ್ಮರತಿಃ ಕ್ರಿಯಾವಾ-
      ನೇಷ ಬ್ರಹ್ಮವಿದಾಂ ವರಿಷ್ಠಃ .. ೪..

ಅವನು ನಿಜಕ್ಕೂ ಪ್ರಾಣ; ಅವನು ಎಲ್ಲಾ ಜೀವಿಗಳಲ್ಲಿಯೂ ವಿವಿಧ ರೀತಿಯಲ್ಲಿ ಪ್ರಕಾಶಿಸುತ್ತಾನೆ. ಅವನನ್ನು ತಿಳಿದ ಜ್ಞಾನಿಯು ಅತಿವಾದ ಮಾಡುವುದಿಲ್ಲ. ಆತ್ಮದಲ್ಲಿ ಆನಂದಪಡುತ್ತಾ, ಆತ್ಮದಲ್ಲಿ ಸಂತಸ ಪಡುತ್ತ, ಕರ್ಮಗಳನ್ನು ಮಾಡುತ್ತಾ ಇರುವ ಅವನು, ಬ್ರಹ್ಮಜ್ಞಾನಿಗಳಲ್ಲಿ ಅಗ್ರಗಣ್ಯ.

ಸತ್ಯೇನ ಲಭ್ಯಸ್ತಪಸಾ ಹ್ಯೇಷ ಆತ್ಮಾ
      ಸಮ್ಯಗ್ಜ್ಞಾನೇನ ಬ್ರಹ್ಮಚರ್ಯೇಣ ನಿತ್ಯಂ .
ಅಂತಃಶರೀರೇ ಜ್ಯೋತಿರ್ಮಯೋ ಹಿ ಶುಭ್ರೋ
      ಯಂ ಪಶ್ಯಂತಿ ಯತಯಃ ಕ್ಷೀಣದೋಷಾಃ .. ೫..
 
ಈ ಆತ್ಮ ಸರ್ವದಾ ಸತ್ಯದಿಂದ, ತಪಸ್ಸಿನಿಂದ, ಸಂಪೂರ್ಣ ಜ್ಞಾನದಿಂದ, ಬ್ರಹ್ಮಚರ್ಯದಿಂದ  ಲಭ್ಯವಿದೆ. ಅಂತಃಶರೀರದಲ್ಲಿರುವ, ಶುಭ್ರ, ಜ್ಯೋತಿರ್ಮಯ ಈ ಆತ್ಮವನ್ನು ದೋಷಮುಕ್ತರಾದ ಯತಿಗಳು ನೋಡುತ್ತಾರೆ (ಪಡೆಯುತ್ತಾರೆ).

ಸತ್ಯಮೇವ ಜಯತೇ ನಾನೃತಂ 
      ಸತ್ಯೇನ ಪಂಥಾ ವಿತತೋ ದೇವಯಾನಃ .
ಯೇನಾಕ್ರಮಂತ್ಯೃಷಯೋ ಹ್ಯಾಪ್ತಕಾಮಾ
      ಯತ್ರ ತತ್ಸತ್ಯಸ್ಯ ಪರಮಂ ನಿಧಾನಂ .. ೬..

ಸತ್ಯವೇ ಜಯಿಸುತ್ತದೆ, ಸುಳ್ಳು ಅಲ್ಲ. ಸತ್ಯದಿಂದಲೇ ದೇವತೆಗಳ ಮಾರ್ಗವನ್ನು ಅ, ಈ ಮಾರ್ಗದಲ್ಲಿ ಎಲ್ಲಾ ಆಸೆಗಳನ್ನು ಪೂರೈಸುವ ಋಷಿಗಳು ಸತ್ಯದ ಪರಮ ನಿವಾಸಕ್ಕೆ ಹೋಗುತ್ತಾರೆ.

ಸತ್ಯವನ್ನು ನುಡಿಯುವವನೇ ಗೆಲ್ಲುತ್ತಾನೆ. ಸುಳ್ಳುಗಾರ ಅಲ್ಲ. ದೇವತೆಗಳ ಮಾರ್ಗ ಸತ್ಯದಿಂದಲೇ ವಿಸ್ತರಿಸುತ್ತದೆ.  

ಬೃಹಚ್ಚ ತದ್ದಿವ್ಯಮಚಿಂತ್ಯರೂಪಂ
      ಸೂಕ್ಷ್ಮಾಚ್ಚ ತತ್ಸೂಕ್ಷ್ಮತರಂ ವಿಭಾತಿ .
ದೂರಾತ್ಸುದೂರೇ ತದಿಹಾಂತಿಕೇ ಚ
      ಪಶ್ಯತ್ಸ್ವಿಹೈವ ನಿಹಿತಂ ಗುಹಾಯಾಂ .. ೭..

ಆ ವಿಶಾಲನು, ಸ್ವಯಂ ಪ್ರಕಾಶಮಾನನು, ಕಲ್ಪನೆಗೆ ಸಿಗದವನು, ಸೂಕ್ಷ್ಮಕ್ಕಿಂತ ಸೂಕ್ಷ್ಮನು  ಆದ ಬ್ರಹ್ಮನು ಪ್ರಕಾಶಿಸುತ್ತಾವ. ಅವನು ದೂರದಲ್ಲಿರುವುದಕ್ಕಿಂತ ಬಹಳ ದೂರದಲ್ಲಿದ್ದು, ಬಹಳ ಹತ್ತಿರದಲ್ಲೂ ಇದ್ದಾನೆ. ನಿಜಕ್ಕೂ, ಅವನು ಇಲ್ಲಿ , ಅವನನ್ನು ಕಾಣಬಲ್ಲ ಯೋಗಿಗಳ ಹೃದಯದ ಗುಹೆಯಲ್ಲಿ ಸ್ಥಾಪಿತನಾಗಿದ್ದಾನೆ.

ಆ ಬ್ರಹ್ಮನು ಅಜ್ಞಾನಿಗಳಿಗೆ ಕೈಗೆ ನಿಲುಕದಷ್ಟು ದೂರದಲ್ಲಿದ್ದಾನೆ. ಆದರೆ ಅವನನ್ನು ಅರಿತವರ ಆತ್ಮದಲ್ಲೇ ಅತಿಹತ್ತಿರದಲ್ಲಿ ಇದ್ದಾನೆ.

ನ ಚಕ್ಷುಷಾ ಗೃಹ್ಯತೇ ನಾಪಿ ವಾಚಾ
      ನಾನ್ಯೈರ್ದೇವೈಸ್ತಪಸಾ ಕರ್ಮಣಾ ವಾ .
ಜ್ಞಾನಪ್ರಸಾದೇನ ವಿಶುದ್ಧಸತ್ತ್ವ-
      ಸ್ತತಸ್ತು ತಂ ಪಶ್ಯತೇ ನಿಷ್ಕಲಂ ಧ್ಯಾಯಮಾನಃ .. ೮..

ಬ್ರಹ್ಮನು ಕಣ್ಣುಗಳಿಂದ ಅಥವಾ ಮಾತಿನಿಂದ ಅಥವಾ ಇತರ ಇಂದ್ರಿಯಗಳಿಂದ ಗ್ರಹಿಕೆಗೆ ಸಿಗುವದಿಲ್ಲ. ತಪಸ್ಸಿನಿಂದಾಗಲಿ ಅಥವಾ ಒಳ್ಳೆಯ ಕರ್ಮಗಳಿಂದಾಗಲಿ ಗ್ರಹಿಕೆಗೆ ಸಿಗುವದಿಲ್ಲ. ಮನುಷ್ಯನು ಜ್ಞಾನದ ಪ್ರಸಾದದಿಂದ, ಪ್ರಶಾಂತತೆಯಿಂದ ಶುದ್ಧನಾಗುತ್ತಾನೆ; ಅದರ ನಂತರ, ಧ್ಯಾನಮಗ್ನನಾದ ಅವನು ನಿಷ್ಕಲನಾದ, ನಿರಾಕಾರನಾದ ಬ್ರಹ್ಮನನ್ನು ನೋಡುತ್ತಾನೆ.

ಬ್ರಹ್ಮನು ಕಣ್ಣಿಗೆ ಕಾಣುವದಿಲ್ಲ - ಯಾಕೆಂದರೆ ಅವನು ನಿರಾಕಾರ. ಅವನು ಮಾತಿಗೆ ಸಿಗುವದಿಲ್ಲ - ಯಾಕೆಂದರೆ ಅವನು ವರ್ಣನಾತೀತ. ಅವನು ಯಜ್ಞ ಇತ್ಯಾದಿ ಕರ್ಮಗಳನ್ನು ಮಾಡುವದರಿಂದ ಲಭ್ಯವಾಗುವದಿಲ್ಲ. ಶುದ್ಧ ಜ್ಞಾನದಿಂದ ಮನಸ್ಸು ಪರಿಶುದ್ಧವಾದ ಮೇಲೆ ಬ್ರಹ್ಮನು ಅರಿವಿಗೆ ಬರುತ್ತಾನೆ.

ಏಷೋಽಣುರಾತ್ಮಾ ಚೇತಸಾ ವೇದಿತವ್ಯೋ
      ಯಸ್ಮಿನ್ಪ್ರಾಣಃ ಪಂಚಧಾ ಸಂವಿವೇಶ .
ಪ್ರಾಣೈಶ್ಚಿತ್ತಂ ಸರ್ವಮೋತಂ ಪ್ರಜಾನಾಂ
      ಯಸ್ಮಿನ್ವಿಶುದ್ಧೇ ವಿಭವತ್ಯೇಷ ಆತ್ಮಾ .. ೯..

ಈ 'ಆತ್ಮ'ವು ಒಂದು ಪರಮಾಣುವಿನಷ್ಟು ಸೂಕ್ಷ್ಮವಾಗಿದ್ದು, ಪ್ರಾಣವು ಐದು ವಿಧಗಳಲ್ಲಿ ಇದನ್ನು ಆವರಿಸಿದೆ. ಇದನ್ನು ಚಿಂತನಾ ಮನಸ್ಸಿನ (ಚಿತ್ತದ) ಮೂಲಕ ತಿಳಿಯಲ್ಪಡತಕ್ಕದ್ದು: ಜೀವಿಗಳ ಚಿತ್ತವು  ಪ್ರಾಣದಿಂದ ತುಂಬಿರುತ್ತದೆ ಮತ್ತು ಚಿತ್ತವು ಶುದ್ಧವಾದಾಗ ಮಾತ್ರ ಈ 'ಆತ್ಮ'ವು ಅಭಿವ್ಯಕ್ತಿಗೊಳ್ಳುತ್ತದೆ.

ಯಂ ಯಂ ಲೋಕಂ ಮನಸಾ ಸಂವಿಭಾತಿ
      ವಿಶುದ್ಧಸತ್ತ್ವಃ ಕಾಮಯತೇ ಯಾಂಶ್ಚ ಕಾಮಾನ್ .
ತಂ ತಂ ಲೋಕಂ ಜಯತೇ ತಾಂಶ್ಚ ಕಾಮಾಂ-
      ಸ್ತಸ್ಮಾದಾತ್ಮಜ್ಞಂ ಹ್ಯರ್ಚಯೇದ್ಭೂತಿಕಾಮಃ .. ೧೦..

ಶುದ್ಧ ಸತ್ವದ ಮನುಷ್ಯನು ತನ್ನ ಮನಸ್ಸಿನಲ್ಲಿ ಯಾವ ಯಾವ ಲೋಕವನ್ನು ಕಲ್ಪಿಸಿಕೊಳ್ಳುತ್ತಾನೋ ಮತ್ತು ಅವನು ಯಾವ ಆಸೆಗಳನ್ನು ಹೊಂದುತ್ತಾನೋ, ಆ ಲೋಕವನ್ನು ಅವನು ಗೆಲ್ಲುತ್ತಾನೆ ಮತ್ತು ಆ ಆಸೆಗಳನ್ನು ಅವನು ಪಡೆಯುತ್ತಾನೆ, ಆದ್ದರಿಂದ ಸಮೃದ್ಧಿಯನ್ನು ಬಯಸುವ ಪ್ರತಿಯೊಬ್ಬರೂ ಆತ್ಮವನ್ನು ತಿಳಿದ ಆ ಮನುಷ್ಯನನ್ನು ಪೂಜಿಸಲಿ.

.. ಇತಿ ಮುಂಡಕೋಪನಿಷದಿ ತೃತೀಯಮುಂಡಕೇ ಪ್ರಥಮಃ ಖಂಡಃ ..

..  ತೃತೀಯಮುಂಡಕೇ ದ್ವಿತೀಯಃ ಖಂಡಃ ..


ಸ ವೇದೈತತ್ಪರಮಂ ಬ್ರಹ್ಮ ಧಾಮ
      ಯತ್ರ ವಿಶ್ವಂ ನಿಹಿತಂ ಭಾತಿ ಶುಭ್ರಂ .
ಉಪಾಸತೇ ಪುರುಷಂ ಯೇ ಹ್ಯಕಾಮಾಸ್ತೇ
      ಶುಕ್ರಮೇತದತಿವರ್ತಂತಿ ಧೀರಾಃ ..  ೧..

ಆತ್ಮಜ್ಞಾನಿಯಾದ ಆತನು, ಪ್ರಕಾಶಮಾನವಾಗಿ ಹೊಳೆಯುವ ಮತ್ತು ವಿಶ್ವವೇ ನೆಲೆಗೊಂಡಿರುವ ಬ್ರಹ್ಮನ ಆ ಪರಮ ಧಾಮವನ್ನು ತಿಳಿದಿದ್ದಾನೆ. ಅಂತಹ ವ್ಯಕ್ತಿಯನ್ನು ಪೂಜಿಸುವ ಆಸೆಗಳಿಂದ ಮುಕ್ತರಾಗಿರುವ ಜ್ಞಾನಿಗಳು ಜನ್ಮ -ಮರಣಗಳ ಚಕ್ರವನ್ನು ಮೀರುತ್ತಾರೆ.

ಕಾಮಾನ್ ಯಃ ಕಾಮಯತೇ ಮನ್ಯಮಾನಃ
      ಸ ಕಾಮಭಿರ್ಜಾಯತೇ ತತ್ರ ತತ್ರ .
ಪರ್ಯಾಪ್ತಕಾಮಸ್ಯ ಕೃತಾತ್ಮನಸ್ತು
      ಇಹೈವ ಸರ್ವೇ ಪ್ರವಿಲೀಯಂತಿ ಕಾಮಾಃ .. ೨..

ಲೌಕಿಕ ವಸ್ತುಗಳನ್ನು ಪ್ರೀತಿಸುವವನು ಅವುಗಳನ್ನು ಬಯಸುವವನು ತನ್ನ ಬಯಕೆಗಳ ಕಾರಣದಿಂದ ಈ ಭೂಮಿಲ್ಲಿ ಮತ್ತೆ ಮತ್ತೆ ಹುಟ್ಟುತ್ತಾನೆ. ಆದರೆ ಯಾರ ಆಸೆಗಳು ಪರ್ಯಾಪ್ತವಾಗಿವೆಯೋ ಮತ್ತು ಯಾರು ಆತ್ಮದಲ್ಲಿ ಸ್ಥಾಪಿತನಾಗಿದ್ದಾನೆಯೋ ಅವನಿಗೆ ಎಲ್ಲಾ ಆಸೆಗಳು ಭೂಮಿಯ ಮೇಲೇ ಮಾಯವಾಗುತ್ತವೆ.

ನಾಯಮಾತ್ಮಾ ಪ್ರವಚನೇನ ಲಭ್ಯೋ
      ನ ಮೇಧಯಾ ನ ಬಹುನಾ ಶ್ರುತೇನ .
ಯಮೇವೈಷ ವೃಣುತೇ ತೇನ ಲಭ್ಯ-
      ಸ್ತಸ್ಯೈಷ ಆತ್ಮಾ ವಿವೃಣುತೇ ತನೂಂ ಸ್ವಾಂ .. ೩..  

ಈ ಆತ್ಮವನ್ನು ವೇದಗಳ ಅಧ್ಯಯನದಿಂದಾಗಲಿ, ಬುದ್ಧಿಶಕ್ತಿಯಿಂದಾಗಲಿ, ಹೆಚ್ಚಿನ ಕಲಿಕೆಯಿಂದಾಗಲಿ ಪಡೆಯಲು ಸಾಧ್ಯವಿಲ್ಲ. ಆತ್ಮವನ್ನು ಆರಿಸಿಕೊಳ್ಳುವವನೇ - ಅವನಿಂದಲೇ ಆತ್ಮವನ್ನು ಪಡೆಯುತ್ತಾನೆ. ಆತ್ಮದ ಅನ್ವೇಷಕರಿಗೆ ಆತ್ಮವೇ ಅದರ ನಿಜವಾದ ಸ್ವರೂಪವನ್ನು ಬಹಿರಂಗಪಡಿಸುತ್ತದೆ.

ನಾಯಮಾತ್ಮಾ ಬಲಹೀನೇನ ಲಭ್ಯೋ
      ನ ಚ ಪ್ರಮಾದಾತ್ತಪಸೋ ವಾಪ್ಯಲಿಂಗಾತ್ .
ಏತೈರುಪಾಯೈರ್ಯತತೇ ಯಸ್ತು ವಿದ್ವಾಂ-
      ಸ್ತಸ್ಯೈಷ ಆತ್ಮಾ ವಿಶತೇ ಬ್ರಹ್ಮಧಾಮ .. ೪..

ಬಲಹೀನನಿಗೆ ಅಥವಾ ಶ್ರದ್ಧೆ ಇಲ್ಲದವನಿಗೆ ಅಥವಾ ತ್ಯಾಗದಿಂದ ಕೂಡಿದವನಿಗೆ, ಜ್ಞಾನವಿಲ್ಲದವನಿಗೆ ಈ ಆತ್ಮವನ್ನು ಲಭ್ಯವಾಗುವದಿಲ್ಲ. ಆದರೆ ಒಬ್ಬ ಜ್ಞಾನಿಯು ಈ ಸಹಾಯಗಳ (ಶಕ್ತಿ, ಶ್ರದ್ಧೆ, ಜ್ಞಾನ, ತ್ಯಾಗಗಳ) ಮೂಲಕ ಶ್ರಮಿಸಿದರೆ, ಅವನ ಆತ್ಮವು ಬ್ರಹ್ಮಧಾಮನ್ನು ಪ್ರವೇಶಿಸುತ್ತದೆ.

ಸಂಪ್ರಾಪ್ಯೈನಮೃಷಯೋ ಜ್ಞಾನತೃಪ್ತಾಃ
      ಕೃತಾತ್ಮಾನೋ ವೀತರಾಗಾಃ ಪ್ರಶಾಂತಾಃ .
ತೇ ಸರ್ವಗಂ ಸರ್ವತಃ ಪ್ರಾಪ್ಯ ಧೀರಾ
      ಯುಕ್ತಾತ್ಮಾನಃ ಸರ್ವಮೇವಾವಿಶಂತಿ .. ೫..

ಆತ್ಮನನ್ನು ಅರಿತುಕೊಂಡ ನಂತರ, ದ್ರಷ್ಟಾರರು ಆ ಜ್ಞಾನದಿಂದ ತೃಪ್ತರಾಗುತ್ತಾರೆ. ಅವರ ಆತ್ಮಗಳು ಪರಮಾತ್ಮನಲ್ಲಿ ನೆಲೆಗೊಂಡಿವೆ, ಅವರು ಕಾಮಗಳಿಂದ ಮುಕ್ತರಾಗಿದ್ದಾರೆ ಮತ್ತು ಅವರು ಮನಸ್ಸಿನಲ್ಲಿ ಶಾಂತರಾಗಿದ್ದಾರೆ. ಆತ್ಮಕ್ಕೆ ಸದಾ ಅರ್ಪಿತರಾಗಿರುವ ಅಂತಹ ಶಾಂತ ಆತ್ಮಗಳು ಎಲ್ಲೆಡೆ ಸರ್ವವ್ಯಾಪಿ ಬ್ರಹ್ಮವನ್ನು ನೋಡುತ್ತಾರೆ ಮತ್ತು ಕೊನೆಯಲ್ಲಿ ಅದರೊಳಗೆ ಪ್ರವೇಶಿಸುತ್ತಾರೆ.

ವೇದಾಂತವಿಜ್ಞಾನಸುನಿಶ್ಚಿತಾರ್ಥಾಃ
      ಸಂನ್ಯಾಸಯೋಗಾದ್ಯತಯಃ ಶುದ್ಧಸತ್ತ್ವಾಃ .
ತೇ ಬ್ರಹ್ಮಲೋಕೇಷು ಪರಾಂತಕಾಲೇ
      ಪರಾಮೃತಾಃ ಪರಿಮುಚ್ಯಂತಿ ಸರ್ವೇ .. ೬..

ವೇದಾಂತಿಕ ಜ್ಞಾನದ ಗುರಿಯಾದ ಆತ್ಮವನ್ನು ಚೆನ್ನಾಗಿ ತಿಳಿದುಕೊಂಡು, ಸಂನ್ಯಾಸದ ಅಭ್ಯಾಸದ ಮೂಲಕ ತಮ್ಮ ಮನಸ್ಸನ್ನು ಶುದ್ಧೀಕರಿಸಿದ ಋಷಿಗಳು, ತಮ್ಮ ಪ್ರಯತ್ನಗಳನ್ನು ಎಂದಿಗೂ ಸಡಿಲಿಸದೆ, ಇಲ್ಲಿ ಪರಮ ಅಮರತ್ವವನ್ನು ಆನಂದಿಸುತ್ತಾರೆ ಮತ್ತು ಮಹಾ ಅಂತ್ಯದ ಸಮಯದಲ್ಲಿ ಬ್ರಹ್ಮನಲ್ಲಿ ಲೀನವಾಗಿ ಸಂಪೂರ್ಣವಾಗಿ ಮುಕ್ತರಾಗುತ್ತಾರೆ.

ಗತಾಃ ಕಲಾಃ ಪಂಚದಶ ಪ್ರತಿಷ್ಠಾ
      ದೇವಾಶ್ಚ ಸರ್ವೇ ಪ್ರತಿದೇವತಾಸು .
ಕರ್ಮಾಣಿ ವಿಜ್ಞಾನಮಯಶ್ಚ ಆತ್ಮಾ
      ಪರೇಽವ್ಯಯೇ ಸರ್ವೇ ಏಕೀಭವಂತಿ .. ೭..

ಹದಿನೈದು ಭಾಗಗಳು ಅವುಗಳ ಕಾರಣಗಳಿಗೆ ಮತ್ತು ಎಲ್ಲಾ ಇಂದ್ರಿಯಗಳು ಅವುಗಳ ದೇವತೆಗಳಿಗೆ ಹಿಂತಿರುಗುತ್ತವೆ; ಬುದ್ಧಿಯಲ್ಲಿ ಪ್ರತಿಫಲಿಸುವ ಕ್ರಿಯೆಗಳು ಮತ್ತು ಆತ್ಮವು, ಎಲ್ಲರ ಆತ್ಮವಾದ ಅತ್ಯುನ್ನತ ಅವಿನಾಶಿ ಬ್ರಹ್ಮದೊಂದಿಗೆ ಒಂದಾಗುತ್ತದೆ.

ಹದಿನೈದು ಭಾಗಗಳು ಎಂದರೆ ಪಂಚ ಪ್ರಾಣಗಳು, ಪಂಚ ಕರ್ಮೇಂದ್ರಿಯಗಳು ಹಾಗೂ ಪಂಚ ಜ್ಞಾನೇಂದ್ರಿಯಗಳು - ಇವೆಲ್ಲವೂ ಕರಗಿ ಬಿಡುತ್ತವೆ. ಇಂದ್ರಿಯಗಳನ್ನು ನಿರ್ದೇಶಿಸುವ ದೇವತೆಗಳು ತಮ್ಮ ತಮ್ಮ ಸ್ಥಾನಗಳಿಗೆ ಮರಳುತ್ತವೆ. 

ಯಥಾ ನದ್ಯಃ ಸ್ಯಂದಮಾನಾಃ ಸಮುದ್ರೇ-
      ಽಸ್ತಂ ಗಚ್ಛಂತಿ ನಾಮರೂಪೇ ವಿಹಾಯ .
ತಥಾ ವಿದ್ವಾನ್ ನಾಮರೂಪಾದ್ವಿಮುಕ್ತಃ
      ಪರಾತ್ಪರಂ ಪುರುಷಮುಪೈತಿ ದಿವ್ಯಂ .. ೮..


 ಹರಿಯುವ ನದಿಗಳು ತಮ್ಮ ನಾಮ ಮತ್ತು ರೂಪಗಳನ್ನು ಕಳೆದುಕೊಂಡು ಸಮುದ್ರದಲ್ಲಿ ಕಣ್ಮರೆಯಾಗುವಂತೆ, ಜ್ಞಾನಿಯು ನಾಮ ಮತ್ತು ರೂಪಗಳಿಂದ ಮುಕ್ತನಾಗಿ, ಶ್ರೇಷ್ಠನಿಗಿಂತ ಶ್ರೇಷ್ಠನಾದ ದಿವ್ಯನಾದ ಪುರುಷನನ್ನು ಪಡೆಯುತ್ತಾನೆ.

ಸ ಯೋ ಹ ವೈ ತತ್ಪರಮಂ ಬ್ರಹ್ಮ ವೇದ
      ಬ್ರಹ್ಮೈವ ಭವತಿ ನಾಸ್ಯಾಬ್ರಹ್ಮವಿತ್ಕುಲೇ ಭವತಿ .
ತರತಿ ಶೋಕಂ ತರತಿ ಪಾಪ್ಮಾನಂ ಗುಹಾಗ್ರಂಥಿಭ್ಯೋ
      ವಿಮುಕ್ತೋಽಮೃತೋ ಭವತಿ .. ೯..

ಪರಮ ಬ್ರಹ್ಮವನ್ನು ನಿಜವಾಗಿಯೂ ತಿಳಿದಿರುವವನು ಬ್ರಹ್ಮನಾಗುತ್ತಾನೆ. ಅವನ ಕುಟುಂಬದಲ್ಲಿ ಯಾರೂ ಬ್ರಹ್ಮವನ್ನು ಅರಿಯದೆ ಹುಟ್ಟುವುದಿಲ್ಲ. ಅವನು ದುಃಖವನ್ನು ಜಯಿಸುತ್ತಾನೆ; ಅವನು ದುಷ್ಟತನವನ್ನು ಜಯಿಸುತ್ತಾನೆ; ಹೃದಯದ ಬಂಧನಗಳಿಂದ ಮುಕ್ತನಾಗಿ, ಅವನು ಅಮರನಾಗುತ್ತಾನೆ.

ತದೇತದೃಚಾಽಭ್ಯುಕ್ತಂ .
ಕ್ರಿಯಾವಂತಃ ಶ್ರೋತ್ರಿಯಾ ಬ್ರಹ್ಮನಿಷ್ಠಾಃ
      ಸ್ವಯಂ ಜುಹ್ವತ ಏಕರ್ಷಿಂ ಶ್ರದ್ಧಯಂತಃ .
ತೇಷಾಮೇವೈತಾಂ ಬ್ರಹ್ಮವಿದ್ಯಾಂ ವದೇತ
      ಶಿರೋವ್ರತಂ ವಿಧಿವದ್ಯೈಸ್ತು ಚೀರ್ಣಂ .. ೧೦..

ಒಂದು ಋಕ್ (ಋಗ್ವೇದದ)-ಶ್ಲೋಕವು ಹೀಗೆ ಹೇಳುತ್ತದೆ: ಬ್ರಹ್ಮನ ಈ ಜ್ಞಾನವನ್ನು - ಅಗತ್ಯ ಕರ್ತವ್ಯಗಳನ್ನು ನಿರ್ವಹಿಸಿದವರಿಗೆ, ವೇದಗಳಲ್ಲಿ ಪಾರಂಗತರಾದವರಿಗೆ ಮತ್ತು ಬ್ರಹ್ಮನಿಗೆ ಭಕ್ತಿಯುಳ್ಳವರಿಗೆ ಮತ್ತು ನಂಬಿಕೆಯಿಂದ ತುಂಬಿ, ಏಕಾರ್ಷಿ ಅಗ್ನಿಯಲ್ಲಿ ನೈವೇದ್ಯಗಳನ್ನು ಅರ್ಪಿಸಿದವರಿಗೆ ಮತ್ತು ನಿಯಮದಂತೆ, ತಲೆಯ ಮೇಲೆ ಬೆಂಕಿಯನ್ನು ಹೊತ್ತುಕೊಳ್ಳುವ ವಿಧಿಯನ್ನು ಮಾಡಿದವರಿಗೆ ಮಾತ್ರ ಹೇಳಬೇಕು.

    ಬ್ರಹ್ಮಜ್ಞಾನವನ್ನು ಯಾರಿಗೆ ಕಲಿಸಬೇಕೆಂಬ ನಿಯಮವನ್ನು ಈ ಶ್ಲೋಕದಲ್ಲಿ ವಿವರಿಸಲಾಗಿದೆ.

ತದೇತತ್ಸತ್ಯಮೃಷಿರಂಗಿರಾಃ
ಪುರೋವಾಚ ನೈತದಚೀರ್ಣವ್ರತೋಽಧೀತೇ .
ನಮಃ ಪರಮಋಷಿಭ್ಯೋ ನಮಃ ಪರಮಋಷಿಭ್ಯಃ .. ೧೧..

ಹೀಗೆಯೇ ಋಷಿ ಅಂಗೀರಸನು ಪ್ರಾಚೀನ ಕಾಲದಲ್ಲಿ ಈ ಸತ್ಯವನ್ನು ಘೋಷಿಸಿದನು. ವ್ರತವನ್ನು ಪಾಲಿಸದ ವ್ಯಕ್ತಿಯು ಅದನ್ನು ಓದಬಾರದು. ಋಷಿಗಳಿಗೆ ನಮಸ್ಕಾರ! ಋಷಿಗಳಿಗೆ ನಮಸ್ಕಾರ!
.. ಇತಿ ಮುಂಡಕೋಪನಿಷದಿ ತೃತೀಯಮುಂಡಕೇ ದ್ವಿತೀಯಃ ಖಂಡಃ ..

ಓಂ ಭದ್ರಂ ಕರ್ಣೇಭಿಃ ಶೃಣುಯಾಮ ದೇವಾ ಭದ್ರಂ ಪಶ್ಯೇಮಾಕ್ಷಭಿರ್ಯಜತ್ರಾಃ .
ಸ್ಥಿರೈರಂಗೈಸ್ತುಷ್ಟುವಾꣳಸಸ್ತನೂಭಿರ್ವ್ಯಶೇಮ ದೇವಹಿತಂ ಯದಾಯುಃ ..

ಸ್ವಸ್ತಿ ನ ಇಂದ್ರೋ ವೃದ್ಧಶ್ರವಾಃ ಸ್ವಸ್ತಿ ನಃ ಪೂಷಾ ವಿಶ್ವವೇದಾಃ .
ಸ್ವಸ್ತಿ ನಸ್ತಾರ್ಕ್ಷ್ಯೋ ಅರಿಷ್ಟನೇಮಿಃ ಸ್ವಸ್ತಿ ನೋ ಬೃಹಸ್ಪತಿರ್ದಧಾತು ..


ಓಂ. ಓ ದೇವತೆಗಳೇ, ನಾವು ನಮ್ಮ ಕಿವಿಗಳಿಂದ ಶುಭವಾದದ್ದನ್ನು ಕೇಳೋಣ! ಓ ಪೂಜಾ ದೇವತೆಗಳೇ, ನಾವು ನಮ್ಮ ಕಣ್ಣುಗಳಿಂದ ಒಳ್ಳೆಯದನ್ನು ನೋಡೋಣ! ಅಂಗಗಳು ಮತ್ತು ದೇಹದಲ್ಲಿ ಬಲಶಾಲಿಗಳಾದ ನಾವು ನಿನ್ನ ಸ್ತುತಿಯನ್ನು ಹಾಡೋಣ ಮತ್ತು ಪ್ರಜಾಪತಿ ನಮಗೆ ನೀಡಿದ ಜೀವನವನ್ನು ಆನಂದಿಸೋಣ! ಓಂ. ಶಾಂತಿ! ಶಾಂತಿ! ಶಾಂತಿ! 

.. ಓಂ ಶಾಂತಿಃ ಶಾಂತಿಃ ಶಾಂತಿಃ ..

.. ಇತ್ಯಥರ್ವವೇದೀಯ ಮುಂಡಕೋಪನಿಷತ್ಸಮಾಪ್ತಾ ..

Comments

Popular posts from this blog

ಶಿವಾನಂದಲಹರಿ

ತತ್ತ್ವಬೋಧ

ಭಗವದ್ಗೀತಾ ಆರತಿ