ಕಠೋಪನಿಷತ್ - ಪ್ರಥಮಾಧ್ಯಾಯ ಪ್ರಥಮಾ ವಲ್ಲೀ

 ಕಠೋಪನಿಷತ್ ಪ್ರಮುಖ ಉಪನಿಷತ್ತುಗಳಲ್ಲಿ ಒಂದು.  ಈ ಉಪನಿಷತ್ತು ಆತ್ಮ, ಬ್ರಹ್ಮ ಮತ್ತು ಮುಕ್ತಿಯ ಕುರಿತಾಗಿ ನಚಿಕೇತ ಎಂಬ ಬಾಲಕ ಮತ್ತು ಯಮನ ಮಧ್ಯ  ನಡೆಯುವ ಸಂಭಾಷಣೆಯ ರೂಪದಲ್ಲಿದೆ. 

ಭಾರತಿಯ ತತ್ವಜ್ಞಾನದ ಕೃತಿಗಳ ಪೈಕಿ ಪ್ರಸಿದ್ಧವಾಗಿರುವ ಈ ಕೃತಿಯನ್ನು ಬಹಳಷ್ಟು ಜನ ಪಾಶ್ಚಾತ್ಯ ವಿದ್ವಾಂಸರೂ ಕೂಡ ಅಧ್ಯಯಸಿದ್ದಾರೆ. ಕ್ರಿ.ಶ. ಹದಿನೇಳನೇ ಶತಮಾನದಲ್ಲಿ ಪರ್ಶಿಯನ್ ಭಾಷೆಗೆ ಅನುವಾದವಾದ ಈ ಕೃತಿ ನಂತರ ಲ್ಯಾಟಿನ್ ಭಾಷೆಯಲ್ಲಿ ಅನುವಾದಗೊಂಡು ಯುರೋಪಿನಲ್ಲೆಲ್ಲ ಹಬ್ಬಿಕೊಂಡಿತು. ಪ್ರಸಿದ್ಧ ಕವಿ ಎಡ್ವಿನ್ ಆರ್ನಾಲ್ಡ್ ಈ ಉಪನಿಷತ್ತನ್ನು ಕಾವ್ಯ ರೂಪದಲ್ಲಿ ಬರೆದರೆ (The secret of Death), ರಾಲ್ಫ್ ವಾಲ್ಡೋ ಎಮರ್ಸನ್ ಈ ಉಪನಿಷತ್ತಿನ ಮೇಲೆ ಇಮ್ಮೊರ್ಟಾಲಿಟಿ ಎಂಬ ಪ್ರಬಂಧವನ್ನು ಬರೆದಿದ್ದಾರೆ. 

 

ಕಠೋಪನಿಷತ್

    ಓಂ

  .. ಅಥ ಕಠೋಪನಿಷದ್ ..


ಓಂ ಸಹ ನಾವವತು . ಸಹ ನೌ ಭುನಕ್ತು . ಸಹವೀರ್ಯಂ ಕರವಾವಹೈ .
ತೇಜಸ್ವಿ ನಾವಧೀತಮಸ್ತು . ಮಾ ವಿದ್ವಿಷಾವಹೈ ..
ಓಂ ಶಾಂತಿಃ ಶಾಂತಿಃ ಶಾಂತಿಃ ..
 
 
ಓಂ , ಜೊತೆಯಲ್ಲಿ ನಾವು ಹೋಗೋಣ. ಜೊತೆಯಲ್ಲಿ ನಾವು ಆನಂದಿಸೋಣ. ಜೊತೆಯಲ್ಲಿ ರಭಸದಿಂದ ವಿದ್ಯಾಭ್ಯಾಸವನ್ನು ಮಾಡೋಣ. 
ನಮ್ಮ ವಿದ್ಯೆ ತೇಜೋಮಯವಾಗಲಿ. ದ್ವೇಷಕ್ಕೆ ಕಾರಣವಾಗದಿರಲಿ. ಓಂ ಶಾಂತಿಃ ಶಾಂತಿಃ ಶಾಂತಿಃ ..

            Part I

          Canto I

ಓಂ ಉಶನ್ ಹ ವೈ ವಾಜಶ್ರವಸಃ ಸರ್ವವೇದಸಂ ದದೌ .
ತಸ್ಯ ಹ ನಚಿಕೇತಾ ನಾಮ ಪುತ್ರ ಆಸ .. 1..

ವಾಜಶ್ರವಸನು (ಸ್ವರ್ಗಪ್ರಾಪ್ತಿಯ) ಆಸೆಯಿಂದ ವಿಶ್ವಜೀತ್ ಯಾಗ ಮಾಡಿ ತನ್ನದೆಲ್ಲವನ್ನೂ ದಾನ ಮಾಡಿದನು. ಅವನಿಗೆ ನಚಿಕೇತ ಎಂಬ ಮಗನಿದ್ದನು.

ತಂ ಹ ಕುಮಾರಂ ಸಂತಂ ದಕ್ಷಿಣಾಸು
ನೀಯಮಾನಾಸು ಶ್ರದ್ಧಾವಿವೇಶ ಸೋಽಮನ್ಯತ .. 2..

ತನ್ನ ತಂದೆಯು ದಾನವನ್ನು  ಕೊಡುವದನ್ನು ನೋಡುತ್ತಾ ಆ ಕುಮಾರನಲ್ಲಿ ಶ್ರದ್ದೆಯು  ಜಾಗ್ರತವಾಗಿ ಅವನು ಯೋಚಿಸಿದನು.

ಪೀತೋದಕಾ ಜಗ್ಧತೃಣಾ ದುಗ್ಧದೋಹಾ ನಿರಿಂದ್ರಿಯಾಃ .
ಅನಂದಾ ನಾಮ ತೇ ಲೋಕಾಸ್ತಾನ್ ಸ ಗಚ್ಛತಿ ತಾ ದದತ್ .. 3..

(ನಚಿಕೇತನು ಯೋಚಿಸುತ್ತಾನೆ ) ಯಾರು ನೀರು ಕುಡಿಯಲಾಗದ , ಹುಲ್ಲು ತಿನ್ನಲಾಗದ, ಹಾಲು ಕೊಡಲು ಆಗದ, ಕರುವನ್ನು ಹಾಕಲಾರದ ಬಡಕಲು ಹಸುಗಳನ್ನು ದಾನವಾಗಿ ಕೊಡುತ್ತಾನೋ, ಅವನು ಸಂತೋಷವಿಲ್ಲದ ಲೋಕಕ್ಕೆ ಹೋಗುತ್ತಾನೆ. 

ತನ್ನ ತಂದೆ ದಾನ ಕೊಡುವಾಗ ಒಳ್ಳೆಯ ಹಸುಗಳನ್ನು  ಕೊಡದೆ, ಕಳಪೆ ಹಸುಗಳನ್ನು ಕೊಡುತ್ತಿದ್ದಾನೆ. ಅದರಿಂದ ಅವನಿಗೆ ಪುಣ್ಯ ಲಭಿಸುವದಿಲ್ಲ ಎಂದು ಅವನು ಚಿಂತೆ ಮಾಡುತ್ತಾನೆ.

ಸ ಹೋವಾಚ ಪಿತರಂ ತತ ಕಸ್ಮೈ ಮಾಂ ದಾಸ್ಯಸೀತಿ .
ದ್ವಿತೀಯಂ ತೃತೀಯಂ ತಂ  ಹೋವಾಚ ಮೃತ್ಯವೇ ತ್ವಾ ದದಾಮೀತಿ .. 4..

ಆಗ ಅವನು ತಂದೆಯನ್ನು ಕೇಳಿದನು - "ನನ್ನನ್ನು ಯಾರಿಗೆ ದಾನ ಕೊಡುತ್ತೀಯಾ". ತಂದೆ ಉತ್ತರ ಕೊಡದೆ ಇದ್ದಾಗ ಅವನು ಮತ್ತೆ ಮತ್ತೆ ಅದೇ ಪ್ರಶ್ನೆಯನ್ನು ಕೇಳಿದನು. ಮೂರನೇ ಸಲ ಕೇಳಿದಾಗ ಕೋಪದಿಂದ ತಂದೆ ವಾಜಶ್ರವಸನು  ಹೇಳಿದನು "ನಿನ್ನನ್ನು ಮೃತ್ಯುವಿಗೆ ಕೊಡುತ್ತೇನೆ ". 

ತಂದೆಯ ತಪ್ಪನ್ನು ಸರಿಪಡಿಸಲು ನಚಿಕೇತ  ಪ್ರಯತ್ನ ಮಾಡುತ್ತಿದ್ದಾನೆ. ಆದರೆ ಅದರ ಪರಿಣಾಮ ವ್ಯತಿರಿಕ್ತವಾಗುತ್ತಿದೆ. ತಂದೆಯು ತನ್ನೆಲ್ಲ ವಸ್ತುಗಳನ್ನು ದಾನ ಮಾಡುತ್ತಿಲ್ಲ. ಎಲ್ಲಕ್ಕಿಂದ ಬಹುಮೂಲ್ಯವಾದ ಆಸ್ತಿಯಾದ ಮಗನನ್ನು ದಾನ ಮಾಡುತ್ತಿಲ್ಲ ಎಂಬುದು ನಚಿಕೇತನ ಯೋಚನೆ. ಅದಕ್ಕಾಗಿ ಪದೇ ಪದೇ ತನ್ನನ್ನು ಯಾರಿಗೆ ದಾನವಾಗಿ ಕೊಡುತ್ತೀಯಾ ಎಂದು ಕೇಳಿದಾಗ ಅಸಹನೆಯಿಂದ ವಾಜಶ್ರವಸನು ನಿನ್ನನ್ನು ಮೃತ್ಯುವಿಗೆ ಕೊಡುತ್ತೇನೆ ಎನ್ನುತ್ತಾನೆ.

ಬಹೂನಾಮೇಮಿ ಪ್ರಥಮೋ  ಬಹೂನಾಮೇಮಿ ಮಧ್ಯಮಃ .
ಕಿಂ ಸ್ವಿದ್ಯಮಸ್ಯ ಕರ್ತವ್ಯಂ ಯನ್ಮಯಾಽದ್ಯ ಕರಿಷ್ಯತಿ .. 5..

ನಚಿಕೇತನು ಯೋಚಿಸುತ್ತಾನೆ "(ತನ್ನ ತಂದೆಯ) ಬಹಳ ವಿದ್ಯಾರ್ಥಿಗಳಲ್ಲಿ  ನಾನು ಪ್ರಥಮನು. ಇನ್ನು ಕೆಲವು ವಿದ್ಯಾರ್ಥಿಗಳಲ್ಲಿ ನಾನು ಮಧ್ಯಮನು. ಯಾವಾಗಲೂ ಕೊನೆಯವನಲ್ಲ. ನನ್ನನ್ನು ದಾನ ಮಾಡಿ ಏನನ್ನು ಸಾಧಿಸಬಹುದು?"

ನಚಿಕೇತನಿಗೆ ತನ್ನ ತಂದೆಯು ಕೋಪದಲ್ಲಿ ಈ ಮಾತನ್ನು ಹೇಳಿರುವದು ಗೊತ್ತಾಗಿದೆ. ಆದರೂ ತಂದೆಯು ಮಾತನ್ನು ಉಳಿಸಿಕೊಳ್ಳಬೇಕು.

ಅನುಪಶ್ಯ ಯಥಾ ಪೂರ್ವೇ ಪ್ರತಿಪಶ್ಯ ತಥಾಽಪರೇ .
ಸಸ್ಯಮಿವ ಮರ್ತ್ಯಃ ಪಚ್ಯತೇ ಸಸ್ಯಮಿವಾಜಾಯತೇ ಪುನಃ .. 6..

ಪೂರ್ವದಲ್ಲಿ ಬದುಕಿಹೋದವರನ್ನು ನೋಡು. ಈಗ ಬದುಕುತ್ತಿರುವವರನ್ನು ನೋಡು. ಜನರು ಸಸ್ಯದಂತೆ ಸಾವನ್ನಪ್ಪುತ್ತಾರೆ. ಸಸ್ಯದಂತೆ ಪುನಃ ಹುಟ್ಟುತ್ತಾರೆ.

ತನ್ನ ತಂದೆಯು ಕೋಪದಿಂದ ಆಡಿದ ಮಾತನ್ನು ಉಳಿಸಿಕೊಂಡು ತನ್ನನ್ನು ಯಮನಲ್ಲಿ ಕಳಿಸಬೇಕು ಎಂದು ತನ್ನ ತಂದೆಗೆ ಮನನ ಮಾಡಲು ಹೇಳುತ್ತಾನೆ - "ಈ ಲೋಕದಲ್ಲಿ ಯಾರು ತಾನೇ ಶಾಶ್ವತ? ಎಲ್ಲರು ಪುನಃ ಹುಟ್ಟುತ್ತಾರೆ, ಪುನಃ ಸಾಯುತ್ತಾರೆ. ಅದಕ್ಕಾಗೇ ತನ್ನನ್ನು ಮೃತ್ಯುವಿನ ಕಡೆಗೆ ಕಳುಹಿಸಲು ಯಾಕೆ ತಾನೇ ಚಿಂತೆ ಮಾಡಬೇಕು" ಎಂದು ವಾಜಶ್ರವಸನಿಗೆ ಹೇಳುತ್ತಾನೆ.

ವೈಶ್ವಾನರಃ ಪ್ರವಿಶತ್ಯತಿಥಿರ್ಬ್ರಾಹ್ಮಣೋ ಗೃಹಾನ್ .
ತಸ್ಯೈತಾಂ  ಶಾಂತಿಂ ಕುರ್ವಂತಿ ಹರ ವೈವಸ್ವತೋದಕಂ .. 7..

"ಅಗ್ನಿಯಂತೆ ಬ್ರಾಹ್ಮಣ ಅತಿಥಿಯು ಮನೆಯನ್ನು ಪ್ರವೇಶಿಸುತ್ತಾನೆ. ಅವನನ್ನು ಶಾಂತಿಗೊಳಿಸಬೇಕು. ವೈವಸ್ವತನೇ, ಅವನಿಗಾಗಿ ನೀರನ್ನು ತಾ. "

ವಾಜಶ್ರವಸನು ಮಗನನ್ನು ಯಮನ ಮನೆಗೆ ಕಳಿಸಿಕೊಡುತ್ತಾನೆ. ಅಲ್ಲಿ ತಲುಪಿದ ನಚಿಕೇತನು, ಮನೆಯಲ್ಲಿ ಯಮನಿರದ ಕಾರಣ, ಮೂರು ಹಗಲು ಮೂರು ರಾತ್ರಿ ಯಮನಿಗಾಗಿ ಕಾಯುತ್ತಾನೆ. ಯಮ ವಾಪಾಸ್ ಬಂದಾಗ ಅವನ ಸೇವಕರು ಬ್ರಾಹ್ಮಣ ಅವನಿಗಾಗಿ ಕಾಯುತ್ತಿರುವ ವಿಷಯವನ್ನು ಹೇಳುತ್ತಾರೆ. ಆಗ ಅವನು ತನ್ನ ಸೇವಕನಲ್ಲಿ ನಚಿಕೇತನ ಪಾದ ತೊಳೆದು ಸತ್ಕಾರ ಮಾಡಲು ನೀರು ತಾರೆಂದು ಹೇಳುತ್ತಾನೆ,

ಆಶಾಪ್ರತೀಕ್ಷೇ ಸಂಗತಂ ಸೂನೃತಾಂ
    ಚೇಷ್ಟಾಪೂರ್ತೇ ಪುತ್ರಪಶುಂಶ್ಚ ಸರ್ವಾನ್ .
ಏತದ್ವೃಂಕ್ತೇ ಪುರುಷಸ್ಯಾಲ್ಪಮೇಧಸೋ
    ಯಸ್ಯಾನಶ್ನನ್ವಸತಿ ಬ್ರಾಹ್ಮಣೋ ಗೃಹೇ .. 8..

ಯಾವ ಮೂರ್ಖನ ಮನೆಯಲ್ಲಿ ಬ್ರಾಹ್ಮಣ ಅತಿಥಿಯು ಆಹಾರವಿಲ್ಲದೆ ಹಸಿದಿರುತ್ತಾನೋ, ಅವನ ಆಶೆ, ಪ್ರತೀಕ್ಷೆಗಳು, ಅವನು ಮಾತು, ಕೃತಿಗಳಿಂದ ಗಳಿಸಿದ್ದ ಪುಣ್ಯಗಳು, ಅವನ ಪುತ್ರರು, ಪಶುಗಳು ಎಲ್ಲವೂ  ನಾಶವಾಗಿಹೋಗುತ್ತವೆ. 

ವೇದಗಳ ಪ್ರಕಾರ ಮನೆಗೆ ಬಂದ ಅತಿಥಿ ದೇವರ. ಅದರಲ್ಲೂ ಆ ಅತಿಥಿ ಬ್ರಾಹ್ಮಣ ಅಥವಾ ಸನ್ಯಾಸಿಯಾಗಿದ್ದರೆ ಅವಂತೂ ದೇವ ಸ್ವರೂಪವೇ. ಅದಕ್ಕಾಗೇ ಅಂತಹ ಅತಿಥಿಯನ್ನು ಸತ್ಕಾರ ಮಾಡದಿದ್ದಲ್ಲಿ, ಅವನಿಗೆ ಅವನು ಕುಟುಂಬಕ್ಕೆ ಘೋರ ಪಾಪ ತಗಲುತ್ತದೆ.

ತಿಸ್ರೋ ರಾತ್ರೀರ್ಯದವಾತ್ಸೀರ್ಗೃಹೇ ಮೇ-
    ಽನಶ್ನನ್ ಬ್ರಹ್ಮನ್ನತಿಥಿರ್ನಮಸ್ಯಃ .
ನಮಸ್ತೇಽಸ್ತು ಬ್ರಹ್ಮನ್ ಸ್ವಸ್ತಿ ಮೇಽಸ್ತು
    ತಸ್ಮಾತ್ಪ್ರತಿ ತ್ರೀನ್ವರಾನ್ವೃಣೀಷ್ವ .. 9..

ಬ್ರಹ್ಮನ್, ಅತಿಥಿ ದೇವತೆಯೇ, ನಾನು ನಿನಗೆ ನಮಿಸುತ್ತೇನೆ. ನೀನು ನನ್ನ ಮನೆಯಲ್ಲಿ ಮೂರೂ ರಾತ್ರಿ ಆಹಾರವಿಲ್ಲದೆ ಇದ್ದಿದ್ದಕ್ಕಾಗಿ, ಮೂರೂ ವರಗಳನ್ನು ಕೇಳು. ಓ ಬ್ರಹ್ಮನ್. 

ಮೂರೂ ದಿನ, ರಾತ್ರಿ ಅತಿಥಿಯನ್ನು ಹಸಿದು ತನ್ನ ಮನೆಯಲ್ಲಿ ಉಳಿಸಿಕೊಂಡ ಪಾಪವನ್ನು ಹೋಗಲಾಡಿಸಲು ಯಮನು, ಮೂರು ವರವನ್ನು ನಚಿಕೇತನಿಗೆ ಕೊಡುತ್ತಾನೆ.

ಶಾಂತಸಂಕಲ್ಪಃ ಸುಮನಾ ಯಥಾ ಸ್ಯಾದ್
    ವೀತಮನ್ಯುರ್ಗೌತಮೋ ಮಾಽಭಿ ಮೃತ್ಯೋ .
ತ್ವತ್ಪ್ರಸೃಷ್ಟಂ ಮಾಽಭಿವದೇತ್ಪ್ರತೀತ
    ಏತತ್ ತ್ರಯಾಣಾಂ ಪ್ರಥಮಂ ವರಂ ವೃಣೇ .. 10..

ನನ್ನ ತಂದೆಯು ಶಾಂತನಾಗಿ, ಸುಮನಸ್ಸಿನಿಂದ, ನನ್ನ ಮೇಲೆ ಕೋಪವಿಲ್ಲದವನಾಗಲಿ. ನಿನ್ನ ಮನೆಯಿಂದ ನಾನು ವಾಪಾಸ್ ಹೋದಾಗ ಅವನು ನನ್ನನ್ನು ಗುರುತಿಸಿ, ನನ್ನನ್ನು ಸ್ವಾಗತಿಸಿ. ಇದು ನಾನು ಆಯ್ಕೆ ಮಾಡುವ   ಮೊದಲನೇ ವರ. ಎಂದು ನಚಿಕೇತ ಯಮನಿಗೆ ಹೇಳುತ್ತಾನೆ.

ಯಥಾ ಪುರಸ್ತಾದ್ ಭವಿತಾ ಪ್ರತೀತ
    ಔದ್ದಾಲಕಿರಾರುಣಿರ್ಮತ್ಪ್ರಸೃಷ್ಟಃ .
ಸುಖಂ ರಾತ್ರೀಃ ಶಯಿತಾ ವೀತಮನ್ಯುಃ
    ತ್ವಾಂ ದದೃಶಿವಾನ್ಮೃತ್ಯುಮುಖಾತ್ ಪ್ರಮುಕ್ತಂ .. 11..

ಯಮನು ಉತ್ತರಿಸಿದನು - ನನ್ನ ಶಕ್ತಿಯಿಂದ ಔದ್ದಾಲಕ ಅರುಣಿಯು (ವಾಜಶ್ರವಸ) ನಿನ್ನನ್ನು ಗುರುತಿಸುತ್ತಾನೆ. ಮೊದಲಿನಂತೆ ನಿನ್ನ ಜತೆ ವ್ಯವಹರಿಸುತ್ತಾನೆ. ಅವನು ಸಮಾಧಾನದಿಂದ ರಾತ್ರಿ ನಿದ್ದೆ ಮಾಡುತ್ತಾನೆ. ನೀನು ಮೃತ್ಯುವಿನಿಂದ ಪಾರಾಗಿ ಬಂದಿದ್ದನ್ನು ನೋಡಿ ಅವನ ಕೋಪ ಶಾಂತವಾಗುತ್ತದೆ.

ಸ್ವರ್ಗೇ ಲೋಕೇ ನ ಭಯಂ ಕಿಂಚನಾಸ್ತಿ
    ನ ತತ್ರ ತ್ವಂ ನ ಜರಯಾ ಬಿಭೇತಿ .
ಉಭೇ ತೀರ್ತ್ವಾಽಶನಾಯಾಪಿಪಾಸೇ
    ಶೋಕಾತಿಗೋ ಮೋದತೇ ಸ್ವರ್ಗಲೋಕೇ .. 12..

ನಚಿಕೇತನು ಹೇಳುತ್ತಾನೆ -  ಸ್ವರ್ಗ ಲೋಕದಲ್ಲಿ ಸ್ವಲ್ಪವೂ ಭಯವಿರುವದಿಲ್ಲ. ಅಲ್ಲಿ ನೀನು (ಯಮ - ಮೃತ್ಯು) ಇರುವದಿಲ್ಲ. ಅಲ್ಲಿ ಮುಪ್ಪಿನ ಭಯವು ಇರುವದಿಲ್ಲ. ಹಸಿವು ಬಾಯಾರಿಕೆ ಇವನ್ನು ದಾಟಿ, ಶೋಕವನ್ನು ಮೀರಿ ಸ್ವರ್ಗಲೋಕದಲ್ಲಿರುವವರು ಆನಂದಿಸುತ್ತಾರೆ.

ಸ ತ್ವಮಗ್ನಿಮ್ ಸ್ವರ್ಗ್ಯಮಧ್ಯೇಷಿ ಮೃತ್ಯೋ
    ಪ್ರಬ್ರೂಹಿ ತ್ವಂ ಶ್ರದ್ದಧಾನಾಯ ಮಹ್ಯಂ .
ಸ್ವರ್ಗಲೋಕಾ ಅಮೃತತ್ವಂ ಭಜಂತ
    ಏತದ್ ದ್ವಿತೀಯೇನ ವೃಣೇ ವರೇಣ .. 13..

ಓ ಮೃತ್ಯುವೇ, ನಿನಗೆ ಸ್ವರ್ಗ ಪ್ರಾಪ್ತಿಗಾಗಿ ಮಾಡಬೇಕಾದ ಅಗ್ನಿ (ಯಜ್ಞ) ಯಾವುದೆಂದು ತಿಳಿದಿದೆ. ಶ್ರದ್ಧೆಯಿಂದ ಕೇಳುತ್ತಿರುವ ನನಗೆ ಅದನ್ನು ಹೇಳು. ಸ್ವರ್ಗಲೋಕದಲ್ಲಿರುವವರು ಅಮೃತತ್ತ್ವ ಹೊಂದುತ್ತಾರೆ. ಇದೆ ನಾನು ಕೇಳುವ ಎರಡನೇ ವರ.

ಪ್ರ ತೇ ಬ್ರವೀಮಿ ತದು ಮೇ ನಿಬೋಧ
    ಸ್ವರ್ಗ್ಯಮಗ್ನಿಂ ನಚಿಕೇತಃ ಪ್ರಜಾನನ್ .
ಅನಂತಲೋಕಾಪ್ತಿಮಥೋ ಪ್ರತಿಷ್ಠಾಂ
    ವಿದ್ಧಿ ತ್ವಮೇತಂ ನಿಹಿತಂ ಗುಹಾಯಾಂ .. 14..

ಯಮನು ಹೇಳಿದನು - ನಾನು ಸ್ವರ್ಗ ಪ್ರಾಪ್ತಿಗೆಬೇಕಾದ ಯಜ್ಞ ಯಾವುದೆಂದು ಚೆನ್ನಾಗಿ ಬಲ್ಲೆ. ಅದನ್ನು ನಾನು ನಿನಗೆ ಹೇಳುವೆನು ನೀನು ಕೇಳು. ಈ ಯಜ್ಞ - ಯಾವುದರಿಂದ ಸ್ವರ್ಗ ಪ್ರಾಪ್ತಿಯಾಗುವದೋ ಅದು ಅನಂತ ಲೋಕದ ಬೆನ್ನೆಲುಬಾಗಿದೆ. ಮತ್ತು ಈ ಜ್ಞಾನ ಎಲ್ಲರ ಹೃದಯಾಂತರಾಳದಲ್ಲಿ ಇದೆ.

ಲೋಕಾದಿಮಗ್ನಿಂ ತಮುವಾಚ ತಸ್ಮೈ
    ಯಾ ಇಷ್ಟಕಾ ಯಾವತೀರ್ವಾ ಯಥಾ ವಾ .
ಸ ಚಾಪಿ ತತ್ಪ್ರತ್ಯವದದ್ಯಥೋಕ್ತಂ
    ಅಥಾಸ್ಯ ಮೃತ್ಯುಃ ಪುನರೇವಾಹ ತುಷ್ಟಃ .. 15..

ಆಗ ಯಮನು ನಚಿಕೇತನಿಗೆ ಆ ಯಜ್ಞದ ನಿಯಮಗಳನ್ನು ವಿವರಿಸುತ್ತಾ ಹೋಗುತ್ತಾನೆ. ಯಜ್ಞಕುಂಡಕ್ಕಾಗಿ ಯಾವ ಇಟ್ಟಿಗೆಗಳನ್ನು ಸಂಗ್ರಹಿಸಬೇಕು, ಅವುಗಳನ್ನು ಹೇಗೆ ಜೋಡಿಸಬೇಕು, ಯಜ್ಞದ ಅಗ್ನಿಯನ್ನು ಹೇಗೆ ಉರಿಸಬೇಕು ಎಂದೆಲ್ಲ ಹೇಳುತ್ತಾ ಹೋಗುತ್ತಾನೆ. ನಚಿಕೇತನು ಅವುಗಳನ್ನು ಪುನರುಚ್ಚರಿಸುತ್ತಾನೆ. ಇದರಿಂದ ಸಂತುಷ್ಟನಾದ ಯಮನು ಹೀಗೆ ಹೇಳುತ್ತಾನೆ.

ತಮಬ್ರವೀತ್ ಪ್ರೀಯಮಾಣೋ ಮಹಾತ್ಮಾ
    ವರಂ ತವೇಹಾದ್ಯ ದದಾಮಿ ಭೂಯಃ .
ತವೈವ ನಾಮ್ನಾ ಭವಿತಾಽಯಮಗ್ನಿಃ
    ಸೃಂಕಾಂ ಚೇಮಾಮನೇಕರೂಪಾಂ ಗೃಹಾಣ .. 16..

ಸಂತೋಷಗೊಂಡ ಮಹಾತ್ಮನಾದ ಯಮನು ನಚಿಕೇತನಿಗೆ ಹೇಳುತ್ತಾನೆ. "ನಿನಗೆ ಇನ್ನು ಒಂದು (ನಾಲ್ಕನೆಯ) ವರವನ್ನು ಕೊಡುತ್ತೇನೆ. ಈ ಅಗ್ನಿಯು ನಿನ್ನ ಹೆಸರಿನಿಂದ ಕರೆಯಿಸಿಕೊಳ್ಳುತ್ತದೆ. ಅದರ ಜೊತೆಗೆ ಈ ಮುತ್ತು ರತ್ನಗಳಿಂದ ಕೂಡಿದ ಹಾರವನ್ನು ಸ್ವೀಕರಿಸು. "

ತ್ರಿಣಾಚಿಕೇತಸ್ತ್ರಿಭಿರೇತ್ಯ ಸಂಧಿಂ
    ತ್ರಿಕರ್ಮಕೃತ್ತರತಿ ಜನ್ಮಮೃತ್ಯೂ .
ಬ್ರಹ್ಮಜಜ್ನಂ  ದೇವಮೀಡ್ಯಂ ವಿದಿತ್ವಾ
    ನಿಚಾಯ್ಯೇಮಾಂ ಶಾಂತಿಮತ್ಯಂತಮೇತಿ .. 17..

ಈ ನಚಿಕೇತ ಯಜ್ಞವನ್ನು ೩ ಸಾರಿ, ಮೂರರ (ಶ್ರುತಿ, ಸ್ಮ್ರಿತಿ ಮತ್ತು ಸುಜನರ) ಜೊತೆಗೆ ಮಾಡಿ, ತ್ರಿಕರ್ಮಗಳನ್ನು ಮಾಡಿದವನು ಜನ್ಮ ಮೃತುಗಳನ್ನು ಗೆಲ್ಲುತ್ತಾನೆ. ಈ ಬ್ರಹ್ಮನಿಂದ ರಚಿತವಾದ, ಸರ್ವಜ್ಞನಾದ ಅಗ್ನಿಯನ್ನು ಅರಿತುಕೊಂಡು ಅತ್ಯಂತ ಶಾಂತಿಯನ್ನು ಹೊಂದುತ್ತಾನೆ.

ತ್ರಿಣಾಚಿಕೇತಸ್ತ್ರಯಮೇತದ್ವಿದಿತ್ವಾ
    ಯ ಏವಂ ವಿದ್ವಾಂಶ್ಚಿನುತೇ ನಾಚಿಕೇತಂ .
ಸ ಮೃತ್ಯುಪಾಶಾನ್ ಪುರತಃ ಪ್ರಣೋದ್ಯ
    ಶೋಕಾತಿಗೋ ಮೋದತೇ ಸ್ವರ್ಗಲೋಕೇ .. 18..

ಈ ನಚಿಕೇತವನ್ನು ತಿಳಿದು, ಮೂರು ನಚಿಕೇತಗಳ ಯಜ್ಞವನ್ನು ಮೂವರ ಜತೆ ಮಾಡಿದವನು, ಮೃತ್ಯುಪಾಶವನ್ನು ಕೂಡ ದೂರ ಸರಿಸುತ್ತಾನೆ ಮತ್ತು ಯಾವ ಶೋಕಗಳಿಲ್ಲದೆ ಸ್ವರ್ಗಲೋಕದಲ್ಲಿ ಸಂತೋಷಪಡುತ್ತಾನೆ.  

ಏಷ ತೇಽಗ್ನಿರ್ನಚಿಕೇತಃ ಸ್ವರ್ಗ್ಯೋ
    ಯಮವೃಣೀಥಾ ದ್ವಿತೀಯೇನ ವರೇಣ .
ಏತಮಗ್ನಿಂ ತವೈವ ಪ್ರವಕ್ಷ್ಯಂತಿ ಜನಾಸಃ
    ತೃತೀಯಂ ವರಂ ನಚಿಕೇತೋ ವೃಣೀಷ್ವ .. 19..

ಸ್ವರ್ಗಪ್ರಾಪ್ತಿಯ ಮಾರ್ಗವಾದ ಇದು ನೀನು ಯಮನಿಂದ ಕೇಳಿದ ಎರಡನೇ ವರ, ನಚಿಕೇತನೇ. ಈ ಅಗ್ನಿಯನ್ನು ಜನರು ನಿನ್ನ ಹೆಸರಿನಲ್ಲಿ ಕರೆಯುತ್ತಾರೆ. ಈಗ ಮೂರನೇ ವರವನ್ನು ಕೇಳಕೋ, ನಚಿಕೇತನೇ. 

ಯೇಯಂ ಪ್ರೇತೇ ವಿಚಿಕಿತ್ಸಾ ಮನುಷ್ಯೇ-
    ಽಸ್ತೀತ್ಯೇಕೇ ನಾಯಮಸ್ತೀತಿ ಚೈಕೇ .
ಏತದ್ವಿದ್ಯಾಮನುಶಿಷ್ಟಸ್ತ್ವಯಾಽಹಂ
    ವರಾಣಾಮೇಷ ವರಸ್ತೃತೀಯಃ .. 20..

ನಚಿಕೇತನು ಹೇಳುತ್ತಾನೆ "ಜನರಲ್ಲಿ ಸತ್ತವರ ವಿಷಯದಲ್ಲಿ ಗೊಂದಲವಿದೆ. ಸತ್ತ ನಂತರ ಮನುಷ್ಯನು ಇರುತ್ತಾನೆ ಎಂದು ಕೆಲವರು ಹೇಳುತ್ತಾರೆ. ಇರುವದಿಲ್ಲ ಎಂದು ಇನ್ನು ಕೆಲವರು ಹೇಳುತ್ತಾರೆ. ಇದನ್ನು ನೀನು ನನಗೆ ತಿಳಿಸುಕೊಡು. ಇದು ನಾನು ನಿನಗೆ ಕೇಳುವ ಮೂರನೇ ವರ."

ದೇವೈರತ್ರಾಪಿ ವಿಚಿಕಿತ್ಸಿತಂ ಪುರಾ
    ನ ಹಿ ಸುವಿಜ್ಞೇಯಮಣುರೇಷ ಧರ್ಮಃ .
ಅನ್ಯಂ ವರಂ ನಚಿಕೇತೋ ವೃಣೀಷ್ವ
    ಮಾ ಮೋಪರೋತ್ಸೀರತಿ ಮಾ ಸೃಜೈನಂ .. 21..

ಯಮ ಹೇಳುತ್ತಾನೆ "ಇದರ ಬಗ್ಗೆ ದೇವತೆಗಳಲ್ಲೂ ಸಹ ಗೊಂದಲವಿದೆ. ಇದು ಅರ್ಥ ಮಾಡಿಕೊಳ್ಳಲು ಕಷ್ಟವಾದ ಬಹು ಸೂಕ್ಷ್ಮ ವಿಷಯ. ಇದನ್ನು ಬಿಟ್ಟು ಬೇರೆ ವರವನ್ನು ಕೇಳಿಕೊ, ನಚಿಕೇತ, ನನ್ನನ್ನು ಒತ್ತಾಯ ಮಾಡಬೇಡ. "

ನಚಿಕೇತನು ಈ ಜ್ಞಾನವನ್ನು ಅರಿಯಲು ಸಮರ್ಥನೋ ಅಲ್ಲವೋ ಎಂದು ಪರೀಕ್ಷಿಸಲು ಯಮ ಹೇಳುತ್ತಾನೆ - ಈ ವಿಷಯ ತುಂಬಾ ಸೂಕ್ಷ್ಮ ಮತ್ತು ಜಟಿಲ. ಇದನ್ನು ಬಿಟ್ಟು ಬಿಡು, ಬೇರೆ ವಾರ ಕೇಳಿಕೊ.

ದೇವೈರತ್ರಾಪಿ ವಿಚಿಕಿತ್ಸಿತಂ ಕಿಲ
    ತ್ವಂ ಚ ಮೃತ್ಯೋ ಯನ್ನ ಸುಜ್ಞೇಯಮಾತ್ಥ .
ವಕ್ತಾ ಚಾಸ್ಯ ತ್ವಾದೃಗನ್ಯೋ ನ ಲಭ್ಯೋ
    ನಾನ್ಯೋ ವರಸ್ತುಲ್ಯ ಏತಸ್ಯ ಕಶ್ಚಿತ್ .. 22..

ಆಗ ನಚಿಕೇತ ಹೇಳುತ್ತಾನೆ - " ದೇವತೆಗಳಲ್ಲೂ ಈ ವಿಷಯದಲ್ಲಿ ಗೊಂದಲವಿದೆ. ನೀನೂ ಸಹ ಇದು ಅರ್ಥ ಮಾಡಿಕೊಳ್ಳಲು ಬಹಳ ಕಠಿಣ ಎಂದು ಹೇಳಿದ್ದೀಯಾ. ಆದರೆ ಈ ವಿಷಯವನ್ನು ವಿವರಿಸಲು ನಿನಗಿಂತ ಒಳ್ಳೆಯ ಮಾತುಗಾರ ಸಿಗುವದಿಲ್ಲ. ವರ ಕೇಳಲೂ ಇದಕ್ಕಿಂತ ಒಳ್ಳೆಯ ವರ ಸಿಗುವದಿಲ್ಲ. "

ಯಮನ ಮಾತನ್ನು ಕೇಳಿ ನಚಿಕೇತ ಹೇಳುತ್ತಾನೆ - "ಆತ್ಮದ ನಿಜ ಸ್ವರೂಪ ದೇವತೆಗಳಿಗೂ ಅರಿಯಲು ಕಷ್ಟ. ಆದರೆ ಅದನ್ನು ಚೆನ್ನಾಗಿ ಅರಿತ ನಿನಗಿಂತ ಅದನ್ನು ವಿವರಿಸಲು ಬೇರೆ ಬಲ್ಲಿದರು  ಯಾರು ತಾನೇ ಸಿಗುತ್ತಾರೆ. ಬೇರೆ ಎಲ್ಲ ವರಗಳು ಕ್ಷಣಿಕ. ಆದರೆ ಆತ್ಮ ಜ್ಞಾನದ ಈ ವರಕ್ಕಿಂತ ಒಳ್ಳೆಯದು ಇನ್ಯಾವ ವಾರ ತಾನೇ ನಾನು ಕೇಳಲಿ." 

ಶತಾಯುಷಃ ಪುತ್ರಪೌತ್ರಾನ್ವೃಣೀಷ್ವಾ
    ಬಹೂನ್ಪಶೂನ್ ಹಸ್ತಿಹಿರಣ್ಯಮಶ್ವಾನ್ .
ಭೂಮೇರ್ಮಹದಾಯತನಂ ವೃಣೀಷ್ವ
    ಸ್ವಯಂ ಚ ಜೀವ ಶರದೋ ಯಾವದಿಚ್ಛಸಿ .. 23..

ಆಗ ಯಮ ಮತ್ತೆ ಹೇಳುತ್ತಾನೆ "ಶತಾಯುಷಿಗಳಾದ ಪುತ್ರಪೌತ್ರರನ್ನು ಕೇಳು. ಬಹಳ ಹಸು, ಆನೆ, ಕುದುರೆ, ಬಂಗಾರವನ್ನು ಕೇಳು. ನಿನಗೆ ಬೇಕಾದಷ್ಟು ಭೂಮಿಯನ್ನು ಕೇಳು. ನಿನಗೆ ಎಷ್ಟು ವರ್ಷ ಬೇಕೋ ಅಷ್ಟು ವರ್ಷ ಬದುಕುವ ವರವನ್ನು ಕೇಳು."

ಮತ್ತೆ ಸ್ವಲ್ಪ ಚೌಕಾಸಿ ನಡೆಯುತ್ತದೆ. ನಚಿಕೇತನನ್ನು ವಿಚಲಿತಗೊಳಿಸಲು ಯಮ ಬೇರೆ ಬೇರೆ ಧನ, ಕನಕ, ಐಶ್ವರ್ಯ, ಕುಟುಂಬದ ಲೋಭವೊಡ್ಡುತ್ತಾನೆ.   

ಏತತ್ತುಲ್ಯಂ ಯದಿ ಮನ್ಯಸೇ ವರಂ
    ವೃಣೀಷ್ವ ವಿತ್ತಂ ಚಿರಜೀವಿಕಾಂ ಚ .
ಮಹಾಭೂಮೌ ನಚಿಕೇತಸ್ತ್ವಮೇಧಿ
    ಕಾಮಾನಾಂ ತ್ವಾ ಕಾಮಭಾಜಂ ಕರೋಮಿ .. 24..

ಯಮ ಮತ್ತೆ ಹೇಳುತ್ತಾನೆ "ಇದಕ್ಕೆ ಸಮನಾದ ಇನ್ಯಾವ ವಾರ ಬೇಕಿದ್ದರೂ ಕೇಳು. ಐಶ್ವರ್ಯವನ್ನು, ಚಿರ ಜೀವನವನ್ನು, ಇಡೀ ಭೂಮಂಡಲದ ಸಾಮ್ರಾಟನಾಗುವ ವರವನ್ನು ಕೇಳು. ನಿನ್ನ ಎಲ್ಲ ಕಾಮನೆಗಳನ್ನು ಪೂರ್ಣ ಮಾಡುತ್ತೇನೆ."

ಯೇ ಯೇ ಕಾಮಾ ದುರ್ಲಭಾ ಮರ್ತ್ಯಲೋಕೇ
    ಸರ್ವಾನ್ ಕಾಮಾಂಶ್ಛಂದತಃ ಪ್ರಾರ್ಥಯಸ್ವ .
ಇಮಾ ರಾಮಾಃ ಸರಥಾಃ ಸತೂರ್ಯಾ
    ನ ಹೀದೃಶಾ ಲಂಭನೀಯಾ ಮನುಷ್ಯೈಃ .
ಆಭಿರ್ಮತ್ಪ್ರತ್ತಾಭಿಃ ಪರಿಚಾರಯಸ್ವ
    ನಚಿಕೇತೋ ಮರಣಂ ಮಾಽನುಪ್ರಾಕ್ಷಿ .. 25..

ಯಮ ಮತ್ತೆ ಹೇಳುತ್ತಾನೆ "ಯಾವ ಯಾವ ಆಸೆಗಳು ಈ ಭೂಮಿಯಲ್ಲಿ ದುರ್ಲಭವೋ, ಅವೆಲ್ಲವನ್ನು ಕೇಳಿಕೊ. ಈ ಅಪ್ಸರೆಯರನ್ನು , ರಥದ ಜೊತೆಯಲ್ಲಿ, ಸಂಗೀತ ವಾದ್ಯಗಳ ಜೊತೆಯಲ್ಲಿ ನಿನಗೆ ಕೊಡುತ್ತೇನೆ. ಇವೆಲ್ಲ ಮನುಷ್ಯರಿಗೆ ಸಿಗುವದಿಲ್ಲ. ನಾನು ಇವನ್ನೆಲ್ಲ ನಿನಗೆ ಕೊಡುತ್ತೇನೆ, ಆ ಅಪ್ಸರೆಯರು ನಿನ್ನ ಸೇವೆ ಮಾಡುತ್ತಾರೆ. ಆದರೆ ನಚಿಕೇತ ಮರಣದ ರಹಸ್ಯವನ್ನು ಮಾತ್ರ ಕೇಳಬೇಡ. "

ಶ್ವೋಭಾವಾ ಮರ್ತ್ಯಸ್ಯ ಯದಂತಕೈತತ್
    ಸರ್ವೇಂದ್ರಿಯಾಣಾಂ ಜರಯಂತಿ ತೇಜಃ .
ಅಪಿ ಸರ್ವಂ ಜೀವಿತಮಲ್ಪಮೇವ
    ತವೈವ ವಾಹಾಸ್ತವ ನೃತ್ಯಗೀತೇ .. 26..

ಯಮನ ಈ ಮಾತನ್ನು ಕೇಳಿ ನಚಿಕೇತ ಉತ್ತರಿಸುತ್ತಾನೆ. "ಈ ಎಲ್ಲ ಸುಖಗಳು ನಾಳೆಯತನಕ ಮಾತ್ರ ಇರುತ್ತವೆ. (ಇವು ಕ್ಷಣಿಕ). ಸರ್ವ ಇಂದ್ರಿಯಗಳ ತೇಜವನ್ನು ಪೂರ್ತಿ ಬಳಲಿಸಿಬಿಡುತ್ತವೆ. ನೀನು ಹೇಳುವ ದೀರ್ಘಾಯಸ್ಸು ಕೂಡ ಅಲ್ಪವೇ. ನಿನ್ನ ರಥ, ನ್ರತ್ಯ ಗೀತೆಗಳನ್ನು ನಿನ್ನಲ್ಲೇ ಇಟ್ಟುಕೋ. " 

ನ ವಿತ್ತೇನ ತರ್ಪಣೀಯೋ ಮನುಷ್ಯೋ
    ಲಪ್ಸ್ಯಾಮಹೇ ವಿತ್ತಮದ್ರಾಕ್ಷ್ಮ ಚೇತ್ತ್ವಾ .
ಜೀವಿಷ್ಯಾಮೋ ಯಾವದೀಶಿಷ್ಯಸಿ ತ್ವಂ
    ವರಸ್ತು ಮೇ ವರಣೀಯಃ ಸ ಏವ .. 27..

ನಚಿಕೇತ ಮುಂದುವರಿಸುತ್ತಾನೆ "ಸಂಪತ್ತಿನಿಂದ ಮನುಷ್ಯ ಯಾವಾಗಲೂ ಸಮಾಧಾನಗೊಳ್ಳುವದಿಲ್ಲ. ಹಾಗು ನಿನ್ನ ಕರುಣೆಯಿಂದ ನನಗೆ ಸಂಪತ್ತು ಸಿಕ್ಕೇ ಸಿಗುತ್ತದೆ. ನಿನ್ನ ಆಳ್ವಿಕೆ ಇದ್ದಷ್ಟು ದಿನ ನಾನು ಜೀವಿಸಿಯೇ ಜೀವಿಸುತ್ತೇನೆ. ನೀನು ನನಗೆ ನಾನು ಕೇಳುವ ವರವನ್ನೇ ಕೊಡು"

ಅಜೀರ್ಯತಾಮಮೃತಾನಾಮುಪೇತ್ಯ
    ಜೀರ್ಯನ್ಮರ್ತ್ಯಃ ಕ್ವಧಃಸ್ಥಃ ಪ್ರಜಾನನ್ .
ಅಭಿಧ್ಯಾಯನ್ ವರ್ಣರತಿಪ್ರಮೋದಾನ್
    ಅತಿದೀರ್ಘೇ ಜೀವಿತೇ ಕೋ ರಮೇತ .. 28..

ಮುಪ್ಪಿಲ್ಲದ, ಅಮರರಾದ ದೇವತೆಗಳನ್ನುಭೇಟಿಯಾದ  ಭೂಮಿಯ ಮೇಲಿನ ಮನುಷ್ಯನು, ಅತಿ ಮುಖ್ಯವಾದ ಜ್ಞಾನವು ಸಿಗಬಲ್ಲದು ಎಂದು ತಿಳಿದವನು ಹೇಗೆ ತಾನೇ ಕ್ಷಣಿಕವಾದ ಅತಿದೀರ್ಘ ಜೀವಿತ ಅಥವಾ ಅತಿ ಪ್ರಮಾದವನ್ನು ಆಶಿಸುತ್ತಾನೆ? 

ಯಸ್ಮಿನ್ನಿದಂ ವಿಚಿಕಿತ್ಸಂತಿ ಮೃತ್ಯೋ
    ಯತ್ಸಾಂಪರಾಯೇ ಮಹತಿ ಬ್ರೂಹಿ ನಸ್ತತ್ .
ಯೋಽಯಂ ವರೋ ಗೂಢಮನುಪ್ರವಿಷ್ಟೋ
    ನಾನ್ಯಂ ತಸ್ಮಾನ್ನಚಿಕೇತಾ ವೃಣೀತೇ .. 29..

ಮನುಷ್ಯರು ಯಾವುದರ ಬಗ್ಗೆ ಗೊಂದಲದಲ್ಲಿದ್ದರೋ, ಯಾವುದು ನಮ್ಮ ಬದುಕಿನ ನಂತರ ಮಹತ್ತಿನ ಬಗ್ಗೆ ಹೇಳುವದೋ ಆ ವರವನ್ನು ನನಗೆ ಹೇಳು. ಇನ್ಯಾವ ವರವೂ ನಚಿಕೇತನಿಗೆ ಬೇಡ.

.. ಇತಿ ಕಾಠಕೋಪನಿಷದಿ ಪ್ರಥಮಾಧ್ಯಾಯೇ ಪ್ರಥಮಾ ವಲ್ಲೀ ..



Comments

Popular posts from this blog

ಶಿವಾನಂದಲಹರಿ

ತತ್ತ್ವಬೋಧ

ಭಗವದ್ಗೀತಾ ಆರತಿ