ಆತ್ಮ ಬೋಧ

ಆತ್ಮಬೋಧ ಎಂಬುದು ಅದ್ವೈತ ವೇದಾಂತದ ಒಂದು ಸಣ್ಣ ಸಂಸ್ಕೃತ ಪಠ್ಯವಾಗಿದೆ. ಅರವತ್ತೆಂಟು ಶ್ಲೋಕಗಳಲ್ಲಿರುವ ಈ ಪಠ್ಯವು ಆತ್ಮ ಜ್ಞಾನದ ಮಾರ್ಗ ಅಥವಾ ಆತ್ಮದ ಅರಿವನ್ನು ವಿವರಿಸುತ್ತದೆ.
 
ಈ ಪಠ್ಯವನ್ನು ಶಂಕರರು ತಮ್ಮ ಶಿಷ್ಯ ಸನಂದನ, ಪದ್ಮಪಾದ ಎಂಬವವರಿಗಾಗಿ ಬರೆದಿದ್ದಾರೆ ಎಂದು ಹೇಳಲಾಗುತ್ತದೆ.
 
ಆತ್ಮ-ಬೋಧವು ಒಂದು ಪ್ರಕರಣ ಗ್ರಂಥ. ಪ್ರಕರಣ ಗ್ರಂಥ ಅಂದರೆ ಯಾವುದೇ ಮೂಲ ತತ್ವವನ್ನು ನೀಡುವ ಕೃತಿ ಅಲ್ಲ ಆದರೆ ಧರ್ಮಶಾಸ್ತ್ರಗಳಲ್ಲಿ ಬಳಸಲಾಗುವ ಪದಗಳು ಮತ್ತು ಪರಿಭಾಷೆಗಳನ್ನು ವಿವರಿಸುವ ಸಾಹಿತ್ಯ . 

 

 ..ಆತ್ಮಬೋಧಃ..

ತಪೋಭಿಃ ಕ್ಷೀಣಪಾಪಾನಾಂ ಶಾಂತಾನಾಂ ವೀತರಾಗಿಣಾಂ.
ಮುಮುಕ್ಷೂಣಾಮಪೇಕ್ಷ್ಯೋಽಯಮಾತ್ಮಬೋಧೋ ವಿಧೀಯತೇ..1..

ಈ ಮೊದಲನೆಯ ಶ್ಲೋಕದಲ್ಲಿ ಲೇಖಕರು ಈ ಕೃತಿಯು ಯಾರ ಕುರಿತಾಗಿ, ಯಾರಿಗಾಗಿ ರಚಿಸಲ್ಪಟ್ಟಿದೆ ಎಂದು ಹೇಳುತ್ತಾರೆ 

ತಪಸ್ಸನ್ನು ಮಾಡಿ ಯಾರ ಪಾಪವು ಕ್ಷೀಣಿಸಿದೆಯೋ, ಯಾರು ಶಾಂತಚಿತ್ತರೋ, ಯಾರು ರಾಗ-ದ್ವೇಷಗಳಿಂದ ಮುಕ್ತರೋ, ಯಾರು ಮುಮುಕ್ಷವೋ ( ಮೋಕ್ಷವನ್ನು ಪಡೆಯಲು ತೀವ್ರ ಆಸೆ ಹೊಂದಿದ್ದಾರೋ), ಅವರಿಗಾಗಿ ನಾನು ಆತ್ಮಬೋಧವನ್ನು ರಚಿಸುತ್ತಿದ್ದೇನೆ. 

(ವೇದಾಂತದ ಪ್ರಕಾರ ವೇದ-ಶಾಸ್ತ್ರಗಳನ್ನು ಓದುವ ವ್ಯಕ್ತಿಗೆ ಆತ್ಮಸಾಕ್ಷಾತ್ಕಾರವಾಗುವದು ಅವನಿಗೆ ವಿವೇಕ,ವೈರಾಗ್ಯ, ಶಮಾದಿ ಷಟ್ ಸಂಪತ್ತಿಗಳು ಹಾಗೂ ಮುಮುಕ್ಷತ್ವ ಇವು ಇದ್ದರೆ ಮಾತ್ರ) 

ಬೋಧೋಽನ್ಯಸಾಧನೇಭ್ಯೋ ಹಿ ಸಾಕ್ಷಾನ್ಮೋಕ್ಷೈಕಸಾಧನಂ.
ಪಾಕಸ್ಯ ವಹ್ನಿವಜ್ಜ್ಞಾನಂ ವಿನಾ ಮೋಕ್ಷೋ ನ ಸಿಧ್ಯತಿ..2.. 

ಅಡಿಗೆ ಮಾಡಲು ಬೆಂಕಿಯಿಲ್ಲದೆ ಹೇಗೆ ಸಾಧ್ಯವಿಲ್ಲವೋ ಹಾಗೆಯೇ ಜ್ಞಾನವಿಲ್ಲದೆ ಮೋಕ್ಷವು ಲಭಿಸಲು ಸಾಧ್ಯವಿಲ್ಲ. ಬೇರೆ ಎಲ್ಲ ದಾರಿಗಳಿಗಿಂತ ಜ್ಞಾನವೇ ಮೋಕ್ಷ ಪ್ರಾಪ್ತಿಗೆ ಸರಿಯಾದ ಮಾರ್ಗ.

(ಅಡಿಗೆ ಮಾಡಲು ಪಾತ್ರೆ, ಸೌಟು ಇತ್ಯಾದಿಗಳು ಬೇಕಾದರೂ ನಿಜವಾಗಿ ಅನ್ನವನ್ನು ಬೇಯಿಸುವದು ಬೆಂಕಿ ಮಾತ್ರ - ಹಾಗೆಯೇ ಮುಕ್ತಿ ಪಡೆಯಲು ಜ್ಞಾನ ಅತ್ಯಾವಶ್ಯಕ. ಜಪ-ತಪ, ದಾನ-ಧರ್ಮ ಇತ್ಯಾದಿಗಳೋ ಮನಸ್ಸನ್ನು ಶುದ್ಧೀಕರಿಸಲು ಸಹಕರಿಸುತ್ತವೆ.) 

ಅವಿರೋಧಿತಯಾ ಕರ್ಮ ನಾವಿದ್ಯಾಂ ವಿನಿವರ್ತಯೇತ್.
ವಿದ್ಯಾವಿದ್ಯಾಂ ನಿಹಂತ್ಯೇವ ತೇಜಸ್ತಿಮಿರಸಂಘವತ್..3.. 

ಕರ್ಮವು ಅಜ್ಞಾನವನ್ನು ನಾಶಮಾಡಲು ಸಾಧ್ಯವಿಲ್ಲ, ಏಕೆಂದರೆ ಅದು ಅಜ್ಞಾನದೊಂದಿಗೆ ಸಂಘರ್ಷಿಸುವುದಿಲ್ಲ ಅಥವಾ ವಿರೋಧಿಸುವುದಿಲ್ಲ. ಬೆಳಕು ಮಾತ್ರ ಆಳವಾದ ಕತ್ತಲೆಯನ್ನು ನಾಶಮಾಡುವಂತೆ, ಜ್ಞಾನವು ಮಾತ್ರ ಅಜ್ಞಾನವನ್ನು ನಾಶಪಡಿಸುತ್ತದೆ.

ಕರ್ಮ ಮಾಡಿ ಮನುಷ್ಯನು ತನ್ನ ಬಯಕೆಗಳನ್ನು ಈಡೇರಿಸಿಕೊಳ್ಳುತ್ತಾನೆ - ಹಾಗಾಗಿ ಕರ್ಮ ಅವಿದ್ಯೆ, ಅಜ್ಞಾನಕ್ಕೆ ಸಹಕಾರಿಯೇ ಹೊರತು ವಿರೋಧಿಯಲ್ಲ. 

ಅವಚ್ಛಿನ್ನ ಇವಾಜ್ಞಾನಾತ್ತನ್ನಾಶೇ ಸತಿ ಕೇವಲಃ.
ಸ್ವಯಂ ಪ್ರಕಾಶತೇ ಹ್ಯಾತ್ಮಾ ಮೇಘಾಪಾಯೇಂಽಶುಮಾನಿವ..4.. 

ಅಜ್ಞಾನದ ಕಾರಣದಿಂದ ಆತ್ಮವು ಸೀಮಿತವೆಂದು ತೋರುತ್ತದೆ. ಅದು ನಾಶವಾದಾಗ, ಯಾವುದೇ ಬಹುತ್ವವನ್ನು ಒಪ್ಪಿಕೊಳ್ಳದ ಆತ್ಮವು, ಮೋಡಗಳು ಕಣ್ಮರೆಯಾದಾಗ ಸೂರ್ಯನು ಪ್ರಕಟವಾದಂತೆ, ತನ್ನನ್ನು ತಾನೇ ಬಹಿರಂಗಪಡಿಸುತ್ತದೆ.

ಅಜ್ಞಾನಕಲುಷಂ ಜೀವಂ ಜ್ಞಾನಾಭ್ಯಾಸಾದ್ವಿನಿರ್ಮಲಂ.
ಕೃತ್ವಾ ಜ್ಞಾನಂ ಸ್ವಯಂ ನಶ್ಯೇಜ್ಜಲಂ ಕತಕರೇಣುವತ್..5..
 

ಜ್ಞಾನದ ನಿರಂತರ ಅಭ್ಯಾಸವು ಅಜ್ಞಾನದಿಂದ ಹೊಲಸಾದ ಆತ್ಮವನ್ನು ('ಜೀವಾತ್ಮ') ಶುದ್ಧೀಕರಿಸುತ್ತದೆ ಮತ್ತು ನಂತರ 'ಕತಕ-ಕಾಯಿ'ಯ (ಚಿಲ್ಲ ಕಾಯಿ) ಪುಡಿಯು ಕೆಸರಿನ ನೀರನ್ನು ಶುದ್ಧೀಕರಿಸಿದ ನಂತರ ಬುಡದಲ್ಲಿ ನೆಲೆಸುವಂತೆ, ಜ್ಞಾನವು ಸ್ವತಃ ಮಾಯವಾಗುತ್ತದೆ.

ಸಂಸಾರಃ ಸ್ವಪ್ನತುಲ್ಯೋ ಹಿ ರಾಗದ್ವೇಷಾದಿಸಂಕುಲಃ .
ಸ್ವಕಾಲೇ ಸತ್ಯವದ್ಭಾತಿ ಪ್ರಬೋಧೇ ಸತ್ಯಸದ್ಭವೇತ್ .. ೬..

ರಾಗ, ದ್ವೇಷ ಇತ್ಯಾದಿಗಳಿಂದ ತುಂಬಿರುವ ಈ ಜಗತ್ತು ಒಂದು ಕನಸಿನಂತೆ. ಅಜ್ಞಾನ ತುಂಬಿರುವವರೆಗೆ ಜಗತ್ತು ನಿಜವೆಂದು ತೋರುತ್ತದೆ ಆದರೆ ಎಚ್ಚರವಾದಾಗ (ಅಂದರೆ ನಿಜವಾದ ಜ್ಞಾನ ಉದಯಿಸಿದಾಗ) ಅದು ಅವಾಸ್ತವವೆಂದು ಮನವರಿಕೆಯಾಗುತ್ತದೆ.

ತಾವತ್ಸತ್ಯಂ ಜಗದ್ಭಾತಿ ಶುಕ್ತಿಕಾರಜತಂ ಯಥಾ .
ಯಾವನ್ನ ಜ್ಞಾಯತೇ ಬ್ರಹ್ಮ ಸರ್ವಾಧಿಷ್ಠಾನಮದ್ವಯಂ .. ೭..

ಈ ಎಲ್ಲಾ ಸೃಷ್ಟಿಯ ಆಧಾರವಾದ ಬ್ರಹ್ಮನು ಸಾಕ್ಷಾತ್ಕಾರವಾಗದಿರುವವರೆಗೆ, ಕಪ್ಪೆಚಿಪ್ಪು ಬೆಳ್ಳಿಯಂತೆ ಕಾಣುವಂತೆ ಭ್ರಮೆಯಿಂದ ಈ ಜಗತ್ತು ಸತ್ಯ ಎಂದು ತೋರುತ್ತದೆ. 

ಉಪಾದಾನೇಽಖಿಲಾಧಾರೇ ಜಗಂತಿ ಪರಮೇಶ್ವರೇ .
ಸರ್ಗಸ್ಥಿತಿಲಯಾನ್ ಯಾಂತಿ ಬುದ್ಬುದಾನೀವ ವಾರಿಣಿ .. ೮..  

ನೀರಿನಲ್ಲಿರುವ ಗುಳ್ಳೆಗಳು ಉದ್ಭವವಾಗುತ್ತ ನಾಶವಾಗುತ್ತ ಇರುವಂತೆ, ಲೋಕಗಳು ಹುಟ್ಟಿ, ಅಸ್ತಿತ್ವದಲ್ಲಿದ್ದು, ಎಲ್ಲಕ್ಕೂ ಆಧಾರವಾಗಿರುವ ಪರಮಾತ್ಮನಲ್ಲಿ ಲೀನವಾಗುತ್ತವೆ.

ಸಚ್ಚಿದಾತ್ಮನ್ಯನುಸ್ಯೂತೇ ನಿತ್ಯೇ ವಿಷ್ಣೌ ಪ್ರಕಲ್ಪಿತಾಃ .
ವ್ಯಕ್ತಯೋ ವಿವಿಧಾಃ ಸರ್ವಾ ಹಾಟಕೇ ಕಟಕಾದಿವತ್ .. ೯..

ಚಿನ್ನದಿಂದ ಮಾಡಿದ ವಿವಿಧ ಆಭರಣಗಳು ಮೂಲತಃ ಚಿನ್ನವೇ ಆಗಿರುವಂತೆ, ಎಲ್ಲಾ ವಿವಿಧ ರೂಪಗಳು ಗ್ರಹಿಸುವವನ ಕಲ್ಪನೆಯಲ್ಲಿ ಮಾತ್ರ ಅಸ್ತಿತ್ವದಲ್ಲಿವೆ, ಅವೆಲ್ಲವುಗಳ ಆಧಾರ ಶಾಶ್ವತ ಮತ್ತು ಸರ್ವವ್ಯಾಪಿ, ಸಚ್ಚಿದಾತ್ಮನಾದ ವಿಷ್ಣು, 

ಇಲ್ಲಿ ವಿವಿಧ ರೂಪಗಳು ಎಂದರೆ ಅಸಂಖ್ಯ ಜೀವ, ಮನುಷ್ಯ ಮಾತ್ರವಲ್ಲ ಪಶು, ಪಕ್ಷಿ ,ಮೃಗ, ದೇವ, ಯಕ್ಷ, ಕಿನ್ನರ ಇತ್ಯಾದಿ.

ಯಥಾಕಾಶೋ ಹೃಷೀಕೇಶೋ ನಾನೋಪಾಧಿಗತೋ ವಿಭುಃ .
ತದ್ಭೇದಾದ್ಭಿನ್ನವದ್ಭಾತಿ ತನ್ನಾಶೇ ಕೇವಲೋ ಭವೇತ್ .. ೧೦..

ಎಲ್ಲೆಡೆ ವ್ಯಾಪಿಸಿರುವ ಆಕಾಶವು ಪರಸ್ಪರ ಭಿನ್ನವಾಗಿರುವ ಪದವಿಗಳ ಕಾರಣದಿಂದ ವೈವಿಧ್ಯಮಯವಾಗಿ ಕಾಣುತ್ತದೆ ಮತ್ತು ಆ ಪದವಿಗಳ ನಾಶದ ನಂತರ ಒಂದೇ ಆಗುತ್ತದೆ, ಹಾಗೆಯೇ ಸರ್ವವ್ಯಾಪಿ ಭಗವಂತನು ವಿವಿಧ ಪದವಿಗಳೊಂದಿಗಿನ ಸಂಬಂಧದಿಂದಾಗಿ ವೈವಿಧ್ಯಮಯವಾಗಿ ಕಾಣಿಸಿಕೊಳ್ಳುತ್ತಾನೆ ಮತ್ತು ಈ ಪದವಿಗಳ ನಾಶದ ನಂತರ ಒಂದಾಗುತ್ತಾನೆ.

ಉದಾ: ಮಡಿಕೆಯಲ್ಲಿರುವ ಆಕಾಶ ಮಡಿಕೆಯಂತೆ ಕಾಣುತ್ತದೆ. ಮಡಿಕೆ ನಾಶವಾದಾಗ ಪೂರ್ವ ಸ್ವರೂಪ ತೋರುತ್ತದೆ. 

ನಾನೋಪಾಧಿವಶಾದೇವ ಜಾತಿವರ್ಣಾಶ್ರಮಾದಯಃ .   
ಆತ್ಮನ್ಯಾರೋಪಿತಾಸ್ತೋಯೇ ರಸವರ್ಣಾದಿ ಭೇದವತ್ .. ೧೧..

ಬೇರೆ ಬೇೆರೆ ಸುವಾಸನೆ, ಬಣ್ಣ ಇತ್ಯಾದಿ ಸೇರಿ ನೀರನ್ನು ಬೇರೆ ಬೇರೆ ತರಹವಾಗಿ ಉಂಟು ಮಾಡುವಂತೆ ವಿವಿಧ ಉಪಾಧಿಗಳೊಂದಿಗಿನ (ಶರೀರ, ಮನಸ್ಸು, ಬುದ್ಧಿ ಇತ್ಯಾದಿ) ಸಂಬಂಧದಿಂದಾಗಿ, ಜಾತಿ, ವರ್ಣ ಮತ್ತು ಸ್ಥಾನಮಾನದಂತಹ ವಿಚಾರಗಳು ಆತ್ಮದ ಮೇಲೆ ಆರೋಪಿತವಾಗುತ್ತವೆ, 

ಪಂಚೀಕೃತಮಹಾಭೂತಸಂಭವಂ ಕರ್ಮಸಂಚಿತಂ .
ಶರೀರಂ ಸುಖದುಃಖಾನಾಂ ಭೋಗಾಯತನಮುಚ್ಯತೇ .. ೧೨..

ಈ ಶ್ಲೋಕ ಸ್ಥೂಲ ಶರೀರವನ್ನು ವಿವರಿಸುತ್ತದೆ - ಸುಖ-ದುಃಖಗಳನ್ನು ಅನುಭವಿಸುವ ಮಾಧ್ಯಮವಾದ ಸ್ಥೂಲ ಶರೀರವು ಪೂರ್ವ ಕರ್ಮಗಳಿಂದ ನಿರ್ಧರಿತವಾಗಿದೆ ಮತ್ತು ಪಂಚಮಹಾಭೂತಗಳ ಸೂಕ್ಷ್ಮ ಅಂಶಗಳ ಪಂಚೀಕರಣದಿಂದ ರೂಪಗೊಳ್ಳುತ್ತದೆ - (ಒಂದು ಸೂಕ್ಷ್ಮ ಅಂಶದ ಅರ್ಧ ಭಾಗವು ಇತರ ನಾಲ್ಕರಲ್ಲಿ ಪ್ರತಿಯೊಂದರ ಎಂಟನೇ ಒಂದು ಭಾಗದೊಂದಿಗೆ ಸಂಯೋಜನೆ ಹೊಂದಿದಾಗ ಸ್ಥೂಲ ರೂಪವಾಗುತ್ತದೆ.- ಇದನ್ನು ಪಂಚೀಕರಣ ಎನ್ನುತ್ತಾರೆ)

ಪಂಚಪ್ರಾಣಮನೋಬುದ್ಧಿದಶೇಂದ್ರಿಯಸಮನ್ವಿತಂ .
ಅಪಂಚೀಕೃತಭೂತೋತ್ಥಂ ಸೂಕ್ಷ್ಮಾಂಗಂ ಭೋಗಸಾಧನಂ .. ೧೩..

ಈ ಶ್ಲೋಕ ಸೂಕ್ಷ್ಮ ಶರೀರವನ್ನು ವಿವರಿಸುತ್ತದೆ - ಭೋಗದ ಅನುಭವದ ಸಾಧನವಾದ ಸೂಕ್ಷ್ಮ ಶರೀರವು ಪಂಚ ಪ್ರಾಣಗಳು, ಹತ್ತು ಅಂಗಗಳು, ಮನಸ್ಸು ಮತ್ತು ಬುದ್ಧಿಗಳನ್ನು ಒಳಗೊಂಡಿದೆ - ಅದು ಪಂಚೀಕೃತವಾಗಿರದ ಪಂಚಮಹಾಭೂತಗಳಿಂದ ರೂಪಗೊಂಡಿವೆ.

ಪಂಚಪ್ರಾಣಗಳು - ಪ್ರಾಣ, ಅಪಾನ, ಉಡಾನ, ವ್ಯಾನ, ಸಮಾನ
ದಶೇಂದ್ರಿಯಗಳು - ಐದು ಜ್ಞಾನೇಂದ್ರಿಯಗಳ, ಐದು ಕರ್ಮೇಂದ್ರಿಯಗಳು  

ಅನಾದ್ಯವಿದ್ಯಾಽನಿರ್ವಾಚ್ಯಾ ಕಾರಣೋಪಾಧಿರುಚ್ಯತೇ .
ಉಪಾಧಿತ್ರಿತಯಾದನ್ಯಮಾತ್ಮಾನಮವಧಾರಯೇತ್ .. ೧೪..

ಅನಿರ್ವಚನೀಯ ಮತ್ತು ಅನಾದಿಯಾದ ಅವಿದ್ಯೆಯೇ ಕಾರಣ ಶರೀರವಾಗಿದೆ. ಇದೂ ಆತ್ಮದ ಒಂದು ಉಪಾಧಿಯೇ ಆಗಿದೆ. 

ಆತ್ಮವು ಈ ಮೂರು(ಸ್ಥೂಲ, ಸೂಕ್ಷ್ಷ ಹಾಗೂ ಕಾರಣ) ಶರೀರಗಳಿಂದ (ಉಪಾಧಿಗಳಿಂದ) ಬೇರೆಯಾಗಿದೆ ಎಂದು ಖಚಿತವಾಗಿ ತಿಳಿ.

ಕಾರಣ ಶರೀರ - ಸ್ಥೂಲ ಹಾಗೂ ಸೂಕ್ಷ್ಮ ಶರೀರಗಳಿಗೆ ಕಾರಣಿಭೂತವಾದದ್ದು ಕಾರಣ ಶರೀರ.  

ಪಂಚಕೋಶಾದಿಯೋಗೇನ ತತ್ತನ್ಮಯ ಇವ ಸ್ಥಿತಃ .
ಶುದ್ಧಾತ್ಮಾ ನೀಲವಸ್ತ್ರಾದಿಯೋಗೇನ ಸ್ಫಟಿಕೋ ಯಥಾ .. ೧೫..

ಪಂಚ ಕೋಶಗಳೊಂದಿಗಿನ ಸಂಪರ್ಕದಿಂದ, ನಿರ್ಮಲ ಆತ್ಮವು ಅವುಗಳ ಗುಣಗಳನ್ನು ಎರವಲು ಪಡೆದಂತೆ ಕಾಣುತ್ತದೆ; ಉದಾ - ಒಂದು ಸ್ಫಟಿಕ ಪಾರದರ್ಶಕವಾದರೂ ಅದು ತನ್ನ ಸುತ್ತಮುತ್ತಲಿನ ನೀಲಿ ಬಟ್ಟೆಯಿಂದ ನೀಲಿ ಬಣ್ಣದ್ದಾಗ ಕಾಣುತ್ತದೆ.

ಪಂಚ ಕೋಶಗಳು - ಅನ್ನಮಯ, ಪ್ರಾಣಮಯ, ಮನೋಮಯ, ವಿಜ್ಞಾನಮಯ, ಆನಂದಮಯ. ಈ ಐದೂ ಕೋಶಗಳನ್ನೂ ತೆಗೆದುಹಾಕಿದ ನಂತರ ಉಳಿಯುವದೇ ಜ್ಞಾನರೂಪವಾದ, ಸಾಕ್ಷಿಯಾದ, ನಿರ್ಗುಣವಾದ ಆತ್ಮ. 

ವಪುಸ್ತುಷಾದಿಭಿಃ ಕೋಶೈರ್ಯುಕ್ತಂ ಯುಕ್ತ್ಯವಘಾತತಃ . 
ಆತ್ಮಾನಮಂತರಂ ಶುದ್ಧಂ ವಿವಿಚ್ಯಾತ್ತಂಡುಲಂ ಯಥಾ .. ೧೬.. 

ಭತ್ತದ ಕಾಳನ್ನು ಹೊಡೆದು ಅದರ ಹೊಟ್ಟಿನಿಂದ ಬೇರ್ಪಡಿಸುವಂತೆ, ವಿವೇಕದಿಂದ ಶುದ್ಧ ಮತ್ತು ಅಂತರಂಗದ ಆತ್ಮವನ್ನು ಅದನ್ನು ಆವರಿಸಿರುವ ಪಂಚಕೋಶಗಳಿಂದ ಬೇರ್ಪಡಿಸಬೇಕು.

ಸದಾ ಸರ್ವಗತೋಽಪ್ಯಾತ್ಮಾ ನ ಸರ್ವತ್ರಾವಭಾಸತೇ .
ಬುದ್ಧಾವೇವಾವಭಾಸೇತ ಸ್ವಚ್ಛೇಷು ಪ್ರತಿಬಿಂಬವತ್ .. ೧೭..

ಸರ್ವವ್ಯಾಪಿಯಾಗಿದ್ದರೂ, ಆತ್ಮವು ಎಲ್ಲದರಲ್ಲೂ ಕಾಣುವದಿಲ್ಲ; ಅದು ಶುದ್ಧವಾದ ಕನ್ನಡಿಯಲ್ಲಿ ಮಾತ್ರ ಪ್ರತಿಬಿಂಬ ಕಾಣುವಂತೆ ಬುದ್ಧಿಯಲ್ಲಿ ಮಾತ್ರ ಪ್ರಕಟವಾಗುತ್ತದೆ.

ದೇಹೇಂದ್ರಿಯಮನೋಬುದ್ಧಿಪ್ರಕೃತಿಭ್ಯೋ ವಿಲಕ್ಷಣಂ .
ತದ್ವೃತ್ತಿಸಾಕ್ಷಿಣಂ ವಿದ್ಯಾದಾತ್ಮಾನಂ ರಾಜವತ್ಸದಾ .. ೧೮..

ಆತ್ಮವು ಯಾವಾಗಲೂ ರಾಜನಂತೆಯೇ, ದೇಹ, ಇಂದ್ರಿಯಗಳು, ಮನಸ್ಸು ಮತ್ತು ಬುದ್ಧಿಶಕ್ತಿ, ಪ್ರಕೃತಿಗಳಿಂದ ಭಿನ್ನವಾಗಿರುತ್ತದೆ, ಮತ್ತು ಅವುಗಳ ಕಾರ್ಯಗಳಿಗೆ ಸಾಕ್ಷಿಯಾಗಿರುತ್ತವೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು.

ರಾಜನು ಸಿಂಹಾಸನದಲ್ಲಿ ಕುಳಿತು ಎಲ್ಲರ ಕಾರ್ಯವನ್ನು ವೀಕ್ಷಿಸುವಂತೆ, ಆತ್ಮವು ದೇಹದಲ್ಲಿ ದೇಹ, ಇಂದ್ರಿಯಗಳು, ಮನಸ್ಸು ಇತ್ಯಾದಿಗಳ ಕಾರ್ಯಗಳ ಸಾಕ್ಷಿಯಾಗಿ ಕುಳಿತಿರುತ್ತದೆ, ಆದರೆ ಅದು ಬೆಳಕು, ಪ್ರಜ್ಞೆ ಮತ್ತು ಆನಂದದ ಸ್ವರೂಪದ್ದಾಗಿರುವುದರಿಂದ ಇವೆಲ್ಲವುಗಳಿಗಿಂತ ಭಿನ್ನವಾಗಿದೆ.

ವ್ಯಾಪೃತೇಷ್ವಿಂದ್ರಿಯೇಷ್ವಾತ್ಮಾ ವ್ಯಾಪಾರೀವಾವಿವೇಕಿನಾಂ .
ದೃಶ್ಯತೇಽಭ್ರೇಷು ಧಾವತ್ಸು ಧಾವನ್ನಿವ ಯಥಾ ಶಶೀ .. ೧೯..

ಆಕಾಶದಲ್ಲಿ ಮೋಡಗಳು ಚಲಿಸುವಾಗ ಚಂದ್ರನೇ ಚಲಿಸುತ್ತಿರುವಂತೆ ಕಾಣುವ ಹಾಗೆ, ಅವಿವೇಕಿಗಳಿಗೆ ಇಂದ್ರಿಯಗಳು ಸಕ್ರಿಯವಾಗಿದ್ದಾಗ ಆತ್ಮವೇ ಸಕ್ರಿಯವಾಗಿರುವಂತೆ ಕಾಣುತ್ತದೆ.

(ಆತ್ಮ ದೇಹದಲ್ಲಿ ಏನು ನಡೆಯುತ್ತಿದೆ ಎಂಬುದರ ಸಾಕ್ಷಿಯಾಗಿದ್ದರೂ, ವಿವೇಚನೆಯನ್ನು ಕಲಿಯದ ಅವಿವೇಕಿಯ ದೃಷ್ಟಿಯಲ್ಲಿ, ಆತ್ಮವೇ ಕಾರ್ಯನಿರ್ವಹಿಸುತ್ತಿರುವಂತೆ ತೋರುತ್ತದೆ.) 

ಆತ್ಮಚೈತನ್ಯಮಾಶ್ರಿತ್ಯ ದೇಹೇಂದ್ರಿಯಮನೋಧಿಯಃ .
ಸ್ವಕ್ರಿಯಾರ್ಥೇಷು ವರ್ತಂತೇ ಸೂರ್ಯಾಲೋಕಂ ಯಥಾ ಜನಾಃ . ೨೦..

ಸೂರ್ಯನ ಬೆಳಕನ್ನು ಆಧರಿಸಿ ಲೋಕದ ಜನ ತಮ್ಮ ಕಾರ್ಯ ಮಾಡುವಂತೇ ಆತ್ಮದ ಚೈತನ್ಯವನ್ನು ಆಧರಿಸಿ ದೇಹ, ಇಂದ್ರಿಯ, ಮನ, ಬುದ್ಧಿಗಳು ತಮ್ಮ ತಮ್ಮ ಕಾರ್ಯ ನಿರ್ವಹಿಸುತ್ತವೆ

ದೇಹೇಂದ್ರಿಯಗುಣಾನ್ಕರ್ಮಾಣ್ಯಮಲೇ ಸಚ್ಚಿದಾತ್ಮನಿ .
ಅಧ್ಯಸ್ಯಂತ್ಯವಿವೇಕೇನ ಗಗನೇ ನೀಲತಾದಿವತ್ .. ೨೧..

ನೀಲಿ ಇತ್ಯಾದಿ ಬಣ್ಣಗಳು ಪರಿಶುದ್ಧ ಆಕಾಶದ ಮೇಲೆ ಹೇರಲ್ಪಟ್ಟಂತೆ, ದೇಹ ಮತ್ತು ಇಂದ್ರಿಯಗಳ ಗುಣಗಳು ಮತ್ತು ಕರ್ಮಗಳು, (ಮೂರ್ಖರಿಂದ) ಅವಿವೇಕದಿಂದ, ಅಸ್ತಿತ್ವ ಮತ್ತು ಪ್ರಜ್ಞೆಯನ್ನು ಹೊಂದಿರುವ ಶುದ್ಧ ಆತ್ಮದ ಮೇಲೆ ಹೇರಲ್ಪಟ್ಟಿವೆ.

ಅಜ್ಞಾನಾನ್ಮಾನಸೋಪಾಧೇಃ ಕರ್ತೃತ್ವಾದೀನಿ ಚಾತ್ಮನಿ .
ಕಲ್ಪ್ಯಂತೇಽಮ್ಬುಗತೇ ಚಂದ್ರೇ ಚಲನಾದಿ ಯಥಾಂಭಸಃ . ೨೨..

ಅಜ್ಞಾನದ ಕಾರಣದಿಂದ ನೀರಿನ ಅಲೆಗಳು, ಚಲನ-ವಲನಗಳು  ಅದರ ಮೇಲೆ ನರ್ತಿಸುವ ಚಂದ್ರನದ್ದೆಂದು ಹೇಳಲಾಗುತ್ತದೆ; ಅದೇ ರೀತಿ ಕರ್ತೃತ್ವ, ಆನಂದ ಮತ್ತು ಇತರ ಮಿತಿಗಳು ನಿಜವಾಗಿಯೂ ಮನಸ್ಸಿಗೆ ಸೇರಿದ್ದಾದರೂ ಭ್ರಮೆಯಿಂದ ಆತ್ಮದ ಸ್ವಭಾವವೆಂದು  ಅರ್ಥೈಸಲಾಗುತ್ತದೆ.

ರಾಗೇಚ್ಛಾಸುಖದುಃಖಾದಿ ಬುದ್ಧೌ ಸತ್ಯಾಂ ಪ್ರವರ್ತತೇ .
ಸುಷುಪ್ತೌ ನಾಸ್ತಿ ತನ್ನಾಶೇ ತಸ್ಮಾದ್ಬುದ್ಧೇಸ್ತು ನಾತ್ಮನಃ .. ೨೩..

ರಾಗ, ಆಸೆ, ಸುಖ, ದುಃಖ ಇತ್ಯಾದಿಗಳು ಬುದ್ಧಿ  ಕಾರ್ಯನಿರ್ವಹಿಸುವಾಗ ಮಾತ್ರ ಗ್ರಹಿಕೆಗೆ ಬರುತ್ತದೆ. ಆಳವಾದ ನಿದ್ರೆಯಲ್ಲಿ (ಸುಷುಪ್ತಿಯಲ್ಲಿ) ಮನಸ್ಸು ಮತ್ತು ಬುದ್ಧಿ ಕೆಲಸ ಮಾಡದಿದ್ದಾಗ ಇವುಗಳನ್ನು ಗ್ರಹಿಸಲಾಗುವುದಿಲ್ಲ. ಆದ್ದರಿಂದ ಈ ಭಾವನೆಗಳು ಬುದ್ಧಿಗೆ ಮಾತ್ರ ಸೇರಿವೆ, ಆತ್ಮಕ್ಕೆ ಅಲ್ಲ.

ಪ್ರಕಾಶೋಽರ್ಕಸ್ಯ ತೋಯಸ್ಯ ಶೈತ್ಯಮಗ್ನೇರ್ಯಥೋಷ್ಣತಾ .
ಸ್ವಭಾವಃ ಸಚ್ಚಿದಾನಂದನಿತ್ಯನಿರ್ಮಲತಾತ್ಮನಃ .. ೨೪..

ಸೂರ್ಯನ ಸ್ವಭಾವವು ಪ್ರಕಾಶ, ನೀರಿನ ಸ್ವಭಾವವು ತಂಪು ಮತ್ತು ಬೆಂಕಿಯ ಸ್ವಭಾವವು ಉಷ್ಣವಾಗಿರುವಂತೆ, ಆತ್ಮನ ಸ್ವಭಾವವು ನಿತ್ಯತೆ, ನಿರ್ಮಲತೆ, ವಾಸ್ತವ, ಪ್ರಜ್ಞೆ ಮತ್ತು ಆನಂದವಾಗಿದೆ. 

ಆತ್ಮನಃ ಸಚ್ಚಿದಂಶಶ್ಚ ಬುದ್ಧೇರ್ವೃತ್ತಿರಿತಿ ದ್ವಯಂ .
ಸಂಯೋಜ್ಯ ಚಾವಿವೇಕೇನ ಜಾನಾಮೀತಿ ಪ್ರವರ್ತತೇ .. ೨೫..

ಆತ್ಮದ ಸತ್-ಚಿತ್-ಅಂಶ ಮತ್ತು ಬುದ್ಧಿ ವೃತ್ತಿ ಈ ಎರಡರ ವಿವೇಚನಾರಹಿತ ಮಿಶ್ರಣದಿಂದ "ನನಗೆ ತಿಳಿದಿದೆ (ಜಾನಾಮಿ)" ಎಂಬ ಕಲ್ಪನೆ ಉದ್ಭವಿಸುತ್ತದೆ.

ಆತ್ಮನೋ ವಿಕ್ರಿಯಾ ನಾಸ್ತಿ ಬುದ್ಧೇರ್ಬೋಧೋ ನ ಜಾತ್ವಿತಿ .  
ಜೀವಃ ಸರ್ವಮಲಂ ಜ್ಞಾತ್ವಾ ಜ್ಞಾತಾ ದ್ರಷ್ಟೇತಿ ಮುಹ್ಯತಿ .. ೨೬..

ಆತ್ಮನು ನಿರ್ವಿಕಾರ ಮತ್ತು ಬುದ್ಧಿಗೆ ಸ್ವತಃ ತಿಳಿದುಕೊಳ್ಳುವ ಸಾಮರ್ಥ್ಯವಿಲ್ಲ; ಆದರೂ ಅವುಗಳನ್ನು ಅನುಭವಿಸುವ ವ್ಯಕ್ತಿತ್ವವು "ನಾನು ಬಲ್ಲವನು ಮತ್ತು ನೋಡುವವನು ಇತ್ಯಾದಿ" ಎಂದುಕೊಂಡು ಭ್ರಮೆಗೆ ಒಳಗಾಗುತ್ತದೆ.

ರಜ್ಜುಸರ್ಪವದಾತ್ಮಾನಂ ಜೀವಂ ಜ್ಞಾತ್ವಾ ಭಯಂ ವಹೇತ್ .
ನಾಹಂ ಜೀವಃ ಪರಾತ್ಮೇತಿ ಜ್ಞಾತಂ ಚೇನ್ನಿರ್ಭಯೋ ಭವೇತ್ .. ೨೭..

ಹಗ್ಗವನ್ನು ಹಾವು ಎಂದು ಪರಿಗಣಿಸುವ ವ್ಯಕ್ತಿಯು ಭಯದಿಂದ ನಡುಗುವಂತೆ, ತನ್ನನ್ನು ತಾನು ಅಹಂಕಾರ (ಜೀವ) ಎಂದು ಪರಿಗಣಿಸುವವನು ಭಯ ಪಡುತ್ತಾನೆ. ನಮ್ಮಲ್ಲಿರುವ ಅಹಂ-ಕೇಂದ್ರಿತ ವ್ಯಕ್ತಿತ್ವವು, ತಾನು ಜೀವವಲ್ಲ, ಸ್ವತಃ ಪರಮಾತ್ಮ ಎಂದು ಅರಿತುಕೊಳ್ಳುವ ಮೂಲಕ ನಿರ್ಭಯ ಧೈರ್ಯವನ್ನು ಮರಳಿ ಪಡೆಯುತ್ತದೆ.

ಆತ್ಮಾವಭಾಸಯತ್ಯೇಕೋ ಬುದ್ಧ್ಯಾದೀನೀಂದ್ರಿಯಾಣ್ಯಪಿ .
ದೀಪೋ ಘಟಾದಿವತ್ಸ್ವಾತ್ಮಾ ಜಡೈಸ್ತೈರ್ನಾವಭಾಸ್ಯತೇ .. ೨೮..

ದೀಪವು ಒಂದು ಪಾತ್ರೆ ಅಥವಾ ಮಡಿಕೆಯನ್ನು ಬೆಳಗುವಂತೆ, ಆತ್ಮವು ಮನಸ್ಸು, ಬುದ್ಧಿ ಮತ್ತು ಇಂದ್ರಿಯಗಳು ಇತ್ಯಾದಿಗಳನ್ನು ಪ್ರಕಾಶಿಸುತ್ತದೆ. ಈ ವಸ್ತುಗಳು - ಮನ, ಬುದ್ಧಿ, ಇಂದ್ರಿಯಗಳು ಜಡವಾಗಿರುವುದರಿಂದ ಅವು ಸ್ವತಃ ತಮ್ಮನ್ನು ತಾವು ಅಥವಾ ಬೇರೆಯವುಗಳನ್ನು ಪ್ರಕಾಶಿಸಲು ಸಾಧ್ಯವಿಲ್ಲ.

ಸ್ವಬೋಧೇ ನಾನ್ಯಬೋಧೇಚ್ಛಾ ಬೋಧರೂಪತಯಾತ್ಮನಃ .
ನ ದೀಪಸ್ಯಾನ್ಯದೀಪೇಚ್ಛಾ ಯಥಾ ಸ್ವಾತ್ಮಪ್ರಕಾಶನೇ .. ೨೯..

ಬೆಳಗಿದ ದೀಪಕ್ಕೆ ಅದನ್ನು ಬೆಳಗಿಸಲು ಇನ್ನೊಂದು ದೀಪದ ಅಗತ್ಯವಿಲ್ಲ. ಹಾಗೆಯೇ, ಜ್ಞಾನ ಸ್ವರೂಪವಾಗಿರುವ ಆತ್ಮಕ್ಕೆ ತನ್ನನ್ನು ತಿಳಿಯಲು ಬೇರೆ ಯಾವುದೇ ಜ್ಞಾನದ ಅಗತ್ಯವಿಲ್ಲ.

ನಿಷಿಧ್ಯ ನಿಖಿಲೋಪಾಧೀನ್ನೇತಿ ನೇತೀತಿ ವಾಕ್ಯತಃ .
ವಿದ್ಯಾದೈಕ್ಯಂ ಮಹಾವಾಕ್ಯೈರ್ಜೀವಾತ್ಮಪರಮಾತ್ಮನೋಃ .. ೩೦..

'ಇದಲ್ಲ, ಇದಲ್ಲ'  (ನೇತಿ, ನೇತಿ) ಎಂಬ ವಾಕ್ಯದ ಸಹಾಯದಿಂದ ಉಪಾಧಿಗಳನ್ನು ನಿರಾಕರಿಸುವ ಪ್ರಕ್ರಿಯೆಯ ಮೂಲಕ, ಮಹಾವಾಕ್ಯ ಸೂಚಿಸಿದಂತೆ ವೈಯಕ್ತಿಕ ಆತ್ಮ ಮತ್ತು ಪರಮಾತ್ಮನ ಏಕತೆಯನ್ನು ಅರಿತುಕೊಳ್ಳಬೇಕು.

"ನೇತಿ ನೇತಿ" ಈ ವಾಕ್ಯ ಬ್ರಹದಾರಣ್ಯಕ ಉಪನಿಷತ್ತಿನಲ್ಲಿದೆ. ಇದರ ಪ್ರಕಾರ ಹೆಸರು, ರೂಪ, ಕಾರ್ಯ, ಗುಣ ಇತ್ಯಾದಿಗಳು ಯಾವವೂ ಆತ್ಮವಲ್ಲ. ನಿರಾಕರಣೆಯ ಮಾರ್ಗದಿಂದ ಆತ್ಮನನ್ನು ಅರಿತುಕೊಳ್ಳಲು ಈ ವಾಕ್ಯ ಸಹಾಯ ಮಾಡುತ್ತದೆ. 

ಆವಿದ್ಯಕಂ ಶರೀರಾದಿ ದೃಶ್ಯಂ ಬುದ್ಬುದವತ್ಕ್ಷರಂ .
ಏತದ್ವಿಲಕ್ಷಣಂ ವಿದ್ಯಾದಹಂ ಬ್ರಹ್ಮೇತಿ ನಿರ್ಮಲಂ .. ೩೧..

(ಸ್ಥೂಲ) ದೇಹದಿಂದ ಕಾರಣ ಶರೀರ ಇತ್ಯಾದಿಗಳು ದೃಶ್ಯ ಅಂದರೆ ಗ್ರಹಿಸಬಲ್ಲ ವಸ್ತುಗಳು. ಗುಳ್ಳೆಗಳಂತೆ ನಾಶವಾಗುವ ವಸ್ತುಗಳು. ನಾನು ಇವುಗಳಿಂದ ಸಂಪೂರ್ಣವಾಗಿ ಪ್ರತ್ಯೇಕವಾದವನು, 'ಶುದ್ಧ ಬ್ರಹ್ಮ' , ನಿರ್ಮಲನು ಎಂದು ವಿವೇಚನೆಯಿಂದ ಅರಿತುಕೊ.

ದೇಹಾನ್ಯತ್ವಾನ್ನ ಮೇ ಜನ್ಮಜರಾಕಾರ್ಶ್ಯಲಯಾದಯಃ .
ಶಬ್ದಾದಿವಿಷಯೈಃ ಸಂಗೋ ನಿರಿಂದ್ರಿಯತಯಾ ನ ಚ .. ೩೨..

ನಾನು ದೇಹವಲ್ಲವಾಗಿದ್ದರಿಂದ ಜನನ, ಸುಕ್ಕು, ವೃದ್ಧಾಪ್ಯ, ಸಾವು ಮುಂತಾದವುಗಳಿಂದ ಮುಕ್ತನಾಗಿದ್ದೇನೆ. ಶಬ್ದ, ರುಚಿಯಂತಹ ಇಂದ್ರಿಯ ವಸ್ತುಗಳೊಂದಿಗೆ ನನಗೆ ಯಾವುದೇ ಸಂಬಂಧವಿಲ್ಲ, ಯಾಕೆಂದರೆ ನನಗೆ ಇಂದ್ರಿಯಗಳಿಲ್ಲ.

ಅಮನಸ್ತ್ವಾನ್ನ ಮೇ ದುಃಖರಾಗದ್ವೇಷಭಯಾದಯಃ .
ಅಪ್ರಾಣೋ ಹ್ಯಮನಾಃ ಶುಭ್ರ ಇತ್ಯಾದಿ ಶ್ರುತಿಶಾಸನಾತ್ .. ೩೩..

ನಾನು ಮನಸ್ಸನ್ನು ಮೀರಿದವನು ಮತ್ತು ಆದ್ದರಿಂದ ನಾನು ದುಃಖ, ಮೋಹ, ದ್ವೇಷ ಮತ್ತು ಭಯದಿಂದ ಮುಕ್ತನಾಗಿದ್ದೇನೆ, ಏಕೆಂದರೆ "ಅವನು ಪ್ರಾಣ ಮತ್ತು ಮನಸ್ಸಿಲ್ಲದವನು, ಶುದ್ಧನು" ಇತ್ಯಾದಿ ಎಂಬುದು ಶೃತಿಯ(ಉಪನಿಷತ್ತುಗಳ) ಆಜ್ಞೆಯಾಗಿದೆ.

ಆತ್ಮವು ಸ್ಥೂಲ, ಸೂಕ್ಷ್ಮ ಹಾಗೂ ಕಾರಣ ಶರೀರದಿಂದ ಹೊರತಾದದ್ದು ಹಾಗಾಗಿ ಅದು ಅಪ್ರಾಣ, ಅಮನ ಹಾಗೂ ಶುದ್ಧ. 

"ಅಪ್ರಾಣ ಹ್ಯಮನಾಃ ಶುಭ್ರೋ ಹ್ಯಕ್ಷರಾತ್ಪರತಃ ಪರಃ" ಮುಂಡಕ ಉಪನಿಷತ್

ನಿರ್ಗುಣೋ ನಿಷ್ಕ್ರಿಯೋ ನಿತ್ಯೋ ನಿರ್ವಿಕಲ್ಪೋ ನಿರಂಜನಃ .
ನಿರ್ವಿಕಾರೋ ನಿರಾಕಾರೋ ನಿತ್ಯಮುಕ್ತೋಽಸ್ಮಿ ನಿರ್ಮಲಃ .. ೩೪..

ನಾನು ಗುಣರಹಿತನು, ಕ್ರಿಯಾರಹಿತನು, ಶಾಶ್ವತನು, ಬದಲಾಗದ,  ದೋಷರಹಿತನು, ನಿರ್ವಿಕಾರ, ಆಕಾರವಿಲ್ಲದ ಸದಾ ಮುಕ್ತ ಹಾಗೂ ನಿರ್ಮಲನು.

ಅಹಮಾಕಾಶವತ್ಸರ್ವಂ ಬಹಿರಂತರ್ಗತೋಽಚ್ಯುತಃ .
ಸದಾ ಸರ್ವಸಮಃ ಸಿದ್ಧೋ ನಿಃಸಂಗೋ ನಿರ್ಮಲೋಽಚಲಃ .. ೩೫..

ಆಕಾಶದಂತೆ ನಾನು ಒಳಗೆ ಮತ್ತು ಹೊರಗೆ ಎಲ್ಲವನ್ನೂ ತುಂಬುತ್ತೇನೆ. ಎಲ್ಲದರಲ್ಲೂ ಬದಲಾವಣೆಗಳಿಲ್ಲದೆ ಮತ್ತು ಒಂದೇ ಆಗಿರುತ್ತೇನೆ, ಎಲ್ಲಾ ಸಮಯದಲ್ಲೂ ನಾನು ಶುದ್ಧ, ನಿಷ್ಕಪಟ, ನಿಸ್ಸಂಗನು ಮತ್ತು ಅಚಲನು.

ನಿತ್ಯಶುದ್ಧವಿಮುಕ್ತೈಕಮಖಂಡಾನಂದಮದ್ವಯಂ .
ಸತ್ಯಂ ಜ್ಞಾನಮನಂತಂ ಯತ್ಪರಂ ಬ್ರಹ್ಮಾಹಮೇವ ತತ್ .. ೩೬..

ನಾನು ನಿಜಕ್ಕೂ ಆ ಪರಮಬ್ರಹ್ಮ, ಶಾಶ್ವತ, ನಿರ್ಮಲ ಮತ್ತು ಮುಕ್ತ; ಏಕೈಕ, ಅವಿಭಾಜ್ಯ ಮತ್ತು ಅದ್ವೈತ; ಪರಮಾನಂದ, ಸತ್ಯ, ಜ್ಞಾನ ಮತ್ತು ಅನಂತತೆಯ ಸ್ವರೂಪವನ್ನು ಹೊಂದಿದವನು.

ಏವಂ ನಿರಂತರಾಭ್ಯಸ್ತಾ ಬ್ರಹ್ಮೈವಾಸ್ಮೀತಿ ವಾಸನಾ .
ಹರತ್ಯವಿದ್ಯಾವಿಕ್ಷೇಪಾನ್ ರೋಗಾನಿವ ರಸಾಯನಂ .. ೩೭..

ನಿರಂತರ ಅಭ್ಯಾಸದಿಂದ ಉಂಟಾಗುವ "ನಾನು ಬ್ರಹ್ಮನ್" ಎಂಬ ಭಾವನೆಯು, ಔಷಧವು ರೋಗವನ್ನು ನಾಶಮಾಡುವಂತೆಯೇ, ಅಜ್ಞಾನ ಮತ್ತು ಅದರಿಂದ ಉಂಟಾಗುವ ತಳಮಳವನ್ನು ನಾಶಪಡಿಸುತ್ತದೆ, .

ವಿವಿಕ್ತದೇಶ ಆಸೀನೋ ವಿರಾಗೋ ವಿಜಿತೇಂದ್ರಿಯಃ .
ಭಾವಯೇದೇಕಮಾತ್ಮಾನಂ ತಮನಂತಮನನ್ಯಧೀಃ .. ೩೮..

ಏಕಾಂತ ಸ್ಥಳದಲ್ಲಿ ಕುಳಿತು, ಮನಸ್ಸನ್ನು ಆಸೆಗಳಿಂದ ಮುಕ್ತಗೊಳಿಸಿ ಮತ್ತು ಇಂದ್ರಿಯಗಳನ್ನು ನಿಯಂತ್ರಿಸಿ, ಅನಂತಸ್ವರೂಪವಾದ ಆತ್ಮದ ಬಗ್ಗೆ ಅನನ್ಯ ಭಾವದಿಂದ ಧ್ಯಾನ ಮಾಡು.

ಆತ್ಮನ್ಯೇವಾಖಿಲಂ ದೃಶ್ಯಂ ಪ್ರವಿಲಾಪ್ಯ ಧಿಯಾ ಸುಧೀಃ .
ಭಾವಯೇದೇಕಮಾತ್ಮಾನಂ ನಿರ್ಮಲಾಕಾಶವತ್ಸದಾ .. ೩೯..

ಜ್ಞಾನಿಯು ಬುದ್ಧಿವಂತಿಕೆಯಿಂದ ಸಂಪೂರ್ಣ ದೃಶ್ಯ ಪ್ರಪಂಚವನ್ನು ಆತ್ಮನಲ್ಲಿಯೇ ವಿಲೀನಗೊಳಿಸಬೇಕು ಮತ್ತು ಆಕಾಶದಂತೆ ನಿರ್ಮಲವಾದ ಆತ್ಮದ ಬಗ್ಗೆ ನಿರಂತರವಾಗಿ ಯೋಚಿಸಬೇಕು.

ರೂಪವರ್ಣಾದಿಕಂ ಸರ್ವಂ ವಿಹಾಯ ಪರಮಾರ್ಥವಿತ್ .
ಪರಿಪೂರ್ಣಚಿದಾನಂದಸ್ವರೂಪೇಣಾವತಿಷ್ಠತೇ .. ೪೦..

ಪರಮಾತ್ಮನನ್ನು ಸಾಕ್ಷಾತ್ಕರಿಸಿಕೊಂಡವನು ನಾಮ ಮತ್ತು ರೂಪಗಳಂತಹ ಎಲ್ಲಾ ವಸ್ತುಗಳನ್ನು ತ್ಯಜಿಸುತ್ತಾನೆ. ಅವನು ಪರಿಪೂರ್ಣ ಮತ್ತು ಚಿದಾನಂದದ ಸಾಕಾರವಾಗಿ ವಾಸಿಸುತ್ತಾನೆ.

ಜ್ಞಾತೃಜ್ಞಾನಜ್ಞೇಯಭೇದಃ ಪರೇ ನಾತ್ಮನಿ ವಿದ್ಯತೇ .
ಚಿದಾನಂದೈಕರೂಪತ್ವಾದ್ದೀಪ್ಯತೇ ಸ್ವಯಮೇವ ತತ್ .. ೪೧. 

ಪರಮಾತ್ಮನಲ್ಲಿ  "ಜ್ಞಾನಿ", "ಜ್ಞಾನ" ಮತ್ತು "ಜ್ಞೇಯ (ಜ್ಞಾನದ ವಸ್ತು)" ಮುಂತಾದ ಯಾವುದೇ ವ್ಯತ್ಯಾಸಗಳಿಲ್ಲ.  ಆತ್ಮವು ಚಿದಾನಂದಸ್ವರೂಪನಾಗಿರುವದರಿಂದ ಸ್ವತಃ ಪ್ರಕಾಶಿಸುತ್ತದೆ.

ಏವಮಾತ್ಮಾರಣೌ ಧ್ಯಾನಮಥನೇ ಸತತಂ ಕೃತೇ .
ಉದಿತಾವಗತಿರ್ಜ್ವಾಲಾ ಸರ್ವಾಜ್ಞಾನೇಂಧನಂ ದಹೇತ್ .. ೪೨..

ಹೀಗಾಗಿ, ಆತ್ಮದ ಅರಣಿಯಲ್ಲಿ, ಧ್ಯಾನವನ್ನು ನಿರಂತರವಾಗಿ ಮಂಥನ ಮಾಡಲಾಗುತ್ತದೆ; ಉದ್ಭವಿಸುವ ಜ್ಞಾನದ ಬೆಂಕಿಯಲ್ಲಿ, ಅಜ್ಞಾನದ ಎಲ್ಲಾ ಇಂಧನವು ಸುಟ್ಟುಹೋಗುತ್ತದೆ.

ಅರಣಿ - ಕುಟ್ಟಿ ಬೆಂಕಿಯನ್ನು ಮಾಡುವ ಕೋಲು 

ಅರುಣೇನೇವ ಬೋಧೇನ ಪೂರ್ವಂ ಸಂತಮಸೇ ಹೃತೇ .
ತತ ಆವಿರ್ಭವೇದಾತ್ಮಾ ಸ್ವಯಮೇವಾಂಶುಮಾನಿವ .. ೪೩..

ಸೂರ್ಯ ಉದಯಿಸುವ ಮೊದಲೇ ದಟ್ಟವಾದ ಕತ್ತಲೆಯನ್ನು ಮುಂಜಾನೆಯ ಒಡೆಯನಾದ ಅರುಣ ದೇವ ಸ್ವತಃ  ದೂರ ಮಾಡಿರುತ್ತಾನೆ. ಹಾಗೆಯೇ ಆತ್ಮದ ದೈವಿಕ ಪ್ರಜ್ಞೆಯು ಎದೆಯಲ್ಲಿರುವ ಕತ್ತಲೆಯನ್ನು ಮೊದಲೇ ಕೊಂದಾದಾಗ ಸುಜ್ಞಾನವು ಉದಯಿಸುತ್ತದೆ.

ಆತ್ಮಾ ತು ಸತತಂ ಪ್ರಾಪ್ತೋಽಪ್ಯಪ್ರಾಪ್ತವದವಿದ್ಯಯಾ .
ತನ್ನಾಶೇ ಪ್ರಾಪ್ತವದ್ಭಾತಿ ಸ್ವಕಂಠಾಭರಣಂ ಯಥಾ .. ೪೪..

ಆತ್ಮವು ಯಾವಾಗಲೂ ಪ್ರಾಪ್ತವಾಗಿದ್ದರೂ ಅಜ್ಞಾನದಿಂದಾಗಿ ಅದು ಅಪ್ರಾಪ್ತವಾಗಿ ಕಂಡುಬರುತ್ತದೆ.ಅಜ್ಞಾನದ ನಾಶವಾದ ಮೇಲೆ ಆತ್ಮವು, ಒಬ್ಬರ ಕುತ್ತಿಗೆಯ ಮೇಲಿನ ಕಾಣೆಯಾದ ಆಭರಣ ಸಿಕ್ಕಂತೆ, ಪ್ರಾಪ್ತವಾಗುತ್ತದೆ.

ಸ್ಥಾಣೌ ಪುರುಷವದ್ಭ್ರಾಂತ್ಯಾ ಕೃತಾ ಬ್ರಹ್ಮಣಿ ಜೀವತಾ .
ಜೀವಸ್ಯ ತಾತ್ತ್ವಿಕೇ ರೂಪೇ ತಸ್ಮಿಂದೃಷ್ಟೇ ನಿವರ್ತತೇ .. ೪೫..

ಭ್ರಾಂತಿಯಿಂದ ಮರದ ಕಂಬ ಮನುಷ್ಯನಂತೆ (ಅಥವಾ ದೆವ್ವದಂತೆ) ಕಾಣುವಂತೆ, ಬ್ರಹ್ಮನು ಅಜ್ಞಾನದಿಂದ ಜೀವನಂತೆ ಕಾಣುತ್ತಾನೆ. ಜೀವದ ನಿಜವಾದ ಸ್ವರೂಪ (ಆತ್ಮ) ಸಾಕ್ಷಾತ್ಕಾರವಾದಾಗ ಈ ಜೀವತ್ವ ನಾಶವಾಗುತ್ತದೆ.

ಅದ್ವೈತದ(ಆತ್ಮ ಮತ್ತು ಪರಮಾತ್ಮರ ಏಕತೆಯ) ಜ್ಞಾನವು ಅಜ್ಞಾನದ ಪರಿಣಾಮಗಳಾದ "ನಾನು" ಮತ್ತು "ನನ್ನದು" ಮುಂತಾದ ತಪ್ಪಾದ ಕಲ್ಪನೆಗಳನ್ನು ತಕ್ಷಣವೇ ನಾಶಪಡಿಸುತ್ತದೆ. 

ತತ್ತ್ವಸ್ವರೂಪಾನುಭವಾದುತ್ಪನ್ನಂ ಜ್ಞಾನಮಂಜಸಾ .
ಅಹಂ ಮಮೇತಿ ಚಾಜ್ಞಾನಂ ಬಾಧತೇ ದಿಗ್ಭ್ರಮಾದಿವತ್ .. ೪೬..

ದಿಕ್ಕುಗಳ ಸರಿಯಾದ ಮಾಹಿತಿ ದಿಕ್ ಭ್ರಮೆಯನ್ನು  ನಾಶ ಮಾಡುವಂತೆಯೇ, ಸತ್ಯದ ಅನುಭವದ ಪರಿಣಾಮವಾಗಿ ಆತ್ಮಜ್ಞಾನ ಸಿಗುತ್ತದೆ ಮತ್ತು ತತ್ ಕ್ಷಣವೇ  "ನಾನು" ಮತ್ತು "ನನ್ನದು" ಎಂಬ ಅಜ್ಞಾನದ ಕಲ್ಪನೆಗಳು ನಾಶವಾಗುತ್ತವೆ, .

ಸಮ್ಯಗ್ವಿಜ್ಞಾನವಾನ್ ಯೋಗೀ ಸ್ವಾತ್ಮನ್ಯೇವಾಖಿಲಂ ಜಗತ್ .
ಏಕಂ ಚ ಸರ್ವಮಾತ್ಮಾನಮೀಕ್ಷತೇ ಜ್ಞಾನಚಕ್ಷುಷಾ .. ೪೭..

ಪರಿಪೂರ್ಣ ಸಾಕ್ಷಾತ್ಕಾರ ಮತ್ತು ಜ್ಞಾನೋದಯವಾದ ಯೋಗಿಯು ತನ್ನ "ಜ್ಞಾನದ ಕಣ್ಣಿನ" (ಜ್ಞಾನ ಚಕ್ಷು) ಮೂಲಕ ಇಡೀ ವಿಶ್ವವನ್ನು ತನ್ನ ಆತ್ಮದಲ್ಲಿ ನೋಡುತ್ತಾನೆ ಮತ್ತು ಎಲ್ಲವನ್ನೂ ತನ್ನದೇ ಆದ ಆತ್ಮವೆಂದು ಪರಿಗಣಿಸುತ್ತಾನೆ ಮತ್ತು ಬೇರೇನೂ ಅಲ್ಲ.

ಆತ್ಮೈವೇದಂ ಜಗತ್ಸರ್ವಮಾತ್ಮನೋಽನ್ಯನ್ನ ವಿದ್ಯತೇ .
ಮೃದೋ ಯದ್ವದ್ಘಟಾದೀನಿ ಸ್ವಾತ್ಮಾನಂ ಸರ್ವಮೀಕ್ಷತೇ .. ೪೮..

ಹೇಗೆ ಮಡಿಕೆಗಳು ಮತ್ತು ಜಾಡಿಗಳು ನಿಜವಾಗಿಯೂ ಮಣ್ಣೇ ಆಗಿವೆ, ಅವು ಮಣ್ಣಲ್ಲದೆ ಬೇರೇನೂ ಆಗಲು ಸಾಧ್ಯವಿಲ್ಲ ಹಾಗೆಯೇ ಮೂರ್ತ ಜಗತ್ತು ನಿಜಕ್ಕೂ ಆತ್ಮ; ಆತ್ಮನಲ್ಲದೆ ಬೇರೆ ಯಾವುದೂ ಇಲ್ಲ.  ಆದ್ದರಿಂದ, ಜ್ಞಾನೋದಯವಾದವರಿಗೆ, ಗ್ರಹಿಸಲ್ಪಡುವುದೆಲ್ಲವೂ ಆತ್ಮ.

ಜೀವನ್ಮುಕ್ತಸ್ತು ತದ್ವಿದ್ವಾನ್ಪೂರ್ವೋಪಾಧಿಗುಣಾಂಸ್ತ್ಯಜೇತ್ .
ಸಚ್ಚಿದಾನಂದರೂಪತ್ವಾತ್ ಭವೇದ್ಭ್ರಮರಕೀಟವತ್ .. ೪೯..

ಆತ್ಮಜ್ಞಾನ ಪಡೆದ ಜೀವನ್ಮುಕ್ತನು ತನ್ನ ಹಿಂದಿನ ಉಪಾಧಿಗಳನ್ನು ತ್ಯಜಿಸುತ್ತಾನೆ. ಜಿರಲೆ ಭ್ರಮರವಾಗಿ ಬದಲಾಗುವಂತೆ, ತಾನು ಅಸ್ತಿತ್ವ-ಜ್ಞಾನ-ಆನಂದದ ಪರಮ ಸ್ವಭಾವದವನೆಂಬ ಅರಿವಿನಿಂದ  ಅವನು ನಿಜವಾಗಿಯೂ ಬ್ರಹ್ಮನಾಗುತ್ತಾನೆ.

 (ನಮ್ಮ ಜಾನಪದ ಕಥೆಯ ಪ್ರಕಾರ, ಒಂದು ಜಿರಲೆ ಭ್ರಮರವನ್ನು ಸಮೀಪಿಸಿದಾಗ ಭಯಭೀತವಾಗುತ್ತದೆ. ಅದು ನಿರಂತರವಾಗಿ ತನ್ನ ಶತ್ರುವಿನ ಬಗ್ಗೆಯೇ ಯೋಚಿಸುತ್ತದೆ ಮತ್ತು ಭ್ರಮರವಾಗಿ ರೂಪಾಂತರಗೊಳ್ಳುತ್ತದೆ. ಹಾಗೆಯೇ ಜ್ಞಾನೋದಯವಾದ ಋಷಿಯು ನಿರಂತರವಾಗಿ ಬ್ರಹ್ಮ- ಮಾನವ, ಅಸ್ತಿತ್ವ-ಜ್ಞಾನ-ಆನಂದ - ಸಂಪೂರ್ಣ ಧ್ಯಾನ ಮಾಡುತ್ತಾನೆ ಮತ್ತು ಹೀಗೆ ಸ್ವತಃ ಬ್ರಹ್ಮನಾಗುತ್ತಾನೆ.)

ತೀರ್ತ್ವಾ ಮೋಹಾರ್ಣವಂ ಹತ್ವಾ ರಾಗದ್ವೇಷಾದಿರಾಕ್ಷಸಾನ್ .
ಯೋಗೀ ಶಾಂತಿಸಮಾಯುಕ್ತ ಆತ್ಮಾರಾಮೋ ವಿರಾಜತೇ .. ೫೦..

ಜೀವನ್ಮುಕ್ತನಾದ ಯೋಗಿಯು, ಭ್ರಮೆಯ ಸಾಗರವನ್ನು ದಾಟಿ, ಮೋಹ ಮತ್ತು ದ್ವೇಷದ ರಾಕ್ಷಸರನ್ನು ಕೊಂದ ನಂತರ, ಶಾಂತಿಯೊಂದಿಗೆ ಐಕ್ಯನಾಗುತ್ತಾನೆ ಮತ್ತು ಆತ್ಮ ಸಾಕ್ಷಾತ್ಕಾರದಿಂದ ಪಡೆದ ಆನಂದದಲ್ಲಿ ವಾಸಿಸುತ್ತಾನೆ.

ಬಾಹ್ಯಾನಿತ್ಯಸುಖಾಸಕ್ತಿಂ ಹಿತ್ವಾತ್ಮಸುಖನಿರ್ವೃತಃ.
ಘಟಸ್ಥದೀಪವಚ್ಛಶ್ವದಂತರೇವ ಪ್ರಕಾಶತೇ..51..

ಬಾಹ್ಯ ಸುಖದ ಮೇಲಿನ ಮೋಹವನ್ನು ತ್ಯಜಿಸಿ, ಆತ್ಮದಿಂದ ಪಡೆದ ಆನಂದದಿಂದ ತೃಪ್ತನಾದ ಆತ್ಮನಿಷ್ಟನಾದ ಜೀವನ್ಮುಕ್ತನು, ಪಾತ್ರೆಯೊಳಗೆ ಇಟ್ಟ ದೀಪದಂತೆ ಅಂತರಂಗದಲ್ಲಿ ಪ್ರಕಾಶಿಸುತ್ತಾನೆ.

ಉಪಾಧಿಸ್ಥೋಽಪಿ ತದ್ಧರ್ಮೈರಲಿಪ್ತೋ ವ್ಯೋಮವನ್ಮುನಿಃ .
ಸರ್ವವಿನ್ಮೂಢವತ್ತಿಷ್ಠೇದಸಕ್ತೋ ವಾಯುವಚ್ಚರೇತ್ .. ೫೨..

ಉಪಾಧಿಗಳೊಂದಿಗೆ ಹೊಂದಿದ್ದರೂ, ಚಿಂತನಶೀಲನಾದ ಅವನು, ಆಕಾಶದಂತೆ ಉಪಾಧಿಗಳ ಲಕ್ಷಣಗಳಿಗೆ ಅಲಿಪ್ತನಾಗಿರುತ್ತಾನೆ ಮತ್ತು ಅವನು ಎಲ್ಲಾ ಪರಿಸ್ಥಿತಿಗಳಲ್ಲಿಯೂ ಮೂಢನಂತೆ ಬದಲಾಗದೆ ಇರುತ್ತಾನೆ. ಅವನು ಗಾಳಿಯಂತೆ ನಿರಾಸಕ್ತಿಯಿಂದ ಚಲಿಸುತ್ತಾನೆ.

ಉಪಾಧಿವಿಲಯಾದ್ವಿಷ್ಣೌ ನಿರ್ವಿಶೇಷಂ ವಿಶೇನ್ಮುನಿಃ .
ಜಲೇ ಜಲಂ ವಿಯದ್ವ್ಯೋಮ್ನಿ ತೇಜಸ್ತೇಜಸಿ ವಾ ಯಥಾ .. ೫೩..

ಉಪಾಧಿಗಳ ನಾಶವಾದ ನಂತರ, ಚಿಂತನಶೀಲನಾದ ಅವನು ನೀರಿನಲ್ಲಿ ನೀರಂತೆ, ಆಕಾಶದಲ್ಲಿ ಆಕಾಶದಂತೆ ಮತ್ತು ಬೆಳಕಿನಲ್ಲಿ ಬೆಳಕಿನಂತೆ, ಸರ್ವವ್ಯಾಪಿ ಆತ್ಮನಾದ ವಿಷ್ಣುವಿನಲ್ಲಿ ಸಂಪೂರ್ಣವಾಗಿ ಲೀನವಾಗುತ್ತಾನೆ.

ಯಲ್ಲಾಭಾನ್ನಾಪರೋ ಲಾಭೋ ಯತ್ಸುಖಾನ್ನಾಪರಂ ಸುಖಂ .
ಯಜ್ಜ್ಞಾನಾನ್ನಾಪರಂ ಜ್ಞಾನಂ ತದ್ಬ್ರಹ್ಮೇತ್ಯವಧಾರಯೇತ್ .. ೫೪..

ಯಾವ ಸಾಧನೆಯ ಹೊರತಾಗಿ ಬೇರೆ ಯಾವುದೇ ಸಾಧನೆ ಇಲ್ಲವೋ; ಯಾವ ಆನಂದದ ಹೊರತಾಗಿ ಬೇರೆ ಯಾವುದೇ ಆನಂದವಿಲ್ಲವೋ; ಯಾವ ಜ್ಞಾನದ ಹೊರತಾಗಿ ಬೇರೆ ಯಾವುದೇ ಜ್ಞಾನವಿಲ್ಲವೋ; ಅದು ಬ್ರಹ್ಮ ಎಂದು ಅರಿತುಕೊ.

ಯದ್ದೃಷ್ಟ್ವಾ ನಾಪರಂ ದೃಶ್ಯಂ ಯದ್ಭೂತ್ವಾ ನ ಪುನರ್ಭವಃ .
ಯಜ್ಜ್ಞಾತ್ವಾ ನಾಪರಂ ಜ್ಞೇಯಂ ತದ್ಬ್ರಹ್ಮೇತ್ಯವಧಾರಯೇತ್ .. ೫೫..

ಯಾವುದನ್ನು ನೋಡಿದ ನಂತರ ಇನ್ನು ಮುಂದೆ ನೋಡಲು ಏನೂ ಉಳಿದಿಲ್ಲವೋ; ಯಾವುದಾದ ಮೇಲೆ ಈ ಲೋಕದಲ್ಲಿ ಮತ್ತೆ ಹುಟ್ಟುವದು ಇರುವದಿಲ್ಲವೋ; ಯಾವುದನ್ನು ತಿಳಿದಾದ ಮೇಲೆ ಮತ್ತೆ ತಿಳಿದುಕೊಳ್ಳಲು ಏನೂ ಉಳಿದಿಲ್ಲವೋ, ಅದು ಬ್ರಹ್ಮ ಎಂದು ಅರಿತುಕೊ.

ತಿರ್ಯಗೂರ್ಧ್ವಮಧಃ ಪೂರ್ಣಂ ಸಚ್ಚಿದಾನಂದಮದ್ವಯಂ .
ಅನಂತಂ ನಿತ್ಯಮೇಕಂ ಯತ್ತದ್ಬ್ರಹ್ಮೇತ್ಯವಧಾರಯೇತ್ .. ೫೬..

ಯಾವುದು ಪೂರ್ಣವೋ, ಸತ್ ಚಿತ್ ಆನಂದವೋ, ಅದ್ವಿತೀಯವೋ, ಅನಂತವೋ, ಶಾಶ್ವತವೋ, ಏಕವೋ, ಮೇಲೆ, ಕೆಳಗೆ, ಎಲ್ಲ ಕಡೆಗೆ ಯಾವುದು ವ್ಯಾಪಿಸಿದೆಯೋ ಅದುವೇ ಬ್ರಹ್ಮ ಎಂದು ತಿಳಿ.

ಅತದ್ವ್ಯಾವೃತ್ತಿರೂಪೇಣ ವೇದಾಂತೈರ್ಲಕ್ಷ್ಯತೇಽದ್ವಯಂ .  var  ಽವ್ಯಯಂ
ಅಖಂಡಾನಂದಮೇಕಂ ಯತ್ತದ್ಬ್ರಹ್ಮೇತ್ಯವಧಾರಯೇತ್ .. ೫೭..

ಅವಿನಾಭಾವ, ಅವಿಭಾಜ್ಯ, ಏಕ ಮತ್ತು ಆನಂದಮಯವಾದ ಮತ್ತು ವೇದಾಂತದಲ್ಲಿ 'ಬದಲಾಗದ ಅಂತ:ಸತ್ವ' ಎಂದು ಸೂಚಿಸಲ್ಪಟ್ಟಿರುವ, ಎಲ್ಲಾ ಮೂರ್ತ ವಸ್ತುಗಳ ನಿರಾಕರಣೆಯ ನಂತರ ಸಾಕ್ಷಾತ್ಕಾರಗೊಳ್ಳುವದೇ ಬ್ರಹ್ಮ ಎಂದು ಅರಿತುಕೊ.

ಅಖಂಡಾನಂದರೂಪಸ್ಯ ತಸ್ಯಾನಂದಲವಾಶ್ರಿತಾಃ .
ಬ್ರಹ್ಮಾದ್ಯಾಸ್ತಾರತಮ್ಯೇನ ಭವಂತ್ಯಾನಂದಿನೋಽಖಿಲಾಃ .. ೫೮..

ಭಗವಂತನ ಸ್ವಭಾವವು ಅವಿಚ್ಛಿನ್ನ (ಅನಂತ) ಆನಂದ. ಆ ಆನಂದದ ಒಂದು ಸಣ್ಣ ಕಣವನ್ನು ಅವಲಂಬಿಸಿ, ಸೃಷ್ಟಿಕರ್ತ ಮತ್ತು ಇತರ ದೇವತೆಗಳು ಪ್ರಮಾಣಾನುಗುಣವಾಗಿ ಆ ಕಣದ ತಮ್ಮ ಪಾಲಿನಿಂದ ಆನಂದಮಯರಾಗುತ್ತಾರೆ.

ತದ್ಯುಕ್ತಮಖಿಲಂ ವಸ್ತು ವ್ಯವಹಾರಸ್ತದನ್ವಿತಃ . 
ತಸ್ಮಾತ್ಸರ್ವಗತಂ ಬ್ರಹ್ಮ ಕ್ಷೀರೇ ಸರ್ಪಿರಿವಾಖಿಲೇ .. ೫೯..

ಎಲ್ಲಾ ವಸ್ತುಗಳು ಬ್ರಹ್ಮನಿಂದ ವ್ಯಾಪಿಸಿವೆ, ಎಲ್ಲಾ ಕ್ರಿಯೆಗಳು ಬ್ರಹ್ಮನಿಂದಲೇ ಸಾಧ್ಯ; ಆದ್ದರಿಂದ ಹಾಲಿನಲ್ಲಿ ಬೆಣ್ಣೆಯು ಒಳಹೊಕ್ಕು ವ್ಯಾಪಿಸಿದಂತೆ ಬ್ರಹ್ಮವು ಎಲ್ಲವನ್ನೂ ವ್ಯಾಪಿಸಿದೆ.

ಅನಣ್ವಸ್ಥೂಲಮಹ್ರಸ್ವಮದೀರ್ಘಮಜಮವ್ಯಯಂ .
ಅರೂಪಗುಣವರ್ಣಾಖ್ಯಂ ತದ್ಬ್ರಹ್ಮೇತ್ಯವಧಾರಯೇತ್ .. ೬೦..

ಸೂಕ್ಷ್ಮವೂ ಅಲ್ಲದ, ಸ್ಥೂಲವೂ ಅಲ್ಲದ, ಅಲ್ಪವೂ ಅಲ್ಲದ, ದೀರ್ಘವೂ ಅಲ್ಲದ: ಹುಟ್ಟು ಅಥವಾ ಬದಲಾವಣೆಯಿಲ್ಲದ: ರೂಪ, ಗುಣ, ಬಣ್ಣ ಮತ್ತು ಹೆಸರಿಲ್ಲದಿರುವದೇ ಬ್ರಹ್ಮ ಎಂದು ಅರಿತುಕೋ.

ಯದ್ಭಾಸಾ ಭಾಸ್ಯತೇಽರ್ಕಾದಿ ಭಾಸ್ಯೈರ್ಯತ್ತು ನ ಭಾಸ್ಯತೇ .
ಯೇನ ಸರ್ವಮಿದಂ ಭಾತಿ ತದ್ಬ್ರಹ್ಮೇತ್ಯವಧಾರಯೇತ್ .. ೬೧..

ಸೂರ್ಯ ಚಂದ್ರರಂತಹ ಆಕಾಶಕಾಯಗಳು ಯಾವುದರ ಬೆಳಕಿನಿಂದ ಪ್ರಕಾಶಿಸಲ್ಪಡುವವೋ, ಆದರೆ ಅವುಗಳ ಬೆಳಕಿನಿಂದ ಯಾವುದನ್ನು  ಪ್ರಕಾಶಿಸಲು ಆಗುವದಿಲ್ಲವೋ, ಅದು ಬ್ರಹ್ಮ ಎಂದು ಅರಿತುಕೊ.

ಸ್ವಯಮಂತರ್ಬಹಿರ್ವ್ಯಾಪ್ಯ ಭಾಸಯನ್ನಖಿಲಂ ಜಗತ್ .
ಬ್ರಹ್ಮ ಪ್ರಕಾಶತೇ ವಹ್ನಿಪ್ರತಪ್ತಾಯಸಪಿಂಡವತ್ .. ೬೨..

ಇಡೀ ವಿಶ್ವವನ್ನು ಬಾಹ್ಯವಾಗಿ ಮತ್ತು ಆಂತರಿಕವಾಗಿ ವ್ಯಾಪಿಸಿರುವ ಪರ ಬ್ರಹ್ಮವು ಸುಡುತ್ತಿರುವ ಕಬ್ಬಿಣದ ಚೆಂಡನ್ನು ವ್ಯಾಪಿಸಿದ ಬೆಂಕಿಯು ಹೊಳೆಯುವಂತೆ ಹೊಳೆಯುತ್ತದೆ.

ಜಗದ್ವಿಲಕ್ಷಣಂ ಬ್ರಹ್ಮ ಬ್ರಹ್ಮಣೋಽನ್ಯನ್ನ ಕಿಂಚನ .
ಬ್ರಹ್ಮಾನ್ಯದ್ಭಾತಿ ಚೇನ್ಮಿಥ್ಯಾ ಯಥಾ ಮರುಮರೀಚಿಕಾ .. ೬೩..

ಬ್ರಹ್ಮವು ಜಗತ್ತಿಗಿಂತ ಬೇರೆಯದಾಗಿದೆ. ಬ್ರಹ್ಮವನ್ನು ಹೊರತುಪಡಿಸಿ ಬೇರೆ ಏನೂ ಅಸ್ತಿತ್ವದಲ್ಲಿಲ್ಲ. ಬ್ರಹ್ಮವನ್ನು ಹೊರತುಪಡಿಸಿ ಬೇರೆ ಏನಾದರೂ ಕಾಣುತ್ತಿದ್ದರೆ, ಅದು ಮರೀಚಿಕೆಯಂತೆ ಅವಾಸ್ತವ.

ದೃಶ್ಯತೇ ಶ್ರೂಯತೇ ಯದ್ಯದ್ಬ್ರಹ್ಮಣೋಽನ್ಯನ್ನ ತದ್ಭವೇತ್ .
ತತ್ತ್ವಜ್ಞಾನಾಚ್ಚ ತದ್ಬ್ರಹ್ಮ ಸಚ್ಚಿದಾನಂದಮದ್ವಯಂ .. ೬೪..

ಗ್ರಹಿಸುವದೆಲ್ಲವೂ, ಕೇಳುವದೆಲ್ಲವೂ ಬ್ರಹ್ಮ. ಅದರ ಹೊರತು ಬೇರೇನೂ ಅಲ್ಲ. ಈ ತತ್ವಜ್ಞಾನ ದೊರೆತ ಮೇಲೆ ವ್ಯಕ್ತಿಯು ಈ ಜಗತ್ತನ್ನು ಅದ್ವಿತೀಯ, ಸಚ್ಚಿದಾನಂದ ಬ್ರಹ್ಮನೆಂದು ನೋಡುತ್ತಾನೆ. 

ಸರ್ವಗಂ ಸಚ್ಚಿದಾತ್ಮಾನಂ ಜ್ಞಾನಚಕ್ಷುರ್ನಿರೀಕ್ಷತೇ .
ಅಜ್ಞಾನಚಕ್ಷುರ್ನೇಕ್ಷೇತ ಭಾಸ್ವಂತಂ ಭಾನುಮಂಧವತ್ .. ೬೫..

ಆತ್ಮವು ಸತ್ಯ ಮತ್ತು ಪ್ರಜ್ಞೆಯಾಗಿದ್ದರೂ, ಎಲ್ಲೆಲ್ಲೂ ಇದ್ದರೂ, ಅದು ಜ್ಞಾನದ ಕಣ್ಣಿನಿಂದ ಮಾತ್ರ ಗ್ರಹಿಸಲ್ಪಡುತ್ತದೆ. ಕುರುಡನು ಉಜ್ವಲ ಸೂರ್ಯನನ್ನೂ ನೋಡಲು ಸಾಧ್ಯವಾಗದಂತೆ, ಅಜ್ಞಾನದಿಂದ ದೃಷ್ಟಿ ಮಸುಕಾಗಿರುವವನು  ಪ್ರಕಾಶಮಾನವಾದ ಆತ್ಮವನ್ನು ನೋಡುವುದಿಲ್ಲ.

ಶ್ರವಣಾದಿಭಿರುದ್ದೀಪ್ತಜ್ಞಾನಾಗ್ನಿಪರಿತಾಪಿತಃ .
ಜೀವಃ ಸರ್ವಮಲಾನ್ಮುಕ್ತಃ ಸ್ವರ್ಣವದ್ದ್ಯೋತತೇ ಸ್ವಯಂ .. ೬೬..

ಜೀವವು ಕಲ್ಮಶಗಳಿಂದ ಮುಕ್ತನಾಗಿ, ಶ್ರವಣ (ವೇದ ಇತ್ಯಾದಿಗಳ) ಮುಂತಾದವುಗಳಿಂದ ಉರಿಯುವ ಜ್ಞಾನದ ಬೆಂಕಿಯಲ್ಲಿ ಕಾದು, ಚಿನ್ನದಂತೆ ಹೊಳೆಯುತ್ತದೆ.

ಹೃದಾಕಾಶೋದಿತೋ ಹ್ಯಾತ್ಮಾ ಬೋಧಭಾನುಸ್ತಮೋಽಪಹೃತ್ .
ಸರ್ವವ್ಯಾಪೀ ಸರ್ವಧಾರೀ ಭಾತಿ ಭಾಸಯತೇಽಖಿಲಂ .. ೬೭..  

ಹೃದಯದ ಆಕಾಶದಲ್ಲಿ ಉದಯಿಸುವ ಜ್ಞಾನ ಸೂರ್ಯನು, ಆತ್ಮನು ಅಜ್ಞಾನದ ಕತ್ತಲೆಯನ್ನು ನಾಶಮಾಡಿ, ಎಲ್ಲವನ್ನೂ ವ್ಯಾಪಿಸಿ, ಪೋಷಿಸಿ, ಎಲ್ಲವನ್ನೂ ಬೆಳಗಿಸುತ್ತಾನೆ.

ದಿಗ್ದೇಶಕಾಲಾದ್ಯನಪೇಕ್ಷ್ಯ ಸರ್ವಗಂ
ಶೀತಾದಿಹೃನ್ನಿತ್ಯಸುಖಂ ನಿರಂಜನಂ .
ಯಃ ಸ್ವಾತ್ಮತೀರ್ಥಂ ಭಜತೇ ವಿನಿಷ್ಕ್ರಿಯಃ
ಸ ಸರ್ವವಿತ್ಸರ್ವಗತೋಽಮೃತೋ ಭವೇತ್ .. ೬೮..

ಎಲ್ಲಾ ಚಟುವಟಿಕೆಗಳನ್ನು ತ್ಯಜಿಸುವವನು, ಸಮಯ, ಸ್ಥಳ ಮತ್ತು ದಿಕ್ಕಿನ ಎಲ್ಲಾ ಮಿತಿಗಳಿಂದ ಮುಕ್ತನಾಗಿ, ಎಲ್ಲೆಡೆ ಇರುವ, ಶಾಖ ಮತ್ತು ಶೀತವನ್ನು ನಾಶಮಾಡುವ, ಆನಂದ-ಶಾಶ್ವತ ಮತ್ತು ನಿಷ್ಕಳಂಕವಾದ ತನ್ನ ಸ್ವಂತ ಆತ್ಮವನ್ನು ಪೂಜಿಸುತ್ತಾನೆ, ಅವನು ಸರ್ವಜ್ಞ ಮತ್ತು ಸರ್ವವ್ಯಾಪಿಯಾಗುತ್ತಾನೆ ಮತ್ತು ನಂತರ ಅಮರತ್ವವನ್ನು ಪಡೆಯುತ್ತಾನೆ.

.. ಇತಿ ಶಂಕರಾಚಾರ್ಯವಿರಚಿತ ಆತ್ಮಬೋಧಃ ಸಮಾಪ್ತಃ ..

ಆಧಾರ :

  1.  ಶ್ಲೋಕಮ್ 
  2. ಆತ್ಮ ಬೋಧ - ಗುರುಭಕ್ತಾನಂದ  (ಪಿಡಿಎಫ್)
  3. ಆತ್ಮ ಬೋಧ - ಸ್ವಾಮಿ ನಿಖಿಲಾನಂದ (ಪಿಡಿಎಫ್)
  4. ಸಂಸ್ಕೃತ ಡೊಕ್ಯುಮೆಂಟ್ಸ - ಮೂಲ ಸಂಸ್ಕೃತ ಶ್ಲೋಕ  


Comments

Popular posts from this blog

ತತ್ತ್ವಬೋಧ

ಕಠೋಪನಿಷತ್ - ಪ್ರಥಮಾಧ್ಯಾಯ ಪ್ರಥಮಾ ವಲ್ಲೀ

ಮಹಿಷಾಸುರಮರ್ದಿನಿ ಸ್ತೋತ್ರ