ಭಜ ಗೋವಿಂದಂ

ಆದಿ ಶಂಕರಾಚಾರ್ಯರು ರಚಿಸಿದ ಈ ಜನಪ್ರಿಯ ಶ್ಲೋಕವನ್ನು ಮೋಹ ಮುದ್ಗರ (ಮುದ್ಗರ - ಸುತ್ತಿಗೆ) ಎಂದೂ ಕರೆಯುತ್ತಾರೆ. ಒಂದು ಕತೆಯ ಪ್ರಕಾರ ಒಂದು ದಿನ ಶಂಕರಾಚಾರ್ಯರು ರಸ್ತೆಯಲ್ಲಿ ಹೋಗುತ್ತಿದ್ದಾಗ ಒಬ್ಬ ವೃದ್ಧನು ವಿದ್ಯಾರ್ಥಿಗಳಿಗೆ ಕಲಿಸಲೆಂದು ವ್ಯಾಕರಣವನ್ನು ಉರು ಹಾಕುತ್ತಿದ್ದ. ಅದನ್ನು ನೋಡಿದ ಶಂಕರಾಚಾರ್ಯರು ಅವನಿಗೆ ಈ ವಯಸ್ಸಿನಲ್ಲಿ ವ್ಯಾಕರಣ ಕಲಿಯುವ ಬದಲು ದೇವರ ಧ್ಯಾನದಲ್ಲಿ ಮನಸ್ಸನ್ನು ತೊಡಗಿಸಲು ಹೇಳಿದರು. ಈ ಸಮಯದಲ್ಲಿಯೇ ಭಜಗೋವಿಂದ ರಚಿಸಿದರು ಎಂಬ ಪ್ರತೀತಿ ಇದೆ.

 
ಭಜ ಗೋವಿಂದಂ ಭಜ ಗೋವಿಂದಂ
ಗೋವಿಂದಂ ಭಜ ಮೂಢಮತೇ .
ಸಂಪ್ರಾಪ್ತೇ ಸನ್ನಿಹಿತೇ ಕಾಲೇ
ನಹಿ ನಹಿ ರಕ್ಷತಿ ಡುಕೃಂಕರಣೇ .. 1..
ಭಜ - ಭಜಿಸು   ಗೋವಿಂದಂ - ಗೋವಿಂದಂ   ಮೂಢಮತೆ - ಮೂಢಬುದ್ಧಿಯವನೇ  
ಸಂಪ್ರಾಪ್ತೇ - ಪ್ರಾಪ್ತವಾದಾಗ   ಸನ್ನಿಹತೇ - ಹತ್ತಿರ ಬಂದಾಗ   ನಹಿ ರಕ್ಷತಿ - ರಕ್ಷಿಸುವದಿಲ್ಲ    ಡುಕೃಂಕರಣೆ - ವ್ಯಾಕರಣ ಜ್ಞಾನ
ಮೂಢಮತಿಯೇ, ಗೋವಿಂದನನ್ನು ಭಜಿಸು, ಗೋವಿಂದನನ್ನು ಭಜಿಸು. ಮರಣ ಕಾಲ ಬಂದಾಗ ನಿನ್ನ ವ್ಯಾಕರಣ ಜ್ಞಾನ  (ಪುಸ್ತಕ ಜ್ಞಾನ) ನಿನ್ನನ್ನು ರಕ್ಷಿಸುವದಿಲ್ಲ. 
ಮೂಢ ಜಹೀಹಿ ಧನಾಗಮತೃಷ್ಣಾಂ
ಕುರು ಸದ್ಬುದ್ಧಿಂ ಮನಸಿ ವಿತೃಷ್ಣಾಂ .
ಯಲ್ಲಭಸೇ ನಿಜಕರ್ಮೋಪಾತ್ತಂ
ವಿತ್ತಂ ತೇನ ವಿನೋದಯ ಚಿತ್ತಂ .. 2..
ಜಹೀಹಿ - ತ್ಯಜಿಸು  ಧನ ಆಗಮ - ದುಡ್ಡು ಬರಬೇಕು   ತೃಷ್ಣಾ - ಆಸೆ     ಕುರು - ಮಾಡು   ಸತ್ ಬುದ್ಧಿಂ -  ಒಳ್ಳೆಯ ಬುದ್ಧಿಯನ್ನು   ವಿತೃಷ್ಣಾಂ - ಆಸೆ ಇಲ್ಲದೆ      ಯತ್ ಲಭಸೇ - ಯಾವುದು ಸಿಗುವದೋ   ನಿಜ ಕರ್ಮ ಉಪಾತ್ತಂ - ನಿಜ ಕರ್ಮದಿಂದ ಲಬ್ಧವಾಗಿರುವದನ್ನು    ವಿತ್ತಂ - ಧನ    ತೇನ - ಅದರಿಂದ   ವಿನೋದಯ - ಸಂತೋಷ ಪಡು
ಮೂರ್ಖನೇ, ಧನದಾಸೆಯನ್ನು ತ್ಯಜಿಸು. ಆಸೆಯನ್ನು ಬಿಟ್ಟು ಒಳ್ಳೆ ಬುದ್ದಿಯನ್ನು ಮಾಡು. ನಿನ್ನ ಕರ್ಮದಿಂದ ಏನು ದೊರಕುವದೋ ಅದನ್ನು ಸ್ವೀಕರಿಸಿ ಸಮಾಧಾನದಿಂದಿರು.

 ನಾರೀಸ್ತನಭರನಾಭೀದೇಶಂ
ದೃಷ್ಟ್ವಾ ಮಾ ಗಾ ಮೋಹಾವೇಶಂ .
ಏತನ್ಮಾಂಸವಸಾದಿವಿಕಾರಂ
ಮನಸಿ ವಿಚಿಂತಯ ವಾರಂ ವಾರಂ .. 3.. 

ನಾರಿ - ಹೆಣ್ಣು  ನಾಭಿದೇಶಂ - ನಾಭಿ ಪ್ರದೇಶ     ದೃಷ್ಟ್ವಾ - ನೋಡಿ    ಮಾ ಗಾ - ಹೋಗಬೇಡ     
ಏತತ್ ಮಾಂಸ ವಸಾದಿ - ಇದು ಮಾಂಸ ಕೊಬ್ಬು   ವಿಕಾರಂ - ಕುರೂಪ    
ಮನಸಿ - ಮನಸ್ಸಿನಲ್ಲಿ    ವಿಚಿಂತಯ - ಚೆನ್ನಾಗಿ ಯೋಚಿಸು   ವಾರಂ ವಾರಂ - ಪುನಃ ಪುನಃ
ಹೆಣ್ಣಿನ ಸ್ತನ, ನಾಭಿಗಳನ್ನು ನೋಡಿ ಮೋಹಾವೇಶಗೊಳ್ಳಬೇಡ. ಇವು ಮಾಂಸ-ಕೊಬ್ಬುಗಳ ವಿಕಾರಗಳು ಮಾತ್ರ. ಈ ಮಾತನ್ನು ಪುನಃ ಪುನಃ ಯೋಚಿಸುತ್ತಿರು. 

ನಲಿನೀ ದಲಗತ ಜಲಮತಿ ತರಲಂ
ತದ್ವಜ್ಜೀವಿತ ಮತಿಶಯ ಚಪಲಂ .
ವಿದ್ಧಿ ವ್ಯಾಧ್ಯಭಿಮಾನಗ್ರಸ್ತಂ
ಲೋಕಂ ಶೋಕಹತಂ ಚ ಸಮಸ್ತಂ .. 4.. 

ನಲಿನಿ ದಲ ಗತ - ಕಮಲದ ಎಲೆಯ ಮೇಲಿರುವ    ಜಲಂ - ನೀರು   ಅತಿ ತರಲಂ - ಬಹಳ ಚಂಚಲ 
ತದ್ವತ್ - ಹಾಗೆಯೇ    ಜೀವಿತಂ - ಜೀವನವು     ಅತಿಶಯ ಚಪಲಂ - ಬಹು ಚಂಚಲ  
ವಿದ್ಧಿ - ತಿಳಿದುಕೋ   ವ್ಯಾಧಿ - ರೋಗ    ಗ್ರಸ್ತಂ - ಪೀಡಿತವಾದ   
ಶೋಕಹತಂ - ದುಃಖದಿಂದ ಸೋಲಿಸಲ್ಪಟ್ಟಿದೆ   ಸಮಸ್ತಂ - ಎಲ್ಲಾ

 ಕಮಲದ ಎಲೆಯ ಮೇಲಿನ ನೀರಿನಂತೆ ಜೀವನವು ಅತಿ ಅನಿಶ್ಚಿತ. ಈ ಲೋಕವೆಲ್ಲ  ವ್ಯಾಧಿ, ಶೋಕಗಳಿಂದ ತುಂಬಿದೆ ಎನ್ನುವದನ್ನು ತಿಳಿದುಕೋ. 


 ಯಾವದ್ವಿತ್ತೋಪಾರ್ಜನಸಕ್ತ-
ಸ್ತಾವನ್ನಿಜಪರಿವಾರೋ ರಕ್ತಃ .
ಪಶ್ಚಾಜ್ಜೀವತಿ ಜರ್ಜರದೇಹೇ
ವಾರ್ತಾಂ ಕೋಽಪಿ ನ ಪೃಚ್ಛತಿ ಗೇಹೇ .. 5.. 
ಯಾವತ್ -  ಎಲ್ಲಿಯ ತನಕ      ವಿತ್ತ ಉಪಾರ್ಜನ ಸಕ್ತ - ಧನವನ್ನು ಗಳಿಸಲು ಶಕ್ಯನೋ 
ತಾವತ್ - ಅಲ್ಲಿಯ ತನಕ  ನಿಜ ಪರಿವಾರ - ಪರಿವಾರವು    ರಕ್ತ: - ಜೊತೆಯಲ್ಲಿರುತ್ತದೆ 
ಪಶ್ಷಾತ್ - ನಂತರ  
ಕ: ಅಪಿ - ಯಾರೂ ಸಹ    ನ ಪೃಚ್ಛತಿ - ಕೇಳುವದಿಲ್ಲ   ಗೇಹೆ - ಮನೆಯಲ್ಲಿ

ದುಡ್ಡನ್ನು ಸಂಪಾದಿಸಲು  ಶಕ್ತಿ ಇದ್ದಾಗ, ಮನುಷ್ಯನಿಗೆ ಬಂಧು ಬಳಗ ಇರುತ್ತಾರೆ. ನಂತರ ದೇಹ ಜರ್ಜರವಾದಾಗ ಮನೆಯಲ್ಲೂ ಯಾರೂ ಅವನನ್ನು ಮಾತಾಡಿಸುವರಿರುವದಿಲ್ಲ. 


ಯಾವತ್ಪವನೋ ನಿವಸತಿ ದೇಹೇ
ತಾವತ್ಪೃಚ್ಛತಿ ಕುಶಲಂ ಗೇಹೇ .
ಗತವತಿ ವಾಯೌ ದೇಹಾಪಾಯೇ
ಭಾರ್ಯಾ ಬಿಭ್ಯತಿ ತಸ್ಮಿನ್ಕಾಯೇ .. 6.. 
ಯಾವತ್ ಪವನೋ ನಿವಸತಿ - ಎಲ್ಲಿಯ ತನಕ ಗಾಳಿ (ಉಸಿರು) ಇರುತ್ತದೆಯೋ   ದೇಹೆ - ದೇಹದಲ್ಲಿ 
ತಾವತ್ ಪ್ರಚ್ಛತಿ ಕುಶಲಂ - ಅಲ್ಲಿಯ ತನಕ ಕೌಶಲ್ಯವನ್ನು ವಿಚಾರಿಸುತ್ತಾರೆ   ಗೇಹೆ - ಮನೆಯಲ್ಲಿ
ಗತವತಿ ವಾಯೌ - ಉಸಿರು ಹೋದಾಗ  
ಭಾರ್ಯಾ - ಹೆಂಡತಿ    ಬಿಭ್ಯತಿ - ಭಯ ಪಡುತ್ತಾಳೆ   ತಸ್ಮಿನ್ ಕಾಯೇ - ಆ ಶರೀರದಿಂದ
ದೇಹದಲ್ಲಿ ಉಸಿರಿರುವತನಕ ಎಲ್ಲರು ಕ್ಷೇಮಸಮಾಚಾರ ಕೇಳುತ್ತಾರೆ. ದೇಹದಿಂದ ಉಸಿರು ಹೊರಟು ಹೋದ ನಂತರ ಹೆಂಡತಿಯು ಸಹ ಆ ದೇಹವನ್ನು ನೋಡಿ ಭಯಪಡುತ್ತಾಳೆ. 
ಬಾಲಸ್ತಾವತ್ಕ್ರೀಡಾಸಕ್ತಃ
ತರುಣಸ್ತಾವತ್ತರುಣೀಸಕ್ತಃ .
ವೃದ್ಧಸ್ತಾವಚ್ಚಿಂತಾಸಕ್ತಃ
ಪರಮೇ ಬ್ರಹ್ಮಣಿ ಕೋಽಪಿ ನ ಸಕ್ತಃ .. 7..
ಬಾಲಃ - ಬಾಲಕನು  ತಾವತ್ - ಅಲ್ಲಿಯ ತನಕ   ಕ್ರೀಡಾ ಸಕ್ತಃ - ಆಟದಲ್ಲಿ ಆಸಕ್ತನು 
ತರುಣ: ತಾವತ್ ತರುಣೀ ಸಕ್ತಃ - ತರುಣನು ತರುಣಿಯಲ್ಲಿ ಆಸಕ್ತನು 
ವೃದ್ಧ: ತಾವತ್ ಚಿಂತಾ ಸಕ್ತಃ - ವೃದ್ಧನು ಚಿಂತೆಯಲ್ಲಿ ಆಸಕ್ತನು
ಪರಮೇ - ಪರಮಾತ್ಮ  ಬ್ರಹ್ಮಣಿ - ಬ್ರಹ್ಮನಲ್ಲಿ  ಕಃ ಅಪಿ - ಯಾರೂ ಕೂಡ   ನ ಸಕ್ತಃ - ಆಸಕ್ತರಲ್ಲ
ಬಾಲಕರಿಗೆ ಆಟ-ಓಟಗಳಲ್ಲಿ ಆಸಕ್ತಿಯಿರುತ್ತದೆ. ತರುಣರಿಗೆ ತರುಣಿಯರಲ್ಲಿ ಆಸಕ್ತಿಯಿರುತ್ತದೆ. ವೃದ್ಧರು ಚಿಂತೆಮಾಡುವದರಲ್ಲಿ ಮಗ್ನರಾಗಿರುತ್ತಾರೆ. ಪರಬ್ರಹ್ಮನಲ್ಲಿ ಯಾರಿಗೂ ಆಸಕ್ತಿಯಿರುವದಿಲ್ಲ. 

ಕಾ ತೇ ಕಾಂತಾ ಕಸ್ತೇ ಪುತ್ರಃ
ಸಂಸಾರೋಽಯಮತೀವ ವಿಚಿತ್ರಃ .
ಕಸ್ಯ ತ್ವಂ ಕಃ ಕುತ ಆಯಾತ-
ಸ್ತತ್ತ್ವಂ ಚಿಂತಯ ತದಿಹ ಭ್ರಾತಃ .. 8.. 

ಕಾ - ಯಾರು ತೇ - ನಿನ್ನ   ಕಾಂತಾ - ಪತ್ನಿ   ಕಃ  - ಯಾರು ತೇ - ನಿನ್ನ 
ಸಂಸಾರಃ ಅಯಂ - ಈ ಸಂಸಾರ   ಅತೀವ ವಿಚಿತ್ರ - ಬಹಳ ವಿಚಿತ್ರ 
ಕಸ್ಯ - ಯಾರ   ತ್ವಂ - ನೀನು   ಕುತ - ಎಲ್ಲಿಂದ ಆಯಾತ - ಬಂದೆ
ತತ್ವಂ - ನೈಜ ತತ್ವವನ್ನು   ಚಿಂತಯ - ಚಿಂತಿಸು ತತ್ ಇಹ - ಇಲ್ಲಿ   ಭ್ರಾತಃ - ಸಹೋದರ
ನಿನ್ನ ಹೆಂಡತಿ ಯಾರು? ನಿನ್ನ ಮಗ ಯಾರು? ಈ ಸಂಸಾರ ಅತೀವ ವಿಚಿತ್ರವಾಗಿದೆ. ನೀನು ಯಾರವನು? ನೀನು ಯಾರು? ಎಲ್ಲಿಂದ ಬಂದಿರುವೆ? ಈ ನಿಜವನ್ನು ಯೋಚನೆ ಮಾಡು, ಸಹೋದರ.

ಸತ್ಸಂಗತ್ವೇ ನಿಸ್ಸಂಗತ್ವಂ
ನಿಸ್ಸಂಗತ್ವೇ ನಿರ್ಮೋಹತ್ವಂ .
ನಿರ್ಮೋಹತ್ವೇ ನಿಶ್ಚಲತತ್ತ್ವಂ
ನಿಶ್ಚಲತತ್ತ್ವೇ ಜೀವನ್ಮುಕ್ತಿಃ .. 9..

ಸಜ್ಜನರ ಸಂಗದಿಂದ ನಿಸ್ಸಂಗತ್ವ - ನಿರಾಸಕ್ತಿ ಪ್ರಾಪ್ತಿಯಾಗುತ್ತದೆ. ನಿಸ್ಸಂಗತ್ವದಿಂದ ನಿರ್ಮೋಹ ಸಿಗುತ್ತದೆ. ನಿರ್ಮೋಹದಿಂದ ನೈಜ ಸತ್ಯ ದೊರೆಯುತ್ತದೆ. ನೈಜ ಸತ್ಯದಿಂದ ಜೀವನ ಮುಕ್ತಿ ಸಿಗುತ್ತದೆ. 
ವಯಸಿ ಗತೇ ಕಃ ಕಾಮವಿಕಾರಃ
ಶುಷ್ಕೇ ನೀರೇ ಕಃ ಕಾಸಾರಃ .
ಕ್ಷೀಣೇ ವಿತ್ತೇ ಕಃ ಪರಿವಾರಃ
ಜ್ಞಾತೇ ತತ್ತ್ವೇ ಕಃ ಸಂಸಾರಃ .. 10..
ವಯಸ್ಸು ಹೋದ ಮೇಲೆ ಕಾಮವಿಕಾರವೆಲ್ಲಿ? ನೀರು ಆರಿದ ಮೇಲೆ ಕೆರೆ ಎಲ್ಲಿ? ದುಡ್ಡೆಲ್ಲ ಕರಗಿದ ಮೇಲೆ ಪರಿವಾರವೆಲ್ಲಿ? ತತ್ವವನ್ನು ತಿಳಿದಮೇಲೆ ಸಂಸಾರವೆಲ್ಲಿ?
ಮಾ ಕುರು ಧನಜನಯೌವನಗರ್ವಂ
ಹರತಿ ನಿಮೇಷಾತ್ಕಾಲಃ ಸರ್ವಂ .
ಮಾಯಾಮಯಮಿದಮಖಿಲಂ ಹಿತ್ವಾ  
ಬ್ರಹ್ಮಪದಂ ತ್ವಂ ಪ್ರವಿಶ ವಿದಿತ್ವಾ .. 11.. 
ಧನ, ಜನ, ಯೌವನದ ಗರ್ವ ಮಾಡಬೇಡ. ಇದೆಲ್ಲವೂ ಒಂದು ಕ್ಷಣದಲ್ಲೇ ಮಾಯವಾಗಬಹುದು. ಇದೆಲ್ಲವೂ ಮಾಯಾಮಯವಾದ ಇವೆಲ್ಲವನ್ನೂ ತ್ಯಜಿಸಿ ನೀನು ಬ್ರಹ್ಮಪದವನ್ನು ಪ್ರವೇಶಿಸು. 
ದಿನಯಾಮಿನ್ಯೌ ಸಾಯಂ ಪ್ರಾತಃ
ಶಿಶಿರವಸಂತೌ ಪುನರಾಯಾತಃ .
ಕಾಲಃ ಕ್ರೀಡತಿ ಗಚ್ಛತ್ಯಾಯು-
ಸ್ತದಪಿ ನ ಮುಂಚತ್ಯಾಶಾವಾಯುಃ .. 12
ದಿನ, ರಾತ್ರಿಗಳು, ಬೆಳಗು ಸಂಜೆಗಳು, ಶಿಶಿರ, ವಸಂತಗಳು ಮತ್ತೆ ಮತ್ತೆ ಬರುತ್ತಲೇ ಇರುತ್ತವೆ. ಕಾಲ ನಮ್ಮ ಜೊತೆ ಆಟವಾಡುತ್ತದೆ. ಆಯಸ್ಸು ಕಳೆಯುತ್ತಲೇ ಇರುತ್ತದೆ. ಆದರೂ ಆಸೆಯು ನಮ್ಮನ್ನು ಬಿಡುವದಿಲ್ಲ.
ದ್ವಾದಶಮಂಜರಿಕಾಭಿರಶೇಷಃ
ಕಥಿತೋ ವೈಯಾಕರಣಸ್ಯೈಷಃ .
ಉಪದೇಶೋಽಭೂದ್ವಿದ್ಯಾನಿಪುಣೈಃ
ಶ್ರೀಮಚ್ಛಂಕರಭಗವಚ್ಛರಣೈಃ .. 13.. 
ಹನ್ನೆರಡು ಹೂವಗಳಿರುವ ಈ ಹೂಗುಚ್ಛವು ವ್ಯಾಕರಣನಿಪುಣ, ವಿದ್ಯಾದಿನಿಪುಣರಾದ ಶ್ರೀಮತ್ ಶಂಕರರಿಂದ ಉಪದೇಶಿಸಲ್ಪಟ್ಟಿದೆ. 
ಕಾ ತೇ ಕಾಂತಾ ಧನಗತಚಿಂತಾ
ವಾತುಲ ಕಿಂ ತವ ನಾಸ್ತಿ ನಿಯಂತಾ .
ತ್ರಿಜಗತಿ ಸಜ್ಜನಸಂಗತಿರೇಕಾ
ಭವತಿ ಭವಾರ್ಣವತರಣೇ ನೌಕಾ .. 13.. 
ಯಾಕೆ ಹೆಂಡತಿ, ಧನಕನಕದ ಬಗ್ಗೆ ಚಿಂತೆ ಮಾಡುವೆ? ನಿನಗೆ ದಾರಿ ತೋರಿಸುವರಾರೂ ಇಲ್ಲವೆ? ತ್ರಿಜಗದಲ್ಲಿ ನಿನ್ನನ್ನು ಸಂಸಾರ ಸಾಗರದಿಂದ ಪಾರು ಮಾಡುವ ನೌಕೆಯೆಂದರೆ, ಸಜ್ಜನರ ಸಂಗ ಒಂದೇ. 
ಜಟಿಲೋ ಮುಂಡೀ ಲುಂಛಿತಕೇಶಃ
ಕಾಷಾಯಾಂಬರಬಹುಕೃತವೇಷಃ .
ಪಶ್ಯನ್ನಪಿ ಚ ನ ಪಶ್ಯತಿ ಮೂಢೋ
ಹ್ಯುದರನಿಮಿತ್ತಂ ಬಹುಕೃತವೇಷಃ .. 14.. 
ಕೆಲವರು ಕೂದಲನ್ನು ಜಡೆಗಟ್ಟಿಸಿಕೊಂಡರೆ, ಇನ್ನು ಕೆಲವರು ತಲೆಯ ಕೂದಲನ್ನು ಪೂರ್ತಿ ತೆಗೆಯುತ್ತಾರೆ. ಕಾವಿ ಬಟ್ಟೆ ಹಾಕಿಕೊಳ್ಳುತ್ತಾರೆ. ಚಿತ್ರ ವಿಚಿತ್ರ ವೇಷ ಮಾಡಿಕೊಳ್ಳುತ್ತಾರೆ - ಎಲ್ಲಾ ಹೊಟ್ಟೆಪಾಡಿಗಾಗಿ ಬಹುವೇಷ. ಇದನ್ನು ನೋಡಿಯೂ ಮೂಢರು ಅರ್ಥ ಮಾಡಿಕೊಳ್ಳುವದಿಲ್ಲ. 
ಅಂಗಂ ಗಲಿತಂ ಪಲಿತಂ ಮುಂಡಂ
ದಶನವಿಹೀನಂ ಜಾತಂ ತುಂಡಂ .
ವೃದ್ಧೋ ಯಾತಿ ಗೃಹೀತ್ವಾ ದಂಡಂ
ತದಪಿ ನ ಮುಂಚತ್ಯಾಶಾಪಿಂಡಂ .. 15..

ಅಂಗಗಳು ಶಕ್ತಿಹೀನವಾಗಿವೆ. ತಲೆಯ ಕೂದಲೆಲ್ಲಾ ಉದುರಿದೆ. ಹಲ್ಲುಗಳೆಲ್ಲಾ ಬಿದ್ದು ಹೋಗಿವೆ. ಇಷ್ಟಾದರೂ ಮನುಷ್ಯನು ಆಸೆಯನ್ನು ಬಿಡುತ್ತಿಲ್ಲ.

ಅಗ್ರೇ ವಹ್ನಿಃ ಪೃಷ್ಠೇ ಭಾನುಃ
ರಾತ್ರೌ ಚುಬುಕಸಮರ್ಪಿತಜಾನುಃ .
ಕರತಲಭಿಕ್ಷಸ್ತರುತಲವಾಸ-
ಸ್ತದಪಿ ನ ಮುಂಚತ್ಯಾಶಾಪಾಶಃ .. 16.. 
ಮುಂದೆ ಅಗ್ನಿ , ಹಿಂದೆ ಸೂರ್ಯ, ರಾತ್ರಿ ಕಾಲನ್ನು ಮುದುಡಿಕೊಂಡಿದ್ದಾನೆ (ಛಳಿಯಿಂದ). ಭಿಕ್ಷ ಬೇಡುವ ಕೈ, ಮರದ ಕೆಳಗೆ ವಾಸ. ಇಷ್ಟಾದರೂ ಆಸೆಯ ಪಾಶ ಬಿಡುತ್ತಿಲ್ಲ. 
ಕುರುತೇ ಗಂಗಾಸಾಗರಗಮನಂ
ವ್ರತಪರಿಪಾಲನಮಥವಾ ದಾನಂ .
ಜ್ಞಾನವಿಹೀನಃ ಸರ್ವಮತೇನ
ಮುಕ್ತಿಂ ನ ಭಜತಿ ಜನ್ಮಶತೇನ .. 17..
ಮನುಷ್ಯನು ಗಂಗಾಸಾಗರ ಹೋಗಬಹುದು. ನೂರು ವ್ರತ ಮಾಡಬಹುದು. ಬೇಕಾದಷ್ಟು ದಾನ ಮಾಡಬಹುದು. ಆದರೆ ನೈಜ ಜ್ಞಾನವಿಲ್ಲದಿದ್ದರೆ ಅವನಿಗೆ ನೂರು ಜನ್ಮಗಳಲ್ಲೂ ಮುಕ್ತಿ ದೊರಕುವದಿಲ್ಲ. 
ಭಗವದ್ಗೀತಾ ಕಿಂಚಿದಧೀತಾ
ಗಂಗಾಜಲಲವಕಣಿಕಾ ಪೀತಾ .
ಸಕೃದಪಿ ಯೇನ ಮುರಾರಿಸಮರ್ಚಾ
ಕ್ರಿಯತೇ ತಸ್ಯ ಯಮೇನ ನ ಚರ್ಚಾ .. 20..
 ಯಾರು ಸ್ವಲ್ಪ ಮಾತ್ರ ಭಗವದ್ಗೀತೆಯನ್ನು ಓದಿ, ಒಂದು ಹನಿ ಗಂಗಾಜಲ ಕುಡಿದು, ಒಂದು ಸಾರಿ ಮುರಾರಿಯ ನಾಮಸ್ಮರಣೆ ಮಾಡುತ್ತಾರೋ, ಅವರ ಕಡೆ ಯಮ ತಿರುಗಿ ಕೂಡ ನೋಡುವದಿಲ್ಲ. 
ಪುನರಪಿ ಜನನಂ ಪುನರಪಿ ಮರಣಂ
ಪುನರಪಿ ಜನನೀಜಠರೇ ಶಯನಂ .
ಇಹ ಸಂಸಾರೇ ಬಹುದುಸ್ತಾರೇ
ಕೃಪಯಾಽಪಾರೇ ಪಾಹಿ ಮುರಾರೇ .. 21.. 
ಮತ್ತೆ ಜನನ, ಮತ್ತೆ ಮರಣ, ಮತ್ತೆ ತಾಯಿಯ ಹೊಟ್ಟೆಯಲ್ಲಿ ಶಯನ. ಈ ಸಂಸಾರ ಸಾಗರ ದಾಟುವದು ಬಹಳ ಕಷ್ಟ. ಮುರಾರೀ, ನನ್ನನ್ನು ಇದರಿಂದ ಪಾರು ಮಾಡು. 

ರಥ್ಯಾಚರ್ಪಟವಿರಚಿತಕಂಥಃ
ಪುಣ್ಯಾಪುಣ್ಯವಿವರ್ಜಿತಪಂಥಃ .
ಯೋಗೀ ಯೋಗನಿಯೋಜಿತಚಿತ್ತೋ
ರಮತೇ ಬಾಲೋನ್ಮತ್ತವದೇವ .. 22..

ರಸ್ತೆಯಲ್ಲಿ ಬಿದ್ದಿರುವ ಹರಿದ ಬಟ್ಟೆ  ಧರಿಸಿ, ಪುಣ್ಯ ಪಾಪಗಳನ್ನು ತ್ಯಜಿಸಿ, ದೈವಯೋಗದಲ್ಲೇ ಚಿತ್ತವನ್ನು ಲೀನ ಮಾಡಿದವನು ಉನ್ಮತ್ತನಾದ ಮಗುವಿನಂತೆ ಸಂತೋಷದಲ್ಲಿರುತ್ತಾನೆ.
ಕಸ್ತ್ವಂ ಕೋಽಹಂ ಕುತ ಆಯಾತಃ
ಕಾ ಮೇ ಜನನೀ ಕೋ ಮೇ ತಾತಃ .
ಇತಿ ಪರಿಭಾವಯ ಸರ್ವಮಸಾರಂ
ವಿಶ್ವಂ ತ್ಯಕ್ತ್ವಾ ಸ್ವಪ್ನವಿಚಾರಂ .. 23.. 
ಎಲ್ಲವೂ ಅರ್ಥಹೀನ ಎಂದು ಅರಿತು, ಸ್ವಪ್ನವಾಗಿರುವ ಈ ಜಗತ್ತನ್ನು ತ್ಯಜಿಸಿ "ನೀನು ಯಾರು, ನಾನು ಯಾರು? ಎಲ್ಲಿಂದ ಬಂದೆ? ನನ್ನ ಜನನಿ ಯಾರು? ತಂದೆ ಯಾರು" ಎಂಬುದನ್ನು ವಿಚಾರ ಮಾಡು. 
ತ್ವಯಿ ಮಯಿ ಚಾನ್ಯತ್ರೈಕೋ ವಿಷ್ಣು-
ರ್ವ್ಯರ್ಥಂ ಕುಪ್ಯಸಿ ಮಯ್ಯಸಹಿಷ್ಣುಃ .
ಭವ ಸಮಚಿತ್ತಃ ಸರ್ವತ್ರ ತ್ವಂ
ವಾಂಛಸ್ಯಚಿರಾದ್ಯದಿ ವಿಷ್ಣುತ್ವಂ .. 24..
ನಿನ್ನಲ್ಲಿ, ನನ್ನಲ್ಲಿ ಎಲ್ಲರಲ್ಲೂ ಇರುವವನು ಒಬ್ಬನೇ ವಿಷ್ಣು. ಸುಮ್ಮನೇ ಕೋಪ, ಅಸಹನೆ ಯಾಕೆ? ನಿನಗೆ ಅಚಿರ ವಿಷ್ಣುತ್ವ ಬೇಕೆಂದರೆ ಎಲ್ಲ ಕಡೆ ಸಮಭಾವದಿಂದಿರು.
ಶತ್ರೌ ಮಿತ್ರೇ ಪುತ್ರೇ ಬಂಧೌ
ಮಾ ಕುರು ಯತ್ನಂ ವಿಗ್ರಹಸಂಧೌ .
ಸರ್ವಸ್ಮಿನ್ನಪಿ ಪಶ್ಯಾತ್ಮಾನಂ
ಸರ್ವತ್ರೋತ್ಸೃಜ ಭೇದಾಜ್ಞಾನಂ .. 25.. 
ಶತ್ರುಗಳು ಮಿತ್ರರು, ಬಂಧುಗಳು, ಮಕ್ಕಳು ಎಂದು ಭೇದ ಅಥವಾ ಸಂಧಿ ಮಾಡಲು ನೋಡಬೇಡ. ಎಲ್ಲರಲ್ಲೂ ನಿನ್ನನ್ನೇ ನೋಡು. ಎಲ್ಲಾ ಕಡೆ ಭೇದಜ್ಞಾನವನ್ನು ತ್ಯಜಿಸು. 

ಕಾಮಂ ಕ್ರೋಧಂ ಲೋಭಂ ಮೋಹಂ
ತ್ಯಕ್ತ್ವಾಽಽತ್ಮಾನಂ ಭಾವಯ ಕೋಽಹಂ .  
ಆತ್ಮಜ್ಞಾನವಿಹೀನಾ ಮೂಢಾ-
ಸ್ತೇ ಪಚ್ಯಂತೇ ನರಕನಿಗೂಢಾಃ .. 26..

 ಕಾಮ, ಕ್ರೋಧ, ಲೋಭ, ಮೋಹಗಳನ್ನು ತ್ಯಜಿಸಿ ಆತ್ಮವನ್ನು ಅರಿಯಲು ಪ್ರಯತ್ನಿಸು - ನಾನು ಯಾರು ಎಂದು ಚಿಂತೆ ಮಾಡು. ಆತ್ಮಜ್ಞಾನವಿಲ್ಲದ ಮೂಢರು ನರಕದಲ್ಲಿ ನರಳುತ್ತಾರೆ.
 ಗೇಯಂ ಗೀತಾನಾಮಸಹಸ್ರಂ
ಧ್ಯೇಯಂ ಶ್ರೀಪತಿರೂಪಮಜಸ್ರಂ .
ನೇಯಂ ಸಜ್ಜನಸಂಗೇ ಚಿತ್ತಂ
ದೇಯಂ ದೀನಜನಾಯ ಚ ವಿತ್ತಂ .. 27.. 
ಗೀತಾನಾಮವನ್ನು ಸಹಸ್ರ ಬಾರಿ ಹಾಡು. ವಿಷ್ಣುವಿನ ರೂಪವನ್ನು ಯಾವಾಗಲೂ ಧ್ಯಾನಿಸು. ಸಜ್ಜನರ ಸಂಗವನ್ನು ಮಾಡು. ದೀನ ದುರ್ಬಲರಿಗೆ ಧನಸಹಾಯ ಮಾಡು. 

ಸುಖತಃ ಕ್ರಿಯತೇ ರಾಮಾಭೋಗಃ
ಪಶ್ಚಾದ್ಧಂತ ಶರೀರೇ ರೋಗಃ .
ಯದ್ಯಪಿ ಲೋಕೇ ಮರಣಂ ಶರಣಂ
ತದಪಿ ನ ಮುಂಚತಿ ಪಾಪಾಚರಣಂ .. 28..

ಸಂತೋಷಕ್ಕಾಗಿ ವಿಷಯಸುಖಗಳಲ್ಲಿ ಮುಳಗಿದರೆ, ನಂತರ ಶರೀರ ರೋಗಗ್ರಸ್ತವಾಗುತ್ತದೆ. ಲೋಕದಲ್ಲಿ ಮರಣವೆ  ಶರಣು ಎಂಬುದು ತಿಳಿದಿದ್ದರೂ ಪಾಪಾಚರಣೆಯನ್ನು ಬಿಡುವದಿಲ್ಲ. 

ಅರ್ಥಮನರ್ಥಂ ಭಾವಯ ನಿತ್ಯಂ
ನಾಸ್ತಿತತಃ ಸುಖಲೇಶಃ ಸತ್ಯಂ .
ಪುತ್ರಾದಪಿ ಧನಭಾಜಾಂ ಭೀತಿಃ
ಸರ್ವತ್ರೈಷಾ ವಿಹಿತಾ ರೀತಿಃ .. 29..

 ಧನವೇ ಯಾವಾಗಲೂ ಅನರ್ಥಕ್ಕೆ ಕಾರಣ. ಅದರಿಂದ ಸ್ವಲ್ಪವೂ ಸುಖವಿಲ್ಲ ಎಂಬುದು ಸತ್ಯ. ಧನ ಇದ್ದವನಿಗೆ ಸ್ವಂತ ಮಗನ ಕಂಡರೂ ಭಯ. ಇದು ಎಲ್ಲ ಕಡೆ ನಡೆಯತ್ತಿರುವ ರೀತಿ.

ಪ್ರಾಣಾಯಾಮಂ ಪ್ರತ್ಯಾಹಾರಂ
ನಿತ್ಯಾನಿತ್ಯ ವಿವೇಕವಿಚಾರಂ .
ಜಾಪ್ಯಸಮೇತಸಮಾಧಿವಿಧಾನಂ
ಕುರ್ವವಧಾನಂ ಮಹದವಧಾನಂ .. 30..

ಪ್ರಾಣಾಯಾಮ, ಪ್ರತ್ಯಾಹಾರ (ಬಾಹ್ಯ ವಸ್ತುಗಳಿಂದ ಮನಸ್ಸನ್ನ್ನು ದೂರ ಇಡುವದು) , ನಿತ್ಯ ಅನಿತ್ಯಗಳ ವಿವೇಚನೆ ಮಾಡುವದು, ಧ್ಯಾನ , ಜಪ ಇತ್ಯಾದಿಗಳನ್ನು ಮಾಡುವದು. ಇವನ್ನು ಬಹಳ ನಿಷ್ಠೆಯಿಂದ, ಕಾಳಜಿಯಿಂದ ಮಾಡು. 
ಗುರುಚರಣಾಂಬುಜನಿರ್ಭರಭಕ್ತಃ
ಸಂಸಾರಾದಚಿರಾದ್ಭವ ಮುಕ್ತಃ .
ಸೇಂದ್ರಿಯಮಾನಸನಿಯಮಾದೇವಂ
ದ್ರಕ್ಷ್ಯಸಿ ನಿಜಹೃದಯಸ್ಥಂ ದೇವಂ .. 31..
ಗುರುಚರಣಾಂಬಜ ಸೇವೆಯನ್ನು ಮಾಡಿ, ಸಂಸಾರ ಸಾಗರದಿಂದ ಮುಕ್ತನಾಗೆ. ಇಂದ್ರಿಯ, ಮನಸ್ಸುಗಳನ್ನು ನಿಯಂತ್ರಣ ಮಾಡಿ, ಹೃದಯಸ್ಥನಾದ ದೇವರನ್ನು ನೀನು ನೋಡುವೆ.

Comments

Popular posts from this blog

ಶಿವಾನಂದಲಹರಿ

ತತ್ತ್ವಬೋಧ

ಭಗವದ್ಗೀತಾ ಆರತಿ