ಮನೀಷ ಪಂಚಕಂ
ಮನೀಷ ಪಂಚಕವನ್ನು ಬರೆದವರು ಜಗದ್ಗುರು ಆದಿ ಶಂಕರಾಚಾರ್ಯರು.
ಶ್ರೀ ಶಂಕರರು ತಮ್ಮ ಬ್ರಹ್ಮ ಸೂತ್ರದ ವ್ಯಾಖ್ಯಾನ (ಭಾಷ್ಯ)ದಲ್ಲಿ ವೇದಗಳ ಪಠಣವನ್ನು ಮೇಲ್ಜಾತಿಗಳಿಗೆ ಮಾತ್ರ ಸೀಮಿತಗೊಳಿಸಿದ್ದಾರೆ ಎಂದು ಜಾತೀವಾದವನ್ನು ಪ್ರತಿಪಾದಿಸಿದ್ದಕ್ಕಾಗಿ ಪಾಶ್ಚಿಮಾತ್ಯ ವಿದ್ವಾಂಸರು ಅವರನ್ನು ಟೀಕಿಸುತ್ತಾದರೆ. ಆದಾರೂ ಭಾಷ್ಯ ಬರೆಯುವವರು, ಒಂದು ಪಠ್ಯಕ್ಕೆ ವ್ಯಾಖ್ಯಾನ ಬರೆಯುವಾಗ ಅದರ ಮೂಲ ಅರ್ಥಕ್ಕೆ ಸೀಮಿತರಾಗಿರಬೇಕಾಗುತ್ತದೆ ಎಂಬುದನ್ನು ಗಮನಿಸಬೇಕು.
ಉಪದೇಶಸಹಸ್ರಿ ಮತ್ತು ಸಣ್ಣ ಕೃತಿಯಾದ ಈ ಮನೀಶ ಪಂಚಕದಂತಹ ಸ್ವತಂತ್ರ ರಚನೆಗಳಲ್ಲಿ ಅವರು ತಮ್ಮ ಅದ್ವೈತ ಸಿದ್ಧಾಂತವನ್ನು ಸಕಲ ವೈಭವದೊಂದಿಗೆ ವಿವರಿಸುತ್ತಾರೆ. ಅದ್ವೈತ ಸಿದ್ಧಾಂತವು ಜಾತಿ, ಮತ, ಧರ್ಮ, ಲಿಂಗಗಳ ವ್ಯತ್ಯಾಸಗಳನ್ನು ಗುರುತಿಸುವುದಿಲ್ಲ - ಏಕೆಂದರೆ ನಾವೆಲ್ಲರೂ ಒಬ್ಬನೇ ಬ್ರಹ್ಮನ ಬೇರೆ ಬೇರೆ ರೂಪಗಳು.
ಈ ಕೃತಿಯ ಸನ್ನಿವೇಶವು ಭಾರತದ ಪವಿತ್ರ ಕ್ಷೇತ್ರವಾದ ವಾರಣಾಸಿಯಲ್ಲಿ ನಡೆದಿದೆ. ಅದ್ವೈತ ಶಾಸ್ತ್ರದ ಪ್ರತಿಪಾದಕರಾದ ಆದಿ ಶಂಕರಾಚಾರ್ಯರು ಸ್ನಾನ ಮುಗಿಸಿ ದೇವಸ್ಥಾನಕ್ಕೆ ಹೋಗುತ್ತಿದ್ದರು. ಇದ್ದಕ್ಕಿದ್ದಂತೆ ದಾರಿಯಲ್ಲಿ ಒಬ್ಬ ಚಂಡಾಲನನ್ನು ನೋಡಿ, ಆ ದಿನಗಳಲ್ಲಿನ ಪದ್ಧತಿಯ ಪ್ರಕಾರ ದೂರವನ್ನು ಕಾಯ್ದುಕೊಳ್ಳಲು ಸನ್ನೆ ಮಾಡಿದರು. ಆ ಚಂಡಾಲ ಭಗವಾನ್ ಶಂಕರ(ಶಿವ)ನೇ ಹೊರತು ಬೇರಾರೂ ಅಲ್ಲ! ಹಾಗೆ ಸನ್ನೆ ಮಾಡಿದಾಗ, ಶಿವನು ತನ್ನ ಭಕ್ತ ಶಂಕಾರಾಚಾರ್ಯರನ್ನು ಮೊದಲ ಎರಡು ಚರಣಗಳಲ್ಲಿ (ಪೀಠಿಕೆ) ಈ ಕೆಳಗಿನಂತೆ ಸಂಬೋಧಿಸುತ್ತಾರೆ:
ಅನುಷ್ಟುಪ್ ಛಂದಃ -
ಸತ್ಯಾಚಾರ್ಯಸ್ಯ ಗಮನೇ ಕದಾಚಿನ್ಮುಕ್ತಿದಾಯಕಂ .
ಕಾಶೀಕ್ಷೇತ್ರಂ ಪ್ರತಿ ಸಹ ಗೌರ್ಯಾ ಮಾರ್ಗೇ ತು ಶಂಕರಂ ..
ಮುಕ್ತಿದಾಯಕವಾದ ಕಾಶೀಕ್ಷೇತ್ರಕ್ಕೆಂದು ಸತ್ಯಾಚಾರ್ಯರು (ಶಂಕರಾಚಾರ್ಯರು) ಹೋಗುತ್ತಿರುವಾಗ, ಮಾರ್ಗದಲ್ಲಿ ಗೌರಿಯ ಜೊತೆಗೆ ಶಂಕರನು ಸಿಕ್ಕನು.
ಅಂತ್ಯವೇಷಧರಂ ದೃಷ್ಟ್ವಾ ಗಚ್ಛ ಗಚ್ಛೇತಿ ಚಾಬ್ರವೀತ್ .
ಶಂಕರಃಸೋಽಪಿ ಚಾಂಡಲಸ್ತಂ ಪುನಃ ಪ್ರಾಹ ಶಂಕರಂ ..
ಚಾಂಡಾಲನ ರೂಪ ಧರಿಸಿರುವ ಶಿವನನ್ನು ಕಂಡು ಶಂಕರಾಚಾರ್ಯರು "ಹೋಗು, ಹೋಗು" ಎಂದು ಹೇಳಿದರು.
ಆರ್ಯಾ ವೃತ್ತ -
ಅನ್ನಮಯಾದನ್ನಮಯಮಥವಾ ಚೈತನ್ಯಮೇವ ಚೈತನ್ಯಾತ್ .
ಯತಿವರ ದೂರೀಕರ್ತುಂ ವಾಂಛಸಿ ಕಿಂ ಬ್ರೂಹಿ ಗಚ್ಛ ಗಚ್ಛೇತಿ .
ಓ ಮಹಾ ತಪಸ್ವಿ! ಹೇಳು, 'ಹೋಗು' 'ಹೋಗು' ಎಂದು ಹೇಳುವ ಮೂಲಕ ನಾನು ನಿನ್ನಿಂದ ದೂರವಿರಬೇಕೆಂದು ನೀನು ಬಯಸುತ್ತೀರಾ? ಅದು ಅನ್ನಮಯ ಶರೀರವು ಇನ್ನೊಂದು ಅನ್ನಮಯ ಶರೀರಕ್ಕೆ ಸಂಬೋಧಿಸಲ್ಪಟ್ಟಿದೆಯೇ ಅಥವಾ ಅದು ಚೈತನ್ಯದಿಂದ ಇನ್ನೊಂದು ಚೈತನ್ಯಕ್ಕೆ ಸಂಬೋಧಿಸಲ್ಪಟ್ಟಿದೆ --- ಓ ತಪಸ್ವಿಗಳಲ್ಲಿ ಶ್ರೇಷ್ಠನೇ, "ಹೋಗು, ಹೋಗು" ಎಂದು ಹೇಳುವ ಮೂಲಕ ನೀನು ಯಾವುದನ್ನು ದೂರವಿಡಬೇಕೆಂದು ಬಯಸುತ್ತೀರಿ? ನನಗೆ ಹೇಳು.
ಶಾರ್ದೂಲ ವಿಕ್ರೀಡಿತ ಛಂದ -
ಪ್ರತ್ಯಗ್ವಸ್ತುನಿ ನಿಸ್ತರಂಗಸಹಜಾನಂದಾವಬೋಧಾಂಬುಧೌ
ವಿಪ್ರೋಽಯಂ ಶ್ವಪಚೋಽಯಮಿತ್ಯಪಿ ಮಹಾನ್ಕೋಽಯಂ ವಿಭೇದಭ್ರಮಃ .
ಕಿಂ ಗಂಗಾಂಬುನಿ ಬಿಂಬಿತೇಽಮ್ಬರಮಣೌ ಚಾಂಡಾಲವೀಥೀಪಯಃ
ಪೂರೇ ವಾಽನ್ತರಮಸ್ತಿ ಕಾಂಚನಘಟೀಮೃತ್ಕುಂಭಯೋರ್ವಾಽಮ್ಬರೇ ..
ಸೂರ್ಯನ ಪ್ರತಿಬಿಂಬವು ಶಾಂತ, ಅಲೆಗಳಿಲ್ಲದ ನೀರಲ್ಲಿ ಕಾಣುವಂತೆಯೇ ಪರಮಾತ್ಮನು ಪ್ರತಿಯೊಂದು ವಸ್ತುವಿನಲ್ಲೂ ಪ್ರತಿಫಲಿಸುತ್ತಾನೆ, ಹಾಗಿರುವಾಗ ಒಬ್ಬನು ಬ್ರಾಹ್ಮಣ ಶ್ರೇಷ್ಠನೋ ಅಥವಾ ಶ್ವಪಚನು ಶ್ರೇಷ್ಠನೋ ಎಂಬಈ ಅನುಮಾನಾಸ್ಪದ ಗೊಂದಲ ಮತ್ತು ವ್ಯತ್ಯಾಸ ಏಕೆ ? ಗಂಗಾ ನದಿಯ ನೀರಿನಲ್ಲಿ ಸೂರ್ಯನ ಪ್ರತಿಬಿಂಬದಲ್ಲಿ ಅಥವಾ ಜಾತಿಭ್ರಷ್ಟನ ಬೀದಿಯಲ್ಲಿರುವ ನೀರಿನಲ್ಲಿರುವ ಸೂರ್ಯನ ಪ್ರತಿಬಿಂಬದಲ್ಲಿ ಏನಾದರೂ ವ್ಯತ್ಯಾಸವಿದೆಯೇ? ಅದೇ ರೀತಿ, ನೀರಿನ ಪಾತ್ರೆಗಳು ಚಿನ್ನ ಮತ್ತು ಮಣ್ಣಿನಿಂದ ಮಾಡಿದಾಗ ಅವುಗಳಲ್ಲಿರುವ ನೀರಿನಲ್ಲಿ ಏನಾದರೂ ವ್ಯತ್ಯಾಸವಿದೆಯೇ?
ಜಾಗ್ರತ್ಸ್ವಪ್ನಸುಷುಪ್ತಿಷು ಸ್ಫುಟತರಾ ಯಾ ಸಂವಿದುಜ್ಜೃಂಭತೇ
ಯಾ ಬ್ರಹ್ಮಾದಿಪಿಪೀಲಿಕಾಂತತನುಷು ಪ್ರೋತಾ ಜಗತ್ಸಾಕ್ಷಿಣೀ .
ಸೈವಾಹಂ ನ ಚ ದೃಶ್ಯವಸ್ತ್ವಿತಿ ದೃಢಪ್ರಜ್ಞಾಪಿ ಯಸ್ಯಾಸ್ತಿ ಚೇ-
ಚ್ಚಾಂಡಾಲೋಽಸ್ತು ಸ ತು ದ್ವಿಜೋಽಸ್ತು ಗುರುರಿತ್ಯೇಷಾ ಮನೀಷಾ ಮಮ .. ೧..
ಶ್ರೀ ಶಂಕರರು ಉತ್ತರಿಸುತ್ತಾರೆ: ಒಬ್ಬ ವ್ಯಕ್ತಿಯು "ತಾನು ಗ್ರಹಿಕೆಗೆ ಸಿಗುವ ವಸ್ತುವಲ್ಲ, ಆದರೆ ಎಚ್ಚರ, ಕನಸು ಮತ್ತು ಗಾಢ ನಿದ್ರೆಯ ಸ್ಥಿತಿಗಳಲ್ಲಿ ಸ್ಪಷ್ಟವಾಗಿ ಪ್ರಕಟವಾಗುವ ಶುದ್ಧ ಪ್ರಜ್ಞೆ; ಹಾಗೂ ಸೃಷ್ಟಿಕರ್ತ ಬ್ರಹ್ಮನಿಂದ ಇರುವೆಯವರೆಗಿನ ಎಲ್ಲಾ ದೇಹಗಳಲ್ಲಿ ವಾಸಿಸುವ ಸಂಪೂರ್ಣ ವಿಶ್ವದ ಸಾಕ್ಷಿಯಾಗಿರುವ ಆ ಶುದ್ಧ ಪ್ರಜ್ಞೆ" ಎಂಬ ದೃಢ ಜ್ಞಾನವನ್ನು ಪಡೆದಿದ್ದರೆ, ಅವನು ಜಾತಿಭ್ರಷ್ಟನೇ ಆಗಿರಲಿ ಅಥವಾ ಬ್ರಾಹ್ಮಣನೇ ಆಗಿರಲಿ, ಅವನೇ ನನ್ನ ಗುರು. ಇದು ನನ್ನ ದೃಢನಿಶ್ಚಯ.
ಬ್ರಹ್ಮೈವಾಹಮಿದಂ ಜಗಚ್ಚ ಸಕಲಂ ಚಿನ್ಮಾತ್ರವಿಸ್ತಾರಿತಂ
ಸರ್ವಂ ಚೈತದವಿದ್ಯಯಾ ತ್ರಿಗುಣಯಾಽಶೇಷಂ ಮಯಾ ಕಲ್ಪಿತಂ .
ಇತ್ಥಂ ಯಸ್ಯ ದೃಢಾ ಮತಿಃ ಸುಖತರೇ ನಿತ್ಯೇ ಪರೇ ನಿರ್ಮಲೇ
ಚಾಂಡಾಲೋಽಸ್ತು ಸ ತು ದ್ವಿಜೋಽಸ್ತು ಗುರುರಿತ್ಯೇಷಾ ಮನೀಷಾ ಮಮ .. ೨..
"ನಾನು ಬ್ರಹ್ಮ(ಶುದ್ಧ ಪ್ರಜ್ಞೆ). ಈ ಸಕಲ ಜಗತ್ತು ಸಹ ಶುದ್ಧ ಪ್ರಜ್ಞೆ. ಇವೆಲ್ಲವೂ(ಜಗತ್ತು) ಮೂರು ಗುಣಗಳಿಂದ (ಸತ್ವ, ರಜಸ್ ಮತ್ತು ತಮಸ್ಸು) ಕೂಡಿದ ಅವಿದ್ಯೆ (ಅಜ್ಞಾನ) ದಿಂದ ನನ್ನಿಂದ ಸೃಷ್ಟಿಸಲ್ಪಟ್ಟದ್ದು". ಬ್ರಹ್ಮನ ಬಗ್ಗೆ ಈ ಆನಂದಮಯ, ಶಾಶ್ವತವಾದ, ಸರ್ವೋಚ್ಚವಾದ ಮತ್ತು ಶುದ್ಧ ಸಾಕ್ಷಾತ್ಕಾರವನ್ನು ಪಡೆದವನು, ಅವನು ಜಾತಿಭ್ರಷ್ಟನಾಗಿರಲಿ ಅಥವಾ ಬ್ರಾಹ್ಮಣನಾಗಿರಲಿ, ಅವನು ನನ್ನ ಗುರು,
ಶಶ್ವನ್ನಶ್ವರಮೇವ ವಿಶ್ವಮಖಿಲಂ ನಿಶ್ಚಿತ್ಯ ವಾಚಾ ಗುರೋ-
ರ್ನಿತ್ಯಂ ಬ್ರಹ್ಮ ನಿರಂತರಂ ವಿಮೃಶತಾ ನಿರ್ವ್ಯಾಜಶಾಂತಾತ್ಮನಾ .
ಭೂತಂ ಭಾವಿ ಚ ದುಷ್ಕೃತಂ ಪ್ರದಹತಾ ಸಂವಿನ್ಮಯೇ ಪಾವಕೇ
ಪ್ರಾರಬ್ಧಾಯ ಸಮರ್ಪಿತಂ ಸ್ವವಪುರಿತ್ಯೇಷಾ ಮನೀಷಾ ಮಮ .. ೩..
ಗುರುವಿನ ಮಾತಿನಿಂದ, ಇಡೀ ವಿಶ್ವವು ನಶ್ವರ ಎಂಬ ಖಚಿತ ತೀರ್ಮಾನಕ್ಕೆ ಬಂದ ನಂತರ, ಶಾಂತ ಮತ್ತು ಶುದ್ಧ ಮನಸ್ಸಿನಿಂದ ನಿರಂತರವಾಗಿ ಬ್ರಹ್ಮನನ್ನು ಧ್ಯಾನಿಸುವವನು ಮತ್ತು ತನ್ನ ಭೂತ ಮತ್ತು ಭವಿಷ್ಯದ ಪಾಪಗಳನ್ನು ಜ್ಞಾನದ ಬೆಂಕಿಯಲ್ಲಿ ಸುಟ್ಟುಹಾಕಿದವನು, ತನ್ನ ಪ್ರಸ್ತುತ ದೇಹವನ್ನು ತನ್ನ ಪ್ರಾರಬ್ಧ ಕರ್ಮಕ್ಕೆ ಸಮರ್ಪಿಸುತ್ತಾನೆ. ಇದು ನನ್ನ ದೃಢನಿಶ್ಚಯ.
ಯಾ ತಿರ್ಯಙ್ನರದೇವತಾಭಿರಹಮಿತ್ಯಂತಃ ಸ್ಫುಟಾ ಗೃಹ್ಯತೇ
ಯದ್ಭಾಸಾ ಹೃದಯಾಕ್ಷದೇಹವಿಷಯಾ ಭಾಂತಿ ಸ್ವತೋಽಚೇತನಾಃ .
ತಾಂ ಭಾಸ್ಯೈಃ ಪಿಹಿತಾರ್ಕಮಂಡಲನಿಭಾಂ ಸ್ಫೂರ್ತಿಂ ಸದಾ ಭಾವಯ-
ನ್ಯೋಗೀ ನಿರ್ವೃತಮಾನಸೋ ಹಿ ಗುರುರಿತ್ಯೇಷಾ ಮನೀಷಾ ಮಮ .. ೪..
ಆತ್ಮ ಅಥವಾ ಶುದ್ಧ ಪ್ರಜ್ಞೆಯನ್ನು ಪ್ರಾಣಿಗಳು, ಮನುಷ್ಯರು ಮತ್ತು ದೇವರುಗಳು 'ನಾನು' ಎಂದು ಸ್ಪಷ್ಟವಾಗಿ ಅನುಭವಿಸುತ್ತಾರೆ. ಈ ಶುದ್ಧ ಪ್ರಜ್ಞೆಯ ಪ್ರತಿಬಿಂಬದಿಂದಲೇ ಮನಸ್ಸು, ಇಂದ್ರಿಯಗಳು ಮತ್ತು ದೇಹವು ಎಲ್ಲವೂ ಅಚೇತನವಾಗಿದ್ದು, ಅವು ಚೇತನಾತ್ಮಕವಾಗಿ ಕಾಣುತ್ತವೆ. ಬಾಹ್ಯ ವಸ್ತುಗಳು ಈ ಪ್ರಜ್ಞೆಯಿಂದಾಗಿಯೇ ಗ್ರಹಿಸಲ್ಪಡುತ್ತವೆ. ಆದಾಗ್ಯೂ, ಈ ಆತ್ಮವು ಅದರಿಂದ ಪ್ರಕಾಶಿಸಲ್ಪಟ್ಟ ಮನಸ್ಸು, ಇಂದ್ರಿಯಗಳು ಮತ್ತು ದೇಹದಿಂದ ಮರೆಮಾಡಲ್ಪಟ್ಟಿದೆ, ಸೂರ್ಯನು ಮೋಡಗಳಿಂದ ಮರೆಮಾಡಲ್ಪಟ್ಟಂತೆ. ಶಾಂತ ಮನಸ್ಸಿನಿಂದ, ಯಾವಾಗಲೂ ಈ ಆತ್ಮದ ಬಗ್ಗೆ ಧ್ಯಾನ ಮಾಡುವ ಯೋಗಿಯೇ ನನ್ನ ಗುರು. ಇದು ನನ್ನ ದೃಢನಿಶ್ಚಯ.
ಯತ್ಸೌಖ್ಯಾಂಬುಧಿಲೇಶಲೇಶತ ಇಮೇ ಶಕ್ರಾದಯೋ ನಿರ್ವೃತಾ
ಯಚ್ಚಿತ್ತೇ ನಿತರಾಂ ಪ್ರಶಾಂತಕಲನೇ ಲಬ್ಧ್ವಾ ಮುನಿರ್ನಿರ್ವೃತಃ .
ಯಸ್ಮಿನ್ನಿತ್ಯಸುಖಾಂಬುಧೌ ಗಲಿತಧೀರ್ಬ್ರಹ್ಮೈವ ನ ಬ್ರಹ್ಮವಿದ್
ಯಃ ಕಶ್ಚಿತ್ಸ ಸುರೇಂದ್ರವಂದಿತಪದೋ ನೂನಂ ಮನೀಷಾ ಮಮ .. ೫..
ಬ್ರಹ್ಮವಾಗಿರುವ ಆತ್ಮವು ಪರಮಾನಂದದ ಶಾಶ್ವತ ಸಾಗರವಾಗಿದೆ. ಆ ಆನಂದದ ಒಂದು ಸಣ್ಣ ಭಾಗವು ಇಂದ್ರ ಮತ್ತು ಇತರ ದೇವರುಗಳನ್ನು ತೃಪ್ತಿಪಡಿಸಲು ಸಾಕು. ಸಂಪೂರ್ಣವಾಗಿ ಶಾಂತ ಮನಸ್ಸಿನಿಂದ ಆತ್ಮವನ್ನು ಧ್ಯಾನಿಸುವ ಮೂಲಕ ಋಷಿಯು ತೃಪ್ತಿಯನ್ನು ಅನುಭವಿಸುತ್ತಾನೆ. ಈ ಆತ್ಮದೊಂದಿಗೆ ಮನಸ್ಸನ್ನು ಗುರುತಿಸಲ್ಪಟ್ಟ ವ್ಯಕ್ತಿಯು ಕೇವಲ ಬ್ರಹ್ಮವನ್ನು ತಿಳಿದಿರುವವನಲ್ಲ, ಬದಲಾಗಿ ಬ್ರಹ್ಮನೇ ಆಗಿದ್ದಾನೆ. ಅಂತಹ ವ್ಯಕ್ತಿಯು, ಅವನು ಯಾರೇ ಆಗಿರಲಿ, ಅವನ ಪಾದಗಳು ಇಂದ್ರನಿಂದಲೇ ಪೂಜಿಸಲ್ಪಡಲು ಯೋಗ್ಯವಾಗಿವೆ. ಇದು ನನ್ನ ಖಚಿತವಾದ ನಂಬಿಕೆ.
ದಾಸಸ್ತೇಽಹಂ ದೇಹದೃಷ್ಟ್ಯಾಽಸ್ಮಿ ಶಂಭೋ
ಜಾತಸ್ತೇಂಽಶೋ ಜೀವದೃಷ್ಟ್ಯಾ ತ್ರಿದೃಷ್ಟೇ .
ಸರ್ವಸ್ಯಾಽಽತ್ಮನ್ನಾತ್ಮದೃಷ್ಟ್ಯಾ ತ್ವಮೇವೇ-
ತ್ಯೇವಂ ಮೇ ಧೀರ್ನಿಶ್ಚಿತಾ ಸರ್ವಶಾಸ್ತ್ರೈಃ ..
ಓ ದೇವರೇ! ದೇಹದ ರೂಪದಲ್ಲಿ ನಾನು ನಿನ್ನ ಸೇವಕ. ಜೀವ ರೂಪದಲ್ಲಿ, ಓ ಮೂರು ಕಣ್ಣುಗಳನ್ನು ಹೊಂದಿರುವವನೇ, ನಾನು ನಿನ್ನ ಭಾಗ. ಆತ್ಮ ರೂಪದಲ್ಲಿ, ನೀನು ನನ್ನೊಳಗೆ ಮತ್ತು ಪ್ರತಿಯೊಂದು ಆತ್ಮದಲ್ಲಿಯೂ ಇದ್ದೀಯ. ನನ್ನ ಬುದ್ಧಿಶಕ್ತಿಯ ಮೂಲಕ ಮತ್ತು ವಿವಿಧ ಧರ್ಮಗ್ರಂಥಗಳ ಅಧಿಕಾರದ ಮೇಲೆ ನಾನು ಈ ತೀರ್ಮಾನಕ್ಕೆ ಬಂದಿದ್ದೇನೆ.
.. ಇತಿ ಶ್ರೀಮಚ್ಛಂಕರಭಗವತಃ ಕೃತೌ ಮನೀಷಾಪಂಚಕಂ ಸಂಪೂರ್ಣಂ ..
Comments
Post a Comment