ಕೇನ ಉಪನಿಷತ್ತು

ಕೇನ ಉಪನಿಷತ್ತು ಪ್ರಮುಖ ಉಪನಿಷತ್ತುಗಳಲ್ಲಿ ಒಂದಾಗಿದೆ. ಸಾಮವೇದದ ತಲವಕಾರ ಬ್ರಾಹ್ಮಣದಲ್ಲಿ ಸೇರಿದ ಈ ಉಪನಿಷತ್ತನ್ನು ತಲವಕಾರ ಉಪನಿಷತ್ತು ಎಂದೂ ಹೇಳುತ್ತಾರೆ.
 
ಈ ಉಪನಿಷತ್ತು ಕ್ರಿ.ಪೂ. ೬ನೇ ಶತಮಾನದ ಪೂರ್ವದಲ್ಲಿ ರಚಿತವಾದ ಈಶಾವಾಸ್ಯ, ತೈತ್ತರೀಯ, ಬ್ರಹದಾರಣ್ಯಕ ಉಪನಿಷತ್ತುಗಳ ನಂತರ ರಚಿತವಾಗಿರಬೇಕು.  ಕೆಲ ವಿದ್ವಾಂಸರ ಪ್ರಕಾರ ಗದ್ಯ ಉಪನಿಷತ್ತುಗಳು ಹಾಗೂ ಪದ್ಯ ಉಪನಿಷತ್ತುಗಳ ನಡುವಿನ ಕೊಂಡಿ ಇದಾಗಿದೆ.  

ಹೆಸರು:

 ಈ ಉಪನಿಷತ್ತಿನ ಮೊದಲ ಶ್ಲೋಕ ಕೇನ (ಯಾರಿಂದ) ಎಂಬ ಪದದಿಂದ ಆರಂಭವಾಗುವದರಿಂದ, ಇದಕ್ಕೆ  ಕೇನ ಉಪನಿಷತ್ತು  ಎಂಬ ಹೆಸರು ಬಂದಿದೆ. ಕೇನ ಎಂದರೆ "ಯಾರಿಂದ" ಅಥವಾ "ಯಾವುದರಿಂದ" ಎಂಬ ಅರ್ಥ ಬರುತ್ತದೆ. ಯಾರಿಂದ ಈ ಮನಸ್ಸು ವಿಚಾರಗಳನ್ನು ಮಾಡುತ್ತದೆ. ಯಾರು ಈ ಜಗತ್ತನ್ನು ಸೂತ್ರಧಾರನಾಗಿ ಆಟವಾಡಿಸುತ್ತಾರೆ ಎಂಬ ಪ್ರಶ್ನೆಗಳನ್ನು ಉಪನಿಷತ್ತು ಉತ್ತರಿಸುತ್ತದೆ. 

ಭಾಗಗಳು 

ಈ ಉಪನಿಷತ್ತನ್ನು ನಾಲ್ಕು ಖಂಡಗಳಾಗಿ ವಿಭಜಿಸಲಾಗಿದೆ. ಮೊದಲ ಖಂಡದಲ್ಲಿ ಎಂಟು ಶ್ಲೋಕಗಳಿವೆ. ಎರಡನೆಯ ಖಂಡದಲ್ಲಿ ಐದು ಶ್ಲೋಕಗಳಿವೆ. ಮೂರು ಮತ್ತು ನಾಲ್ಕನೆಯ ಖಂಡಗಳು ಗದ್ಯ ರೂಪದಲ್ಲಿದ್ದು, ಮೂರನೆಯ ಖಂಡದಲ್ಲಿ ೧೨ ಮತ್ತು ನಾಲ್ಕನೆಯ ಖಂಡದಲ್ಲಿ ೯ ಪ್ಯಾರಾಗಳಿವೆ. 
 
ಮೂರನೇ ಖಂಡ ಒಂದು ಕತೆಯನ್ನು ಹೇಳುತ್ತದೆ -  ಒಮ್ಮೆ ದೇವತೆಗಳು ಯುದ್ಧ ಮಾಡಿದಾಗ ಬ್ರಹ್ಮನು ಅವರಿಗೆ ವಿಜಯವನ್ನು ಕೊಡಿಸಿದನು. ಆದರೆ ಅದನ್ನು ಮರೆತು ಆ ದೇವತೆಗಳು ನಾವೇ ಯುದ್ಧ ಗೆದ್ದಿದ್ದೇವೆ ಎಂದು ಸಂಭ್ರಮಿಸಿದರು. ಆಗ ಬ್ರಹ್ಮನು ಯಕ್ಷಿಯ ರೂಪದಲ್ಲಿ ಅಲ್ಲಿ ಕಾಣಿಸಿಕೊಂಡ. ಹಲವಾರು ದೇವರುಗಳ ಪೈಕಿ ಆರಿಸಲ್ಪಟ್ಟ ಮೂರು ದೇವರುಗಳಾದ ಅಗ್ನಿ, ವಾಯು ಹಾಗೂ ಇಂದ್ರ. ಅನೇಕ ದೇವಿಯರಲ್ಲಿ ಆರಿಸಿಕೊಂಡ ದೇವತೆ ಉಮಾ ಇವರನ್ನು ಆ ಯಕ್ಷಿ ಯಾರೆಂದು ವಿಚಾರಿಸಲು ಕಳಿಸಿದರು.
 
 ಆದರೆ ಈ ಕತೆಯಲ್ಲಿ ಹಲವು ನಿಗೂಢ ಅರ್ಥಗಳು ಸೇರಿವೆ - ಉಮಾ ಬ್ರಹ್ಮನಿಗಿಂತ ಹೆಚ್ಚಾಗಿ ಬ್ರಹ್ಮನ ಬಗೆಗಿನ ಜ್ಞಾನವನ್ನು ಬಹಿರಂಗಪಡಿಸುವದಯ, ಹಾಗೆಯೇ "ಯಕ್ಷಿ" ಎಂಬ ಪ್ರಕಾರದ ಪದಗುಚ್ಛ,  ಇವೆಲ್ಲವೂ ಉಪನಿಷತ್ತುಗಳ ಆಧ್ಯಾತ್ಮಿಕ ವಿಷಯಗಳನ್ನು ಸಾಂಕೇತಿಕವಾಗಿ ಉಲ್ಲೇಖಿಸುತ್ತವೆ. 
 
ಅಗ್ನಿಯು ಬೆಂಕಿಯನ್ನು ಪ್ರತಿರೂಪ ಮತ್ತು "ಎಲ್ಲಾ ಜೀವಿಗಳಲ್ಲೂ ಇರುವ ಜೀವಶಕ್ತಿ" ಅನ್ನು ಸಂಕೇತಿಸುತ್ತದೆ. ವಾಯು ಅಸ್ತಿತ್ವವನ್ನು ಆವರಿಸುವ ಜಾಗವನ್ನು, "ಮಾನಸಿಕ ಸ್ವಯಂ, ಎಲ್ಲದರ ಬಗ್ಗೆ ಇರುವ ಆಲೋಚನೆಗಳಿಗೆ" ಸಂಕೇತಿಸುತ್ತದೆ.  ಇಂದ್ರನು ಮಿಂಚು, ಬೆಳಕು ಮತ್ತು ಪ್ರಕಾಶವನ್ನು ಸಂಕೇತಿಸಿ , ಸರಿ ಮತ್ತು ತಪ್ಪು  ಜ್ಞಾನವನ್ನು ವಿವೇಚಿಸುವ ಸತ್ಯದ ಬೆಳಕನ್ನು, ಹಾಗೂ ಪ್ರಜ್ಞಾಪೂರ್ವಕ ಸ್ವಯಂ ಅನ್ನು ಸಂಕೇತಿಸುತ್ತಾನೆ.
 
ದೇವರುಗಳು ಮತ್ತು ರಾಕ್ಷಸರ ನಡುವಿನ ಯುದ್ಧವು ಒಳ್ಳೆಯದು ಮತ್ತು ಕೆಟ್ಟದ್ದರ ನಡುವಿನ ಯುದ್ಧದ ಸಂಕೇತವಾಗಿದೆ. ದೇವತೆಗಳು ಸ್ವತಃ ಮನುಷ್ಯನ ಇಂದ್ರಿಯ ಮತ್ತು ಬೌದ್ಧಿಕ ಸಾಮರ್ಥ್ಯಗಳಿಗೆ ಸಾಂಕೇತಿಕ ಉಲ್ಲೇಖವಾಗಿದೆ, ಯುದ್ಧವು ಮನುಷ್ಯನು ತನ್ನ ಜೀವನದ ಮೂಲಕ ಎದುರಿಸುವ ಸವಾಲುಗಳನ್ನು ಸಂಕೇತಿಸುತ್ತದೆ. ಬೆಂಕಿಯಿಂದ ನಾಶವಾಗುವುದು ಅಥವಾ ಏನನ್ನಾದರೂ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸ್ಥಳಾಂತರಿಸುವುದು ಮುಂತಾದ ಪ್ರಾಯೋಗಿಕ ಕ್ರಿಯೆಗಳು "ವಿಷಯದ ಸಾರವನ್ನು ತಿಳಿದುಕೊಳ್ಳಲು" ಕಾರಣವಾಗುವುದಿಲ್ಲ ಎಂದು ಕೇನ ಉಪನಿಷತ್ತಿನ ರೂಪಕವು ಸೂಚಿಸುತ್ತದೆ.
 

 ಕೇನ ಉಪನಿಷತ್ತು 

 
ಕೇನೇಷಿತಃ ಪತತಿ ಪ್ರೇಷಿತಂ ಮನಃ |
    ಕೇನ ಪ್ರಾಣ: ಪ್ರಥಮಃ ಪ್ರೈತಿ ಯುಕ್ತಃ|
ಕೇನೇಷಿತಾಂ ವಾಚಮಿಮಾಂ ವದಂತಿ|
    ಚಕ್ಷುಃ ಶ್ರೋತ್ರಂ  ಕ ಉ ದೇವೋ ಯುನಕ್ತಿ||೧.೧||
 

ಶಿಷ್ಯನು ಗುರುವನ್ನು ಪ್ರಶ್ನಿಸುತ್ತಾನೆ : ಯಾರ ಇಚ್ಛೆಯಿಂದ, ಯಾರ ನಿರ್ದೇಶನದಿಂದ ಮನಸ್ಸು ವಸ್ತುಗಳ ಕಡೆ ಆಕರ್ಷಿತವಾಗುತ್ತದೆ? ಯಾರ ಆಜ್ಞೆಯಿಂದ ಮುಖ್ಯ ಪ್ರಾಣವು ಚಲಿಸುತ್ತದೆ? ಯಾರ ಪ್ರೇರಣೆಯಿಂದ ನಮ್ಮ ವಾಣಿಯು ಮಾತುಗಳನ್ನು ಹೇಳುತ್ತದೆ? ಯಾವ ದೇವತೆ ನಮ್ಮ ಕಣ್ಣುಗಳನ್ನು ಮತ್ತು ಕಿವಿಗಳನ್ನು ನಿರ್ದೇಶಿಸುತ್ತದೆ? 

ಎಂದರೆ ಶಿಷ್ಯ ಕೇಳುವದು - ನಮ್ಮ ಇಂದ್ರಿಯಗಳನ್ನು ನಿರ್ದೇಶಿಸಿ ಕಾರ್ಯಪ್ರದ ಮಾಡುವ ದೇವರು ಯಾರು?

ಶ್ರೋತ್ರಸ್ಯ ಶ್ರೋತ್ರಂ ಮನಸೋ ಮನೋ ಯದ್
    ವಾಚೋ ಹ ವಾಚಂ ಸ ಉ ಪ್ರಾಣಸ್ಯ ಪ್ರಾಣಃ .
ಚಕ್ಷುಷಶ್ಚಕ್ಷುರತಿಮುಚ್ಯ ಧೀರಾಃ
    ಪ್ರೇತ್ಯಾಸ್ಮಾಲ್ಲೋಕಾದಮೃತಾ ಭವಂತಿ .. ೨..
 
ಗುರುವಿನ ಉತ್ತರ :  ಪರಮಾತ್ಮ ಎಲ್ಲ ಇಂದ್ರಿಯಗಳನ್ನು ನಿರ್ದೇಶಿಸುತ್ತಾನೆ. (ಆ ಪರಮಾತ್ಮ ಯಾರೆಂದರೆ - ) ಕಿವಿಯ ಕಿವಿಯಾಗಿರುವವನು, (ಕಿವಿಗೆ ಶ್ರವಣ ಶಕ್ತಿಯನ್ನು ನೀಡುವವನು), ಮನಸ್ಸಿನ ಮನಸ್ಸಾಗಿರುವವನು, (ಮನಸ್ಸಿಗೆ ಆಲೋಚನಾ ಶಕ್ತಿಯನ್ನು ನೀಡುವವನು), ಮಾತಿನ ಮಾತಾಗಿರುವವನು (ಮಾತಿಗೆ ಮಾತನಾಡುವ ಶಕ್ತಿಯನ್ನು ನೀಡುವವನು), ನಿಜಕ್ಕೂ ಮೊದಲ ಜೀವ (ಮೊದಲ ಪ್ರಾಣಕ್ಕೆ ಜೀವ ಶಕ್ತಿಯನ್ನು ನೀಡುವವನು), ಕಣ್ಣಿನ ಕಣ್ಣಾಗಿರುವವನು (ಕಣ್ಣಿಗೆ ನೋಡುವ ಶಕ್ತಿಯನ್ನು ನೀಡುವವನು). ಜ್ಞಾನಿಗಳು ಈ ತತ್ವವನ್ನು ಅರಿತು, ಮಾಯೆಯಿಂದ ಮುಕ್ತರಾಗಿ,  ಈ ಲೋಕವನ್ನು ತ್ಯಜಿಸಿ, ಅಮರರಾಗುತ್ತಾರೆ.
 
ನ ತತ್ರ ಚಕ್ಷುರ್ಗಚ್ಛತಿ ನ ವಾಗ್ಗಚ್ಛತಿ ನೋ ಮನಃ .
ನ ವಿದ್ಮೋ ನ ವಿಜಾನೀಮೋ ಯಥೈತದನುಶಿಷ್ಯಾತ್ .. ೩..
ಅನ್ಯದೇವ ತದ್ವಿದಿತಾದಥೋ ಅವಿದಿತಾದಧಿ .
ಇತಿ ಶುಶ್ರುಮ ಪೂರ್ವೇಷಾಂ ಯೇ ನಸ್ತದ್ವ್ಯಾಚಚಕ್ಷಿರೇ .. ೪..
 
ಕಣ್ಣು ಅಲ್ಲಿಗೆ ಹೋಗುವುದಿಲ್ಲ, ಮಾತು ಅಥವಾ ಮನಸ್ಸು ಸಹ ಅಲ್ಲಿಗೆ ಹೋಗುವುದಿಲ್ಲ. ನಮಗೆ ಅದು (ಏನೆಂದು) ತಿಳಿದಿಲ್ಲ. ಅದರ ಬಗ್ಗೆ ಹೇಗೆ ಕಲಿಸಬೇಕೆಂದು ನಮಗೆ ತಿಳಿದಿಲ್ಲ. ಅದು ತಿಳಿದಿರುವುದಕ್ಕಿಂತ ಅನ್ಯವಾಗಿದೆ ಮತ್ತು ಅಜ್ಞಾತಕ್ಕಿಂತ ಮೀರಿ ಆಚೆಗಿದೆ. ಹೀಗೆಂದು ಪೂರ್ವಜರು ಹೇಳುವುದನ್ನು ನಾವು ಕೇಳಿದ್ದೇವೆ.
 
ಯದ್ವಾಚಾಽನಭ್ಯುದಿತಂ ಯೇನ ವಾಗಭ್ಯುದ್ಯತೇ .
ತದೇವ ಬ್ರಹ್ಮ ತ್ವಂ ವಿದ್ಧಿ ನೇದಂ ಯದಿದಮುಪಾಸತೇ .. ೫..
 
ಯಾವುದನ್ನು ಮಾತಿನಿಂದ ಸಂಪೂರ್ಣವಾಗಿ ವ್ಯಕ್ತಪಡಿಸಲು ಸಾಧ್ಯವಿಲ್ಲವೋ, ಆದರೆ ಯಾವುದರ ಶಕ್ತಿಯಿಂದ ಮಾತು ವ್ಯಕ್ತವಾಗುವದೋ, ಅವನನ್ನು ನೀನು ಬ್ರಹ್ಮ ಎಂದು ತಿಳಿ, ಇಲ್ಲಿ (ಜನರು) ಪೂಜಿಸುವದನ್ನು ಅಲ್ಲ.
ಮಾತು ದೃಶ್ಯವಾಗುವ ವಸ್ತುಗಳನ್ನು ಮಾತ್ರ ಹೇಳಬಲ್ಲದು. ಆದರೆ ಬ್ರಹ್ಮನು ದೃಶ್ಯವಲ್ಲ - ವಾಣಿ ಅದನ್ನು ಹೇಗೆ ತಾನೇ ಹೇಳಬಲ್ಲದು? 
 
ಯನ್ಮನಸಾ ನ ಮನುತೇ ಯೇನಾಹುರ್ಮನೋ ಮತಮ್
ತದೇವ ಬ್ರಹ್ಮ ತ್ವಂ ವಿದ್ಧಿ ನೇದಂ ಯದಿದಮುಪಾಸತೇ ..೬..
 
ಯಾವುದು ಮನಸ್ಸಿನಿಂದ ಯೋಚಿಸಲು ಸಾಧ್ಯವಿಲ್ಲವೋ, ಆದರೆ ಯಾವುದರಿಂದ ಮನಸ್ಸು ಯೋಚಿಸುವಂತೆ ಮಾಡಲ್ಪಟ್ಟಿದೆ ಎಂದು ಹೇಳುತ್ತಾರೋ, ಅದೇ ಬ್ರಹ್ಮ ಎಂದು ತಿಳಿ, ಇಲ್ಲಿ (ಜನರು) ಪೂಜಿಸುವ ಬ್ರಹ್ಮವನ್ನು ಅಲ್ಲ. 
 
ಯಚ್ಚಕ್ಷುಷಾ ನ ಪಶ್ಯತಿ ಯೇನ ಚಕ್ಷುಂಷಿ ಪಶ್ಯತಿ.
ತದೇವ ಬ್ರಹ್ಮ ತ್ವಂ ವಿದ್ಧಿ ನೇದಂ ಯದಿದಮುಪಾಸತೇ..೭.. 
 
ಯಾವದನ್ನು ಕಣ್ಣುಗಳು ನೋಡಲಾಗುವದಿಲ್ಲವೋ, ಯಾವುದರ ಶಕ್ತಿಯಿಂದ ಕಣ್ಣುಗಳು ನೋಡಲು ಸಾಧ್ಯವೋ, ಅದೇ ಬ್ರಹ್ಮ ಎಂದು ತಿಳಿ, ಇಲ್ಲಿ (ಜನರು) ಪೂಜಿಸುವ ಬ್ರಹ್ಮವಲ್ಲ. 
 
ಯಚ್ಚ್ರೋತ್ರೇಣ ನ ಶ್ರುಣೋತಿ ಯೇನ ಶ್ರೋತ್ರಮಿದಂ ಶ್ರುತಂ.
ತದೇವ ಬ್ರಹ್ಮ ತ್ವಂ ವಿದ್ಧಿ ನೇದಂ ಯದಿದಮುಪಾಸತೇ..೮.. 
 
ಯಾವುದನ್ನು ಕಿವಿಯಿಂದ ಕೇಳಲು ಆಗುವದಿಲ್ಲವೋ, ಆದರ ಯಾವುದರಿಂದ ಕಿವಿಗಳು ಕೇಳಬಲ್ಲವೋ, ಅದೇ ಬ್ರಹ್ಮ ಎಂದು ತಿಳಿ, ಇಲ್ಲಿ (ಜನರು) ಪೂಜಿಸುವ ಬ್ರಹ್ಮವಲ್ಲ. 
 
ಯತ್ಪ್ರಾಣೇನ ನ ಪ್ರಾಣಿತಿ ಯೇನ ಪ್ರಾಣಃ ಪ್ರಣೀಯತೇ.
ತದೇವ ಬ್ರಹ್ಮ ತ್ವಂ ವಿದ್ಧಿ ನೇದಂ ಯದಿದಮುಪಾಸತೇ..೮.. 
 
ಯಾವುದು ಉಸಿರಾಟದಿಂದ ಜೀವಿಸುವುದಿಲ್ಲವೋ, ಆದರೆ ಯಾವುದರಿಂದ  ಪ್ರಾಣ - ಉಸಿರು ತನ್ನ ಮಾರ್ಗಗಳಲ್ಲಿ ಕೊಂಡೊಯ್ಯಲ್ಪಡುತ್ತದೆಯೋ, ಅದು ಬ್ರಹ್ಮವೆಂದು ತಿಳಿ, ಇಲ್ಲಿ ಮನುಷ್ಯರು ಅನುಸರಿಸುವ ಬ್ರಹ್ಮವಲ್ಲ. 
 
||ಇತಿ ಕೇನೋಪನಿಷದಿ ಪ್ರಥಮಃ ಖಂಡಃ||

 ದ್ವಿತೀಯ ಖಂಡ

ಯದಿ ಮನ್ಯಸಿ ಸುವೇದೇತಿ ದಹರಮೇವಾಪಿ
ನೂನಂ ತ್ವಂ ವೇತ್ಥ ಬ್ರಹ್ಮಣೋ ರೂಪಂ.
ಯದಸ್ಯ ತ್ವಂ ಯದಸ್ಯ ದೇವೇಷ್ವಥ ನು
ಮೀಮಾಂಸ್ಯಮೇವ ತೇ ಮನ್ಯೇ ವಿದಿತಂ..೧..
 
ಗುರು ಹೇಳುತ್ತಾನೆ -  "ನನಗೆ ಚೆನ್ನಾಗಿ ತಿಳಿದಿದೆ" (ಆತ್ಮನ ರೂಪ) ಎಂದು ನೀನು ಭಾವಿಸಿದರೆ ಅದು (ನಿನಗೆ ತಿಳಿದಿರುವದು) ಖಂಡಿತವಾಗಿಯೂ ಸ್ವಲ್ಪ ಮಾತ್ರವೇ. ಮನುಷ್ಯರು ಅಥವಾ ದೇವತೆಗಳು (ತಮ್ಮ ಮಿತಿಗಳಲ್ಲಿ)  ವ್ಯಾಖ್ಯಾನಿಸಿದ ಬ್ರಹ್ಮನ ರೂಪ ಮಾತ್ರ ನಿನಗೆ ತಿಳಿದಿದೆ. ಅವರ ಆದ್ದರಿಂದ ನೀನು ತಿಳಿದಿರುವುದನ್ನು ಇನ್ನೂ ವಿಶ್ಲೇಷಣೆ ಮಾಡಬೇಕಾಗಿದೆ.
 
ನಾಹಂ ಮನ್ಯೇ ಸುವೇದೇತಿ
ನೋನ ವೇದೇತಿ ವೇದ ಚ.
ಯೋ ನಸ್ತದ್ವೇದ ತದ್ವೇದ 
ನೋ ನ ವೇದೇತಿ ವೇದ ಚ..೨..
 
 ಶಿಷ್ಯ ಹೇಳಿದನು: ನನಗೆ ಅದು (ಬ್ರಹ್ಮ) ಚೆನ್ನಾಗಿ ತಿಳಿದಿದೆ ಎಂದು ನಾನು ಭಾವಿಸುವುದಿಲ್ಲ, ಅಥವಾ ನನಗೆ ಅದು ತಿಳಿದಿಲ್ಲ ಎಂದು ಕೂಡ ನಾನು ಭಾವಿಸುವುದಿಲ್ಲ. 
ನಮ್ಮಲ್ಲಿ  ಯಾರಿಗೆ "ನನಗೆ ತಿಳಿಯದೆಯೂ ಇಲ್ಲ, ನನಗೆ ತಿಳಿದೂ ಇಲ್ಲ" ಎಂಬುದರ ಅರ್ಥ ತಿಳಿದಿದೆಯೋ ಅವನು ಮಾತ್ರ ಬ್ರಹ್ಮನನ್ನು ತಿಳಿದಿದ್ದಾನೆ.
 
ಯಸ್ಯಾಮತಂ ತಸ್ಯ ಮತಂ
ಮತಂ ಯಸ್ಯ ನ ವೇದ ಸ:.
ಅವಿಜ್ಞಾತಂ ವಿಜಾನತಾಂ 
ವಿಜ್ಞಾತಮವಿಜಾನತಾಂ..೩.. 
 
ಗುರು ಹೇಳುತ್ತಾನೆ - ಯಾರಿಗೆ ಅದು ತಿಳಿದಿಲ್ಲವೋ ಅವನಿಗೆ ಅದು ತಿಳಿದಿದೆ. ಯಾರಿಗೆ ಅದು ತಿಳಿದಿದೆಯೋ ಅವನಿಗೆ ಅದು ತಿಳಿದಿಲ್ಲ. ಯಾರು ಅದನ್ನು ಅರ್ಥ ಮಾಡಿಕೊಂಡಿದ್ದಾರೋ ಅವರು ಅದನ್ನು ಅರ್ಥ ಮಾಡಿಕೊಂಡಲ್ಲ. ಯಾರು ಅರ್ಥ ಮಾಡಿಕೊಂಡಿಲ್ಲವೋ ಅವರು ಅರ್ಥ ಮಾಡಿಕೊಂಡಿದ್ದಾರೆ. 
(ಬ್ರಹ್ಮನನ್ನು ಅರಿಯಲಾಗದು ಎಂದು ದೃಢವಾಗಿ ನಂಬುವವನಿಗೆ ಬ್ರಹ್ಮನು ಅರಿವಿಗೆ ಬಂದಿದ್ದಾನೆ. ಆದರೆ ಬ್ರಹ್ಮನು ತನಗೆ ತಿಳಿದಿದೆ ಎಂದು ನಂಬುವವನಿಗೆ ಬ್ರಹ್ಮನು ಖಂಡಿತವಾಗಿಯೂ ತಿಳಿದಿಲ್ಲ. ಮುಂದಿನ ಎರಡು ಸಾಲುಗಳು ಈ ಮಾತನ್ನೇ ಒತ್ತಿ ಹೇಳುತ್ತವೆ. )
 
ಪ್ರತಿಬೋಧವಿದಿತಂ ಮತಮಮೃತತ್ವಂ ಹಿ ವಿಂದತೆ.
ಆತ್ಮನಾ ವಿಂದತೆ ವೀರ್ಯಂ ವಿದ್ಯಯಾ ವಿಂದತೆऽಮೃತಂ..೪.. 
 
ಅರಿವಿನ ಪ್ರತಿಯೊಂದು ಸ್ಥಿತಿಯ ಮೂಲಕ ತಿಳಿದಾಗ ಮಾತ್ರ ಬ್ರಹ್ಮನ ಅರಿವಾಗುತ್ತದೆ; ಏಕೆಂದರೆ ಅಂತಹ ಜ್ಞಾನದಿಂದ ಒಬ್ಬ ವ್ಯಕ್ತಿಯು ಅಮರತ್ವವನ್ನು ಪಡೆಯುತ್ತಾನೆ.  ಒಬ್ಬ ವ್ಯಕ್ತಿಯು ಸ್ವತಃ ತನ್ನಿಂದ ಶಕ್ತಿಯನ್ನು ಪಡೆಯುತ್ತಾನೆ; ಜ್ಞಾನದಿಂದ, ಅಮರತ್ವವನ್ನು ಪಡೆಯುತ್ತಾನೆ.
( ಆತ್ಮನು  ಪ್ರಜ್ಞೆಯ ಎಲ್ಲಾ ಸ್ಥಿತಿಗಳಲ್ಲಿ  ಸಾಕ್ಷಿಯಾಗಿದೆ, ಅದು ಸ್ವಭಾವತಃ ಜ್ಞಾನವನ್ನು ಹೊರತುಪಡಿಸಿ ಬೇರೇನೂ ಅಲ್ಲ ಮತ್ತು ಪ್ರಜ್ಞೆಯ ಎಲ್ಲಾ ಸ್ಥಿತಿಗಳಲ್ಲಿ ಪ್ರತಿಯೊಂದರೊಂದಿಗೂ ಬೆರೆತುಕೊಂಡಿದೆ. ಆದ್ದರಿಂದ ಆತ್ಮನಿಗೆ ಜನನ ಅಥವಾ ಮರಣವಿಲ್ಲ, ಅದು ಅಮರವಾಗಿದೆ.)
 
ಇಹ ಚೇದವೇದೀದಥ ಸತ್ಯಮಸ್ತಿ
ನ ಚೇದಿಹಾವೇದೀನ್ಮಹತೀ ವಿನಷ್ಟಿಃ .
ಭೂತೇಷು ಭೂತೇಷು ವಿಚಿತ್ಯ ಧೀರಾಃ
ಪ್ರೇತ್ಯಾಸ್ಮಾಲ್ಲೋಕಾದಮೃತಾ ಭವಂತಿ .. ೫..
 
ಮನುಷ್ಯನು ಈ ಲೋಕದಲ್ಲಿಯೇ ಆತ್ಮವನ್ನು ತಿಳಿದಿದ್ದರೆ, ಅವನು ಜೀವನದ ಗುರಿಯನ್ನು ಸಾಧಿಸುತ್ತಾನೆ. ಅವನಿಗೆ ಅದು ತಿಳಿದಿಲ್ಲದಿದ್ದರೆ, ಒಂದು ದೊಡ್ಡ ವಿನಾಶವು ಅವನಿಗೆ ಕಾದಿದೆ. (ಅವನು ಈ ದೇಹ-ಮನಸ್ಸುಗಳ ಮಾಯಾ ಜಾಲದಲ್ಲಿ ಕಳೆದುಹೋಗುತ್ತಾನೆ) ಪ್ರತಿಯೊಂದು ಜೀವಿಯಲ್ಲೂ ಬ್ರಹ್ಮವನ್ನು ನೋಡುವ ಧೀರನು ಈ ಜಗತ್ತನ್ನು ತ್ಯಜಿಸಿ ಅಮರರಾಗುತ್ತಾರೆ.

.. ಇತಿ ಕೇನೋಪನಿಷದಿ ದ್ವಿತೀಯಃ ಖಂಡಃ .. 

 ತೃತೀಯ ಖಂಡ

ಬ್ರಹ್ಮ ಹ ದೇವೇಭ್ಯೋ ವಿಜಿಗ್ಯೇ ತಸ್ಯ ಹ ಬ್ರಹ್ಮಣೋ
ವಿಜಯೇ ದೇವಾ ಅಮಹೀಯಂತ .. ೧.. 
ತ ಐಕ್ಷಂತಾಸ್ಮಾಕಮೇವಾಯಂ ವಿಜಯೋಽಸ್ಮಾಕಮೇವಾಯಂ ಮಹಿಮೇತಿ . 
         
 ಒಂದು ಕಥೆಯ ಪ್ರಕಾರ, ಬ್ರಹ್ಮನು ದೇವತೆಗಳಿಗೆ ಜಯವನ್ನು ಗಳಿಸಿದನು(ದೇವತೆಗಳ ಮತ್ತು ಅಸುರರ ಯುದ್ಧದಲ್ಲಿ ದೇವತೆಗಳು ವಿಜಯ ಹೊಂದಿದರು.); ಮತ್ತು ಆ ವಿಜಯದಿಂದ ದೇವತೆಗಳು ಉಲ್ಲಾಸಗೊಂಡರು. ಅವರು ತಮ್ಮೊಳಗೆ ಹೀಗೆ ಹೇಳಿಕೊಂಡರು: “ಖಂಡಿತ, ಈ ಗೆಲುವು ನಮ್ಮದು; ನಿಜಕ್ಕೂ, ಈ ವೈಭವ ನಮ್ಮದು."

ತದ್ಧೈಷಾಂ ವಿಜಜ್ಞೌ ತೇಭ್ಯೋ ಹ ಪ್ರಾದುರ್ಬಭೂವ ತನ್ನ ವ್ಯಜಾನತ
ಕಿಮಿದಂ ಯಕ್ಷಮಿತಿ .. ೨.. 
 
ಬ್ರಹ್ಮನು ಇವೆಲ್ಲವನ್ನೂ ಅರ್ಥಮಾಡಿಕೊಂಡು ಅವರ ಮುಂದೆ ಪ್ರತ್ಯಕ್ಷನಾದನು. ಆದರೆ ಈ ಯಕ್ಷ ಯಾರೆಂದು ದೇವತೆಗಳಿಗೆ ತಿಳಿಯಲಿಲ್ಲ.
 
ತೇಽಗ್ನಿಮಬ್ರುವಂಜಾತವೇದ ಏತದ್ವಿಜಾನೀಹಿ
ಕಿಮಿದಂ ಯಕ್ಷಮಿತಿ ತಥೇತಿ .. ೩..
 
ಅವರು ಅಗ್ನಿಗೆ ಹೇಳಿದರು "ಜಾತವೇದ, ಈ ಯಕ್ಷ ಯಾರೆಂದು ತಿಳಿದುಕೊಂಡು ಬಾ". ಅಗ್ನಿ ಒಪ್ಪಿಕೊಂಡ. (ಜಾತವೇದ - ಎಲ್ಲವನ್ನೂ ತಿಳಿದಿರುವವನು, ಅಗ್ನಿಯ ಇನ್ನೊಂದು ಹೆಸರು )
 
ತದಭ್ಯದ್ರವತ್ತಮಭ್ಯವದತ್ಕೋಽಸೀತ್ಯಗ್ನಿರ್ವಾ
ಅಹಮಸ್ಮೀತ್ಯಬ್ರವೀಜ್ಜಾತವೇದಾ ವಾ ಅಹಮಸ್ಮೀತಿ .. ೪.. 
 
ಅವನು (ಅಗ್ನಿ) ಆತುರದಿಂದ (ಯಕ್ಷನ ಬಳಿಗೆ) ಹೋದನು. (ಯಕ್ಷ) ಅವನು ಯಾರೆಂದು ಕೇಳಿದನು; (ಅಗ್ನಿ) ಉತ್ತರಿಸಿದನು: "ನಾನು ನಿಜಕ್ಕೂ ಅಗ್ನಿ; ನಾನು ಜಾತವೇದ (ಸರ್ವಜ್ಞ) ಎಂದೂ ಕರೆಯಲ್ಪಡುತ್ತೇನೆ".
 
ತಸ್ಮಿಂಸ್ತ್ವಯಿ ಕಿಂ ವೀರ್ಯಮಿತ್ಯಪೀದಂ ಸರ್ವಂ
ದಹೇಯಂ ಯದಿದಂ ಪೃಥಿವ್ಯಾಮಿತಿ .. ೫..
 
 "ನಿನ್ನ ಶಕ್ತಿ ಏನು" ಎಂದು ಕೇಳಿದನು(ಯಕ್ಷ). "ನಾನು ಎಲ್ಲವನ್ನು ಸುಡಬಲ್ಲೆ, ಈ ಭೂಮಿಯ ಮೇಲಿರುವ ಎಲ್ಲವನ್ನು ಸುಡಬಲ್ಲೆ" (ಎಂದು ಅಗ್ನಿ ಉತ್ತರಿಸಿದನು).
 
ತಸ್ಮೈ ತೃಣಂ ನಿದಧಾವೇತದ್ದಹೇತಿ .
ತದುಪಪ್ರೇಯಾಯ ಸರ್ವಜವೇನ ತನ್ನ ಶಶಾಕ ದಗ್ಧುಂ ಸ ತತ ಏವ
ನಿವವೃತೇ ನೈತದಶಕಂ ವಿಜ್ಞಾತುಂ ಯದೇತದ್ಯಕ್ಷಮಿತಿ .. ೬.. 
 
 ಆ ಯಕ್ಷನು ಅವನ ಮುಂದೆ ಒಂದು ಹುಲ್ಲುಕಡ್ಡಿಯನ್ನು ಇಟ್ಟು (ಹೇಳಿದನು): “ಇದನ್ನು ಸುಟ್ಟುಬಿಡು!” (ಅಗ್ನಿ) ಅದರ ಬಳಿಗೆ ವೇಗವಾಗಿ ಹೋದನು; ಆದರೆ ಅದನ್ನು ಸುಡಲು ಅವನಿಗೆ ಸಾಧ್ಯವಾಗಲಿಲ್ಲ. ಆದ್ದರಿಂದ ಅವನು ಅಲ್ಲಿಂದ ಹಿಂದೆ ಸರಿದನು (ಮತ್ತು ದೇವತೆಗಳ ಬಳಿಗೆ ಹಿಂತಿರುಗಿದನು), “ಯಕ್ಷ ಯಾರೆಂದು ನನಗೆ ಖಚಿತವಾಗಲಿಲ್ಲ” ಎಂದು ಹೇಳಿದನು.
 
ಅಥ ವಾಯುಮಬ್ರುವನ್ವಾಯವೇತದ್ವಿಜಾನೀಹಿ
ಕಿಮೇತದ್ಯಕ್ಷಮಿತಿ ತಥೇತಿ .. ೭.. 
 
ನಂತರ ಅವರು ವಾಯುವಿಗೆ ಹೇಳಿದರು "ವಾಯು, ಆ ಯಕ್ಷ ಯಾರೆಂದು ತಿಳಿದುಕೊಂಡು ಬಾ". "ಆಗಲಿ" ವಾಯು ಹೇಳಿದನು.
ತದಭ್ಯದ್ರವತ್ತಮಭ್ಯವದತ್ಕೋಽಸೀತಿ ವಾಯುರ್ವಾ
ಅಹಮಸ್ಮೀತ್ಯಬ್ರವೀನ್ಮಾತರಿಶ್ವಾ ವಾ ಅಹಮಸ್ಮೀತಿ .. ೮.. 
ತಸ್ಮಿಁಸ್ತ್ವಯಿ ಕಿಂ ವೀರ್ಯಮಿತ್ಯಪೀದಁ
ಸರ್ವಮಾದದೀಯ ಯದಿದಂ ಪೃಥಿವ್ಯಾಮಿತಿ .. ೯..
ತಸ್ಮೈ ತೃಣಂ ನಿದಧಾವೇತದಾದತ್ಸ್ವೇತಿ
ತದುಪಪ್ರೇಯಾಯ ಸರ್ವಜವೇನ ತನ್ನ ಶಶಾಕಾದಾತುಂ ಸ ತತ ಏವ
ನಿವವೃತೇ ನೈತದಶಕಂ ವಿಜ್ಞಾತುಂ ಯದೇತದ್ಯಕ್ಷಮಿತಿ .. ೧೦..
 
"ನೀನು ಯಾರು?" ಎಂದು ಯಕ್ಷ ಅವನನ್ನು ಕೇಳಿದನು. ಅವನು "ನನ್ನನ್ನು ವಾಯು ಎಂದು ಕರೆಯಲಾಗುತ್ತದೆ; ನನ್ನನ್ನು ಮಾತರಿಶ್ವ ಎಂದೂ ಕರೆಯುತ್ತಾರೆ." ಯಕ್ಷ ಹೇಳಿದನು: "ನಿನ್ನಲ್ಲಿ ಯಾವ ಶಕ್ತಿ ಇದೆ, ನೀನು ಯಾಕೆ ತುಂಬಾ ಪ್ರಸಿದ್ಧನು?" ವಾಯು ಉತ್ತರಿಸಿದನು: "ಜೋರಾಗಿ ಬೀಸಿ ಭೂಮಿಯ ಮೇಲಿರುವ  ಎಲ್ಲವನ್ನೂ ನಾನು ತೆಗೆದುಕೊಳ್ಳಬಲ್ಲೆ." ಯಕ್ಷ ಅವನ ಮುಂದೆ ಒಂದು ಹುಲ್ಲು ಹಾಕಿ ಹೇಳಿದನು: "ಇದನ್ನು ತೆಗೆದುಕೋ." ಅವನು ತನ್ನ ಎಲ್ಲಾ ಉತ್ಸಾಹದಿಂದ ಅದರ ಕಡೆಗೆ ಧಾವಿಸಿದನು ಆದರೆ ಅದನ್ನು ಸರಿಸಲು ಸಾಧ್ಯವಾಗಲಿಲ್ಲ. ನಂತರ ಅವನು ಯಕ್ಷನಿಂದ ಹಿಂತಿರುಗಿ ದೇವರುಗಳಿಗೆ ಹೇಳಿದನು: "ಈ ಯಕ್ಷ ಯಾರೆಂದು ನನಗೆ ಕಂಡುಹಿಡಿಯಲಾಗಲಿಲ್ಲ".
 
ಅಥೇಂದ್ರಮಬ್ರುವನ್ಮಘವನ್ನೇತದ್ವಿಜಾನೀಹಿ ಕಿಮೇತದ್ಯಕ್ಷಮಿತಿ ತಥೇತಿ
ತದಭ್ಯದ್ರವತ್ತಸ್ಮಾತ್ತಿರೋದಧೇ .. ೧೧..
ಸ ತಸ್ಮಿನ್ನೇವಾಕಾಶೇ ಸ್ತ್ರಿಯಮಾಜಗಾಮ ಬಹುಶೋಭಮಾನಾಮುಮಾಁ
ಹೈಮವತೀಂ ತಾಁಹೋವಾಚ ಕಿಮೇತದ್ಯಕ್ಷಮಿತಿ .. ೧೨..
.. ಇತಿ ಕೇನೋಪನಿಷದಿ ತೃತೀಯಃ ಖಂಡಃ ..  
 
ನಂತರ ಅವರು ಇಂದ್ರನಿಗೆ ಹೇಳಿದರು: “ಮಹಾವಂತರೇ! ಈ ಯಕ್ಷ  ಯಾರೆಂದು ತಿಳಿದುಕೊಳ್ಳಿ.” ಅವನು “ಹೌದು” ಎಂದು ಹೇಳಿ ಅದರ ಬಳಿಗೆ ಓಡಿದನು. ಅದು ಅವನ ದೃಷ್ಟಿಯಿಂದ ಮಾಯವಾಯಿತು.ಆ ಸ್ಥಳದಲ್ಲಿಯೇ ಹಿಮವಂತನ ಮಗಳಾದ ಉಮಾ ಎಂಬ ಮಹಿಳೆಯನ್ನು ನೋಡಿದನು, ಅವಳು ತುಂಬಾ ಸುಂದರಿ ಮತ್ತು ಚಿನ್ನದ ವರ್ಣದವಳಾಗಿದ್ದಳು. ಅವನು ಅವಳಿಗೆ “ಈ ಯಕ್ಷ ಯಾವುದು?” ಎಂದು ಕೇಳಿದನು.

 ಚತುರ್ಥ ಖಂಡ

ಸಾ ಬ್ರಹ್ಮೇತಿ ಹೋವಾಚ ಬ್ರಹ್ಮಣೋ ವಾ ಏತದ್ವಿಜಯೇ ಮಹೀಯಧ್ವಮಿತಿ
ತತೋ ಹೈವ ವಿದಾಂಚಕಾರ ಬ್ರಹ್ಮೇತಿ .. ೧.. 

 "ಆ ಯಕ್ಷನು ಬ್ರಹ್ಮನಾಗಿದ್ದನು," ಅವಳು ಹೇಳಿದಳು. "ಬ್ರಹ್ಮನ ವಿಜಯದ ಮೂಲಕವೇ ನೀವು ಈ ವಿಜಯನ್ನು ಸಾಧಿಸಿದ್ದು." ಅದರಿಂದ (ಉಮಾಳ ಮಾತುಗಳಿಂದ) ಅವನು (ಇಂದ್ರ) ಆ ಯಕ್ಷನು ಬ್ರಹ್ಮನೆಂದು ಅರ್ಥಮಾಡಿಕೊಂಡನು.

ತಸ್ಮಾದ್ವಾ ಏತೇ ದೇವಾ ಅತಿತರಾಮಿವಾನ್ಯಾಂದೇವಾನ್ಯದಗ್ನಿರ್ವಾಯುರಿಂದ್ರಸ್ತೇ
ಹ್ಯೇನನ್ನೇದಿಷ್ಠಂ ಪಸ್ಪರ್ಶುಸ್ತೇ ಹ್ಯೇನತ್ಪ್ರಥಮೋ ವಿದಾಂಚಕಾರ ಬ್ರಹ್ಮೇತಿ .. ೨..  

"ಆದ್ದರಿಂದ ನಿಜಕ್ಕೂ, ಈ ದೇವರುಗಳು - ಅಗ್ನಿ, ವಾಯು ಮತ್ತು ಇಂದ್ರ - ಇತರ ದೇವರುಗಳಿಗಿಂತ ಶ್ರೇಷ್ಠರು; ಏಕೆಂದರೆ ಅವರು ಹತ್ತಿರದಿಂದ ಯಕ್ಷನನ್ನು ಸಂಪರ್ಕಿಸಿದರು; ಅವರು ಅವನನ್ನು ಬ್ರಹ್ಮನೆಂದು ಮೊದಲು ತಿಳಿದರು."

 ತಸ್ಮಾದ್ವಾ ಇಂದ್ರೋಽತಿತರಾಮಿವಾನ್ಯಾಂದೇವಾನ್ಸ
ಹ್ಯೇನನ್ನೇದಿಷ್ಠಂ ಪಸ್ಪರ್ಶ ಸ ಹ್ಯೇನತ್ಪ್ರಥಮೋ ವಿದಾಂಚಕಾರ ಬ್ರಹ್ಮೇತಿ .. ೩.. 

"ಆದ್ದರಿಂದ ನಿಜಕ್ಕೂ ಇಂದ್ರನು ಇತರ ದೇವರುಗಳಿಗಿಂತ ಶ್ರೇಷ್ಠ; ಏಕೆಂದರೆ ಅವನು  ಯಕ್ಷನನ್ನು ಹತ್ತಿರ ಸಮೀಪಿಸಿದನು; ಅವನನ್ನು ಬ್ರಹ್ಮನೆಂದು ಮೊದಲು ತಿಳಿದವನು ಅವನೇ(ಇಂದ್ರನೇ)."

ತಸ್ಯೈಷ ಆದೇಶೋ ಯದೇತದ್ವಿದ್ಯುತೋ ವ್ಯದ್ಯುತದಾ ಉ
ಇತೀನ್ ನ್ಯಮೀಮಿಷದಾ ಉ ಇತ್ಯಧಿದೈವತಂ .. ೪.. 

 ಅದರ (ಬ್ರಹ್ಮದ) ಕುರಿತಾದ ಆದೇಶ ಇದು: ಅದು ಮಿಂಚಿನಂತೆ ಹೊಳೆಯಿತು; ಅದು ಕಣ್ಣು ಮಿಟುಕಿಸುವಂತೆ ಅರೆ ಕ್ಷಣವಿತ್ತು; ಇದು ಅಧಿದೈವತವನ್ನು (ಪರಮ ದೇವತೆ) ಉಲ್ಲೇಖಿಸುತ್ತದೆ.

ಅಥಾಧ್ಯಾತ್ಮಂ ಯದ್ದೇತದ್ಗಚ್ಛತೀವ ಚ ಮನೋಽನೇನ
ಚೈತದುಪಸ್ಮರತ್ಯಭೀಕ್ಷ್ಣಁ ಸಂಕಲ್ಪಃ .. ೫..

ಮತ್ತು ದೇಹಕ್ಕೆ ಸಂಬಂಧಿಸಿದಂತೆ ಬ್ರಹ್ಮದ ಬೋಧನೆ ಇದು: ಅದು ಮನಸ್ಸಿನಂತೆ ಚಲಿಸುವಂತೆ ತೋರುತ್ತದೆ, ಮತ್ತು ಅದರಿಂದ ಕಲ್ಪನೆಯು ಮತ್ತೆ ಮತ್ತೆ ನೆನಪಿಸಿಕೊಳ್ಳುತ್ತದೆ.

ತದ್ಧ ತದ್ವನಂ ನಾಮ ತದ್ವನಮಿತ್ಯುಪಾಸಿತವ್ಯಂ ಸ ಯ ಏತದೇವಂ ವೇದಾಭಿ
ಹೈನꣳ ಸರ್ವಾಣಿ ಭೂತಾನಿ ಸಂವಾಂಛಂತಿ .. ೬..

ಬ್ರಹ್ಮನನ್ನು ಎಲ್ಲರೂ ಪೂಜಿಸಬೇಕು ಮತ್ತು ಆದ್ದರಿಂದ ಅವನನ್ನು ತದ್ವನ (ಯಾವುದು ಪೂಜನೀಯವೋ ಅದು) ಎಂದು ಕರೆಯಲಾಗುತ್ತದೆ. ತದ್ವನವಾಗಿ, ಅವನನ್ನು ಪೂಜಿಸಬೇಕು. ಈ ರೀತಿಯಲ್ಲಿ ಬ್ರಹ್ಮವನ್ನು ತಿಳಿದಿರುವವನು ಎಲ್ಲಾ ಜೀವಿಗಳಿಂದ ಪ್ರೀತಿಸಲ್ಪಡುತ್ತಾನೆ.

ಉಪನಿಷದಂ ಭೋ ಬ್ರೂಹೀತ್ಯುಕ್ತಾ ತ ಉಪನಿಷದ್ಬ್ರಾಹ್ಮೀಂ ವಾವ ತ
ಉಪನಿಷದಮಬ್ರೂಮೇತಿ .. ೭..

"ನೀನು ನನಗೆ ಉಪನಿಷತ್ತನ್ನು ತಿಳಿಸು ಎಂದು ಕೇಳಿದಂತೆಯೇ, ಉಪನಿಷತ್ತನ್ನು ನಿನಗೆ ಹೇಳಲಾಗಿದೆ. ನಾವು ನಿನಗೆ ಬ್ರಾಹ್ಮೀ ಉಪನಿಷತ್ತನ್ನು ಹೇಳಿದ್ದೇವೆ" ಎಂದು ಶಿಕ್ಷಕರು ಹೇಳಿದರು.

ತಸ್ಯೈ ತಪೋ ದಮಃ ಕರ್ಮೇತಿ ಪ್ರತಿಷ್ಠಾ ವೇದಾಃ ಸರ್ವಾಂಗಾನಿ
ಸತ್ಯಮಾಯತನಂ .. ೮..

'ಆ ಉಪನಿಷತ್ತು ನಿಂತಿರುವ ಪಾದಗಳು ತಪಸ್ಸು, ಸಂಯಮ, ತ್ಯಾಗ; ವೇದಗಳೇ ಅದರ ಸರ್ವ ಅಂಗಗಳು ಹಾಗೂ ಸತ್ಯವೇ ಅದರ ವಾಸಸ್ಥಾನ.'

ಯೋ ವಾ ಏತಾಮೇವಂ ವೇದಾಪಹತ್ಯ ಪಾಪ್ಮಾನಮನಂತೇ ಸ್ವರ್ಗೇ
ಲೋಕೇ ಜ್ಯೇಯೇ ಪ್ರತಿತಿಷ್ಠತಿ ಪ್ರತಿತಿಷ್ಠತಿ .. ೯..

'ಈ ಉಪನಿಷತ್ತನ್ನು ತಿಳಿದುಕೊಂಡು ಎಲ್ಲಾ ಪಾಪವನ್ನು ನಾಶ ಮಾಡಿದವನು ಅಂತ್ಯವಿಲ್ಲದ, ಅಜೇಯ ಸ್ವರ್ಗ ಲೋಕವನ್ನು ಪಡೆಯುತ್ತಾನೆ. ಚಿರಕಾಲ ಬ್ರಹ್ಮಾನಂದವನ್ನು ಪಡೆಯುತ್ತಾನೆ.'
       

   .. ಇತಿ ಕೇನೋಪನಿಷದಿ ಚತುರ್ಥಃ ಖಂಡಃ ..


ಓಂ ಆಪ್ಯಾಯಂತು ಮಮಾಂಗಾನಿ ವಾಕ್ಪ್ರಾಣಶ್ಚಕ್ಷುಃ
ಶ್ರೋತ್ರಮಥೋ ಬಲಮಿಂದ್ರಿಯಾಣಿ ಚ ಸರ್ವಾಣಿ .
ಸರ್ವಂ ಬ್ರಹ್ಮೌಪನಿಷದಂ
ಮಾಽಹಂ ಬ್ರಹ್ಮ ನಿರಾಕುರ್ಯಾಂ ಮಾ ಮಾ ಬ್ರಹ್ಮ
ನಿರಾಕರೋದನಿರಾಕರಣಮಸ್ತ್ವನಿರಾಕರಣಂ ಮೇಽಸ್ತು .
ತದಾತ್ಮನಿ ನಿರತೇ ಯ
ಉಪನಿಷತ್ಸು ಧರ್ಮಾಸ್ತೇ ಮಯಿ ಸಂತು ತೇ ಮಯಿ ಸಂತು .
          ಓಂ ಶಾಂತಿಃ ಶಾಂತಿಃ ಶಾಂತಿಃ ..

ಓಂ. ಬ್ರಹ್ಮನು ನಮ್ಮಿಬ್ಬರನ್ನೂ (ಗುರು ಮತ್ತು ಶಿಷ್ಯ) ರಕ್ಷಿಸಲಿ! ಬ್ರಹ್ಮನು ನಮ್ಮಿಬ್ಬರಿಗೂ ಜ್ಞಾನದ ಫಲವನ್ನು ದಯಪಾಲಿಸಲಿ! ನಾವಿಬ್ಬರೂ ಜ್ಞಾನವನ್ನು ಪಡೆಯುವ ಶಕ್ತಿಯನ್ನು ಪಡೆಯಲಿ! ನಾವಿಬ್ಬರೂ ಅಧ್ಯಯನ ಮಾಡುವ ವಿಷಯವು ಸತ್ಯವನ್ನು ಬಹಿರಂಗಪಡಿಸಲಿ! ನಾವು ಪರಸ್ಪರರ ಬಗ್ಗೆ ಯಾವುದೇ ಕೆಟ್ಟ ಭಾವನೆಯನ್ನು ಹೊಂದಿರಬಾರದು!

ಓಂ. ಶಾಂತಿ! ಶಾಂತಿ! ಶಾಂತಿ!

    

ಆಧಾರ :  

  1. ಶ್ಲೋಕಂ 
  2. ವಿಸ್ಡಂಲಿಬ್ 
  3. ಸಂಸ್ಕೃತಡೊಕ್ಯುಮೆಂಟ್ಸ 
  4. Shri Hindu Dharma Vaidika Education Foundation 

Comments

Popular posts from this blog

ಶಿವಾನಂದಲಹರಿ

ತತ್ತ್ವಬೋಧ

ಭಗವದ್ಗೀತಾ ಆರತಿ